ಕನ್ನಡ ಸಾರಸ್ವಾತ ಲೋಕದ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ, ಪ್ರಗತಿಪರರಾಗಿ, ನಾಟಕಕಾರರಾಗಿ, ಖ್ಯಾತ ನಟರಾಗಿ, ಖ್ಯಾತ ನಿರ್ದೇಶಕರಾಗಿ ಹೆಸರಾಗಿದ್ದ ಬಹುಮುಖ ಪ್ರತಿಭೆಯ ಗಿರೀಶ್ ಕಾರ್ನಾಡ್ ವಿಧಿವಶರಾಗಿದ್ದಾರೆ. ಆದರೆ ಕಾರ್ನಾಡ್ ಅವರ ರಂಗಭೂಮಿ ಚಟುವಟಿಕೆ, ನಾಟಕಗಳು ದೇಶಾದ್ಯಂತ ಹೆಸರನ್ನು ತಂದುಕೊಟ್ಟಿದ್ದನ್ನು ಮರೆಯುವಂತಿಲ್ಲ. ಕಾರ್ನಾಡ್ ಸಾಹಿತಿಯಾಗಿ ಹೆಚ್ಚು ಆಪ್ತವಾಗಿದ್ದಕ್ಕಿಂತ ಅವರೊಬ್ಬ ನಾಟಕಕಾರಾಗಿ, ಸಿನಿಮಾ ನಿರ್ದೇಶಕಾಗಿ ಹೆಚ್ಚು ಆಪ್ತರಾಗಿದ್ದರು.
ಹೇಳಬೇಕಾದದ್ದನ್ನು ನಿರ್ಬಿಢೆಯಿಂದ ವ್ಯಕ್ತಪಡಿಸುತ್ತಿದ್ದ ಕಾರ್ನಾಡರು ತಮ್ಮ ನಾಟಕಗಳ ಮೂಲಕ ಹೊಸ ವಿಚಾರಧಾರೆಗೆ, ಹೊಸ ನೋಟಕ್ಕೆ ಅನುವು ಮಾಡಿಕೊಡುತ್ತಿದ್ದರು ಎಂಬುದಕ್ಕೆ ತುಘಲಕ್, ತಲೆದಂಡದಂತಹ ನಾಟಕಗಳೇ ಸಾಕ್ಷಿ! ಕೊಡಗಿನ ಡಾ.ಸರಸ್ವತಿ ಗಣಪತಿಯನ್ನು ವಿವಾಹವಾಗುವ ಮೊದಲು ಹತ್ತು ವರ್ಷಗಳ ಕಾಲ ಲಿವ್ ಇನ್ ಆಗಿ ಸಂಸಾರ ನಡೆಸಿ ನಂತರ ವಿವಾಹವಾಗಿದ್ದರು.
ಯಯಾತಿ, ತುಘಲಕ್, ಹಯವದನ, ಅಗ್ನಿ ಮತ್ತು ಮಳೆ, ತಲೆದಂಡ, ಟಿಪ್ಪುವಿನ ಕನಸುಗಳು, ಮಾ ನಿಷಾಧ, ನಾಗಮಂಡಲ, ಒಡಕಲು ಬಿಂಬ, ಮದುವೆ ಆಲ್ಬಮ್, ಬೆಂದ ಕಾಳು ಆನ್ ಟೋಸ್ಟ್ ಸೇರಿದಂತೆ ಮುಂತಾದವು ಕಾರ್ನಾಡರ ಪ್ರಮುಖ ನಾಟಕಗಳಾಗಿವೆ.
ಸಿನಿಮಾ ರಂಗದಲ್ಲಿ ಮಿಂಚಿದ್ದ ಬಹುಭಾಷಾ ನಟ, ನಿರ್ದೇಶಕ ಕಾರ್ನಾಡ್:
1970ರಲ್ಲಿ ಖ್ಯಾತ ಕಾದಂಬರಿಕಾರ ಯುಆರ್ ಅನಂತ್ ಮೂರ್ತಿಯವರ ಸಂಸ್ಕಾರ ಕಾದಂಬರಿಯನ್ನು ಪಟ್ಟಾಭಿರಾಮ್ ರೆಡ್ಡಿಯವರು ನಿರ್ದೇಶಿಸುವ ಮೂಲಕ ಸಿನಿಮಾ ಮಾಡಿದ್ದರು. ಈ ಸಿನಿಮಾದಲ್ಲಿ ಕಾರ್ನಾಡರ ಪ್ರಾಣೇಶಾಚಾರ್ಯ ಪಾತ್ರ ಅದ್ಭುತವಾದದ್ದು. ಇದು ಕನ್ನಡಕ್ಕೆ ಪ್ರಥಮ ಸ್ವರ್ಣಕಮಲ ಪ್ರಶಸ್ತಿ ತಂದು ಕೊಟ್ಟ ಚಿತ್ರವಾಗಿದೆ. ನಂತರ ಎಸ್ ಎಲ್ ಭೈರಪ್ಪನವರ ವಂಶವೃಕ್ಷ ಕಾದಂಬರಿ ಆಧರಿಸಿ ಬಿವಿ ಕಾರಂತರು ಮತ್ತು ಕಾರ್ನಾಡ್ ವಂಶವೃಕ್ಷ ಚಿತ್ರವನ್ನು ನಿರ್ದೇಶಿಸಿದ್ದರು. ಹೀಗೆ ತಬ್ಬಲಿಯು ನೀನಾದೆ ಮಗನೆ, ಒಂದಾನೊಂದು ಕಾಲದಲ್ಲಿ, ಕಾರು, ಉತ್ಸವ್, ಗೋಧೂಳಿ, ಕಾನೂರು ಹೆಗ್ಗಡತಿ, ಆ ದಿನಗಳು ಸೇರಿದಂತೆ ಹಲವಾರು ಸಿನಿಮಾಗಳನ್ನು ನಿರ್ದೇಶಿಸಿದ್ದರು.
1975ರ ನಿಶಾಂತ್ ಹಿಂದಿ ಸಿನಿಮಾದಲ್ಲಿ, ಮಂಥನ್, ಸ್ವಾಮಿ, ಜೀವನ್ಮುಕ್ತ್, ಸಂಪರ್ಕ್, ರತ್ನದೀಪ್, ಬೇಕಸೂರ್, ಆಶಾ, ಶಮಾ , ಟೈಗರ್ ಜಿಂದಾ ಹೈ, ಸೇರಿದಂತೆ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದರು. ತೆಲುಗಿನ ಚೈತನ್ಯ, ಪುಲಿ, ಪ್ರೇಮಿಕುಡು, ಆನಂದ ಭೈರವಿ, ರಕ್ಷಕುಡು, ಧರ್ಮಚಕ್ರಂ, ಶಂಕರ್ ದಾದಾ ಎಂಬಿಬಿಎಸ್, ಗುಣ ಸಿನಿಮಾಗಳಲ್ಲಿ ಅಭಿನಯಿಸಿದ್ದರು.
ಕನ್ನಡದ ವಂಶವೃಕ್ಷ, ಕಾಡು, ಒಂದಾನೊಂದು ಕಾಲದಲ್ಲಿ, ಆನಂದ ಭೈರವಿ ಸಿನಿಮಾಕ್ಕೆ ಉತ್ತಮ ನಿರ್ದೇಶಕ ಪ್ರಶಸ್ತಿಯನ್ನು ಪಡೆದ ಕೀರ್ತಿ ಗಿರೀಶ್ ಕಾರ್ನಾಡ್ ಅವರದ್ದಾಗಿದೆ.