ಶಿರಸಿ: ಮತ್ತೆ ಕಮಲ ಅರಳುವ ಕ್ಷಣಕ್ಕೆ ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರ ಕಾತರವಾಗಿದೆ. ಮೇ 23ಕ್ಕೆ ಇಡೀ ಕ್ಷೇತ್ರ ಗೆಲುವಿನ ಅಂತರ ಕಾಯಲು ದಿನಗಣನೆ ಮಾಡುತ್ತಿದೆ.
ಶಿರಸಿ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಶೇ.74ರಷ್ಟು ಮತದಾನ ಆಗಿದ್ದು, ಇವುಗಳಲ್ಲಿ ಕರಪತ್ರವೇ ತಲುಪದ ಜೆಡಿಎಸ್‌ಗೆ ಎಷ್ಟು ಮತಗಳು ಹೋಗಿವೆ? ಕಾಂಗ್ರೆಸ್ ಜೆಡಿಎಸ್‌ಗೆ ಎಷ್ಟು ಮತಗಳನ್ನು ತಂದು ಕೊಟ್ಟಿವೆ ಎಂಬುದರ ಮೇಲಿದೆ. ಈ ಬಾರಿಯಂತೂ ಜೆಡಿಎಸ್ ಅಭ್ಯರ್ಥಿ ಆನಂದ ಅಸ್ನೋಟಿಕರ್ ಕೂಡ ಶಿರಸಿಯನ್ನೇ ತಮ್ಮ ರಾಜಕೀಯ ಕೇಂದ್ರವಾಗಿಸಿ ಕೆಲಸ ಮಾಡಿದ್ದರು. ಮೊದಲೇ ಸ್ಪರ್ಧೆಯ ಸೂಚನೆ ಸಿಕ್ಕಿದ್ದರೆ ಪೈಪೋಟಿ ನೀಡುವ ತಾಕತ್ತೂ ಇದ್ದ ಆನಂದ ತಮ್ಮ ಚುನಾವಣಾ ಭಾಷಣದಲ್ಲಿ ಅನಂತಕುಮಾರ ಹೆಗಡೆ ಅವರನ್ನು ಟಾರ್ಗೆಟ್ ಮಾಡಿದ್ದು ವರ್ಕೌಟ್ ಆದಂತೆ ಕಾಣುವುದಿಲ್ಲ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದ ಮತದಾರ ತಮ್ಮ ನಿರ್ಣಯ ನೀಡಿಯಾಗಿದೆ.
ಆದರೆ, ಮಾತಿನ ಮೂಲಕ ಕೇಳುಗರನ್ನು ತುದಿಗಾಲ ಮೇಲೆ ನಿಲ್ಲಿಸುವ ಅನಂತಕುಮಾರ ಹೆಗಡೆ ಈ ಬಾರಿ ಅನೇಕ ಸಂಗತಿಗಳಿಗೆ ಜಾರಿಕೊಂಡಿದ್ದು, ತಮ್ಮ ಮಾತಿನ ಮೇಲೆ ಸ್ವಯಂ ನಿಯಂತ್ರಣ ಹಾಕಿಕೊಂಡಿದ್ದರು ಎಂಬುದು ಮೇಲ್ನೋಟಕ್ಕೂ ಕಾಣುತ್ತಿತ್ತು. ಯಾವುದೇ ತಾರಾ ಮೌಲ್ಯ ಇರುವ ಅತಿಥಿಗಳನ್ನೂ ಕರೆಸದೇ ಅನಂತಕುಮಾರ ಚುನಾವಣೆ ನಡೆಸಿದ್ದರು. ಚಿತ್ರನಟಿ ಮಾಳವಿಕಾ, ತಾರಾ ಹೊರತುಪಡಿಸಿ ಯಾರೂ ಕ್ಷೇತ್ರಕ್ಕೆ ಬಂದೇ ಇಲ್ಲ. ಅನಂತಕುಮಾರ ಹೆಗಡೆ ಮಾತ್ರ ಎರಡು ಸಲ ಅನೇಕ ಕಡೆ ಪ್ರವಾಸ ಮಾಡಿದ್ದರು.
