Advertisement

ಗುಲಾಂಗೆ ರಾಜ್ಯ ಬೇಕು, ಬಿಜೆಪಿಗೆ ಬಾವುಟ ಊರಲು ಜಾಗ ಸಿಕ್ಕರೂ ಸಾಕು!

12:29 AM Sep 05, 2022 | Team Udayavani |

ಜಮ್ಮು ಮತ್ತು ಕಾಶ್ಮೀರ ರಾಜಕೀಯ ಇತಿಹಾಸದಲ್ಲಿ ಹೊಸ ಅಧ್ಯಾಯ ಆರಂಭವಾಗಿದೆ. ಅಲ್ಲಿನ ಮುಖ್ಯ
ಮಂತ್ರಿಯಾಗಿದ್ದ ಕಾಂಗ್ರೆಸ್‌ನ ಮಾಜಿ ಧುರೀಣ, ಕೇಂದ್ರದ ಮಾಜಿ ಸಚಿವ ಗುಲಾಮ್‌ ನಬಿ ಆಜಾದ್‌ ತಮ್ಮ ಹೊಸ ಪಕ್ಷದ ಸ್ಥಾಪನೆಯನ್ನು ಪ್ರಕಟಿಸಿದ್ದಾರೆ. ವಿಪರ್ಯಾಸದ ಸಂಗತಿಯೆಂದರೆ ಇತ್ತ ಹೊಸದಿಲ್ಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್‌ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಬಿಜೆಪಿ ವಿರುದ್ಧ ಬೃಹತ್‌ ಪ್ರತಿಭಟನ ಸಮಾವೇಶ ಆಯೋಜಿಸಿತ್ತು. ಅದೇ ಸಂದರ್ಭದಲ್ಲಿ ಕಣಿವೆಯಲ್ಲಿ ಗುಲಾಂ ನಬಿ ಆಜಾದ್‌ ಅದೇ ಕಾಂಗ್ರೆಸ್‌ ವಿರುದ್ಧ ಬೃಹತ್‌ ರ್‍ಯಾಲಿಯಲ್ಲಿ ಹೊಸ ಪಕ್ಷದ ಸ್ಥಾಪನೆಯನ್ನು ಪ್ರಕಟಿಸಿರುವುದು. ಅಲ್ಲಿಗೆ ಈಗಾಗಲೇ 15ಕ್ಕೂ ಹೆಚ್ಚು ಪ್ರಾದೇಶಿಕ ಪಕ್ಷಗಳನ್ನು ಹೊಂದಿರುವ (ಕೆಲವು ಹೆಸರಿನಲ್ಲಿ ರಾಷ್ಟ್ರೀಯ ಪಕ್ಷಗಳಂತಿದ್ದರೂ ಅಸ್ತಿತ್ವ ಕಣಿವೆ ಪ್ರದೇಶದಲ್ಲಿ ಮಾತ್ರ) ಜಮ್ಮು ಮತ್ತು ಕಾಶ್ಮೀರದಲ್ಲಿ ಮತ್ತೊಂದು ಪ್ರಾದೇಶಿಕ ಪಕ್ಷ ಉದಯಿಸಿದಂತಾಗಿದೆ. ಗುಲಾಂ ಅವರ ಕಣ್ಣಿರುವುದು ಮುಂಬರುವ ಜಮ್ಮು ಮತ್ತು ಕಾಶ್ಮೀರ ವಿಧಾನಸಭಾ ಚುನಾವಣೆಯ ಮೇಲೆ.

Advertisement

ಗುಲಾಮ್‌ ನಬಿ ಆಜಾದ್‌ ಅವರ ಹೊಸ ಪಕ್ಷದ ಕುರಿತು ಮಾತನಾಡಲು ಇನ್ನಷ್ಟು ದಿನಗಳು ಬೇಕು. ಬೀಜವನ್ನು ಇಂದು ಬಿತ್ತಿದ್ದರೂ ಮೊಳಕೆಯೊಡೆದು ಚಿಗುರೊಡೆಯುವ, ಬಾಗುವ ಆಧಾರದ ಮೇಲೆ ಆಯುಷ್ಯ ಹಾಗೂ ಭವಿಷ್ಯ ನಿರ್ಧರಿಸಬಹುದು.

