ಆಲೂರು: ಮಹನೀಯರ ಜಯಂತಿ ಆಚರಣೆಗಳು ಕೇವಲ ಒಂದು ಜಾತಿಗೆ ಸೀಮಿತವಾಗಬಾರದು. ಎಲ್ಲಾ ಮಹನೀಯರು, ಸಂತರು, ಶರಣರು ಸಮಾಜದ ಒಳಿತಿಗಾಗಿಯೇ ತಮ್ಮ ಸಂದೇಶಗಳನ್ನು ನೀಡಿದ್ದಾರೆ. ಇವರೆಲ್ಲರ ಜಯಂತಿಗಳಿಗೆ ಎಲ್ಲಾ ಧರ್ಮ, ಸಮಾಜದವರೂ ಪಾಲ್ಗೊಂಡಾಗ ಮಾತ್ರ ಮಹನೀಯರ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರಲು ಸಾಧ್ಯ ಎಂದು ಶಾಸಕ ಎಚ್.ಕೆ.ಕುಮಾರಸ್ವಾಮಿ ಹೇಳಿದರು. ಪಟ್ಟಣದ ಮಿನಿವಿಧಾನ ಸೌಧದ ಆವರಣದಲ್ಲಿ ತಾಲೂಕು ಆಡಳಿತದಿಂದ ಹಮ್ಮಿಕೊಂಡ ಕನಕದಾಸರ ಹಾಗೂ ಕಿತ್ತೂರು ರಾಣಿಚನ್ನಮ್ಮ ಜಯಂತಿ ಸಮಾರಂಭದಲ್ಲಿ ಮಾತನಾಡಿದರು.
ಮಹತ್ವದ ಕಾಣಿಕೆ: 16ನೇ ಶತಮಾನದಲ್ಲಿ ಸಮಾಜದಲ್ಲಿ ಮನೆ ಮಾಡಿರುವ ಅಸಮಾನತೆ, ಮೂಢನಂಬಿಕೆ, ಜಾತಿ, ಲಿಂಗ ಭೇದದ ನೋವನ್ನು ಅನುಭವಿಸಿದ ಕನಕದಾಸರು ಅವುಗಳನ್ನು ಸಮಾಜದಿಂದ ತೊಡೆದು ಹಾಕುವ ನಿಟ್ಟಿನಲ್ಲಿ ಮನುಕುಲಕ್ಕೆ ದಾಸ ಸಾಹಿತ್ಯದ ಮೂಲಕ ಮಹತ್ವದ ಕಾಣಿಕೆ ನೀಡಿದ್ದಾರೆ ಎಂದರು.
ಜಾತಿ ಪದ್ಧತಿ ಬಿಡಿ: ಪ್ರತಿ ಮಹಾತ್ಮನ ಆಚರಣೆ ಸಿದ್ಧಾಂತಗಳ ಹಿಂದೆ ಜಾತೀಯತೆ ಮನೆ ಮಾಡುತ್ತಿರುವುದು ವಿಷಾದನೀಯ. ಡಾ.ಬಿ.ಆರ್. ಅಂಬೇಡ್ಕರ್ ಸಂವಿಧಾನ ಬರೆದು 70 ವರ್ಷಗಳು ಕಳೆದರೂ ಕೂಡ ಅಸ್ಪೃಶ್ಯತೆ ಆಚರಣೆಯಲ್ಲಿದೆ, ದಲಿತರ ಮೇಲೆ ದೌರ್ಜನ್ಯ ನಡೆಯುತ್ತಲೇ ಇದೆ ಸಮಾಜದಲ್ಲಿ ಅಸಮಾನತೆ ತಾಂಡವಾಗುತ್ತಿದೆ. ಇದು ದೇಶದ ಒಳಿತೆಗೆ ಮಾರಕವಾಗಿದೆ ಇದನ್ನು ಹೋಗಲಾಡಿಸಲು ಜನಪ್ರತಿನಿಧಿಗಳು, ಇಲಾಖೆಗಳ ಅಧಿಕಾರಿಗಳಿಂದ ಸಾಧ್ಯವಿಲ್ಲ ಬದಲಾಗಿ ಎಲ್ಲಾ ಸಮುದಾಯಗಳ ಜನರೆ ಸ್ವಯಂ ಪ್ರೇರಿತವಾಗಿ ಜಾತಿ ಪದ್ಧತಿಯನ್ನು ಬಿಡಬೇಕು ಎಂದು ಸಲಹೆ ನೀಡಿದರು.
