Advertisement

ಓದಿಗೆ ಪ್ರೇರಣೆ ಸಿಗಲಿ

01:41 PM Apr 24, 2021 | Team Udayavani |

ಅಂಗನವಾಡಿ ಅಥವಾ ಎಲ್‌ಕೆಜಿ, ಯುಕೆಜಿಗೆ ಹೋಗಿ ಸ್ವಲ್ಪವಾದರೂ ಓದಿನ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕಾದ ಮಕ್ಕಳು ಸಾಂಕ್ರಾಮಿಕ ರೋಗದ ತೀವ್ರ ಹರಡುವಿಕೆಯ ಕಾರಣದಿಂದ ಮನೆಯಲ್ಲೇ ಉಳಿದು ತಮ್ಮದೇ ಆದ ಕ್ರೀಡೆಯಲ್ಲೇ ಹೆಚ್ಚಿನ ಉತ್ಸಾಹ ತೋರುತ್ತಿದ್ದಾರೆ. ಅವರನ್ನು ಓದಿನತ್ತ ಸೆಳೆಯಲು ಪೋಷಕರು ಹರಸಾಹಸ ಪಟ್ಟರೂ ಕೊನೆಗೆ ಸಾಧ್ಯವಿಲ್ಲ ಎಂದು ಕೈಚೆಲ್ಲಿ ಕುಳಿತಿದ್ದಾರೆ. ಶಿಕ್ಷಕರ ಕಾರ್ಯ ಅವರಿಂದ ಮಾತ್ರವೇ ಸಾಧ್ಯ ಎಂದುಕೊಳ್ಳುತ್ತಿದ್ದಾರೆ. ಆದರೆ ಪೋಷಕರು ಮನಸ್ಸು ಮಾಡಿದರೆ ಶಿಕ್ಷಕರಂತೆ ತಮ್ಮ ಮಕ್ಕಳನ್ನು ಓದಿನಲ್ಲಿ ಆಸಕ್ತಿ ಹುಟ್ಟಿಸುವಂತೆ ಮಾಡಬಹುದು.

Advertisement

ಬೆಳೆಯುವ ಸಿರಿ ಮೊಳಕೆಯಲ್ಲೇ ಎನ್ನುವಂತೆ ಮನೆಯೇ ಮೊದಲ ಪಾಠಶಾಲೆ ಎನ್ನುವುದನ್ನು ಮರೆಯುವಂತಿಲ್ಲ. ಹಿಂದಿನ ಕಾಲದಲ್ಲಿ  ಶಾಲೆಗೆ ಹೋಗದೇ ಇದ್ದವರೂ ದೊಡ್ಡದೊಡ್ಡ ಸಾಧನೆಗಳನ್ನು ಮಾಡಿದ್ದಾರೆ. ಅದೂ ಮನೆ ಪಾಠದಿಂದಲೇ. ಹೀಗಾಗಿ ಮನೆಯಲ್ಲೇ ಮಕ್ಕಳಿಗೆ ಓದಿನತ್ತ ಆಸಕ್ತಿ ಬೆಳೆಸಲು ಒಂದಷ್ಟು ಕ್ರಮಕೈಗೊಳ್ಳಬಹುದು. ಅದಕ್ಕಾಗಿ ಇಲ್ಲಿವೆ ಕೆಲವು ಟಿಪ್ಸ್‌.

 ಮಗುವಿಗೆ ಎರಡು ವರ್ಷವೇ. ಹಾಗಿದ್ದರೆ ಅವರಿಗೆ ಶೈಕ್ಷಣಿಕ ವೇಳಾಪಟ್ಟಿಯನ್ನು ಪರಿಚಯಿಸಲು ಸಕಾಲ. ಇದು ದಿನಚರಿಯ ಒಂದು ಭಾಗವಾಗಬೇಕು. ಪೋಷಕರೇ ಅವರೆದುರು ಕುಳಿತು ಪುಸ್ತಕಗಳನ್ನು ಓದುವುದು, ಚಿತ್ರಕಲೆ, ಮೆದಳಿಗೆ ಆಟ ಕೊಡುವ ಆಟಿಕೆಗಳಿಂದ ಆಟವಾಡುವುದು ಅವರನ್ನೂ ಓದಿನತ್ತ ಸೆಳೆಯುತ್ತದೆ.

