Advertisement

ಗೆಜ್ಜೆ, ಸ್ಯಾಕ್ಸ್‌ಫೋನ್‌ ಸಂಗಮ -ಕಣ್ಮನ ಸೆಳೆದ ನಾದ ನೃತ್ಯ ನಮನ!

12:15 PM Aug 31, 2024 | Team Udayavani |

ಆಸ್ಟಿಗೋ:ಇಲಿನಾಯ್ಸ್ ರಾಜ್ಯದಲ್ಲಿರುವ ಕನ್ನಡ ಬಳಗಕ್ಕೆ ಆ.3ರಂದು ಒಂದು ಅತ್ಯುತ್ತಮವಾದ ಕಾರ್ಯಕ್ರಮವನ್ನು ಸವಿಯುವ ಸದವಕಾಶ ದೊರಕಿತ್ತು. ಅದು ಆಸ್ವಿಗೋ ಈಸ್ಟ್‌ ಹೈಸ್ಕೂಲಿನ ಸುಸಜ್ಜಿತ ಸಭಾಂಗಣದಲ್ಲಿ ನಡೆದ, ಸಿದ್ಧಾಂತ್‌ ಮತ್ತು ಸುಮೇಧಾ ಎಂಬ ಅಣ್ಣ-ತಂಗಿಯರು ಪ್ರಸ್ತುತ ಪಡಿಸಿದ “ನಾದ-ನೃತ್ಯ-ನಮನ’ ಕಾರ್ಯಕ್ರಮ. “ನಾದ’ವು ಸಿದ್ಧಾಂತ್‌ ಅವರ ಸ್ಯಾಕ್ಸೋಫೋನ್‌ ಪ್ರದರ್ಶನವನ್ನು ಪ್ರತಿನಿಧಿಸುತ್ತದೆ, “ನೃತ್ಯ’ವು ಸುಮೇಧಾ ಅವರ ಭರತನಾಟ್ಯ ಪ್ರದರ್ಶನವನ್ನು ಪ್ರತಿನಿಧಿಸಿದರೆ “ನಮನ’ವನ್ನು ನಾದ-ನೃತ್ಯ ಪ್ರಿಯನಾದ ಭಗವಂತನಿಗೆ ಅರ್ಪಿಸಲಾಗಿತ್ತು.

Advertisement

ಸಿದ್ಧಾಂತ್‌ ಅವರು ಕಳೆದ 6 ವರ್ಷಗಳಿಂದ ಆನ್‌ಲೈನ್‌ ತರಗತಿಗಳ ಮೂಲಕ ಗುರು ನಾದಬ್ರಹ್ಮ ಇ.ಆರ್‌.ಜನಾರ್ದನ್‌ (ಪದ್ಮಶ್ರೀ ಕದ್ರಿ ಗೋಪಾಲನಾಥ್‌ ಅವರ ಶಿಷ್ಯ) ಅವರಿಂದ ಸ್ಯಾಕ್ಸೋಫೋನ್‌ ಕಲಿಯುತ್ತಿದ್ದಾರೆ. ಈ ಕಾರ್ಯಕ್ರಮ ನಡೆಯುವ ಕೇವಲ ಮೂರು ವಾರಗಳ ಮೊದಲು ಅವರು ತಮ್ಮ ಸಂಗೀತ ಗುರುಗಳನ್ನು ಅವರು ಮೊದಲ ಬಾರಿಗೆ ಭೇಟಿಯಾದರು.

ಜನಾರ್ದನ್‌ ಅವರು ಚೆನ್ನೈಯಿಂದ ಶಿಕಾಗೋಗೆ ಬಂದಿಳಿದು, ಪ್ರೀತಿಯ ಶಿಷ್ಯನನ್ನು ರಂಗಪ್ರವೇಶಕ್ಕೆ ತಯಾರು ಮಾಡಿ, ಬೆಂಬಲವಾಗಿ ನಿಂತರು. ಸಿದ್ಧಾಂತ್‌ ಅವರು ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಸ್ಯಾಕ್ಸೋಫೋನ್‌ ವಾದನ ಕಾರ್ಯಕ್ರಮವನ್ನು ಯಶಸ್ವಿಯಾಗಿ ಪ್ರದರ್ಶಿಸಿದರು. ವರ್ಣಂ, ಪಂಚರತ್ನ ಕೃತಿ, ತ್ಯಾಗರಾಜ ಕೃತಿಗಳು, ದೇವರ ನಾಮಗಳನ್ನು ವಿವಿಧ ತಾಳಗಳಲ್ಲಿ, ರಾಗಗಳಲ್ಲಿ ಮತ್ತು ವಿಭಿನ್ನ ವೇಗದಲ್ಲಿ ನುಡಿಸುವ ಮೂಲಕ ಪ್ರೇಕ್ಷಕರನ್ನು ಮೋಡಿ ಮಾಡಿದರು.

