Advertisement

ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿಗೆ ಅನುಮತಿ ಸರಿಯಲ್ಲ

12:09 PM Apr 25, 2020 | Team Udayavani |

ಹುಬ್ಬಳ್ಳಿ: ಲಾಕ್‌ಡೌನ್‌ ಸಂದರ್ಭದಲ್ಲಿ ವಿದ್ಯಾರ್ಥಿಗಳ ಪೋಷಕರಿಂದ ಶುಲ್ಕ ವಸೂಲಾತಿಗೆ ಅನುಮತಿ ನೀಡಿರುವ ಸರಕಾರದ ಕ್ರಮ ಸರಿಯಲ್ಲ, ಸರಕಾರ ಆರ್‌ಟಿಇ ಬಾಕಿ ಪಾವತಿ ಮಾಡಿದರೆ ಖಾಸಗಿ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ವೇತನ ನೀಡಲು ಸಹಕಾರಿಯಾಗುತ್ತದೆ ಎಂದು ವಿಧಾನಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಸರಕಾರಕ್ಕೆ ಒತ್ತಾಯಿಸಿದ್ದಾರೆ.

Advertisement

ಈ ಕುರಿತು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ ಕುಮಾರ ಅವರಿಗೆ ಪತ್ರ ಬರೆದಿದ್ದು, ಪೋಷಕರಿಂದ ಶುಲ್ಕ ವಸೂಲಿ ಮಾಡಬಹುದು ಎನ್ನುವ ನಿಯಮದ ಜೊತೆಗೆ ಇನ್ನೂ ಕೆಲ ನಿರ್ದೇಶನಗಳನ್ನು ನೀಡಿದ್ದು, ಸಮಂಜಸವಾಗಿದೆ. ಆದರೆ ವಾಸ್ತವದಲ್ಲಿ ಮೂರು ಅಂಶಗಳು ಅನುಷ್ಠಾನಗೊಳ್ಳದೆ ಕೇವಲ ಶುಲ್ಕ ವಸೂಲಾತಿ ಮಾತ್ರ ಕಾರ್ಯರೂಪಕ್ಕೆ ಬರುತ್ತದೆ. ಇದರಿಂದ ಪೋಕಷರಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಹೀಗಾಗಿ ಈ ಆದೇಶವನ್ನು ವಾಪಸ್ಸು ಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.

ಸರಕಾರದ ಈ ಆದೇಶದಿಂದ ಜನರಿಗೆ ತಪ್ಪು ಮಾಹಿತಿ ಹೋಗುತ್ತಿದೆ. ಇದರಿಂದ ಸರಕಾರಕ್ಕೆ ಕೆಟ್ಟು ಹೆಸರು ಬರಲಿದೆ. ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ವೇತನ ಸಿಗುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಸರಕಾರದ್ದಾಗಿರುತ್ತದೆ. ಶಿಕ್ಷಕರಿಗೆ ವೇತನ ನೀಡದಷ್ಟು ಆರ್ಥಿಕ ಸಂಕಷ್ಟದಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಗಳಿಲ್ಲ. ಶಿಕ್ಷಕರ ವೇತನ ಪಾವತಿಗೆ ಪರಿಹಾರ ನೀಡುವುದಾದರೆ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪಾವತಿ ಮಾಡಬೇಕಾದ ಆರ್‌ಟಿಇ ಬಾಕಿಯನ್ನು ಸರಕಾರ ಬಿಡುಗಡೆ ಮಾಡದರೆ ಶಿಕ್ಷಣ ಸಂಸ್ಥೆಗಳು ಶಿಕ್ಷಕರಿಗೆ ವೇತನ ಪಾವತಿ ಮಾಡುತ್ತದೆ ಎಂದು ತಿಳಿಸಿದ್ದಾರೆ.

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಆರ್ಥಿಕ ಚಟುವಟಿಕೆಗಳು ಸ್ಥಗಿತಗೊಂಡಿದ್ದು, ಇಂತಹ ಸಂದರ್ಭದಲ್ಲಿ ಸರಕಾರದ ಇಂತಹ ಆದೇಶಗಳಿಂದ ಜನರಿಗೆ ಹೊರೆಯಾಗಲಿದೆ. ಹೀಗಾಗಿ ಇಂತಹ ನಿರ್ಧಾರ ಕೈಗೊಳ್ಳುವುದರ ಬದಲು ಕೂಡಲೇ ಖಾಸಗಿ ಹಾಗೂ ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಿ ಶಿಕ್ಷಕರಿಗೆ ವೇತನ ಪಾವತಿ ಮಾಡುವಂತೆ ನೋಡಿಕೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಿದ್ದಾರೆ.ವಿದ್ಯಾರ್ಥಿಗಳಿಂದ ಶುಲ್ಕ ವಸೂಲಿಗೆ ಅನುಮತಿ ಸರಿಯಲ್ಲ

Advertisement

Udayavani is now on Telegram. Click here to join our channel and stay updated with the latest news.

Next