ಗುಲಾಂ ನಬಿ ಆಜಾದ್‌ ಅವರ ರಾಜಕೀಯ ಇತಿಹಾಸ ಕಂಡರೆ ಅದೃಷ್ಟ, ಅವಕಾಶ, ವರ್ಚಸ್ಸು ಒಟ್ಟೊಟ್ಟಿಗೇ ಹೆಜ್ಜೆ ಹಾಕಿವೆ. ಪರಿಶ್ರಮವೂ ಇಲ್ಲವೆಂದಲ್ಲ, ಆದರೆ ಒಟ್ಟೂ ಲೆಕ್ಕದಲ್ಲಿ ಉಳಿದ ಮೂರುಗಳದ್ದೇ ಹೆಚ್ಚು ಮೊತ್ತ. ದೊರ್ಡಾ ಜಿಲ್ಲೆಯ ಜಮ್ಮುವಿನ ಪೂರ್ವ ಭಾಗದಲ್ಲಿರುವ ಪ್ರದೇಶದಿಂದ ಬಂದವರು ಗುಲಾಂ ನಬಿ ಆಜಾದ್‌. 1973ರಲ್ಲಿ ಭಲೆಸ್ಸಾ (ದೊರ್ಡಾ ಜಿಲ್ಲೆಯ ಒಂದು ತೆಹಸಿಲ್‌) ಬ್ಲಾಕ್‌ ಸಮಿತಿ ಅಧ್ಯಕ್ಷರಾಗಿ ಕಾಂಗ್ರೆಸ್‌ ಕುದುರೆಯನ್ನೇರಿದರು. ಬಳಿಕ ಜೆ ಮತ್ತು ಕೆ ಯುವ ಕಾಂಗ್ರೆಸ್‌ ಅಧ್ಯಕ್ಷರಾದರು. 1980ರಲ್ಲಿ ಅಖೀಲ ಭಾರತ ಯುವ ಕಾಂಗ್ರೆಸ್‌ ಅಧ್ಯಕ್ಷರಾದರು. ಅನಂತರ ಏಳನೇ ಲೋಕಸಭೆಗೆ ಮಹಾರಾಷ್ಟ್ರದ ವಾಶಿಂ ಕ್ಷೇತ್ರದಿಂದ ಕಾಂಗ್ರೆಸ್‌ನಿಂದ ಆಯ್ಕೆಯಾದರಷ್ಟೇ ಅಲ್ಲ, 1982ರಲ್ಲಿ ಕೇಂದ್ರ ಸಹಾಯಕ ಸಚಿವರೂ ಆದರು. ಎಂಟನೆ ಲೋಕಸಭೆಗೂ ಆಯ್ಕೆಯಾದರು.

1990-96ರ ವರೆಗೆ ಮಹಾರಾಷ್ಟ್ರದಿಂದ ರಾಜ್ಯಸಭೆಗೆ ಆಯ್ಕೆಯಾದರು. ಪಿ.ವಿ. ನರಸಿಂಹರಾಯರ ಕ್ಯಾಬಿನೆಟ್‌ನಲ್ಲಿ ಸಚಿವರೂ ಆದರು. 1996ರಿಂದ 2002ರ ವರೆಗೆ ಜಮ್ಮು ಮತ್ತು ಕಾಶ್ಮೀರವನ್ನು ರಾಜ್ಯಸಭೆಯಲ್ಲಿ ಪ್ರತಿನಿಧಿಸಿದರು. 2002 ರಲ್ಲಿ ಮರು ಆಯ್ಕೆ. 2005ರಲ್ಲಿ ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಆಗುವ ಅವಕಾಶ ಸಿಕ್ಕಿತು. ಪೀಪಲ್ಸ್‌ ಡೆಮಾಕ್ರಟಿಕ್‌ ಪಕ್ಷದೊಂದಿಗೆ ಸೇರಿ ರಚಿಸಿದ ಸರಕಾರ. 2008ರಲ್ಲಿ ಪಿಡಿಪಿ ಬೆಂಬಲ ಹಿಂಪಡೆದಾಗ ವಿಶ್ವಾಸ ಮತ ನಿರ್ಣಯ ಮಂಡಿಸುವ ಬದಲು ಸ್ಥಾನ ತ್ಯಜಿಸಿ ಬಂದರು. 2009ರಲ್ಲಿ ಮತ್ತೆ ರಾಜ್ಯಸಭೆಗೆ ಆಯ್ಕೆ. ಡಾ| ಮನಮೋಹನ್‌ ಸಿಂಗ್‌ ಅವರ ಸರಕಾರದಲ್ಲಿ ಸಚಿವ ಪಟ್ಟ. 2014ರಲ್ಲಿ ಎನ್‌ಡಿಎ ಪಟ್ಟಕ್ಕೇರಿದಾಗ ರಾಜ್ಯಸಭೆಯ ವಿಪಕ್ಷ ನಾಯಕನ ಸ್ಥಾನ ಸಿಕ್ಕಿದ್ದು ಇವರಿಗೇ.

