Advertisement
ಸಮಸ್ಯೆ ನಿಮ್ಮೊಳಗಿನಿಂದಲೇ ಹುಟ್ಟಿದ್ದುಹದಿಹರೆಯದ ನಮ್ಮ ಜಾಣ ಜಾಣೆಯರಿಗೆ ನಾನು ಒಂದು ನಿಜ ವಿಚಾರವನ್ನು ಹೇಳಲೆ? ನೀವು ನಿಮ್ಮ ಸಮಸ್ಯೆಗಳನ್ನು ಸ್ವಲ್ಪ ಹೆಚ್ಚು ಅನ್ನಿಸುವಷ್ಟು ಮೋಹಿಸುತ್ತಿದ್ದೀರಿ, ರಮಿಸುತ್ತಿದ್ದೀರಿ, ದೊಡ್ಡದು ಮಾಡುತ್ತಿದ್ದೀರಿ. ನೀವು ಅಂದುಕೊಂಡಷ್ಟು ಅಥವಾ ಹೇಳಿಕೊಳ್ಳುವಷ್ಟು ಅದು ದೊಡ್ಡದಲ್ಲ. ನಿಮ್ಮ ಬದುಕು ಚೆನ್ನಾಗಿರಲು, ನಿಮಗೆ ಬೇಕಾದ್ದೆಲ್ಲವನ್ನೂ ಒದಗಿಸಿಕೊಡಲು ನಿಮ್ಮ ತಾಯ್ತಂದೆ ಏನೆಲ್ಲ ಸರ್ಕಸ್ ಮಾಡುತ್ತಾರೆ, ಎಷ್ಟು ಕಷ್ಟಪಡುತ್ತಾರೆ ಎಂಬುದನ್ನು ನೀವು ಕಲ್ಪಿಸಿಕೊಳ್ಳಲಾರಿರಿ. ಇಷ್ಟೆಲ್ಲ ಇದ್ದರೂ ಅವರು ನಿಮ್ಮ ಜತೆಗೆ ಖುಷಿಖುಷಿಯಾಗಿರಲು ಪ್ರಯತ್ನ ಪಡುತ್ತಾರೆ. ಹಾಗಾಗಿ ವಿದ್ಯಾರ್ಥಿ ಮಿತ್ರರು ಸುಮ್ಮಸುಮ್ಮನೆ ಇಲ್ಲದ ಸಮಸ್ಯೆ ಮಾಡಿಕೊಳ್ಳುವುದನ್ನು ಬಿಟ್ಟುಬಿಡಿ. ನೀವು ಇದನ್ನು ಕಲಿಯಿರಿ ಅಥವಾ ಅದನ್ನು ಕಲಿಯಿರಿ; ಏನೀಗ? “ನಾನು ಎಂಜಿನಿಯರ್ ಆಗದೆ ಇರಲೂ ಬಹುದು; ಆದರೆ ಚಿಂತೆ ಬೇಡ, ಚೆನ್ನಾಗಿ ಬದುಕುತ್ತೇನೆ’ ಎಂಬುದನ್ನು ನಿಮ್ಮ ನಡೆನುಡಿ, ನಡವಳಿಕೆ, ವರ್ತನೆಗಳ ಮೂಲಕ ಹೆತ್ತವರಿಗೆ ಖಚಿತಪಡಿಸುವುದು ನಿಮ್ಮ ಜವಾಬ್ದಾರಿ. ನಿಮ್ಮ ತಾಯ್ತಂದೆ ನಿಮ್ಮ ಜತೆಗೆ ಯಾಕೆ ಪ್ರತಿಯೊಂದಕ್ಕೂ ಫಜೀತಿ ಮಾಡಿಕೊಳ್ಳುತ್ತಾರೆ ಎಂದರೆ, ಹೀಗೇ ಬಿಟ್ಟರೆ ನೀವು ಬೀದಿಗೆ ಬೀಳುತ್ತೀರಿ ಎಂಬ ಭಾವನೆ ಅವರಲ್ಲಿದೆ. ನಿಮಗೆ ಅತ್ಯುತ್ತಮವಾದದ್ದು ಏನು ಎಂದು ನಿಮ್ಮ ಹೆತ್ತವರು ಹುಡುಕಿ ಅದನ್ನು ನಿಮ್ಮ ಮೇಲೆ ಹೊರಿಸುವುದು ಬೇಡವೆ? ಹಾಗಾದರೆ ನಿಮ್ಮ ಸಾಮರ್ಥ್ಯವನ್ನು ನಿಮಗಿಷ್ಟವಾದ ಕ್ಷೇತ್ರದಲ್ಲಿ ತೋರಿಸಿಕೊಡಿ ಮತ್ತು ನಿಮ್ಮ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ ಎಂಬುದನ್ನು ಅವರಿಗೆ ಮನದಟ್ಟು ಮಾಡಿಕೊಡಿ.
