Advertisement

ಕಾಸರಗೋಡು ನಗರದ ವಾಹನ ದಟ್ಟಣೆಗೆ ಕೂಡಲೇ ಪರಿಹಾರ ಕಲ್ಪಿಸಿ’

12:03 AM Jul 01, 2019 | Team Udayavani |

ಕಾಸರಗೋಡು: ವಿವಿಧ ಬೇಡಿಕೆ ಗಳನ್ನು ಮುಂದಿಟ್ಟುಕೊಂಡು ಆಟೋರಿಕ್ಷಾ ಮಜ್ದೂರ್‌ ಸಂಘ (ಬಿಎಂಎಸ್‌)ದ ನೇತೃತ್ವದಲ್ಲಿ ಆಟೋರಿಕ್ಷಾ ಚಾಲಕರು ಕಾಸರಗೋಡು ನಗರಸಭಾ ಕಚೇರಿಗೆ ಪ್ರತಿಭಟನಾ ಮಾರ್ಚ್‌ ಮತ್ತು ಧರಣಿ ಸತ್ಯಾಗ್ರಹ ನಡೆಸಿದರು.

Advertisement

ಪ್ರತಿಭಟನಾ ಧರಣಿಯನ್ನು ಉದ್ಘಾಟಿಸಿದ ಬಿಎಂಎಸ್‌ ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಕೆ.ಎ.ಶ್ರೀನಿವಾಸನ್‌ ಮಾತನಾಡಿ, ನೂರಾರು ಜನರ ಆಶ್ರಯ ಕೇಂದ್ರವಾಗಿರುವ ಕಾಸರಗೋಡು ನಗರದಲ್ಲಿ ಜನರಿಗೆ ಸುಗಮವಾಗಿ ನಡೆದುಕೊಂಡು ಹೋಗಲು ಸಾಧ್ಯವಾಗದ ದುಸ್ಥಿತಿಯಿದೆ. ಕಾಸರಗೋಡು ನಗರದ ಟ್ರಾಫಿಕ್‌ ದಟ್ಟಣೆಯಿಂದಾಗಿ ನಗರದಲ್ಲಿ ಸಮರ್ಪಕವಾದ ವಾಹನ ಸಂಚಾರ ನಡೆಸಲು ಸಾಧ್ಯವಾಗುತ್ತಿಲ್ಲ. ಇದಕ್ಕೆ ಕಾಸರಗೋಡು ನಗರಸಭೆಯಲ್ಲಿ ಆಡಳಿತ ನಡೆಸುವ ಮುಸ್ಲಿಂಲೀಗ್‌ನ ವೈಫಲ್ಯವೇ ಕಾರಣವಾಗಿದೆ ಎಂದು ಆರೋಪಿಸಿದರು.

ನಗರಗಳನ್ನು ಅತ್ಯಾಧುನಿಕ ರೀತಿಯಲ್ಲಿ ಮಾರ್ಪಾಡುಗೊಳಿಸಲು ಹಾಗೂ ನಗರ ಅಭಿವೃದ್ಧಿಗಾಗಿ ಕೇಂದ್ರ ಸರಕಾರವು ಕೋಟ್ಯಾಂತರ ರೂ. ಗಳನ್ನು ಮಂಜೂರು ಮಾಡುತ್ತಿದ್ದರೂ, ಕೇರಳದ ಸಿಪಿಎಂ ಸರಕಾರ ಮಾತ್ರ ಈ ಮೊತ್ತವನ್ನು ಬೇರೆ ಇಲಾಖೆಗಳಿಗೆ ವರ್ಗಾಯಿಸಿ ಅವ್ಯವಹಾರ ಮಾಡುತ್ತಿದೆ ಎಂದು ಕೆ.ಶ್ರೀನಿವಾಸನ್‌ ಆಕ್ರೋಶ ವ್ಯಕ್ತಪಡಿಸಿದರು.

ಬಿಎಂಎಸ್‌ ಜಿಲ್ಲಾ ಕಚೇರಿ ಪರಿಸರದಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ನಗರಸಭಾ ಕಚೇರಿಯ ಮುಂಭಾಗದಲ್ಲಿ ಸಮಾಪ್ತಿಗೊಂಡಿತು.

ಮೆರವಣಿಗೆಗೆ ನೇತಾರರಾದ ಕೆ.ಉಮೇಶ್‌, ಕೆ.ವಿಶ್ವನಾಥ ಶೆಟ್ಟಿ , ರಿಜೇಶ್‌ ಜೆ.ಪಿ.ನಗರ, ಕೆ.ಅರವಿಂದನ್‌, ಪ್ರಸಾದ್‌, ಸತೀಶ್‌ ಮೊದಲಾದವರು ನೇತೃತ್ವ ವಹಿಸಿದ್ದರು.

Advertisement

ಬಳಿಕ ಜಿಲ್ಲಾ ಆಟೋರಿಕ್ಷಾ ಮಜ್ದೂರ್‌ ಸಂಘ (ಬಿಎಂಎಸ್‌)ದ ಪದಾಧಿಕಾರಿಗಳು ತಮ್ಮ ಬೇಡಿಕೆಗಳ ಕುರಿತಾದ ಮನವಿಯನ್ನು ನಗರಸಭಾ ಕಾರ್ಯದರ್ಶಿಯವರಿಗೆ ಸಮರ್ಪಿಸಿದರು.

ಕಾಸರಗೋಡು ನಗರದ ವಾಹನ ದಟ್ಟಣೆಗೆ ಕೂಡಲೇ ಪರಿಹಾರ ಕಲ್ಪಿಸಬೇಕು, ಕಾಸರಗೋಡು ಜನರಲ್ ಆಸ್ಪತ್ರೆ ರಸ್ತೆ, ಹೊಸ ಬಸ್‌ ನಿಲ್ದಾಣ ಪರಿಸರದ ಕೋಟೆಕಣಿ ರಸ್ತೆ, ಕೆಪಿಆರ್‌ ರಾವ್‌ ರಸ್ತೆಯನ್ನು ತತ್‌ಕ್ಷಣ ಡಾಮರೀಕರಣಗೊಳಿಸಬೇಕು, ನಗರದ ಬೀದಿ ದೀಪಗಳು ರಾತ್ರಿ ಹೊತ್ತಿನಲ್ಲಿ ಉರಿಯುವಂತೆ ಮಾಡಲು ಕ್ರಮ ಕೈಗೊಳ್ಳಬೇಕು, ನಗರದಲ್ಲಿ ಸ್ಥಾಪಿಸಿದ ಸಿಸಿ ಟಿವಿ ಕ್ಯಾಮರಾಗಳನ್ನು ಸರಿಯಾಗಿ ಕಾರ್ಯಾಚರಿಸುವಂತೆ ಮಾಡಬೇಕು ಎಂಬಿತ್ಯಾದಿ ಬೇಡಿಕೆಗಳನ್ನು ಪ್ರತಿಭಟನಾಕಾರರು ನಗರಸಭಾ ಆಡಳಿತದ ಮುಂದಿರಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next