“ಮಯೂರ ಮೋಷನ್ ಪಿಕ್ಚರ್’ ಬ್ಯಾನರ್‌ನಲ್ಲಿ ಮಂಜುನಾಥ್. ಡಿ ನಿರ್ಮಿಸಿರುವ “ವೀಕ್ ಎಂಡ್’ ಚಿತ್ರ ತೆರೆಗೆ ಬರಲು ತಯಾರಾಗಿದೆ. ಇತ್ತೀಚೆಗೆ ಚಿತ್ರವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ, ಚಿತ್ರಕ್ಕೆ ಯಾವುದೇ ಕಟ್ಸ್ ಇಲ್ಲದೆ “ಯು/ಎ’ ಪ್ರಮಾಣ ಪತ್ರವನ್ನು ನೀಡಿ ಬಿಡುಗಡೆಗೆ ಅಸ್ತು ಎಂದಿದೆ. ಇದೇ ಖುಷಿಯಲ್ಲಿರುವ ಚಿತ್ರತಂಡ, ಸದ್ಯ ಚಿತ್ರದ ಪ್ರಮೋಷನ್ ಕೆಲಸಗಳಿಗೆ ಚಾಲನೆ ನೀಡಿದ್ದು, ಚಿತ್ರವನ್ನು ಏಪ್ರಿಲ್ ತಿಂಗಳಿನಲ್ಲಿ ತೆರೆಗೆ ತರಲು ಪ್ಲಾನ್ ಮಾಡಿಕೊಂಡಿದೆ.
ಶೃಂಗೇರಿ ಸುರೇಶ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ “ವೀಕ್ ಎಂಡ್’ ಚಿತ್ರಕ್ಕೆ ಶಶಿಧರ್ ಛಾಯಾಗ್ರಹಣ, ರುದ್ರೇಶ್ ಸಂಕಲನ ಕಾರ್ಯವಿದೆ. ಚಿತ್ರದ ಹಾಡುಗಳಿಗೆ ಮನೋಜ್ ಸಂಗೀತ ನಿರ್ದೇಶನವಿದೆ. “ವೀಕ್ ಎಂಡ್’ ಚಿತ್ರದಲ್ಲಿ ಮಿಲಿಂದ್ ನಾಯಕನಾಗಿ, ಸಂಜನಾ ಬುರ್ಲಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಉಳಿದಂತೆ ಹಿರಿಯ ನಟ ಅನಂತ ನಾಗ್, ಗೋಪಿನಾಥ್ ಭಟ್, ಮಂಜುನಾಥ್, ನಾಗಭೂಷಣ್, ನೀನಾಸಂ ರಘು, ನವನೀತ, ನಟನ ಪ್ರಶಾಂತ್, ನೀತು ಬಾಲಾ, ವೀಣಾ ಜಯಶಂಕರ್, ಬ್ಯಾಂಕ್ ಸತೀಶ್, ಶಿವಕುಮಾರ್, ಸಂಜಯ್ ನಾಗೇಶ್, ಮಂಜುನಾಥ್ ಶಾಸ್ತ್ರಿ ಮುಂತಾದವರು ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.