Advertisement

ಗ್ರಾಪಂ ಚುನಾವಣೆಗೆ ಸಿದ್ಧರಾಗಿ: ಜಿಲ್ಲಾಧಿಕಾರಿ ಶಿವಕುಮಾರ್‌ ಸೂಚನೆ

04:35 PM Aug 05, 2020 | Suhan S |

ಶಿವಮೊಗ್ಗ: ರಾಜ್ಯ ಚುನಾವಣಾ ಆಯೋಗವು ಸದ್ಯದಲ್ಲಿ ಗ್ರಾಪಂ ಚುನಾವಣೆಗೆ ದಿನಾಂಕ ಘೋಷಿಸುವ ಸಂಭವವಿದ್ದು, ಜಿಲ್ಲೆಯ ಎಲ್ಲಾ ತಾಲೂಕಿನ ಚುನಾವಣಾಧಿಕಾರಿಗಳು ಸಕಲ ಸಿದ್ಧತೆ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌ ಹೇಳಿದರು.

Advertisement

ಮಂಗಳವಾರ ತಮ್ಮ ಕಚೇರಿ ಸಭಾಂಗಣದಲ್ಲಿ ವಿಡಿಯೋ ಮೂಲಕ ಜಿಲ್ಲೆಯ ಎಲ್ಲಾ ತಹಶೀಲ್ದಾರರೊಂದಿಗೆ ಗ್ರಾಪಂ ಚುನಾವಣೆ, ಮಳೆಯಿಂದ ಸಂಭವಿಸಬಹುದಾದ ನೆರೆ, ಬರ ಮುಂತಾದ ಅವಘಡಗಳು ಹಾಗೂ ಮಾರಣಾಂತಿಕವಾಗಿರುವ ಕೊರೊನಾ ಮಾರಿಯನ್ನು ನಿಯಂತ್ರಿಸುವಲ್ಲಿ ಜಿಲ್ಲಾಡಳಿತದ ವತಿಯಿಂದ ಕೈಗೊಂಡ ಕ್ರಮಗಳ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಮತದಾರರ ಪಟ್ಟಿ ಪರಿಷ್ಕರಣೆಗೆ ಸಂಬಂಧಿಸಿದಂತೆ ಆ. 18ರೊಳಗಾಗಿ ಮತದಾರರನ್ನು ಗುರುತಿಸಿ, ಮತದಾರರ ಪಟ್ಟಿಯ ಕರಡನ್ನು ತಿದ್ದುಪಡಿಗೊಳಿಸಿ, ತ್ವರಿತವಾಗಿ ಜಿಲ್ಲಾ ಚುನಾವಣಾ ಶಾಖೆಗೆ ಕಳುಹಿಸಿಕೊಡಬೇಕು ಅಲ್ಲದೆ ಗ್ರಾಪಂ ಸದಸ್ಯರ ಮೀಸಲಾತಿಪಟ್ಟಿಯನ್ನು ಸಿದ್ಧಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆಯೂ ಅವರು ತಹಶೀಲ್ದಾರರಿಗೆ ಸೂಚಿಸಿದರು.

ತಹಶೀಲ್ದಾರರು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸುವ ಸಿಬ್ಬಂದಿಗಳನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಕೂಡದು. ಅನಿವಾರ್ಯವಾದಲ್ಲಿ ಈಗಲೇ ಬದಲಾವಣೆಗೆ ಕ್ರಮ ವಹಿಸಬೇಕು. ತಾಲೂಕು ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ, ಸಿಬ್ಬಂದಿ ಗಳು ಅನುಮತಿ ಪಡೆಯದೆ ರಜೆಯ ಮೇಲೆ ತೆರಳದಂತೆ ಸೂಚಿಸಿದರು.

ಜಿಲ್ಲೆಯಲ್ಲಿ ಮುಂಗಾರು ಚುರುಕುಗೊಳ್ಳುತ್ತಿದ್ದು, ಹಿಂದಿನ ವರ್ಷದಲ್ಲಿ ನಡೆದ ಅಹಿತಕರ ಘಟನೆಗಳು ಮರುಕಳಿಸದಂತೆ ಅಗತ್ಯ ಕ್ರಮ ಕೈಗೊಳ್ಳಬೇಕು. ಅದಕ್ಕಾಗಿ ಲೋಕೋಪಯೋಗಿ ಇಲಾಖೆಯ ಅಭಿಯಂತರರೊಂದಿಗೆ ಸಮನ್ವಯತೆ ಸಾಧಿಸಿಕೊಂಡು ಕ್ರಮ ಕೈಗೊಳ್ಳುವುದು ಉತ್ತಮ ಎಂದ ಅವರು, ಕೋವಿಡ್ ನಿಯಂತ್ರಣ, ನೆರೆ ಮತ್ತು ಗ್ರಾಪಂ ಚುನಾವಣೆಗೆ ಸಂಬಂಧಿ ಸಿದಂತಹ ಎಲ್ಲಾ ಕೆಲಸಗಳನ್ನು ಸಂಬಂಧಿಸಿದ ಸಿಬ್ಬಂದಿಗಳಿಗೆ ವಹಿಸಿ, ಕಾಲಕಾಲಕ್ಕೆ ಅದರ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರಬೇಕು ಎಂದರು.

Advertisement

ಮುಂದಿನ ದಿನಗಳಲ್ಲಿ ಅಗತ್ಯವಾದಲ್ಲಿ ಈ ಹಿಂದೆ ಸ್ಥಾಪಿಸಲಾಗಿದ್ದ ನೆರೆ ಪರಿಹಾರ ಕೇಂದ್ರಗಳಲ್ಲಿ ನಿರಾಶ್ರಿತರ ಕೇಂದ್ರಗಳನ್ನು ತೆರೆಯಬಹುದಾದ ಸ್ಥಳಗಳನ್ನು ಗುರುತಿಸಿಟ್ಟುಕೊಂಡಿರಬೇಕು. ಈ ಎಲ್ಲಾ ತುರ್ತು ಕೆಲಸ-ಕಾರ್ಯಗಳಿಗಾಗಿ ಜಿಲ್ಲಾಡಳಿತದಿಂದ ಅಗತ್ಯ ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಲಾಗಿದೆ. ಅಗತ್ಯಕ್ಕೆ ತಕ್ಕಂತೆ ವಾಹನಗಳನ್ನು ಸಿದ್ಧವಾಗಿರಿಸಿಕೊಂಡಿರುವಂತೆಯೂ ತಹಶೀಲ್ದಾರರಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಜಿ.ಅನುರಾಧ, ಜಿಲ್ಲಾ ಯೋಜನಾ ನಿರ್ದೇಶಕ ಡಾ|ನಾಗೇಂದ್ರ ಎಫ್‌. ಹೊನ್ನಳ್ಳಿ, ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ್‌, ತಹಶೀಲ್ದಾರ್‌ ನಾಗರಾಜ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next