ನಮ್ಮಲ್ಲನೇಕರು ಬದುಕಿನ ಆಳವನ್ನೂ ವೈಶಾಲ್ಯವನ್ನೂ ಯಾಕೆ ಕಳೆದುಕೊಂಡಿದ್ದಾರೆ ಎಂದರೆ, ಅವರು ತಮಗೆ ಅನುಕೂಲವಾದವುಗಳ ಮೇಲಷ್ಟೇ ಗಮನ ಕೇಂದ್ರೀಕರಿಸುತ್ತಿದ್ದಾರೆ. ಎಲ್ಲವೂ ಕ್ಷಣಾರ್ಧದಲ್ಲಿ ಘಟಿಸಬೇಕು, ಆಗ ಮಾತ್ರ ಬದುಕು ಸುಸೂತ್ರವಾಗಿದೆ ಎಂದುಕೊಳ್ಳುತ್ತಾರೆ, ಅದನ್ನೇ ಪಾಸಿಟಿವ್ ಎಂದು ಕರೆಯುತ್ತಾರೆ. ಆದರೆ ಹಾಗಲ್ಲ; ನಿಮಗೆ ಯಾವುದು ಇಷ್ಟವೋ, ಯಾವುದರಲ್ಲಿ ನಿಮಗೆ ಸಾಧನೆ ಮಾಡಬೇಕಾಗಿದೆಯೋ ಅದಕ್ಕೆ ಅರ್ಪಿಸಿಕೊಳ್ಳಬೇಕು. ಆಗ ಮಾತ್ರ ಯಶಸ್ಸು ತೆರೆದುಕೊಳ್ಳುತ್ತದೆ. ನಿಮಗೆ ಹತ್ತು ಕಡೆ ಬಾವಿ ತೋಡಲು ಹೊರಟವನ ಕಥೆ ಗೊತ್ತಿರಬಹುದು. ಹತ್ತು ಕಡೆ ನಾಲ್ಕಾರು ಅಡಿ ಗುಂಡಿ ತೆಗೆದರೆ ನೀರು ಸಿಗುವುದಿಲ್ಲ. ಅಷ್ಟೆಲ್ಲ ಶ್ರಮವನ್ನೂ ಒಂದೇ ಕಡೆ ಹಾಕಿ ತೋಡಿದರೆ ಖಂಡಿತಕ್ಕೂ ನೀರು ಸಿಕ್ಕೇ ಸಿಗುತ್ತದೆ. ಉತ್ಕೃಷ್ಟವಾಗಿ ಬದುಕಿ
ನೀವು ದೇವರಾಗಿ ಆರಾಧಿಸುವ ಎಲ್ಲರೂ -ರಾಮ, ಕೃಷ್ಣ, ಶಿವ, ಜೀಸಸ್- ಯಾರೂ ಐಐಟಿ, ಐಎಎಸ್ ಅಥವಾ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಿ ಗೆದ್ದವರಲ್ಲ. ನಾವು ನೀವು ಅವರನ್ನು ಪೂಜಿಸುವುದು ಯಾಕೆಂದರೆ ಅವರು ಅವರ ಬದುಕನ್ನು ಚೆನ್ನಾಗಿ ಬದುಕಿ ಬೆಳಕಾಗಿದ್ದಾರೆ. ನೀವೂ ಮಾಡಬೇಕಾದ್ದು