ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸಿದ್ದರಾಗುವಂತೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಪಕ್ಷದ ನಾಯಕರಿಗೆ ಸೂಚನೆ ನೀಡಿದ್ದಾರೆ.
ಸಿದ್ದರಾಮಯ್ಯ ನಿವಾಸದಲ್ಲಿ ಗುರುವಾರ ಈ ಕುರಿತು ಚರ್ಚೆ ನಡೆದಿದೆ. ಮಾಜಿ ಸಚಿವರಾದ ಸತೀಶ್ ಜಾರಕಿಹೊಳಿ, ಜಮೀರ್ ಅಹಮದ್, ಬಿ.ಕೆ.ಹರಿಪ್ರಸಾದ್, ಸೇರಿದಂತೆ ಹಲವರು ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪಕ್ಷದ ಮುಂದಿನ ನಡೆ, ಅತೃಪ್ತರ ಶಾಸಕರ ರಾಜೀನಾಮೆ ವಿಚಾರ, ಬಿಜೆಪಿಗೆ ಸರ್ಕಾರ ರಚನೆ ಮಾಡಲು ಅವಕಾಶವಿದೆಯೇ, ಇಲ್ಲವೇ ಎಂಬ ಕುರಿತು ಸಮಾಲೋಚನೆ ನಡೆಸಿದರು.
ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿಗೆ ಸರ್ಕಾರ ರಚನೆ ಸುಲಭವಲ್ಲ. ಅತೃಪ್ತ ಶಾಸಕರನ್ನು ಒಟ್ಟಿಗೆ ರಾಜ್ಯಕ್ಕೆ ಕಳುಹಿಸದೇ ಒಬ್ಬೊಬ್ಬರನ್ನೇ ಕಳುಹಿಸುತ್ತಿದ್ದು, ತಮ್ಮ ವಿರುದ್ಧ ಆರೋಪ, ಅಪಪ್ರಚಾರ ಮಾಡುತ್ತಿದ್ದಾರೆ. ಪಕ್ಷದೊಳಗೆ ಭಿನ್ನಾಭಿಪ್ರಾಯ ತಂದಿಡುವ ಕೆಲಸವನ್ನು ಬಿಜೆಪಿ ಮಾಡುತ್ತಿದ್ದು, ಬಿಜೆಪಿಯ ನಡೆ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಸಭೆಯಲ್ಲಿ ಸೂಚನೆ ನೀಡಿದರು ಎನ್ನಲಾಗಿದೆ. ಈ ಮಧ್ಯೆ, ಅತೃಪ್ತ ಶಾಸಕರನ್ನು ಸಿದ್ದರಾಮಯ್ಯನವರೇ ಮುಂಬೈಗೆ ಕಳುಹಿಸಿದ್ದಾರೆ.
ಅತೃಪ್ತರ ಹಿಂದೆ ತಮ್ಮ ಕೈವಾಡವಿದೆ ಎಂಬ ಆರೋಪಗಳಿಗೆ ಸರಣಿ ಟ್ವೀಟ್ ಮೂಲಕ ಸ್ಪಷ್ಟೀಕರಣ ನೀಡಿರುವ ಅವರು, ಅತೃಪ್ತ ಶಾಸಕರು ತಮ್ಮನ್ನು ಗುರಿ ಮಾಡಿಕೊಂಡು ಹೇಳಿಕೆ ನೀಡಿದ್ದರೆ ಅವರಿಗೆ ತಮ್ಮ ತಪ್ಪುಗಳನ್ನು ಮುಚ್ಚಿಕೊಳ್ಳುವ ದುರುದ್ದೇಶ ಇರಬಹುದು. ಸತ್ಯ ಬಯಲಾಗುವ ಕಾಲ ಬಂದೇ ಬರುತ್ತದೆ ಎಂದು ಮಾರ್ಮಿಕವಾಗಿ ಟ್ವೀಟ್ ಮೂಲಕ ಹೇಳಿದ್ದಾರೆ. ಕಾಂಗ್ರೆಸ್‌ನ ಕೆಲವರಿಗೆ ಮೈತ್ರಿ ಬೇಕಿದ್ದರೆ, ಇನ್ನು ಹಲವರಿಗೆ ಜೆಡಿಎಸ್ ಸಹವಾಸವೇ ಸಾಕು ಎಂಬ ಅಭಿಪ್ರಾಯವಿದೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚೆಯಾಗಿದೆ ಎಂದು ಹೇಳಲಾಗುತ್ತಿದ್ದು, ಮೈತ್ರಿ ಕುರಿತು ಸದ್ಯಕ್ಕೆ ಯಾರೂ ಬಹಿರಂಗವಾಗಿ ಮಾತನಾಡಬಾರದು ಎಂಬ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಸಭೆ ಬಳಿಕ ಕಾವೇರಿ ನಿವಾಸದಿಂದ ಜಮೀರ್ ಅಹಮದ್ ಖಾನ್ ಅವರ ಕಾರಿನಲ್ಲಿಯೇ ಅಜ್ಞಾತ ಸ್ಥಳಕ್ಕೆ ತೆರಳಿದರು.