Advertisement

ಕೋಳಿ ಸಾಕಾಣಿಕೆ ಉತ್ತೇಜನಕ್ಕೆ ಗಿರಿರಾಜ ಕೋಳಿ ವಿತರಣೆ

01:41 PM Sep 25, 2017 | |

ಹುಬ್ಬಳ್ಳಿ: ಕೋಳಿ ಸಾಕಾಣಿಕೆ ಉತ್ತೇಜನಕ್ಕೆ ಕುಕ್ಕುಟ ಮಹಾಮಂಡಳದಿಂದ ಗಿರಿರಾಜ ಕೋಳಿ ವಿತರಿಸುತ್ತಿದ್ದು, ರೈತರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಪಶು ಸಂಗೋಪನೆ ಹಾಗೂ ರೇಷ್ಮೆ ಇಲಾಖೆ ಸಚಿವ ಎ. ಮಂಜು ಹೇಳಿದರು. 

Advertisement

ರಾಯಾಪುರದ ಕರ್ನಾಟಕ ಸಹಕಾರ ಕುಕ್ಕುಟ ಮಹಾಮಂಡಳದ ಪ್ರಾದೇಶಿಕ ಕುಕ್ಕುಟ ಸಂವರ್ಧನಾ ಕೇಂದ್ರದಲ್ಲಿ ನಿರ್ಮಿಸಿರುವ ತರಬೇತಿ ಕೇಂದ್ರದ ಕಟ್ಟಡ ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಕೋಳಿ ಸಾಕಾಣಿಕೆಗೆ ಅಧಿಕಾರಿಗಳು ಒತ್ತು ನೀಡಬೇಕು. ರೈತರು ಕೃಷಿಯೊಂದಿಗೆ ಕೋಳಿ ಸಾಕಾಣಿಕೆ ಮಾಡಿ ಆರ್ಥಿಕವಾಗಿ ಸ್ವಾವಲಂಬಿಗಳಾಗಬಹುದು ಎಂದರು. 

ಮಾಂಸಕ್ಕೆ ಬೇಡಿಕೆ: ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ ಪ್ರತಿ ಮಾಂಸಾಹಾರಿ ವರ್ಷಕ್ಕೆ 11 ಕೆಜಿ ಮಾಂಸ ಸೇವಿಸಬೇಕು. ಆದರೆ, ಪ್ರಸ್ತುತ ಅಂಕಿ-ಅಂಶಗಳ ಪ್ರಕಾರ ವರ್ಷಕ್ಕೆ 2.89 ಕೆಜಿ ಕೋಳಿ ಮಾಂಸ ಉಪಯೋಗಿಸುತ್ತಿದ್ದು, ಒಬ್ಬ ಮನುಷ್ಯನ ಬೇಡಿಕೆಗೆ ಹೋಲಿಸಿದರೆ 8 ಕೆಜಿ ಕೊರತೆಯಿದೆ.

ಆದ್ದರಿಂದ ಕುಕ್ಕುಟೋದ್ಯಮಕ್ಕೆ ಇನ್ನೂ ಹೆಚ್ಚಿನ ಉತ್ತೇಜನ ನೀಡಬೇಕು ಎಂದರು. ಪ್ರತಿ ತಾಲೂಕಿನಲ್ಲಿ 5 ಸಾವಿರ ಬಡ ಕುಟುಂಬಗಳಿಗೆ ಕೋಳಿ ಸಾಕಾಣಿಕೆಗೆ ನೆರವು ನೀಡುವ ಉದ್ದೇಶವಿದೆ. ಈ ನಿಟ್ಟಿನಲ್ಲಿ ಅರ್ಹ ಫ‌ಲಾನುಭವಿಗಳನ್ನು ಗುರುತಿಸಿ ಗಿರಿರಾಜ ಕೋಳಿ ಸಾಕಾಣಿಕೆಗೆ ಬೇಕಾದ ತರಬೇತಿ ನೀಡುವುದು ಅಧಿಕಾರಿಗಳ ಜವಾಬ್ದಾರಿ. ಗಿರಿರಾಜ ಕೋಳಿಗೆ ಕಾಯಿಲೆ ಪ್ರಮಾಣ ತೀರ  ಕಡಿಮೆ. 