ಅಷ್ಟೇ- ಒಳ್ಳೆಯದಾಗಿ ಜೀವಿಸಿ. ನಮ್ಮ ಈ ಭೂಗ್ರಹದಲ್ಲಿ ಮನುಷ್ಯನಷ್ಟು ಉತ್ಕೃಷ್ಟವಾದ ಜೀವವ್ಯವಸ್ಥೆ ಇನ್ನೊಂದಿಲ್ಲ. ಈ ವ್ಯವಸ್ಥೆಯ ಸಾಧ್ಯತೆಗಳು, ಅವಕಾಶಗಳು ಆಕಾಶದಷ್ಟು ಅಮಿತ. ನಿಮಗೆ ಅತ್ಯುತ್ತಮವಾದ ಏನು ಸಾಧ್ಯವೋ ಅದನ್ನು ಮಾಡಿ ಸಾಧಿಸುವುದೇ ಯಶಸ್ಸು. ನೀವು ಇನ್ನೊಬ್ಬರಿಗಿಂತ ಉತ್ತಮರಾಗುವುದು ಸಾಧ್ಯವಾಗದೆ ಇರಬಹುದು; ಆದರೆ ನಿಮ್ಮ ಅತ್ಯುತ್ತಮವನ್ನು ಸಾಧಿಸುವುದು ನಿಮ್ಮಿಂದ ಸಾಧ್ಯ. ಅದನ್ನು ಮಾಡಿ. ಆಗ ಬದುಕು ನಿಮ್ಮೆದುರು ತಂದು ಹಾಕುವ ಎಲ್ಲವನ್ನೂ ಆನಂದದಿಂದ, ಸಮಾಧಾನದಿಂದ ನಿಭಾಯಿಸುವುದು ಸಾಧ್ಯವಾಗುತ್ತದೆ.
Related Articles
Advertisement
ಮನಸ್ಸು ಕಸದ ಬುಟ್ಟಿನಮ್ಮ ಮನಸ್ಸು ಸಮಾಜದ ಕಸದ ಬುಟ್ಟಿ ಇದ್ದಂತೆ. ಎದುರಾಗುವ ಎಲ್ಲರೂ ನಿಮ್ಮ ತಲೆಯೊಳಗೆ ಒಂದಿಷ್ಟನ್ನು ಎಸೆದುಹೋಗುತ್ತಾರೆ. ಯಾವುದನ್ನು ತೆಗೆದುಕೊಳ್ಳಬೇಕು, ಯಾವುದನ್ನು ಬಿಡಬೇಕು ಎಂಬ ಆಯ್ಕೆ ನಮಗಿರುವುದಿಲ್ಲ. ಇದರ ಬಗ್ಗೆ ಇನ್ನೊಂದು ವಿಧವಾಗಿ ಆಲೋಚಿಸಿ ನೋಡಿ: ಇದೆಲ್ಲ ನಿಮ್ಮ ಬಗೆಗಿನ ನಿರೀಕ್ಷೆಗೆ ಸಂಬಂಧಿಸಿದ್ದು, ನೀವು ಈಗ ಏನಾಗಿದ್ದೀರೋ ಅದರ ಬಗ್ಗೆ ಸಂಬಂಧಿಸಿದ್ದಲ್ಲ ಎಂಬುದು ನಿಮಗೇ ಹೊಳೆಯುತ್ತದೆ. -ಸದ್ಗುರು ಜಗ್ಗಿ ವಾಸುದೇವ್