ನವಿ ಮುಂಬಯಿ: ಹಿಂದೆ ಆಟಿ ತಿಂಗಳೆಂದರೆ ತುಂಬಾ ಕಷ್ಟದ ತಿಂಗಳು. ಆಗ ಬೈಹುಲ್ಲಿನ ಅಕ್ಕಿಯ ಗಂಜಿ, ಗೆಣಸಿನ ಹೋಳು ಇತ್ಯಾದಿಗಳನ್ನು ತಿಂದು ದಿನ ಕಳೆಯುತ್ತಿದ್ದರು. ಅಕ್ಕಿ ಸಾಲ ತಂದು ಊಟ ಮಾಡುತ್ತಿದ್ದರು. ಆ ದಿನಗಳು ಈಗಲೂ ನೆನಪಿಗೆ ಬರುತ್ತವೆ. ಆದರೆ ಆ ಕಷ್ಟದ ದಿನಗಳಿಂದು ಮಾಯವಾಗಿದೆ. ಎಲ್ಲರು ಶಿಕ್ಷಣವನ್ನು ಪಡೆದು ಉದ್ಯೋಗದಲ್ಲಿರುವುದರಿಂದ ಊಟಕ್ಕೆ ತೊಂದರೆಯಿಲ್ಲ. ಅಂದಿನ ದಿನಗಳಲ್ಲಿ ಹಬ್ಬಹರಿದಿನಗಳು ಬಂದರೆ ತುಂಬಾ ಸಂತೋಷ. ಏಕೆಂದರೆ ಹೊಟ್ಟೆ ತುಂಬಾ ತಿಂಡಿ-ತಿನಸುಗಳು ಸಿಗುತ್ತಿತ್ತು. ಪ್ರಸ್ತುತ ಹಣವಿದ್ದವರಿಗೆ ದಿನಾಲೂ ಹಬ್ಬವಾಗಿದೆ. ಹಿಂದೆ ಕೂಡು ಕುಟುಂಬವಿತ್ತು. ಒಂದು ಮನೆಯಲ್ಲಿ ಕಡಿಮೆ ಎಂದರೆ 10-20 ಮಂದಿ ಇರುತ್ತಿದ್ದರು. ಇಂದು ಎಲ್ಲಾ ಪಾಲಾಗಿ ಬರೇ ಗಂಡ-ಹೆಂಡತಿ ಮತ್ತು ಅವರ ಮಕ್ಕಳು ಮಾತ್ರ ಎಂಬಲ್ಲಿಗೆ ಬಂದು ನಿಂತಿದೆ. ಕೂಡು ಕುಟುಂಬವನ್ನು ಬಿಂಬಿಸುವ ಇಂತಹ ಕಾರ್ಯಕ್ರಮಗಳು ನಿರಂತರವಾಗಿ ನಡೆದಾಗ ಯುವಪೀಳಿಗೆಗೆ ನಮ್ಮ ನಾಡಿನ ಸಂಸ್ಕೃತಿ, ಸಂಸ್ಕಾರಗಳ ಅರಿವು ಮೂಡಿಸಿದಂತಾಗುತ್ತದೆ ಎಂದು ಘನ್ಸೋಲಿ ಶ್ರೀ ಮೂಕಾಂಬಿಕಾ ಮಂದಿರದ ಧರ್ಮದರ್ಶಿ ಅಣ್ಣಿ ಸಿ. ಶೆಟ್ಟಿ ಅವರು ನುಡಿದರು.
ಜು. 29ರಂದು ಘನ್ಸೋಲಿ ಶ್ರೀ ಮೂಕಾಂಬಿಕಾ ದೇವಾಲಯದ ಸಭಾಂಗಣದಲ್ಲಿ ಜರಗಿದ ಆಟಿದ ಸೊಗಸ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತ ನಾಡಿದ ಅವರು, ಇಂದಿನ ಕಾರ್ಯಕ್ರಮವನ್ನು ಕಂಡಾಗ ಸಂತೋಷವಾಗುತ್ತಿದೆ. ನಿಮಗೆಲ್ಲರಿಗೂ ಶ್ರೀಮೂಕಾಂಬಿಕೆಯ ಅನುಗ್ರಹ ಇರಲಿ ಎಂದರು.