2015ರಲ್ಲಿ ಪಿಡಿಪಿ ಹಾಗೂ ಬಿಜೆಪಿಯು ಹೆಚ್ಚು ಸ್ಥಾನಗಳನ್ನು ಹೊಂದಿದ್ದರೂ ಜಮ್ಮು ಮತ್ತು ಕಾಶ್ಮೀರದಿಂದ ರಾಜ್ಯಸಭೆಗೆ ಮರು ಆಯ್ಕೆಯಾದರು. ತದನಂತರ ಪಕ್ಷದ ಸಾಂಸ್ಥಿಕ ಚುನಾವಣೆಗೆ ಒತ್ತಾಯಿಸಿದ್ದು, ಸಮರ್ಥ ನಾಯಕನ ಆಯ್ಕೆಗೆ ಆಗ್ರಹಿಸಿದ್ದು, ಜಿ-23 ಗುಂಪಿಗೆ ಶಕ್ತಿ ತುಂಬಿದ್ದು, 2022 ರಲ್ಲಿ ರಾಜ್ಯಸಭೆಗೆ ಅವಕಾಶ ಸಿಕ್ಕದಿದ್ದುದು-ಹೀಗೆ ಪೂರ್ಣ ವೃತ್ತಕ್ಕೆ ಬಂದು “ಸಾಕಾಯ್ತು ಕಾಂಗ್ರೆಸ್‌’ ಎಂದದ್ದು ಎಲ್ಲ ತಿಳಿದೇ ಇದೆ. ವಿಶೇಷವೆಂದರೆ ಸರಿಯಾಗಿ 50 ವರ್ಷಗಳ ಪೂರ್ಣಾವಧಿ ಒಂದೇ ಪಕ್ಷದಲ್ಲಿದ್ದ‌ವರೂ ಸಹ ಇಂದಿನ ರಾಜಕಾರಣಕ್ಕೆ (ದಿನಕ್ಕೊಂದು ಪಕ್ಷ, ಪ್ರದೇಶ ಬದಲಾಯಿಸುವಂಥ) ಹೋಲಿಸುವಾಗ ಗುಲಾಂ ಅವರು ಪಕ್ಷ ನಿಷ್ಠೆಯಲ್ಲೂ ಹಿಂದೆ ಬಿದ್ದವರಲ್ಲ. ಈಗ ಕಾಂಗ್ರೆಸ್‌ನ ನಾಯಕತ್ವವನ್ನು ತೆಗಳುತ್ತಿರುವ ಕಾರಣದಿಂದ ಎಲ್ಲ ಮಹಾನಾಯಕರು ಅವರ ಪಕ್ಷ ನಿಷ್ಠೆಯನ್ನು ಪ್ರಶ್ನಿಸುತ್ತಿದ್ದಾರೆ. ಅದು ಸಹಜವಾದದ್ದೇ, ಏರಿದ ಏಣಿಯನ್ನು ಒದ್ದರು ಎಂಬುದು ಕೆಲವರ ವ್ಯಾಖ್ಯೆ. ಬೇರೆ ಏಣಿಯನ್ನು ನೋಡಿಕೊಂಡರು ಎಂಬುದು ಉಳಿದವರ ವ್ಯಾಖ್ಯೆ.

