ಅಂತೂ ಡಿಗ್ರಿ ಮುಗಿದಿತ್ತು. ಸ್ನಾತಕೋತ್ತರ ಪದವಿ ಮಾಡೋಣ ಎಂದು ನಿರ್ಧರಿಸುವ ಹೊತ್ತಿಗೆ ಅದರ ಅಡ್ಮಿಷನ್ ಮುಗಿದಿತ್ತು. ಅಯ್ಯೋ, ಈಗ ಮಾಡುವುದೇನು? ಒಂದು ವರ್ಷ ಮನೆಯಲ್ಲಿಯೇ ಇರಬೇಕಲ್ಲಾ ಅನ್ನಿಸಿ ಬೇಸರವಾಗಿತ್ತು. ಮನೆಯಲ್ಲಿ ಸುಮ್ಮನೆ ಇರಲಾಗದ್ದರಿಂದ, ಎಲ್ಲಾದರೂ ಕೆಲಸಕ್ಕೆ ಸೇರಿಕೊಳ್ಳುತ್ತೇನೆ ಎಂದು ಹೇಳಿದೆ. “ನಿನ್ನ ಇಷ್ಟ’ ಎಂದು ಮನೆಯಲ್ಲಿ ಒಪ್ಪಿಗೆಕೊಟ್ಟರು.
ನಾನು ಓದಿರುವ ಪದವಿಗೆ ಎಲ್ಲಾದರೂ ಕೆಲಸ ಸಿಕ್ಕೇ ಸಿಗುತ್ತದೆ ಎಂಬ ಆತ್ಮವಿಶ್ವಾಸವಿತ್ತು. ಆದರೆ, ಕೆಲಸ ಹುಡುಕಿಕೊಂಡು ಹೋದೆ ಕಡೆಯಲ್ಲೆಲ್ಲ ಕಂಪ್ಯೂಟರ್ ಜಾnನ ಕೇಳುತ್ತಿದ್ದರು. ಹೀಗೇ ಕೆಲವು ದಿನಗಳ ಹುಡುಕಾಟದ ನಂತರ ಬಿಗ್‌ಬಜಾರ್‌ನಲ್ಲಿ ಕೆಲಸಕ್ಕೆ ಸೇರಿಕೊಂಡೆ. ಅಲ್ಲಿ ಬೇರೆ ಬೇರೆ ಭಾಷೆ ಮಾತನಾಡುವ ಜನರಿದ್ದರು. ನನಗೋ ಕನ್ನಡ ಬಿಟ್ಟು ಬೇರೆ ಭಾಷೆ ಗೊತ್ತಿರಲಿಲ್ಲ.
ಗ್ರಾಹಕರೊಂದಿಗೆ ಯಾವ ರೀತಿ ಮಾತನಾಡಬೇಕೆಂದು ಗೊತ್ತಿರದ ನನಗೆ ಕೆಲವೊಮ್ಮೆ ಈ ಕೆಲಸದ ಸಹವಾಸವೇ ಸಾಕಪ್ಪಾ ಅನ್ನಿಸುತ್ತಿತ್ತು. ಆದರೆ, ಕೆಲಸ ಬಿಟ್ಟು ಬೇರೇನು ಮಾಡುವುದೆಂದೇ ತೋಚುತ್ತಿರಲಿಲ್ಲ. ಹೀಗಿದ್ದಾಗಲೇ ಹೊಸ ಸ್ನೇಹಿತರ ಪರಿಚಯದಿಂದ, ಗ್ರಾಹಕರ ಜೊತೆ ಹೇಗೆ ಮಾತನಾಡಿ ಗಮನ ಸೆಳೆಯಬೇಕು ಎಂದು ಕಲಿತುಕೊಂಡೆ.
ಒಂದು ದಿನ ಹಣಕಾಸಿನಲ್ಲಿ ವ್ಯತ್ಯಾಸ ಬಂದುದರಿಂದ ಮ್ಯಾನೆಜರ್, “ತಿಂಗಳ ಸಂಬಳದಲ್ಲಿ ಕಟ್ ಮಾಡುತ್ತೇನೆ’ ಎಂದು ವಾರ್ನ್ ಮಾಡಿದ್ದರು. ಅಯ್ಯೋ, ನನ್ನ ಸಂಬಳದಲ್ಲಿ ಎಲ್ಲಿ ಕಟ್ ಮಾಡುತ್ತಾರೋ ಎಂದು ಯೋಚಿಸುತ್ತಾ ದಿನ ಕಳೆದಾಗಲೇ ತಿಂಗಳ ಕೊನೆ ದಿನ ಬಂತು. ಮೊದಲ ಸಂಬಳ ಪಡೆಯುತ್ತಿದ್ದೇನೆಂಬ ಖುಷಿ ಒಂದು ಕಡೆಯಾದರೆ, ಎಲ್ಲಿ ದುಡ್ಡು ಕಟ್ ಮಾಡಿಬಿಟ್ಟಿದ್ದಾರೋ ಎಂಬ ಭಯ ಇನ್ನೊಂದೆಡೆ.
ಆದರೆ, ಮ್ಯಾನೇಜರ್ ಪೂರ್ತಿ 8500 ರೂ. ಸಂಬಳವನ್ನು ಕೈಗೆ ಕೊಟ್ಟಾಗ ಜಗತ್ತನ್ನು ಗೆದ್ದ ಖುಷಿ! ಮೊದಲ ಸಂಪಾದನೆಯಲ್ಲಿ ಏನು ಮಾಡೋದು ಎಂದು ಯೋಚಿಸುವಷ್ಟರಲ್ಲಿ, ಅಮ್ಮ ಯುಗಾದಿಗೆ ಸೀರೆ ಖರೀದಿಸುವ ಕನಸು ಕಟ್ಟಿದ್ದು ನೆನಪಾಯ್ತು. ಮೊದಲ ಸಂಬಳದಲ್ಲಿ ಅಮ್ಮ ಆಸೆ ಪಟ್ಟಿದ್ದ ಸೀರೆಯನ್ನೇ ಕೊಡಿಸಿದೆ. ಮಗಳು ಸೀರೆ ಕೊಡಿಸಿದಳೆಂಬ ಖುಷಿಯಲ್ಲಿ ಅಮ್ಮ ನನ್ನನ್ನು ಅಪ್ಪಿಕೊಂಡು ಖುಷಿಪಟ್ಟಳು.
* ಮಧುವರ್ಷಿಣಿ.ಎಲ್.ಎಂ, ಶಂಕರಘಟ್ಟ