ವಿಶೇಷವೆಂದರೆ, ಈ ಮಧ್ಯೆ ಎಷ್ಟೋ ಕಡೆ ಜೆಡಿಎಸ್ ಕರಪತ್ರಗಳೇ ತಲುಪಿಲ್ಲ. ಇದಕ್ಕೆ ಕೊನೇ ಮೂರು ದಿನ ಇದ್ದಾಗ ಕರಪತ್ರ ಬಂದಿದ್ದೇ ಕಾರಣ ಎನ್ನುತ್ತಿದ್ದರು ಕಾಂಗ್ರೆಸ್ ಕಾರ್ಯಕರ್ತರು. ಜೆಡಿಎಸ್ ಕಾರ್ಯಕರ್ತರು ಎಂದರೆ ಈ ಹಿಂದೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಗಿದ್ದ ಶಶಿಭೂಷಣ ಹೆಗಡೆ ಅವರ ಬೆಂಬಲಿಗರು ಒಂದಿಷ್ಟು ಹೆಚ್ಚಿದ್ದಾರೆ. ಅವರಲ್ಲಿ ರಾಮಕೃಷ್ಣ ಹೆಗಡೆ ಅಭಿಮಾನಿಗಳೂ ಇದ್ದಾರೆ. ಜಿಲ್ಲಾ ಕಚೇರಿ ಕೂಡ ಹೊಂದಿದ್ದ ಪಕ್ಷದಲ್ಲಿ ಶಿರಸಿಯಲ್ಲಿ ಕಚೇರಿ ಅಸ್ತಿತ್ವವೂ ಕಳೆದು ಹೋಗಿದೆ. ಚುನಾವಣಾ ಕಚೇರಿ ಕೂಡ ಮಾಡದೇ ಕಳೆಯಲಾಗಿದೆ.
Advertisement
ಶಿರಸಿ ಕ್ಷೇತ್ರಕ್ಕೆ ತನ್ನದೇ ಆದ ಮಹತ್ವವಿದೆ. ಅನೇಕ ಸಂದರ್ಭದಲ್ಲಿ ಲೋಕಸಭಾ ಚುನಾವಣೆಗೆ ಇದು ನಿರ್ಣಾಯಕವೂ ಆಗಿದೆ. ಇಲ್ಲಿ ನಾಮಧಾರಿಗಳು, ಹವ್ಯಕರು ಅಧಿಕ ಸಂಖ್ಯೆಯಲ್ಲಿದ್ದ ಕಾರಣದಿಂದ ಅವರ ಮತಗಳು ಎಲ್ಲಿ ಚಲಾವಣೆ ಆಗುತ್ತವೆ ಎಂಬುದರ ಮೇಲೆ ಚುನಾವಣಾ ಫಲಿತಾಂಶ ನಿಂತಿದೆ. ಆದರೆ, ಈ ಉಭಯ ಸಮುದಾಯಕ್ಕೆ ಮಾತ್ರ ಆಗಬೇಕಾದ್ದು ಬಹಳವೇ ಇದೆ.
Related Articles
Advertisement
ಈ ಮಧ್ಯೆ ಶಿರಸಿ ಕ್ಷೇತ್ರದಲ್ಲಿ ಮೂರೂ ಪಕ್ಷಗಳ ಜಿಲ್ಲಾ ಕೇಂದ್ರ ಕಚೇರಿಗಳಿವೆ. ಮೂರೂ ಪಕ್ಷಗಳ ಅಧ್ಯಕ್ಷರು ಒಂದೇ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಶಿರಸಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿದ್ದಾರೆ. ಜಿಪಂನಲ್ಲಿ ಬಿಜೆಪಿ, ಕಾಂಗ್ರೆಸ್ ಮೇಲುಗೈ ಕೂಡ ಇದೆ. ಕಾಂಗ್ರೆಸ್ ಬಿಜೆಪಿ ನಡುವೆ ತನ್ನದೇ ಆದ ಪೈಪೋಟಿ ಇದೆ. ಆದರೆ, ಸಂಘಟನೆಯಲ್ಲಿ ಮೂರನೇ ಸ್ಥಾನದಲ್ಲಿದ್ದ ಜೆಡಿಎಸ್‌ಗೆ ಟಿಕೆಟ್ ನೀಡಿದ್ದು ಬಿಜೆಪಿಯ ಮತಗಳು ಇನ್ನಷ್ಟು ಸೇರಲು ಅನುಕೂಲವಾಯಿತು ಎಂಬ ಲೆಕ್ಕಾಚಾರ ಇದೆ.
ಕಳೆದ ವಿಧಾನಸಭಾ ಚುನಾವಣಾ ವೇಳೆ ಸಿಎಂ ಆದರೆ ಏನೇನು ಮಾಡುತ್ತೇನೆ ಎಂದಿದ್ದ ಕುಮಾರಸ್ವಾಮಿ ಅವರು ಅದನ್ನು ಇನ್ನೂ ಈಡೇರಿಲ್ಲ ಎಂಬ ನೋವಿದೆ ಮತದಾರರಲ್ಲಿ. ಖಾತೆ ಸಾಲ ಮನ್ನಾ, ಅರಣ್ಯ ಅತಿಕ್ರಮಣದಾರರ ಸಮಸ್ಯೆ ಯಾವುದೂ ಇತ್ಯರ್ಥವಾಗಿಲ್ಲ ಎಂಬುದೇ ದೊಡ್ಡ ಕೊರಗು. ಅದು ಈ ಬಾರಿ ಕೂಡ ಚುನಾವಣೆ ಮೇಲೆ ಪರಿಣಾಮ ಬೀರಿದೆ ಎಂದು ಸಮೀಕ್ಷೆ ಹೇಳುತ್ತದೆ.