Advertisement

ಕಣಿವೆ ರಾಜ್ಯದಲ್ಲಿ ಕಾಂಗ್ರೆಸ್‌ ಖುಷಿಯಿಂದ ಇದ್ದದ್ದು 1962-1972ರ ವರೆಗೆ. ಅನಂತರ ಪ್ರಾದೇಶಿಕ ಪಕ್ಷ (ಜೆಕೆಎನ್‌ಸಿ)ದ್ದೇ ಕೈ ಮೇಲಾಯಿತು. ಮತ್ತೆ ಅಧಿಕಾರದ ರುಚಿ ಕಂಡದ್ದು 2005ರಲ್ಲಿ ಪಿಡಿಪಿ ಜತೆಗಿನ ಸರಕಾರ
ದಲ್ಲಿ. 1972ರ ಬಳಿಕ 2014ರ ಚುನಾವಣೆವರೆಗೂ ಕಾಂಗ್ರೆಸ್‌ನದ್ದು ಪ್ರತಿ ವಿಧಾನಸಭೆ ಚುನಾವಣೆಯಲ್ಲೂ (1996 ಹೊರತುಪಡಿಸಿ) ಎರಡಂಕಿಯ ಸಮಾಧಾನಕರ ಸಾಧನೆ. 1996ರಲ್ಲಿ ಬಂದದ್ದು 7 ಸೀಟು ಮಾತ್ರ. 2014 ರಲ್ಲಿ 12. ಗಮನಿಸಬೇಕಾದ ಮತ್ತೂಂದು ಅಂಶವೆಂದರೆ, 1972ರಲ್ಲಿ 58 ಸ್ಥಾನ ಪಡೆದದ್ದು ಬಿಟ್ಟರೆ, ಉಳಿದದ್ದು 30 ರೊಳಗೇ ಸಾಧನೆ. ಇದರಲ್ಲಿ ಗುಲಾಂ ಅವರ ಪಾಲೆಷ್ಟು ಎಂಬುದೂ ಮುಖ್ಯ.

ಈಗ ಗುಲಾಂ ನಂಬಲೇಬೇಕಾಗಿರುವುದು ತಮ್ಮ ವರ್ಚಸ್ಸಿನ ಮುಖಬೆಲೆ, ಸಂಘಟನೆಯ ಪರಿಶ್ರಮವೆ ರಡನ್ನೇ. ಸದ್ಯ ವರ್ಚಸ್ಸಿನ ಲಾಭ ಎಂಬಂತೆ ಒಂದಿಷ್ಟು ನುರಿತ ನಾಯಕರು ಇವರ ಪಾಳಯವನ್ನು ಸೇರಿದ್ದಾರೆ. ತಳಮಟ್ಟದಲ್ಲಿ ಮತ ಸೆಳೆಯಲು ಇದು ನೆರವಾಗ ಬಹುದು. ಪಕ್ಷ ಸಂಘಟನೆಗೂ ಸಮರ್ಥರಿದ್ದಾರೆ. ಇದರ ಮಧ್ಯೆ ಕೊಂಚ ಟೀಕೆಗಳೂ ಇವೆ.

ದಿಲ್ಲಿಯಲ್ಲಿದ್ದು ಕಾಶ್ಮೀರಕ್ಕೆ ಪ್ರವಾಸಿಗರಂತೆ ಬಂದು ರಾಜಕಾರಣ ಮಾಡಿದವರು. ಅಂದು ಜಮ್ಮು ಮತ್ತು ಕಾಶ್ಮೀರ ನನ್ನ ಮಹತ್ವಾಕಾಂಕ್ಷೆಗೆ ಚಿಕ್ಕದು ಎಂದವರಿಗೆ ಈಗ ಅದೇ ಕಣಿವೆ ರಾಜ್ಯ ಹೇಗೆ ಮಹತ್ವದ್ದಾಗಿದೆ ಎಂದು ಗುಲಾಂ ಅವರ ಜಮ್ಮು ಮತ್ತು ಕಾಶ್ಮೀರ ಬಗೆಗಿನ ನಿಷ್ಠೆಯನ್ನೂ ಪ್ರಶ್ನಿಸಿದವರಿದ್ದಾರೆ. ಆದರೂ ಮುಸ್ಲಿಂ ಮತ್ತು ಇತರ ಸಮುದಾಯದಲ್ಲಿ ಇವರ ಬಗ್ಗೆ ಸದಭಿಪ್ರಾಯವೂ ಇದೆ.

