ವಿಧಾನಸಭೆ: ಚನ್ನಪಟ್ಟಣ ಬೊಂಬೆ, ನವಲಗುಂದ ಜಮಖಾನಾ, ಕೊಲ್ಲಾಪುರ ಚಪ್ಪಲಿ, ಉಡುಪಿ ಮಲ್ಲಿಗೆ, ಮುಟ್ಟುಗುಳ್ಳ ಬದನೆಕಾಯಿ, ಕಮಲಾಪುರ್ ಕೆಂಪುಬಾಳೆ ಹಣ್ಣು ಸೇರಿ ಕೇಂದ್ರದ ಜಿಯಾಗ್ರಾಫಿಕಲ್ ಇಂಡಿಕೇಷನ್ ಟ್ಯಾಗ್ ನೋಂದಣಿ ಹೊಂದಿರುವ ಉತ್ಪನ್ನಗಳ ಮಾರುಕಟ್ಟೆಗೆ ವಿಮಾನ, ರೈಲ್ವೆ, ಬಸ್ ನಿಲ್ದಾಣಗಳಲ್ಲಿ ಮಳಿಗೆ ತೆರೆಯಲಾಗುವುದು ಎಂದು ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.
ಶುಕ್ರವಾರ ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೇಸ್ ನ ಅಬ್ಬಯ್ಯ ಪ್ರಸಾದ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ 42 ಉತ್ಪನ್ನಗಳು ಜಿಐಟಿ ನೋಂದಣಿ ಹೊಂದಿದ್ದು ಅವುಗಳ ಬಗ್ಗೆ ಹೆಚ್ಚು ಪ್ರಚಾರ ಹಾಗೂ ಮಾರುಕಟ್ಟೆ ವಿಸ್ತರಿಸಲು ಕ್ರಮ ಕೈಗೊಳ್ಳಲಾಗಿದೆ. ವಿದೇಶಿ ಪ್ರವಾಸಿಗರು ಹಾಗೂ ದೇಶೀಯ ಪ್ರವಾಸಿಗರಿಗೆ ಅವುಗಳನ್ನು ಪರಿಚಯಿಸಲು ವಿಮಾನ, ಬಸ್ ಹಾಗೂ ರೈಲ್ವೆ ನಿಲ್ದಾಣಗಳಲ್ಲಿ ಮಳಿಗೆ ತೆರೆಯಲಾಗುವುದು ಎಂದು ಹೇಳಿದರು.
ಈ ಉತ್ಪನ್ನಗಳ ರಫ್ತು ಹೆಚ್ಚಳಕ್ಕೂ ಕ್ರಮ ಕೈಗೊಳ್ಳಲಾಗುವುದು. ಬಹು ಬೇಡಿಕೆಯ ಉತ್ಪನ್ನಗಳು ಇದರಲ್ಲಿವೆ. ಜಿಐ ನೋಂದಣಿ ಹೊಂದಿರುವ ಅತಿ ಹೆಚ್ಚು ಉತ್ಪನ್ನಗಳು ಕರ್ನಾಟಕದ್ದು ಎಂಬ ಖ್ಯಾತಿಯೂ ಇದೆ ಎಂದು ತಿಳಿಸಿದರು.
ಇದನ್ನೂ ಓದಿ:ಕರಾವಳಿ ಪ್ರದೇಶಕ್ಕೆ ಶೀಘ್ರ ಪ್ರತ್ಯೇಕ ಮರಳು ನೀತಿ : ಮುರುಗೇಶ್ ನಿರಾಣಿ
ಇ -ಕಾಮರ್ಸ್ ಮೂಲಕ ಮಾರುಕಟ್ಟೆ ಸೌಲಭ್ಯ ಒದಗಿಸಲು ಅಮೇಜಾನ್ ಹಾಗೂ ಪ್ಲಿಪ್ ಕಾರ್ಟ್ ಸಹಯೋಗದೊಂದಿಗೆ ಪ್ರೋತ್ಸಾಹ ನೀಡಲಾಗುತ್ತಿದೆ ಎಂದು ಹೇಳಿದರು.
ಈ ಮಧ್ಯೆ, ಕೈಮಗ್ಗ ಮತ್ತು ಜವಳಿ ಇಲಾಖೆಯ ಮೂಲಕ ಇಳಕಲ್ ಸೀರೆ, ಗುಳೇದಗುಡ್ಡ ಖಣ ಹಾಗೂ ಮೊಳಕಾಲ್ಮೂರು ಸೀರೆ ಜಿಐ ಉತ್ಪನ್ನಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಅಧ್ಯಯನ ಕೈಗೊಂಡಿದೆ ಎಂದು ತಿಳಿಸಿದರು.