ಪಿಟೀಲು ವಾದನದಲ್ಲಿ ವಿದ್ವಾನ್‌ ಕಮಲಾಕಿರಣ್‌ ವಿಂಜಮುರಿ, ಮೃದಂಗದಲ್ಲಿ ವಿದ್ವಾನ್‌ ಶ್ರೀರಾಮ್‌ ಅಯ್ಯರ್‌ ಮತ್ತು ವಿದ್ವಾನ್‌ ಸುಬ್ರಮಣಿಯನ್‌ ಕೃಷ್ಣಮೂರ್ತಿ, ಘಟಂನಲ್ಲಿ ಜಿಷ್ಣು ಸುಬ್ರಮಣಿಯನ್‌ ಅವರು ವೇದಿಕೆಯನ್ನು ಅಲಂಕರಿಸಿದ್ದರು. ಈ ಸಂದರ್ಭದಲ್ಲಿ, ಸುಮೇಧಾ ತನ್ನ ಸಹೋದರನ ಸ್ಯಾಕ್ಸೋಫೋನ್‌ ವಾದನದೊಂದಿಗೆ ತನ್ನ ಗೆಜ್ಜೆ ಪೂಜೆಯನ್ನು ನೆರವೇರಿಸಿದರು. ಸುಮೇಧಾ ಕಳೆದ ಆರು ವರ್ಷಗಳಿಂದ ಗುರು ವಿದುಷಿ ಆಶಾ ಅಡಿಗ ಆಚಾರ್ಯರಿಂದ ಭರತನಾಟ್ಯವನ್ನು ಕಲಿಯುತ್ತಿದ್ದಾರೆ. ಕೃತಿ, ಅಲರಿಪು ಮತ್ತು ಕಾಳಿಂಗ ಮರ್ಧನ ಸೇರಿದಂತೆ ಸುಮೇಧಾ ನೀಡಿದ ನೃತ್ಯ ಪ್ರದರ್ಶನಗಳನ್ನು ಸಭಿಕರು ಆನಂದದಿಂದ ವೀಕ್ಷಿಸಿದರು.

Advertisement

ಈ ರೀತಿಯಾಗಿ ಸ್ಯಾಕ್ಸೋಫೋನ್‌ ಮತ್ತು ಭರತನಾಟ್ಯ ಪ್ರದರ್ಶನಗಳನ್ನು ಒಟ್ಟಿಗೆ ಸಂಯೋಜಿಸಿದ ವಿಶಿಷ್ಟ ಕಾರ್ಯಕ್ರಮ ಇದಾಗಿತ್ತು. “ಭೋ ಶಂಭೋ’ ಮತ್ತು “ತಿಲ್ಲಾನ’ಗಳಿಗೆ ಸುಮೇಧಾ ಭರತನಾಟ್ಯ ಮಾಡಿದರೆ, ಸಿದ್ಧಾಂತ್‌ ಸ್ಯಾಕ್ಸೋಫೋನಿನಲ್ಲಿ ಆ ಹಾಡುಗಳನ್ನು ನುಡಿಸಿದರು. ನಾದ-ನೃತ್ಯ ಪ್ರದರ್ಶನಗಳನ್ನು ಒಂದೇ ವೇದಿಕೆಯಲ್ಲಿ ನೋಡುವುದು ಸಭಿಕರ ಕಣ್ಣುಗಳಿಗೆ ರಸದೌತಣವಾಗಿತ್ತು.

ಅಂದಿನ ಈ ಕಾರ್ಯಕ್ರಮದಲ್ಲಿ 550ಕ್ಕೂ ಹೆಚ್ಚು ಜನರು ಆಗಮಿಸಿ, ಸ್ಯಾಕ್ಸೋಫೋನ್‌ ಮತ್ತು ಭರತನಾಟ್ಯ ಮಿಳಿತವಾದ ಅದ್ಭುತ ಕಾರ್ಯಕ್ರಮವನ್ನು ಆನಂದಿಸಿದರು. ಅಮೆರಿಕದ ರಾಜಕೀಯ ನಾಯಕರಾಗಿರುವ ರಾಜಾ ಕೃಷ್ಣಮೂರ್ತಿ ಅವರು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಎಲ್ಲೋ ಇರುವ ಗುರುಗಳು, ಮತ್ತೆಲ್ಲೋ ಇರುವ ಶಿಷ್ಯ! ಒಟ್ಟಿನಲ್ಲಿ ಕಲಿಯುವ ಆಸೆ ಇದ್ದವರು ಅಂತರ್ಜಾಲದ ಸಹಾಯದಿಂದ ಏನೆಲ್ಲ ಸಾಧಿಸಬಹುದು ಎಂಬುದಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.

ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಿದ ಪೋಷಕರಾದ ಶ್ರೀಶ ಜಯ ಸೀತಾರಾಮ್‌ ಮತ್ತು ಸುಪ್ರಿಯಾ ಸುಬ್ಬರಾವ್‌ ಅವರಿಗೆ ಅಭಿನಂದನೆಗಳು. ಸಿದ್ಧಾಂತ್‌ ಮತ್ತು ಸುಮೇಧಾ ಅವರು ಸಂಗೀತ, ನೃತ್ಯ ವಿದ್ಯೆಗಳಲ್ಲಿ ಮತ್ತಷ್ಟು ಪ್ರಗತಿ ಸಾಧಿಸಲಿ, ಅವರಿಗೆ ಎಲ್ಲ ರೀತಿಯ ಯಶಸ್ಸು ಸಿಗಲಿ ಎಂದು ಹಾರೈಸೋಣ.

ವರದಿ: ತ್ರಿವೇಣಿ ರಾವ್‌, ಶಿಕಾಗೋ

Advertisement

Udayavani is now on Telegram. Click here to join our channel and stay updated with the latest news.

Next