ಕನಕರ ಆದರ್ಶ ಪಾಲಿಸಿ: ತಹಶೀಲ್ದಾರ್ ಶರೀನ್ ತಾಜ್ ಮಾತನಾಡಿ, ಕುರುಬ ಜನಾಂಗದಲ್ಲಿ ಜನಿಸಿದ ಕನಕದಾಸರು ಎಲ್ಲ ಜನಾಂಗದ ಹಿತವನ್ನು ಭಯಸಿದ ಅಪರೂಪದ ಶ್ರೇಷ್ಠ ಸಂತರಾಗಿ ಇತಿಹಾಸದ ಪುಟದಲ್ಲಿ ಉಳಿದ್ದಾರೆ. ಅವರು ಪ್ರತಿಪಾದಿಸಿದಂತಹ ತತ್ವಾದರ್ಶಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ. ಅವುಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನೆಮ್ಮದಿ ಬದುಕು ಸಾಧ್ಯವಿದೆ, ಬ್ರಿಟಿಷರ ವಿರುದ್ಧ ಸೆಣಸಿದ ವೀರ ವನಿತೆ ಕಿತ್ತೂರು ರಾಣಿ ಚೆನ್ನಮ್ಮ ತನ್ನ ಶೌರ್ಯ, ಸಾಹಸಕ್ಕೆ ಹೆಸರು ವಾಸಿಯಾಗಿ ನಾಡು-ನುಡಿಗಾಗಿ ದುಡಿದ ಮೊಟ್ಟ ಮೊದಲ ವೀರ ಮಹಿಳೆಯಾಗಿದ್ದಾರೆ. ಇಂದಿನ ಸಮಾಜಕ್ಕೆ ರಾಣಿ ಚೆನ್ನಮ್ಮವರ ಆದರ್ಶಗಳ ಅಗತ್ಯ ಹೆಚ್ಚಾಗಿದೆ ಎಂದು ತಿಳಿಸಿದರು.
ಶಿಕ್ಷಕ, ಸಾಹಿತಿ ಪರಮೇಶ್ ಮಡಬಲು ಮಾತನಾಡಿ, ಮಾನವೀಯ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿ ಸಮಾಜದ ಆಸ್ತಿಯಾಗುತ್ತಾನೆ. ಮೇಲಾಗಿ, ಆತ ಚರಿತ್ರೆಯಲ್ಲಿ ದಾಖಲಾಗುತ್ತಾನೆ. ತನ್ನ ಶಿಸ್ತುಬದ್ಧ ಆಡಳಿತ ಮತ್ತು ಅಂತಃಕರಣಭರಿತ ನಿರ್ಣಯಗಳಿಂದಾಗಿ ಕಿತ್ತೂರು ರಾಣಿ ಚೆನ್ನಮ್ಮ ಇತಿಹಾಸದಲ್ಲಿ ಸುಭದ್ರ ಸ್ಥಾನ ಪಡೆದಿದ್ದಾರೆ ಎಂದು ತಿಳಿಸಿದರು.
ಹಾಸನ ಎಪಿಎಂಸಿ ಅಧ್ಯಕ್ಷ ಕೆ.ಎಸ್ ಮಂಜೇಗೌಡ, ತಾಪಂ ಸದಸ್ಯ ಸಿ.ವಿ.ಲಿಂಗರಾಜು, ಮಾಜಿ ಸದಸ್ಯ ಸುಬ್ಬಶೆಟ್ಟಿ, ತಾಪಂ ಕಾರ್ಯನಿರ್ವಣಾಧಿಕಾರಿ ಸತೀಶ್, ಬಿಇಒ ಹೊನ್ನೇಶ್ ಕುಮಾರ್, ಪಪಂ ಸದಸ್ಯೆ ತಾಹೆರಾ ಬೇಗಾಂ, ತೌಫಿಕ್, ಮಾಜಿ ಅಧ್ಯಕ್ಷ ಡಿ.ಎಸ್ ಜಯಣ್ಣ, ಮುಖ್ಯಾಧಿಕಾರಿ ಕೃಷ್ಣಮೂರ್ತಿ, ಕುರುಬ ಸಮುದಾಯದ ಅಧ್ಯಕ್ಷ ಚಿಕ್ಕೇಗೌಡ, ಆಲೂರು ಪೊಲೀಸ್ ಠಾಣೆಯ ಪಿ.ಐ ರೇವಣ್ಣ, ನಿವೃತ್ತ ಶಿಕ್ಷಣಾಧಿಕಾರಿ ವಿಜಯಕಾಂತ್, ಶಿರಸ್ತೇದಾರ್ ಶ್ರೀಧರಮೂರ್ತಿ, ಹರೀಶ್ ಇದ್ದರು.