ಮೈಸೂರು: ಬಹುಜನರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ, ರಾಜಕೀಯವಾಗಿ ಸಬಲರಾಗಲು ಎಲ್ಲಾ ರೀತಿಯ ತ್ಯಾಗಕ್ಕೆ ಸಿದ್ಧರಾಗಬೇಕು ಎಂದು ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ಹೇಳಿದರು. ಬಹುಜನ ಸಮಾಜ ಪಕ್ಷದಿಂದ ಗುರುವಾರ ನಗರದ ಪುರಭವನದಲ್ಲಿ ಆಯೋಜಿಸಿದ್ದ ದಾದಾಸಾಹೇಬ್ ಕಾನ್ಷಿರಾಂ ಅವರ 84ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಾನ್ಷಿರಾಂ ಅವರು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತಗಳು, ವಿಚಾರಧಾರೆಗಳನ್ನು ಅನುಸರಿಸಿ ಪ್ರಾಮಾಣಿಕವಾಗಿ ನಡೆದಂತಹ ಮಹಾನ್ ವ್ಯಕ್ತಿಯಾಗಿದ್ದಾರೆ. ಯಾವುದೇ ಆಸ್ತಿ ಇಲ್ಲದೆ, ಮದುವೆ ಆಗದೆ ಅಂಬೇಡ್ಕರ್ ಅವರ ಚಳವಳಿಗಳಿಗಾಗಿ ತಮ್ಮ ಬದುಕನ್ನು ಸವೆಸಿದವರಾಗಿದ್ದಾರೆ.
ಹೀಗಾಗಿ ಯಾವುದೇ ಸಾಮ್ರಾಜ್ಯವಾದರೂ ತ್ಯಾಗದಿಂದ ನಿರ್ಮಾಣವಾಗಲಿದೆ ಹೊರತು ಬೋಗದಿಂದಲ್ಲ. ಈ ನಿಟ್ಟಿನಲ್ಲಿ ಬಹುಜನರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯವಾಗಿ ಸಬಲರಾಗಲು ತ್ಯಾಗಕ್ಕೆ ಸಿದ್ಧವಾಗುವ ಮೂಲಕ ಬಹುಜನ ಸಾಮ್ರಾಜ್ಯ ನಿರ್ಮಾಣಕ್ಕೆ ಪಾಯದ ಕಲ್ಲಾಗಬೇಕಿದೆ. ಆಗ ಮಾತ್ರವೇ ಉತ್ತಮ ಸಾಮ್ರಾಜ್ಯ ನಿರ್ಮಿಸಲು ಸಾಧ್ಯ ಎಂದು ತಿಳಿಸಿದರು.
ಅಂಬೇಡ್ಕರ್ ಕನಸಿಗೆ ಶ್ರಮಿಸಿದ ಕಾನ್ಷಿರಾಂ: ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಬಹುಜನ ಸಮಾಜವನ್ನು ಡಾ.ಬಿ.ಆರ್.ಅಂಬೇಡ್ಕರ್ ಅವರ ತತ್ವ, ಆದರ್ಶಗಳಿಗೆ ಬದ್ಧರಾಗಿ ಒಗ್ಗೂಡಿಸುವಲ್ಲಿ ಕಾನ್ಷಿರಾಂ ಪ್ರಮುಖರಾಗಿ ಕೆಲಸ ಮಾಡಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಜೀವನದಲ್ಲಿ ಎದುರಾದ ಅಪಮಾನಗಳನ್ನು ಲೆಕ್ಕಿಸದೇ ದಲಿತರ, ಶೋಷಿತರ, ಬಹುಜನರ ಹಿತಕ್ಕಾಗಿ ಹೋರಾಟ ನಡೆಸುವ ಮೂಲಕ ವಿಶ್ವದಲ್ಲೇ ಅತ್ಯುತ್ತಮ ಎನ್ನುವಂತಹ ಸಂವಿಧಾನವನ್ನು ರಚಿಸಿದ್ದಾರೆ.
ಇವರ ನಂತರದಲ್ಲಿ ಕಾನ್ಷಿರಾಂ ಅವರು ಅಂಬೇಡ್ಕರ್ ಅವರ ಕನಸುಗಳನ್ನು ನನಸು ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಿದರು. ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜ ಪಕ್ಷವನ್ನು ಅಧಿಕಾರಕ್ಕೆ ತಂದು, ಮಾಯಾವತಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡುವ ಮೂಲಕ ಅಂಬೇಡ್ಕರ್ ಕನಸನ್ನು ಕಣ್ಣಾರೆ ಕಂಡಂತಹ ವ್ಯಕ್ತಿ ಎಂದರೆ ಕಾನ್ಷಿರಾಂ ಆಗಿದ್ದಾರೆ.
ಆದರೆ, ಇಂದು ಬಹುಜನ ಸಮಾಜದವರಿಗೆ ಸಾಮಾಜಿಕ ನ್ಯಾಯ ದೊರೆಯಬೇಕಾದರೆ ಅದು ಕಾನ್ಷಿರಾಂ ಅವರು ಕಟ್ಟಿದ ಬಹುಜನ ಸಮಾಜ ಪಕ್ಷದಿಂದ ಸಾಧ್ಯವಿದ್ದು, ದೇಶದ ರಾಜಕೀಯವನ್ನು ಬಲ್ಲವರಾಗಿರುವ ಮಾಯಾವತಿ ಅವರು ಮುಂದೆ ಬಿಎಸ್ಪಿ ಪಕ್ಷದಿಂದ ಪ್ರಧಾನಿಮಂತ್ರಿಯಾಗುವುದು ಖಚಿತವಾಗಿದ್ದು, ಇದಕ್ಕಾಗಿ ಎಲ್ಲರೂ ಶ್ರಮಿಸಬೇಕಿದೆ. ಇದರೊಂದಿಗೆ ಕಾನ್ಷಿರಾಂ ಅವರ ಕನಸನ್ನು ನನಸಾಗಿಸಲು ಎಲ್ಲರೂ ಮಾಯಾವತಿ ಅವರಿಗೆ ಪೋ›ತ್ಸಾಹ ನೀಡುವ ಅಗತ್ಯವಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಎಸ್ಪಿ ಜಿಲ್ಲಾಧ್ಯಕ್ಷ ಭೀಮನಹಳ್ಳಿ ಸೋಮೇಶ್, ಪಾಲಿಕೆ ಸದಸ್ಯ ಕೆ.ವಿ.ಮಲ್ಲೇಶ್, ವರುಣಾ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಅಭಿಷೇಕ್, ಬಿಎಸ್ಪಿ ಜಿಲ್ಲಾ ಸಂಯೋಜಕ ಶಿವಮಹದೇವ್, ಜಿಲ್ಲಾ ಉಪಾಧ್ಯಕ್ಷ ನಾಗರಾಜು ನಾಗನಹಳ್ಳಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಎನ್.ಪ್ರಭುಸ್ವಾಮಿ, ನಗರಾಧ್ಯಕ್ಷ ಪ್ರತಾಪ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ಸೋಸಲೆ ಸಿದ್ದರಾಜು ಹಾಜರಿದ್ದರು.