ಅತಿಥಿಯಾಗಿ ಪಾಲ್ಗೊಂಡ ಬೋಂಬೆ ಬಂಟ್ಸ್ ಅಸೋಸಿಯೇಶನ್ ಮಾಜಿ ಅಧ್ಯಕ್ಷ ಶ್ಯಾಮ್ ಎನ್. ಶೆಟ್ಟಿ ಇವರು ಮಾತನಾಡಿ, ಇಂದು ನಾವು ಆಟಿ ತಿಂಗಳ ವಿಶೇಷದ ಬಗ್ಗೆ ನಮ್ಮ ಮುಂದಿನ ಪೀಳಿಗೆಗೆ ಅರಿವು ಮೂಡಿಸಲು ಒಳ್ಳೆಯ ಕಾರ್ಯಕ್ರಮವನ್ನು ಆಯೋಜಿಸಿದ್ದೇವೆ. ಹಿಂದಿನ ಕಾಲದಲ್ಲಿ ಆಟಿ ತಿಂಗಳ ಕಷ್ಟದ ಅನುಭವಗಳನ್ನು ಕಣ್ಣಾರೆ ಕಂಡವರು ನಾವು. ಒಂದು ಮುಡಿ ಅಕ್ಕಿಯನ್ನು ಒಂದು ತಿಂಗಳ ಕಾಲ ಬಳಸುತ್ತಿದ್ದೆವು. ಆ ಕಾಲದಲ್ಲಿ ನೀರಿನಲ್ಲಿ ಹಾಕಿದ ಮಾವಿನ ಕಾಯಿ, ಪೆಜಕಾಯಿ, ಹಲಸು ತಿಂದು ದಿನ ಕಳೆಯುತ್ತಿದ್ದೇವು. ನಾನು ಆಟಿ ತಿಂಗಳ ಹಲವಾರು ಕಾರ್ಯಕ್ರಮಗಳಿಗೆ ಹೋಗಿದ್ದೆ. ಆದರೆ ಇಲ್ಲಿ ಆಚರಿಸಿದ ಆಟಿದ ಸೊಗಸ್ ಕಾರ್ಯಕ್ರಮ ಉತ್ತಮವಾಗಿ ಮೂಡಿ ಬಂದಿದೆ ಎಂದರು.
ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು ಅವರು ಮಾತನಾಡಿ, ನಮ್ಮ ತುಳುನಾಡಿನಲ್ಲಿ ದೇವತಾ ಆರಾಧನೆಯ ಜತೆಗೆ ದೈವಾರಾಧನೆ, ನಾಗಾರಾಧನೆ ಇತ್ಯಾದಿಗಳಿಗೆ ಮಹತ್ವವಿದೆ. ಅಂತಹ ತುಳು ನಾಡಿನಲ್ಲಿ ಹುಟ್ಟಿದ್ದೇ ನಮ್ಮ ಭಾಗ್ಯ, ಇಲ್ಲಿ ನೆಲೆಸಿರುವ ತುಳುವರು ಉದ್ಯಮ, ಉದ್ಯೋಗ ಮಾಡಿದ ಸಂಪಾದನೆಯಿಂದಲೇ ಇಂದು ತುಳು ನಾಡಿನ ಎಲ್ಲಾ ದೈವಸ್ಥಾನ, ದೇವಸ್ಥಾನಗಳು ಜೀರ್ಣೋದ್ಧಾರ ಕಂಡಿವೆ. ನಮ್ಮ, ಸಂಸ್ಕೃತಿ, ಸಂಸ್ಕಾರಗಳ ಬಗ್ಗೆ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯ ನಮ್ಮಿಂದಾಗಬೇಕು ಎಂದು ನುಡಿದರು.
