Advertisement

ಮಲಹೊರುವ ಪದ್ಧತಿಗೆ ಮುಕ್ತಿ ಹಾಡಿ

09:45 AM Sep 02, 2017 | Team Udayavani |

ಕಲಬುರಗಿ: ಜಿಲ್ಲೆಯಲ್ಲಿರುವ ಮ್ಯಾನುವೆಲ್‌ ಸ್ಕ್ಯಾವೆಂಜರ್‌(ಶೌಚಗುಂಡಿ ಸ್ವತ್ಛ ಮಾಡುವವರು)
ಕುರಿತು ಸರ್ವೇ ಮಾಡಿಸಿ ಸೆಪ್ಟೆಂಬರ್‌ ಅಂತ್ಯದೊಳಗೆ ಸರಕಾರಕ್ಕೆ ವರದಿ ಸಲ್ಲಿಸುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿಗಳ ಆಯೋಗದ ತೆಲಂಗಾಣ ಮತ್ತು ಕರ್ನಾಟಕ ರಾಜ್ಯದ ಸದಸ್ಯ ಜಗದೀಶ ಹಿರೇಮನಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾಧಿಕಾರಿ ಕಚೇರಿಯಲ್ಲಿ ಶುಕ್ರವಾರ ಮ್ಯಾನುವೆಲ್‌ ಸ್ಕ್ಯಾವೆಂಜರ್‌, ಸಫಾಯಿ ಕರ್ಮಚಾರಿಗಳ ಸ್ಥಿತಿ-ಗತಿಗಳ ಕುರಿತು ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ
ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ದೇಶದಲ್ಲಿನ ಮ್ಯಾನುವೆಲ್‌ ಸ್ಕ್ಯಾವೆಂಜರ್‌ ಹಾಗೂ ಸಫಾಯಿ ಕರ್ಮಚಾರಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ 2020ರೊಳಗೆ ಎಲ್ಲಾ ಅವಶ್ಯಕ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಕಟಿಬದ್ಧವಾಗಿದೆ. ಆದ್ದರಿಂದ ಕೂಡಲೇ ಅಧಿಕಾರಿಗಳು ಯೋಜನೆಗಳನ್ನು ರೂಪಿಸಿ, ಸರ್ವೇ ಮಾಡಿಸಿ ಅವರ ಕುರಿತು ಮಾಹಿತಿ ರವಾನೆ ಮಾಡಬೇಕು ಎಂದರು.

ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ, ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮ್ಯಾನುವೆಲ್‌ ಸ್ಕ್ಯಾವೆಂಜರ್‌ಗಳಾಗಿ ಕೆಲಸ ನಿರ್ವಹಿಸಿದವರನ್ನು ಗುರುತಿಸಬೇಕು. ಅವರಿಗೆ ಕೇಂದ್ರ ಸರ್ಕಾರದ 40 ಸಾವಿರ ರೂ. ಮತ್ತು ರಾಜ್ಯ ಸರ್ಕಾರದ 1 ಲಕ್ಷ ರೂ. ಗಳನ್ನು ತಕ್ಷಣ ಸಹಾಯಧನವಾಗಿ ಅವರ ಬ್ಯಾಂಕ್‌ ಖಾತೆಗೆ ಜಮಾ ಮಾಡಲಾಗುವುದು. ಪೌರ ಕಾರ್ಮಿಕರ
ಅವಲಂಬಿತರಿಗೆ 25 ಲಕ್ಷ ರೂ. ವರೆಗೆ ಸಾಲ ಸೌಲಭ್ಯ ಒದಗಿಸಿ ಸ್ವಂತ ಉದ್ಯೋಗ ಕೈಗೊಳ್ಳಲು ಸಹಾಯ ನೀಡಲಾಗುವುದು. ಮ್ಯಾನುವೆಲ್‌ ಸ್ಕ್ಯಾವೆಂಜಿಂಗ್‌ ನಿರ್ಮೂಲನೆಗೆ ಸರ್ಕಾರ ಹಲವಾರು ಕಾನೂನುಗಳನ್ನು ರೂಪಿಸಿದೆ. ಮ್ಯಾನುವೆಲ್‌ ಸ್ಕ್ಯಾವೆಂಜಿಂಗ್‌ಗೆ ಪ್ರೋತ್ಸಾಹ ನೀಡುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಸಫಾಯಿ ಕರ್ಮಚಾರಿಗಳ ಮಕ್ಕಳು ವಿದ್ಯಾಭಾಸ ಮಾಡುತ್ತಿದ್ದರೆ ಅವರಿಗೆ ರಾಜ್ಯ ಸರ್ಕಾರ ನೀಡುವ ಸವಲತ್ತುಗಳ ಜೊತೆಗೆ ಕೇಂದ್ರ ಸರ್ಕಾರ ವಿಶೇಷ ಸ್ಕಾಲರ್‌ಶಿಪ್‌ ನೀಡುವುದು. ಸಫಾಯಿ ಕರ್ಮಚಾರಿಗಳ ಆರೋಗ್ಯದ ಹೆಚ್ಚಿನ ಚಿಕಿತ್ಸೆಗೆ 4 ಲಕ್ಷ ರೂ.ಗಳ ವರೆಗೆ ಸೌಲಭ್ಯ ನೀಡಲು ಅವಕಾಶವಿದೆ. ಡಾ| ಅಂಬೇಡ್ಕರ್‌ ಅಭಿವೃದ್ಧಿ ನಿಗಮದಿಂದ ಜಿಲ್ಲಾಧಿಕಾರಿಗಳ ಮುಖಾಂತರ ಕೇಂದ್ರ ಸರ್ಕಾರಕ್ಕೆ ಮಾಹಿತಿ ಸಲ್ಲಿಸಬೇಕು. ಚಿಕಿತ್ಸೆಗೆ ಖಾರ್ಚಾಗುವ ಅನುದಾನವನ್ನು ನೇರವಾಗಿ ಆಯಾ ಆಸ್ಪತ್ರೆಗಳಿಗೆ ಬಿಡುಗಡೆ ಮಾಡಲಾಗುವುದು ಎಂದರು.