ವಿದೇಶದಿಂದಲೂ, ಬೆಂಗಳೂರಿನಿಂದಲೂ ಬಂದು ಮತದಾನ ಮಾಡಿದವರು ಅನೇಕರಿದ್ದಾರೆ. ಕಾಂಗ್ರೆಸ್‌ಗೆ ಟಿಕೆಟ್ ಕೊಟ್ಟಿದ್ದರೆ, ಜೆಡಿಎಸ್ ಅಭ್ಯರ್ಥಿಯನ್ನಾದರೂ ಎರಡು ತಿಂಗಳ ಮೊದಲೇ ಘೋಷಿಸಿದ್ದರೆ ತೆನೆ ಬಲಿಯುತ್ತಿತ್ತು. ಉಭಯ ಪಕ್ಷಗಳ ಸ್ವಯಂಕೃತದಿಂದ ಮತದಾನೋತ್ತರ ಸಮೀಕ್ಷೆಯಲ್ಲಿ ಕಮಲವೇ ಹೆಚ್ಚು ಹೊಳೆಯುತ್ತಿದೆ. ಮೇ 23ರ ಫಲಿತಾಂಶ ಉತ್ತರ ಹೇಳಬೇಕಿದೆ.
ಆನಂದ ಆಸೆ…
ಎಷ್ಟೋ ಊರುಗಳಲ್ಲಿ ಅಸ್ನೋಟಿಕರ್ ಎಂದರೆ ಯಾರು ಎಂಬುದೇ ಪರಿಚಯ ಆಗದೇ ಇರುವುದೇ ಹಿನ್ನಡೆಗೆ ಕಾರಣ ಎಂಬುದು ಇನ್ನೊಂದು ಕಾರಣ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಭೀಮಣ್ಣ ನಾಯ್ಕ ನೇತೃತ್ವದಲ್ಲಿ ಪ್ರಚಾರ ನಡೆಸಿದರೂ ತೆನೆ ಹೊತ್ತ ಮಹಿಳೆಗೆ ಮತಗಳು ಎಷ್ಟು ಹೋಗಿವೆ ಎಂಬುದನ್ನು ಮತಪೆಟ್ಟಿಗೆ ಹೇಳಬೇಕಿದೆ. ಅಸ್ನೋಟಿಕರ್ ಗೆದ್ದರೆ ಶಿರಸಿಯಲ್ಲೂ ಕಚೇರಿ ಆರಂಭಿಸುವುದಾಗಿ, ಶಿರಸಿ ಪ್ರತ್ಯೇಕ ಜಿಲ್ಲೆ ಮಾಡಿಸುವುದಾಗಿ ಕೂಡ ಹೇಳಿದ್ದಾರೆ.
ಅನಂತ್ ಗೆದ್ದರೆ ಸಚಿವ ಸಂಪುಟಕ್ಕೆ?
ಮೋದಿ ಮತ್ತೆ ಪ್ರಧಾನಿ ಆದರೆ ಅನಂತಕುಮಾರ ಹೆಗಡೆ ದಕ್ಷಿಣ ಭಾರತದಲ್ಲೇ ಅತಿ ಹೆಚ್ಚು ಮತಗಳಿಂದ ಗೆದ್ದರೆ ರಾಜ್ಯ ಸಚಿವರಾಗಿದ್ದ ಅನಂತ ಕೇಂದ್ರ ಸರಕಾರದ ಸಚಿವ ಸಂಪುಟದ ಸದಸ್ಯರಾಗುವ ಸಾಧ್ಯತೆ ನಿಚ್ಚಳವಾಗಿದೆ. ಸ್ವತಃ ಅನಂತಕುಮಾರ ಹೆಗಡೆ ಅವರು 3 ಲಕ್ಷಕ್ಕೂ ಅಧಿಕ ಮತಗಳ ನಿರೀಕ್ಷೆಯಲ್ಲಿದ್ದಾರೆ! ಎನ್ನುತ್ತಾರೆ ಅವರ ಒಡನಾಡಿಗಳು.
ರಾಘವೇಂದ್ರ ಬೆಟ್ಟಕೊಪ್ಪ