ತುಮಕೂರು: ನಮ್ಮ ಭಾರತ ದೇಶದಲ್ಲಿ ಈಗ ವ್ಯಾಪಿಸಿರುವ ಕೋವಿಡ್ 19 ಮಹಾಮಾರಿಯನ್ನು ಎಲ್ಲರೂ ಒಗ್ಗಟ್ಟಾಗಿ ಜಾತ್ಯತೀತವಾಗಿ, ಪಕ್ಷಾತೀತವಾಗಿ, ಧರ್ಮಾತೀತವಾಗಿ ಓಡಿಸ ಬೇಕಾಗಿದೆ ಎಂದು ಶಾಸಕ ಜಿ.ಬಿ. ಜ್ಯೋತಿಗಣೇಶ್ ಹೇಳಿದರು.
ಬಿಜೆಪಿ ರೈತ ಮೋರ್ಚಾ ದಿಂದ ರೈತರಿಂದ ಖರೀದಿ ಮಾಡಿದ ತರಕಾರಿ ಮತ್ತು ಹಣ್ಣು ಗಳನ್ನು ಶೆಟ್ಟಿಹಳ್ಳಿಯ ಬಡಾವಣೆಗಳ ನಾಗರಿಕರಿಗೆ ಉಚಿತವಾಗಿ ವಿತರಣೆ ಮಾಡುವ ಕಾರಕ್ಕೆ ಚಾಲನೆ ನೀಡಿ ಮಾತನಾಡಿದರು. ಇಂತಹ ಸಂಕಷ್ಟವನ್ನು ನಾವು ಎದುರಿಸ ಬೇಕಾಗಿದೆ. ಈ ಮಹಾಮಾರಿ ಕೋವಿಡ್ 19 ವನ್ನು ಓಡಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹಾಗೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಅನೇಕ ದಿಟ್ಟ ಹೆಜ್ಜೆಯ ನಿರ್ಧಾರಗಳನ್ನು ತೆಗೆದುಕೊಂಡಿದ್ದು, ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ನಿಯಮಗಳನ್ನು ನಾವೆಲ್ಲಾ ಪಾಲಿಸುವ ಮೂಲಕ ಕೊರೊನಾ ಮುಕ್ತ ಭಾರತವನ್ನಾಗಿ ಮಾಡಬೇಕೆಂದು ಮನವಿ ಮಾಡಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಉಪಾಧ್ಯಕ್ಷ ಎಸ್.ಶಿವಪ್ರಸಾದ್ ಮಾತನಾಡಿ, ಕೋವಿಡ್ 19 ವೈರಸ್ ಹರಡುವ ಭೀತಿಯಿಂದ ಲಾಕ್‌ಡೌನ್ ಘೋಷಣೆಯಾಗಿದ್ದು, ಇದರಿಂದ ಅನೇಕ ರೈತರು ತಾವು ಬೆಳೆದಿರುವ ತರಕಾರಿ, ಹಣ್ಣು ಹಂಪಲುಗಳನ್ನು ಮಾರಾಟ ಮಾಡಲು ಕೆಲವು ಕಡೆ ತೊಂದರೆ ಅನುಭವಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು ನೇರವಾಗಿ ರೈತರಿಂದ ತರಕಾರಿ ಮತ್ತು ಹಣ್ಣು ಹಂಪಲುಗಳನ್ನು ಖರೀದಿ ಮಾಡಿ ಸಾರ್ವಜನಿಕರಿಗೆ ಉಚಿತವಾಗಿ ವಿತರಣೆ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂದರು.
ಬಿಜೆಪಿ ರೈತ ಮೋರ್ಚಾ ವತಿಯಿಂದ ಕಳೆದ 10 ದಿನಗಳಿಂದ ಸಹಾಯವಾಣಿ ಮೂಲಕ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿರುವ ರೈತರ ಕೃಷಿ ಚಟುವಟಿಕೆ, ಉತ್ಪಾದನಾ ವಸ್ತುಗಳ ಮಾರಾಟದ ಸಮಸ್ಯೆ, ಪರಿಕರಗಳ ಸಮಸ್ಯೆಗೆ ಜಿಲ್ಲಾ ರೈತ ಮೋರ್ಚಾ ಸ್ಪಂದಿಸುವ ಕೆಲಸ ಮಾಡುತ್ತಿದೆ. ಅದೇರೀತಿ ಇಂದು ಅನೇಕರು ಪಕ್ಷಾತೀತವಾಗಿ, ಜಾತ್ಯತೀತವಾಗಿ ಜನರಿಗೆ ಅವಶ್ಯಕತೆ ಗಳನ್ನು ತೀರಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ರೈತ ಮೋರ್ಚಾ ಕೂಡಾ ಕೆಲವು ಕಡೆಗಳಿಂದ ಟೊಮೊಟೋ, ಈರುಳ್ಳಿ ಇನ್ನಿತರೆ ತರಕಾರಿಗಳನ್ನು ದಾನಿಗಳ ಸಹಾಯದಿಂದ ರೈತರಿಂದ ಖರೀದಿ ಮಾಡಿ ಸಾರ್ವಜನಿಕರಿಗೆ ಉಚಿತವಾಗಿ ವಿತರಿಸುವ ಕೆಲಸ ಮಾಡುತ್ತಿದೆ ಎಂದರು.
ಸಿದ್ಧಗಂಗಾ ಆಸ್ಪತ್ರೆಯ ನಿರ್ದೇಶಕ ಡಾ.ಪರಮೇಶ್, ಬಿಜೆಪಿ ರೈತಮೋರ್ಚಾ ಪ್ರಧಾನ ಕಾರ್ಯದರ್ಶಿ ತರಕಾರಿ ಮಹೇಶ್ ರೈತಮೋರ್ಚಾ ಜಿಲ್ಲಾಧ್ಯಕ್ಷ ಸ್ನೇಕ್ ನಂದೀಶ್, ನಾಗರಾಜು, ಮುಖಂಡರಾದ ಸಂದೀಪ್, ಜಗದೀಶ್, ವಿಕಾಸ್, ಗುರುಪ್ರಸಾದ್, ಕುಮಾರ್, ರವೀಶ್ ಇದ್ದರು.