ಮೆಹಬೂಬಾ ಮುಫ್ತಿ ಸಯೀದರ ಪಿಡಿಪಿ ಹಾಗೂ ಒಮರ್‌ ಅಬ್ದುಲ್ಲಾರ ನ್ಯಾಶನಲ್‌ ಕಾನ್ಫರೆನ್ಸ್‌ ಎರಡೂ ಗುಲಾಂ ಅವರು ಬಿತ್ತಿರುವ ಬೀಜ ಮೊಳಕೆಯೊಡೆದು ಚಿಗುರಿನ ಬಣ್ಣಕ್ಕೆ ಕಾಯುತ್ತಿದ್ದಾರೆ. ಬಿಜೆಪಿ ಆ ಬಣ್ಣತಮ್ಮ ಬಣ್ಣಕ್ಕೆ ಹೋಲಬಹುದೆಂಬ ನಿರೀಕ್ಷೆಯಲ್ಲಿ ಈಗಾಗಲೇ ಬೊಗಸೆಯಲ್ಲಿ ಗೊಬ್ಬರ ಹಿಡಿದು ನಿಂತಿದೆ. ಆದರೆ ನಿಜವಾದ ಕಠಿನ ಪರಿಸ್ಥಿತಿ ಇರುವುದು ಕಾಂಗ್ರೆಸ್‌ಗೇ .

ಮುಂಬರುವ ಚುನಾವಣೆಗೆ ಸಮರ್ಥ ಪಡೆಯನ್ನು ಕಟ್ಟುವುದು ಹಾಗೂ ತಮ್ಮ ಮತಗಳು ಗುಲಾಂ ಅವರ ಬುಟ್ಟಿಗೆ ಬೀಳದಂತೆ ತಂತ್ರ ಹೆಣೆಯುವುದು- ಈ ಎರಡೂ ಕಾರ್ಯವನ್ನು ಕಾಂಗ್ರೆಸ್‌ ಎಷ್ಟು ತ್ವರಿತ ಮತ್ತು ಸಮರ್ಥವಾಗಿ ಮಾಡುತ್ತದೋ ಅದನ್ನು ಆಧರಿಸಿ ಕೊಂಚ ರಾಜಕೀಯ ಚಿತ್ರ ಬದಲಾಗಬಹುದು.

ಗುಲಾಂ ಅವರು ನಿಜಕ್ಕೂ ಆಜಾದ್‌ ಆಗಬೇಕೆಂದರೆ ಎಲ್ಲರ ಅನಿವಾರ್ಯತೆಯಲ್ಲಿ ತಮ್ಮ ಬೆಳೆಯನ್ನು ತೆಗೆಯ ಬೇಕು. ಅದೇ ನಿಜವಾದ ಸವಾಲು ಮತ್ತು ಸಾಧನೆ ಸಹ.

ಹಾಗೆಂದು ಬಿಜೆಪಿಗೆ ಮಹಾತ್ವಾಕಾಂಕ್ಷೆ ಇಲ್ಲವೆಂದಲ್ಲ ; ಸದ್ಯಕ್ಕೆ ಆಕಾಂಕ್ಷೆಯಷ್ಟೇ. ರಾಜ್ಯ ಸಿಗದಿದ್ದರೂ ಪರವಾಗಿಲ್ಲ, ಬಾವುಟ ಊರಲು ಕೊಂಚ ಜಾಗ ಸಿಕ್ಕಿದರಷ್ಟೇ ಸಾಕು !

-ಅರವಿಂದ ನಾವಡ

Advertisement

Udayavani is now on Telegram. Click here to join our channel and stay updated with the latest news.

Next