ಥಾಣೆ: ಎಲ್ಲರಿಗಾಗಿ ನಾವು ನಮಗಾಗಿ ಎಲ್ಲರು ಎಂಬ ಧ್ಯೇಯ ವಾಕ್ಯದೊಂದಿಗೆ ಘೋಡ್‌ಬಂದರ್‌ರೋಡ್ ಕನ್ನಡ ಅಸೋಸಿಯೇಶನ್ ಹಲವಾರು ಸಮಾಜಮುಖೀ ಚಿಂತನೆಗಳನ್ನು ಅನುಷ್ಠಾನಗೊಳಿಸಿದೆ. ಕೃಷಿಯ ಮಹತ್ವವನ್ನು ತಿಳಿಯಲು ಕೆಸರುಗದ್ದೆಯ ಓಟ, ಮಹಾರಾಷ್ಟ್ರ ಹಾಗೂ ಕರ್ನಾಟಕದ ತುಳು-ಕನ್ನಡಿಗರಿಗೆ ಅತ್ಯಧಿಕ ಮೊತ್ತದ ಬಹುಮಾನದೊಂದಿಗೆ ಕ್ರಿಕೆಟ್ ಪಂದ್ಯಾಟ, ಮನೆ ಮನೆಯಲ್ಲಿ ಭಜನೆಯ ಮೂಲಕ ಸಂಪ್ರದಾಯಗಳ ವಿಸ್ತರಣೆ, ಅಶಕ್ತ ಕಲಾವಿದರಿಗೆ ನೆರವು ನೀಡಿ ಗೌರವಿಸಿದೆ. ಸಾಂಘಿಕ ಪ್ರಯತ್ನವನ್ನು ಯೋಜನಾ ಬದ್ಧವಾಗಿ ಮುನ್ನಡೆಸುವುದೇ ಸಂಘಟನೆಗಳ ಸಾಧನೆಯಾಗಬೇಕು ಎಂದು ಘೋಡ್‌ಬಂದರ್ ರೋಡ್ ಕನ್ನಡ ಅಸೋಸಿಯೇಶನ್ ಅಧ್ಯಕ್ಷ ವಿಕ್ರಮಾನಂದ ಶೆಟ್ಟಿ ನುಡಿದರು.
ಫೆ. 18 ರಂದು ಸಂಜೆ ಥಾಣೆ ಪಶ್ಚಿಮದ ಜೆ. ಬಿ. ರೋಡ್, ಹೀರಾನಂದಾನಿ ಮೇಡೋಸ್ ಬಳಿಯ ಡಾ| ಕಾಶೀನಾಥ ಘಾಣೇಕರ್ ನಾಟ್ಯಗೃಹದಲ್ಲಿ ಘೋಡ್‌ಬಂದರ್ ರೋಡ್ ಕನ್ನಡ ಅಸೋ.ವಾರ್ಷಿಕೋತ್ಸವ ಸಂಭ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಥಾಣೆ ಪರಿಸರದ ತುಳು-ಕನ್ನಡಿಗರು, ಹೊಟೇಲ್ ಉದ್ಯಮಿಗಳು, ವಿವಿಧ ಸಂಘಟನೆಗಳ ಪ್ರತಿನಿಧಿಗಳು, ನಮ್ಮ ಕಾರ್ಯಕಾರಿ ಸಮಿತಿಯ ಬಳಗ, ಮಹಿಳಾ ಸದಸ್ಯೆಯರ ಸಂಪೂರ್ಣ ಸಹಕಾರದೊಂದಿಗೆ ಜನಪರ ಕಾರ್ಯಯೋಜನೆಯನ್ನು ಸಾಕಾರ ಗೊಳಿಸಿದ ಆತ್ಮತೃಪ್ತಿ ನನಗಿದೆ. ಈವರೆಗೆ ಸಹಕರಿಸಿದ ಸರ್ವ ಸದಸ್ಯರಿಗೆ, ಹಿತೈಷಿಗಳಿಗೆ, ಜಾಹೀರಾತುದಾರರಿಗೆ ಕೃತಜ್ಞತೆಗಳು ಎಂದು ನುಡಿದು ಶುಭಹಾರೈಸಿದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ, ಕಲಾಪೋಷಕ ಲಕ್ಷ್ಮಣ್ ಮಣಿಯಾಣಿ ಅವರು ಮಾತನಾಡಿ, ಜನರ ಬದುಕನ್ನು ಹತ್ತಿರದಿಂದ ನೋಡುತ್ತಾ ಅವರೊಂದಿಗೆ ಬದುಕುತ್ತಾ ಸಾಮಾಜಿಕ ಜಾಗೃತಿ ಮೂಡಿಸುವ ಕೆಲಸವನ್ನು ಶ್ರದ್ಧೆಯಿಂದ ಮಾಡಬೇಕು. ಇಂದು ಪ್ರಜ್ವಲಿಸಿದ ದೀಪ ಜಗತ್ತಿನ ಜ್ಞಾನ ಜ್ಯೋತಿಯಾಗಿ ಬೆಳಗಲಿ ಎಂದು ಆಶಿಸಿದರು. ಥಾಣೆ ಬಂಟ್ಸ್ ಅಸೋಸಿಯೇಶನ್ ಉಪಾಧ್ಯಕ್ಷ ವೇಣುಗೋಪಾಲ್ ಶೆಟ್ಟಿ, ವರ್ತಕ್ ನಗರ ಕನ್ನಡ ಸಂಘದ ಅಧ್ಯಕ್ಷ ಜಯಂತ್ ಶೆಟ್ಟಿ ಅವರು ಮಾತನಾಡಿ, ಸಂಘದ ಸಿದ್ಧಿ-ಸಾಧನೆಗಳನ್ನು ಶ್ಲಾಘಿಸಿದರು.