ಅತಿಥಿಗಳಾಗಿ ಕ್ಯಾಟರಿಂಗ್ ಉದ್ಯಮಿಗಳಾದ ಜಗದೀಶ್ ಶೆಟ್ಟಿ ಮುಲ್ಕಿ, ಸತೀಶ್ ಶೆಟ್ಟಿ, ಉದ್ಯಮಿ ಸತೀಶ್ ಪೂಜಾರಿ, ದೇವಾಲಯದ ಉಪಾಧ್ಯಕ್ಷ ನಂದಿಕೂರು ಜಗದೀಶ್ ಶೆಟ್ಟಿ, ತುಳುಕೂಟ ಐರೋಲಿಯ ಮಾಜಿ ಅಧ್ಯಕ್ಷ ಹರೀಶ್ ಶೆಟ್ಟಿ ಪಡುಬಿದ್ರೆ, ದೈವಾರಾಧನೆಯ ಮಧ್ಯಸ್ಥ ಕಿಶೋರ್ ಶೆಟ್ಟಿ ದೆಪ್ಪುಣಿಗುತ್ತು, ನೋರ್ಡಿಕ್ ಲಾಜಿಸ್ಟಿಕ್‌ನ ಮಾಲಕ ಪ್ರಮೋದ್ ಕರ್ಕೇರ ಅಡ್ವೆ ಉಪಸ್ಥಿತರಿದ್ದರು.
ಅತಿಥಿ-ಗಣ್ಯರು ದೀಪಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮಹಿಳಾ ವಿಭಾಗದವರು ಪ್ರಾರ್ಥನೆಗೈದರು. ನಂದಿಕೂರು ಜಗದೀಶ್ ಶೆಟ್ಟಿ ಅವರು ಸ್ವಾಗತಿಸಿ ಮಾತನಾಡಿ, ಹಿಂದಿನ ಕಾಲದಲ್ಲಿ ಹಿರಿಯರು ತಗ್ಗು ಪ್ರದೇಶದಲ್ಲಿ ಜಾಗ ಖರೀದಿಸುತ್ತಿದ್ದರು. ಯಾಕೆಂದರೆ ಅಲ್ಲಿ ನೀರಿನ ಅನುಕೂಲವಿರುವುದರಿಂದ ವ್ಯವಸಾಯ, ಕೃಷಿ ಮಾಡಬಹುದೆಂಬ ಮುಂದಾಲೋಚನೆ ಇತ್ತು. ಆದರೆ ಈಗ ತಗ್ಗು ಪ್ರದೇಶದ ಜಾಗ ಯಾರಿಗೂ ಬೇಡವಾಗಿದೆ. ಎಲ್ಲರಿಗೂ ರಸ್ತೆ ಬದಿಯ ಜಾಗವೇ ಬೇಕು. ಕಾಲ ಬದಲಾಗಿದೆ ಎಂದು ಹೇಳಿದರು.
ದೇವಾಲಯದ ಪದಾಧಿಕಾರಿಗಳು ಅತಿಥಿಗ ಳನ್ನು ಗೌರವಿಸಿದರು. ಇದೇ ಸಂದರ್ಭದಲ್ಲಿ ನಡೆದ ಅಡುಗೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನದ ಪ್ರಾಯೋಜಕತ್ವವನ್ನು ಸತೀಶ್ ಪೂಜಾರಿ ದಂಪತಿ ವಹಿಸಿದ್ದು ಅವರನ್ನು ಸಮ್ಮಾನಿಸ ಲಾಯಿತು. ವೀರೇಂದ್ರ ಶೆಟ್ಟಿ ಹಾಗೂ ಕಾರ್ಯಕ್ರಮದಲ್ಲಿ ಆಟಿಕಳಂಜ ಮತ್ತು ಪಾಡªನದೊಂದಿಗೆ ರಂಜಿಸಿದ ಗೀತಾ ಗಣೇಶ್ ಶೆಟ್ಟಿ, ಮನ್ವಿತ್ ಹಂಡ ಅವರನ್ನು ಗೌರವಿಸಲಾಯಿತು. ಹರೀಶ್ ಪಡುಬಿದ್ರೆ ಅವರು ಆಟಿ ತಿಂಗಳ ಬಗ್ಗೆ ಹಾಗೂ ಆಟಿ ಕಳಂಜನ ಬಗ್ಗೆ ವಿವರಿಸಿ ಅಡುಗೆ ಸ್ಪರ್ಧೆಯ ವಿಜೇತರ ಯಾದಿಯನ್ನು ಓದಿ ವಂದಿಸಿದರು. ಸುರೇಶ್ ಎಸ್. ಕೋಟ್ಯಾನ್ ವಂದಿಸಿದರು. ಕೊನೆಯಲ್ಲಿ ಅನ್ನಪ್ರಸಾದ ನಡೆಯಿತು.