ಈ ಕೋಳಿ ಸಾಕಾಣಿಕೆಯಿಂದ ನಷ್ಟ ಇರದು. ಇದೀಗ ಸುಸಜ್ಜಿತ ತರಬೇತಿ ಕೇಂದ್ರ ಉದ್ಘಾಟನೆಗೊಂಡಿದ್ದು, ಇದರ ಸದ್ಭಳಕೆಯಾಗಬೇಕು. ಸ್ತ್ರೀ ಶಕ್ತಿ ಸಂಘಗಳ ಮೂಲಕ ಕೋಳಿ ಸಾಕಾಣಿಕೆಗೆ ಉತ್ತೇಜನ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಜಿಪಂ ಅಧ್ಯಕ್ಷತೆ ಚೈತ್ರಾ ಶಿರೂರ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಪಶು ಇಲಾಖೆ ಸಿಬ್ಬಂದಿ ಕೊರತೆ ಅನುಭವಿಸುತ್ತಿದೆ.

Advertisement

ಸಿಬ್ಬಂದಿ ನೇಮಕ ಶೀಘ್ರದಲ್ಲಿ ನಡೆಯುವಂತೆ ಮನವಿ ಮಾಡಿದರು. ಮಹಾಮಂಡಳದ  ಅಧ್ಯಕ್ಷ ಡಿ.ಎಸ್‌. ರುದ್ರಮುನಿ ಮಾತನಾಡಿ, ಬೆಂಗಳೂರಿನಲ್ಲಿ ಮಹಾಮಂಡಳದ ಕೇಂದ್ರ ಕಚೇರಿ ವ್ಯವಸ್ಥಿತವಾಗಿಲ್ಲ. ಒಂದು ಎಕರೆ ಭೂಮಿಯಿದ್ದು, ಅದರಲ್ಲಿ ಆಡಳಿತ ಭವನ, ಸಭಾ ಭವನ ಸೇರಿದಂತೆ ತರಬೇತಿ ಕೇಂದ್ರಕ್ಕೆ ಬೇಕಾದ ಕಟ್ಟಡ ನಿರ್ಮಿಸಲು ಅನುದಾನ ನೀಡಬೇಕು ಎಂದು ಕೋರಿದರು. 

ಪಶುವೈದ್ಯ ಸೇವಾ ಇಲಾಖೆ ನಿರ್ದೇಶಕ ಡಾ| ಕೆ.ಎಂ. ಮಹಮ್ಮದ ಜಫ‌ರುಲ್ಲಾ ಖಾನ್‌, ಕೆಸಿಪಿಎಫ್ ವ್ಯವಸ್ಥಾಪಕ ನಿರ್ದೇಶಕ ಡಾ| ಬಿ.ಎನ್‌. ಶಿವರಾಮ, ಸಹಾಯಕ ನಿರ್ದೇಶಕ ಡಾ| ರಾಕೇಶ ಬಂಗಲೆ, ಮಹಾಮಂಡಳ ಉಪಾಧ್ಯಕ್ಷ ಸತ್ತಿ ಶ್ರೀನಾಥರೆಡ್ಡಿ, ನಿರ್ದೇಶಕರಾದ ಡಿ.ಕೆ. ಕಾಂತರಾಜು, ನಾಗರತ್ನಮ್ಮ ಮುಳಗುಂದ, ಸಾವಿತ್ರಿಬಾಯಿ, ಅಶೋಖಕ ಬನ್ನಿಹಳ್ಳಿ, ಜೆ.ಆರ್‌. ರಾಮು, ಕೆ. ಪ್ರದೀಪ, ಅಡಿವೆಪ್ಪ ಚಿಂತಿ, ಎಸ್‌. ಸಿದ್ದೇಗೌಡ ಇತರರಿದ್ದರು.   

Advertisement

Udayavani is now on Telegram. Click here to join our channel and stay updated with the latest news.

Next