Advertisement

ಗಿಲ್‌ ಶತಕ: ಮುಂದುವರಿದ ಭಾರತದ ಹೋರಾಟ

09:54 PM Mar 11, 2023 | Team Udayavani |

ಅಹ್ಮದಾಬಾದ್‌: ಆರಂಭಿಕ ಆಟಗಾರ ಶುಭಮನ್‌ ಗಿಲ್‌ ಅವರ ತಾಳ್ಮೆಯ ಶತಕ ಮತ್ತು ದಿಗ್ಗಜ ವಿರಾಟ್‌ ಕೊಹ್ಲಿಯ ಅಜೇಯ ಅರ್ಧಶತಕದಿಂದಾಗಿ ಭಾರತೀಯ ತಂಡವು ಆಸ್ಟ್ರೇಲಿಯ ವಿರುದ್ಧ ನಡೆಯುತ್ತಿರುವ ನಿರ್ಣಾಯಕ ನಾಲ್ಕನೇ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ ಮುನ್ನಡೆ ಸಾಧಿಸಲು ಹೋರಾಟ ನಡೆಸುತ್ತಿದೆ.

Advertisement

ಆರು ತಾಸುಗಳ ಸುಂದರ ಇನಿಂಗ್ಸ್‌ ವೇಳೆ ಗಿಲ್‌ ಅವರು 235 ಎಸೆತ ಎದುರಿಸಿದ್ದು 128 ರನ್‌ ಗಳಿಸಿ ನಥನ್‌ ಲಿಯಾನ್‌ ಅವರ ಎಲ್‌ಬಿ ಬಲೆಗೆ ಬಿದ್ದರು. ಲಿಯಾನ್‌ ಅವರ ಎಸೆತವೊಂದನ್ನು ಸಿಕ್ಸರ್‌ಗೆ ತಳ್ಳಿದ್ದ ಅವರು 12 ಬೌಂಡರಿ ಬಾರಿಸಿ ಗಮನ ಸೆಳೆದರು. ಈ ಮೂಲಕ ಕೆ.ಎಲ್‌.ರಾಹುಲ್‌ ಬದಲಿಗೆ ತನ್ನ ಆಯ್ಕೆಯನ್ನು ಗಿಲ್‌ ಸಮರ್ಥಿಸಿಕೊಂಡರು. ಭಾರತ ದ್ವಿತೀಯ ದಿನ ಆಡಿದ 90 ಓವರ್‌ಗಳಲ್ಲಿ ಕೇವಲ 256 ರನ್‌ ಗಳಿಸಲಷ್ಟೇ ಶಕ್ತವಾಗಿತ್ತು. ಹಾಗಾಗಿ ಈ ಪಿಚ್‌ನಲ್ಲಿ ಬ್ಯಾಟಿಂಗ್‌ ಮಾಡುವುದು ಅಷ್ಟೊಂದು ಸುಲಭವಲ್ಲ ಎಂಬುದು ಖಚಿತವಾಯಿತು. ಮೊದಲ ದಿನ ಆಸ್ಟ್ರೇಲಿಯ ಕೂಡ ಬಹಳ ಎಚ್ಚರಿಕೆಯಿಂದ ಬ್ಯಾಟಿಂಗ್‌ ಮಾಡಿರುವುದನ್ನು ಗಮನಿಸಬಹುದು.

ಮೊದಲ ಇನಿಂಗ್ಸ್‌ನಲ್ಲಿ ಭಾರತ ಮುನ್ನಡೆ ಸಾಧಿಸಲು ಇನ್ನೂ 191 ರನ್‌ ಗಳಿಸಬೇಕಾಗಿದೆ. ಈ ಮೊದಲು ಆಸ್ಟ್ರೇಲಿಯ ಮೊದಲ ಇನಿಂಗ್ಸ್‌ನಲ್ಲಿ 480 ರನ್‌ ಗಳಿಸಿತ್ತು. ಆರಂಭದ ಮೂವರು ಪ್ರಮುಖ ಆಟಗಾರರನ್ನು ಕಳೆದುಕೊಂಡಿರುವ ಭಾರತಕ್ಕೆ ವಿರಾಟ್‌ ಕೊಹ್ಲಿ ಮತ್ತು ರವೀಂದ್ರ ಜಡೇಜ ಆಸರೆಯಾಗಿದ್ದಾರೆ. ಅವರಿಬ್ಬರು ಈಗಾಗಲೇ ಮುರಿಯದ ನಾಲ್ಕನೇ ವಿಕೆಟಿಗೆ 44 ರನ್‌ ಪೇರಿಸಿದ್ದಾರೆ. ಕೊಹ್ಲಿ 59 ಮತ್ತು ಜಡೇಜ 16 ರನ್ನುಗಳಿಂದ ನಾಲ್ಕನೇ ದಿನದ ಆಟ ಮುಂದುವರಿಸಲಿದ್ದಾರೆ.