ಸಮಾರಂಭದಲ್ಲಿ ವೈವಾಹಿಕ ಜೀವನದ ಐವತ್ತು ಸಂವತ್ಸರಗಳನ್ನು ಪೂರೈಸಿದ ಮೂಡುಬೆಳ್ಳೆ ಶಂಕರಬೆಟ್ಟು ಮನೆಯ ರಾಮಕೃಷ್ಣ ಶೆಟ್ಟಿ ಮತ್ತು ಕೊಜಕೊಳ್ಳಿ ಮನೆ ಸರೋಜಿನಿ ಶೆಟ್ಟಿ ದಂಪತಿ ಹಾಗೂ ಕುರ್ಕಾಲ್ ಕುಲೇದು ಮೇಲ್ಮನೆ ಚಂದ್ರಶೇಖರ ಶೆಟ್ಟಿ ಮತ್ತು ಬೆಳಪು ಅಂತಣ್ಣ ಮನೆ ವಾರಿಜಾ ಶೆಟ್ಟಿ ದಂಪತಿಯನ್ನು ಗಣ್ಯರು ಶಾಲು ಹೊದೆಸಿ, ಫಲಪುಷ್ಪ, ಸ್ಮರಣಿಕೆಯನ್ನಿತ್ತು ಸಮ್ಮಾನಿಸಿ ಗೌರವಿಸಿದರು.
ದಕ್ಷಿಣ ಕನ್ನಡ ರಾಜ್ಯೋತ್ಸವ ಸಾಧಕ ಪ್ರಶಸ್ತಿ ಪುರಸ್ಕೃತರಾದ ಪ್ರಸೂಲ್ ಶೆಟ್ಟಿ, ವಿಶ್ವ ಶೆಟ್ಟಿ, ಅನ್ಯಾ ಶೆಟ್ಟಿ, ಶ್ರೇಯಾ ಶೆಟ್ಟಿ ಅವರನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಗೌರವಿಸಲಾಯಿತು. ಮುಂಬಯಿ ವಿಶ್ವವಿದ್ಯಾಲಯದ ನಾಲ್ಕು ವರ್ಷಗಳ ಕನ್ನಡ ಕಲಿಕೆಯನ್ನು ಪೂರೈಸಿ ಕನ್ನಡ ಪ್ರಮಾಣ ಪತ್ರ ಪಡೆದ ಆಂಗ್ಲ ಮಾಧ್ಯಮದ ವಿದ್ಯಾರ್ಥಿಗಳನ್ನು ವೇದಿಕೆಯ ಗಣ್ಯರು ಅಭಿನಂದಿಸಿದರು. ವಾಣಿಶ್ರೀ ಶೆಟ್ಟಿ, ಸೀಮಾ ಆರ್. ಶೆಟ್ಟಿ, ರೂಪಾ ಪೂಜಾರಿ, ಮೋಹಿನಿ ಕೊಠಾರಿ, ಹೇಮಾ ಶೆಟ್ಟಿ, ಸದಾಶಿವ ಮೊಲಿ ಅವರು ಅತಿಥಿಗಳನ್ನು ಹಾಗೂ ಸಾಧಕರನ್ನು ಪರಿಚಯಿಸಿದರು.
ಸಭಾ ಕಾರ್ಯಕ್ರಮವನ್ನು ಕನ್ನಡ ಅಸೋಸಿ ಯೇಶನ್‌ನ ಜತೆ ಕಾರ್ಯದರ್ಶಿ ಲೇಖಕ ನಿತ್ಯಾನಂದ ಬೆಳುವಾಯಿ, ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಾಯಾ ಮನೋಜ್ ಅವರು ನಿರ್ವಹಿಸಿದರು. ಕೋಶಾಧಿಕಾರಿ ಜಯ ಪೂಜಾರಿ ಕೊಜಕೊಳ್ಳಿ ಸ್ವಾಗತಿಸಿದರು. ವೇದಿಕೆಯಲ್ಲಿ ಸಂಸ್ಥೆಯ ಉಪಾಧ್ಯಕ್ಷರುಗಳಾದ ಗೋಪಾಲ್ ಶೆಟ್ಟಿ ಮತ್ತು ಪ್ರಶಾಂತ್ ನಾಯಕ್, ಗೌರವ ಕಾರ್ಯದರ್ಶಿ ಹರೀಶ್ ಡಿ. ಸಾಲ್ಯಾನ್, ಜತೆ ಕೋಶಾಧಿಕಾರಿ ಚಂದ್ರಶೇಖರ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರತಿಭಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.
ಸಾಂಸ್ಕೃತಿಕ ಕಾರ್ಯಕ್ರಮವಾಗಿ ನಿತ್ಯಾನಂದ ಬೆಳುವಾಯಿ ರಚಿಸಿ, ನಿರ್ದೇಶಿಸಿರುವ ಭೋಜಣ್ಣನ ಪತ್ರ ಕಿರು ಹಾಸ್ಯ ನಾಟಕವು ಮಕ್ಕಳಿಂದ ಹಾಗೂ ಮೀರಾ ಈ ದೇಶದ ಮಗಳು ಕಿರು ನಾಟಕ ಪ್ರದರ್ಶನಗೊಂಡಿತು. ಸದಸ್ಯ ಬಾಂಧವರ ಮಕ್ಕಳಿಂದ ನೃತ್ಯ ವೈವಿಧ್ಯ ಹಾಗೂ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರುಗಳಿಂದ ಬೇಡರ ಕಣ್ಣಪ್ಪ ಯಕ್ಷಗಾನ ಬಯಲಾಟ ನಡೆಯಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.
ಚಿತ್ರ-ವರದಿ : ರಮೇಶ್ ಅಮೀನ್