Advertisement

ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜಾಗಿ: ಗುರುಕರ್‌

11:29 AM May 11, 2022 | Team Udayavani |

ಕಲಬುರಗಿ: ಮುಂಗಾರಿನಲ್ಲಿ ಎದುರಾಗಬಹುದಾದ ಪ್ರವಾಹ ಪರಿಸ್ಥಿತಿ ಎದುರಿಸಲು ಸಕಲ ರೀತಿಯಿಂದ ಸಜ್ಜಾಗಬೇಕು. ವಾಡಿಕೆಗಿಂತ ಶೇ.20ರಷ್ಟು ಹೆಚ್ಚು ಮಳೆ ಬೀಳುವ ಮುನ್ಸೂಚನೆ ಇದೆ. ಮುಂದಿನ 20 ದಿನದಲ್ಲಿ ಸನ್ನದ್ಧರಾಗಿ ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್‌ ಸೂಚಿಸಿದರು.

Advertisement

ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಕಳೆದ ಬಾರಿ ಪ್ರವಾಹದಿಂದ ಅಫಜಲಪುರ, ಜೇವರ್ಗಿ, ಚಿತ್ತಾಪುರ, ಶಹಾಬಾದ ತಾಲೂಕಿನ 150ಕ್ಕೂ ಹೆಚ್ಚಿನ ಗ್ರಾಮಗಳು ಪ್ರವಾಹಕ್ಕೆ ತುತ್ತಾಗಿ ಜನ ಜೀವನ ಅಸ್ತವ್ಯಸ್ಥವಾಗಿತ್ತು. ಈ ಬಾರಿ ಇದರ ನಿಯಂತ್ರಣಕ್ಕೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕಿದೆ ಎಂದರು.

ಜಿಲ್ಲೆಯಲ್ಲಿ ಮುಂದಿನ 10 ದಿನದಲ್ಲಿ ಬೀಳುವ ಮಳೆ ಕುರಿತು ಪ್ರತಿದಿನ ಮಾಹಿತಿ ಕಲೆ ಹಾಕಿ ಸಂಬಂಧಿಸಿದವರಿಗೆ ಮಾಹಿತಿ ನೀಡಬೇಕು. ಜೊತೆಗೆ ಭೀಮಾ ಜಲಾನಯನ ಪ್ರದೇಶದ ಮೇಲ್ಭಾಗವಾದ ಮಹಾರಾಷ್ಟ್ರದ ಉಜ್ಜಯಿನಿ, ವೀರ್‌ ಡ್ಯಾಂ ಪ್ರದೇಶದಲ್ಲಾಗುವ ಮಳೆ ಕುರಿತು ಮಾಹಿತಿ ಪಡೆದುಕೊಂಡಲ್ಲಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಬಹುದು. ಮಹಾರಾಷ್ಟ್ರದ ಜಲಾಶಯದ ಅಧಿಕಾರಿಗಳೊಂದಿಗೆ ಸತತ ಸಂಪರ್ಕದಲ್ಲಿದ್ದು ಸಮನ್ವಯ ಸಾಧಿಸಬೇಕು ಎಂದು ಹೇಳಿದರು.

ಜಿಲ್ಲಾಡಳಿತದ ಜತೆ ಸಂಕರ್ಪ

ಪ್ರವಾಹ ಸಂದರ್ಭದಲ್ಲಿ ರಸ್ತೆ ಮುಳಗಡೆಯಾಗಿ ಸಂಪರ್ಕ ಕಡಿತ, ಕೆರೆ-ಕಟ್ಟೆ ಹಾನಿ, ಮಾನವ ಮತ್ತು ಪ್ರಾಣಿ ಹಾನಿ, ಬೆಳೆ ಹಾನಿ ಹೀಗೆ ಪ್ರವಾಹದ ಹಾನಿ ಬಗ್ಗೆ 72 ಗಂಟೆಯಲ್ಲಿ ಜಿಲ್ಲಾಡಳಿತಕ್ಕೆ ಪ್ರತಿಯೊಂದು ಮಾಹಿತಿ ನೀಡಬೇಕು. ಪ್ರವಾಹ ಸಂದರ್ಭದಲ್ಲಿ ಪರಿಹಾರ ನೀಡುವಲ್ಲಿ ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ನಿಯಮಾವಳಿ ಕಟ್ಟುನಿಟಾಗಿ ಪಾಲಿಸಬೇಕು. ನಿಯಮಾವಳಿ ಬಿಟ್ಟು ಹೆಚ್ಚಿನ ದರದ ಬಿಲ್ಲು ಸಲ್ಲಿಸಿದಲ್ಲಿ ಅದನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು.

Advertisement

ಪ್ರವಾಹದಿಂದ ಹಾನಿಯಾದ ಮನೆಗಳನ್ನು ಪಾರದರ್ಶಕವಾಗಿ ಜಂಟಿ ಸಮೀಕ್ಷೆ ಕೈಗೊಂಡು ವರದಿ ನೀಡಬೇಕು. ರಸ್ತೆ ದುರಸ್ತಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು. ಯಾವುದೇ ಲೋಪದೋಷಕ್ಕೆ ಅವಕಾಶ ನೀಡಬಾರದು ಎಂದು ಅಧಿಕಾರಿಗಳಿಗೆ ಖಡಕ್‌ ಸೂಚನೆ ನೀಡಿದರು.

ಮುಂಗಾರು ಮಳೆ ಉತ್ತಮವಾದಲ್ಲಿ ಬಿತ್ತನೆಗೆ ಬೇಕಾಗುವ ಬೀಜ, ರಸಗೊಬ್ಬರಗಳ ಅಗತ್ಯ ದಾಸ್ತಾನಿದೆ. ಯೂರಿಯಾಗೂ ಸಮಸ್ಯೆಯಿಲ್ಲ. 500 ಕ್ವಿಂಟಲ್‌ ಸೂರ್ಯಕಾಂತಿ ಬೀಜದ ಅವಶ್ಯಕತೆಯಿದೆ ಎಂದು ಜಂಟಿ ಕೃಷಿ ನಿರ್ದೇಶಕ ರತೇಂದ್ರನಾಥ ಸುಗೂರು ಸಭೆಗೆ ಮಾಹಿತಿ ನೀಡಿದರು. ಅಪರ ಡಿಸಿ ಭೀಮಾಶಂಕರ ತೆಗ್ಗೆಳ್ಳಿ ಹಾಗೂ ವಿವಿಧ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next