ಗೆದ್ದರೆ ವಿಶ್ವ ಟೆಸ್ಟ್‌ ಫೈನಲಿಗೆ: ಸರಣಿಯಲ್ಲಿ 2-1 ಮುನ್ನಡೆಯಲ್ಲಿರುವ ಭಾರತ ಈ ಪಂದ್ಯವನ್ನು ಗೆದ್ದು, ಸರಣಿಯನ್ನು 3-1 ಅಂತರದಿಂದ ಗೆದ್ದರೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ನ ಫೈನಲಿಗೇರಲಿದೆ. ಒಂದು ವೇಳೆ ಭಾರತ ಈ ಪಂದ್ಯದಲ್ಲಿ ಸೋತರೆ ಮತ್ತು ನ್ಯೂಜಿಲೆಂಡ್‌ ವಿರುದ್ಧ ಸಾಗುತ್ತಿರುವ ಸರಣಿಯಲ್ಲಿ ಒಂದು ವೇಳೆ ಶ್ರೀಲಂಕಾ 2-0 ಅಂತರದಿಂದ ಗೆದ್ದರೆ ಶ್ರೀಲಂಕಾ ಫೈನಲಿಗೇರಿ ಆಸ್ಟ್ರೇಲಿಯ ವಿರುದ್ಧ ಆಡಲಿದೆ.

ಒಂದು ವೇಳೆ ಭಾರತ ಡ್ರಾ ಸಾಧಿಸಿದರೆ ಮತ್ತು ಶ್ರೀಲಂಕಾ 2-0 ಅಂತರದಿಂದ ಗೆಲ್ಲಲು ವಿಫ‌ಲವಾದರೆ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಭಾರತ ಮತ್ತು ಆಸ್ಟ್ರೇಲಿಯ ನಡುವೆ ನಡೆಯಲಿದೆ. ಈ ಪಂದ್ಯ ಜೂನ್‌ ತಿಂಗಳಲ್ಲಿ ಓವಲ್‌ನಲ್ಲಿ ಜರುಗಲಿದೆ.

Advertisement

ಕೊಹ್ಲಿಯತ್ತ ಎಲ್ಲರ ಚಿತ್ತ: ಪಂದ್ಯದ ಮೂರನೇ ದಿನ ಆತ್ಮವಿಶ್ವಾಸದಿಂದ ಆಡಿದ ಕೊಹ್ಲಿ ಅವರ ಬ್ಯಾಟಿಂಗ್‌ ನಿರ್ವಹಣೆಯತ್ತ ಎಲ್ಲರ ಕಣ್ಣು ಬಿದ್ದಿದೆ. ನಾಲ್ಕನೇ ದಿನ ಅವರಿಂದ ಮತ್ತೂಂದು ಶತಕ ದಾಖಲಾಗಬಹುದೇ ಎಂಬ ನಿರೀಕ್ಷೆ ಅಭಿಮಾನಿಗಳದ್ದು. ಈಗಾಗಲೇ ಟೆಸ್ಟ್‌ನಲ್ಲಿ 29ನೇ ಅರ್ಧಶತಕ ದಾಖಲಿಸಿದ ಕೊಹ್ಲಿ ನಾಲ್ಕನೇ ದಿನ ಜಡೇಜ ಅವರ ಜತೆಗೂಡಿ ಭರ್ಜರಿ ಆಟದ ಪ್ರದರ್ಶನ ನೀಡುವ ನಿರೀಕ್ಷೆಯಿದೆ.

ಕೊಹ್ಲಿ ಮತ್ತು ಗಿಲ್‌ ಅವರಲ್ಲದೇ ಆರಂಭಿಕ ರೋಹಿತ್‌ ಶರ್ಮ ಮತ್ತು ಚೇತೇಶ್ವರ ಪೂಜಾರ ಅವರು ಉತ್ತಮ ಬ್ಯಾಟಿಂಗ್‌ ಪ್ರದರ್ಶನ ನೀಡಿ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. ರೋಹಿತ್‌ ಮತ್ತು ಗಿಲ್‌ ಮೊದಲ ವಿಕೆಟಿಗೆ 74 ರನ್‌ ಪೇರಿಸುವ ಮೂಲಕ ತಂಡಕ್ಕೆ ಉತ್ತಮ ಅಡಿಪಾಯ ಹಾಕಿಕೊಟ್ಟರು. ರೋಹಿತ್‌ 35 ಮತ್ತು ಪೂಜಾರ 42 ರನ್‌ ಹೊಡೆದರು.

Advertisement

Udayavani is now on Telegram. Click here to join our channel and stay updated with the latest news.

Next