Advertisement

ಮಹಾನಗರ ಪಾಲಿಕೆ ಆಯುಕ್ತ ಪಿ.ಸುನೀಲಕುಮಾರ ಮಾತನಾಡಿ, ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಮಹಾನಗರ ಪಾಲಿಕೆಯ ಎಲ್ಲ ಪೌರ ಕಾರ್ಮಿಕರಿಗೆ ಮೂರು ಹಂತದ ಆರೋಗ್ಯ ತಪಾಸಣೆ ಮಾಡಿಸಲಾಗಿದೆ. ಹೆಪಟೈಟಿಸ್‌ ಬಿ.ಮಾಸ್ಟರ್‌ ಚೆಕಪ್‌ ಮಾಡಿಸಲು 10 ಲಕ್ಷ ರೂ. ಅನುದಾನ ಕಾಯ್ದಿರಿಸಲಾಗಿದೆ. 1024 ಪೌರ ಕಾರ್ಮಿಕರಿಗೆ ಪ್ರಧಾನಮಂತ್ರಿ ಜೀವನ ಬಿಮಾ ಯೋಜನೆಯಡಿಯಲ್ಲಿ ವಿಮೆ ಮಾಡಿಸಲಾಗಿದೆ ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಆರ್‌. ವೆಂಕಟೇಶಕುಮಾರ, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹೆಪ್ಸಿಬಾರಾಣಿ ಕೊರ್ಲಪಾಟಿ, ಜಿಲ್ಲಾ ಪೊಲೀಸ್‌ ವರಿಷ್ಠಾ ಧಿಕಾರಿ ಎನ್‌. ಶಶಿಕುಮಾರ, ಡಿ.ಯು.ಡಿ.ಸಿ. ಯೋಜನಾ ಧಿಕಾರಿ ಸಾಜಿದ್‌ ಅಹ್ಮದ್‌ ಮುಲ್ಲಾ, ಸ್ಥಳೀಯ ಸಂಸ್ಥೆಯ ಅ ಧಿಕಾರಿಗಳು, ಪೌರ ಕಾರ್ಮಿಕರ ಮುಖಂಡರು ಪಾಲ್ಗೊಂಡಿದ್ದರು 

ಕಲಬುರಗಿ ಜಿಲ್ಲೆಯಲ್ಲಿ ಇನ್ನು ಮಲಹೊರುವ ಪದ್ಧತಿ ಜೀವಂತ ಇದೆ. ನಾನು ಮೋಮಿನ್‌ಪುರದಲ್ಲಿ ಇಂದು ಕಣ್ಣಾರೆ ಇದನ್ನು ಕಂಡಿದ್ದೇನೆ. ಆದ್ದರಿಂದ ಕೂಡಲೇ ಜಿಲ್ಲಾಧಿಕಾರಿಗಳು ಈ ಕುರಿತು ಗಮನಿಸಬೇಕು. ಇಲ್ಲದಿದ್ದರೆ ಜಿಲ್ಲಾಡಳಿತದ ವಿರುದ್ಧವೇ ಪ್ರಕರಣ ದಾಖಲು ಮಾಡಬೇಕಾಗುತ್ತದೆ. ಮ್ಯಾನುವೆಲ್‌ ಸ್ಕ್ಯಾವೆಂಜರ್‌ ಮತ್ತು ಸಫಾಯಿ ಕರ್ಮಚಾರಿಗಳ ಮಕ್ಕಳು ತಮ್ಮ ಪೂರ್ವಜರಂತೆ ಮಲ ಹೊರುವ ಮತ್ತು ಗುಂಡಿಯಿಂದ ಮಲ ತೆಗೆಯುವ ಪದ್ಧತಿಗೆ ಮರಳಬಾರದೆಂಬ ಉದ್ದೇಶದಿಂದ ಸಫಾಯಿ ಕರ್ಮಚಾರಿ ಹಣಕಾಸು ಮತ್ತು ಅಭಿವೃದ್ಧಿ ನಿಗಮದಿಂದ ಶಿಕ್ಷಣ, ಆರೋಗ್ಯ ಮತ್ತು ವಸತಿ ಸೌಲಭ್ಯಗಳನ್ನು ಕಲ್ಪಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯಾಗಾರಗಳನ್ನು ಏರ್ಪಡಿಸಿ ತರಬೇತಿ ನೀಡಲು ಅನುದಾನ ನೀಡಲಾಗಿದೆ. ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದಿಂದ ಸಾಲ ಸೌಲಭ್ಯ ದೊರಕಿಸಿ ನಗರಸಭೆ, ಪುರಸಭೆ ಹಾಗೂ ಗ್ರಾಪಂಗಳಿಗೆ ಬೇಕಾಗುವ ಯಂತ್ರೋಪಕರಣಗಳನ್ನು ಸಫಾಯಿ ಕರ್ಮಚಾರಿಗಳ ಮೂಲಕ ಖರೀದಿಸಿ ಆ ಉಪಕರಣಗಳನ್ನು ಬಳಸಬೇಕು.

ಜಗದೀಶ ಹಿರೇಮನಿ 

Advertisement

Udayavani is now on Telegram. Click here to join our channel and stay updated with the latest news.

Next