 ಮಕ್ಕಳಿಗೆ ಅಧ್ಯಯನ ಮಾಡಿಸಬೇಕೆಂದಿದ್ದರೆ ಅವರೊಂದಿಗೆ ಅಧ್ಯಯನ ಸಮಯವನ್ನು ಪೋಷಕರೂ ಕಳೆಯಬೇಕು. ಆರಂಭಿಕ ತರಗತಿಗಳಲ್ಲಿ ಇದು ಅಗತ್ಯವಾಗಿರುತ್ತದೆ. ಒಮ್ಮೆ ತರಬೇತಿ ಪಡೆದ ಅನಂತರ ಅವರು ನಿಮ್ಮ ಉಪಸ್ಥಿತಿ ಇಲ್ಲದೆಯೇ ಅಧ್ಯಯನ ಪ್ರಾರಂಭಿಸುತ್ತಾರೆ.

  ಅಧ್ಯಯನ ಮೋಜಿನಂತಿರಲಿ. ಮಗುವಿಗೆ ಬಯ್ಯುವುದು, ಹೊಡೆಯುವುದು, ಒತ್ತಾಯ ಮಾಡುವುದರಿಂದ ಅವರು ಪುಸ್ತಕಗಳೊಂದಿಗೆ ನಕಾರಾತ್ಮಕ ಸಂಬಂಧವನ್ನು ಬೆಳೆಸುತ್ತಾರೆ. ಆದ್ದರಿಂದ ಅವರಿಗೆ ಅಧ್ಯಯನದ ಸಮಯವನ್ನು ಆಟದ ಸಮಯದಂತೆ ಆಸಕ್ತಿದಾಯಕವಾಗಿ ಮಾಡಿಸಬೇಕು. ಆಗ ಅವರು ತನ್ನಿಂತಾನೇ ಓದಿನತ್ತ ಆಸಕ್ತಿ ಬೆಳೆಸಿಕೊಳ್ಳುತ್ತಾರೆ.

Advertisement

  ಒಂದು ವೇಳಾ ಪಟ್ಟಿ ಮಾಡಿದೆ ಅದಕ್ಕೆ ಯಾವುದೇ ಬದಲಾವಣೆ ಮಾಡಿಕೊಳ್ಳಬೇಡಿ. ಪುಸ್ತಕಗಳೊಂದಿಗೆ ಮಕ್ಕಳು ಇಷ್ಟಪಡುವ ಚಟುವಟಿಕೆಗಳನ್ನೂ ಸೇರಿಸಿ. ಅಂದರೆ ಓದಿನ ಸಮಯ, ಆಟದ ಸಮಯ, ಟಿವಿ ನೋಡುವ ಸಮಯ ಇತ್ಯಾದಿ.

  ತಡರಾತ್ರಿಯಲ್ಲಿ ಮಕ್ಕಳನ್ನು ಓದಿಸುವುದು ಸರಿಯಲ್ಲ. ಅವರಿಗೆ ನಿದ್ರೆ ಬಹಳ ಅಗತ್ಯವಿರುತ್ತದೆ. ಹೀಗಾಗಿ ಮುಂಜಾನೆಯ ಅವಧಿ ಅಥವಾ ಸಂಜೆಯ ವೇಳೆ ಅವರನ್ನು ಓದಿಗೆ ಪ್ರೇರೇಪಿಸಿ.

 ಒಂದೇ ರೀತಿಯ ಅಧ್ಯಯನ ಕ್ರಮ ಅವರಲ್ಲಿ ಬೇಸರ ತರಿಸಬಹದು. ಹೀಗಾಗಿ ಸಾಧ್ಯವಾದರೆ ಎರಡು ಮೂರು ದಿನಕ್ಕೊಮ್ಮೆಯಾದರೂ ಅಧ್ಯಯನ ಕ್ರಮವನ್ನು ಬದಲಿಸಿ. ಒಂದು ದಿನ ಮನೆಯೊಳಗೆ ಪಾಠವಾದರೆ, ಇನ್ನೊಂದು ದಿನ ಮನೆಯ ಹೊರಗಿನ ಪಾಠವಾಗಲಿ. ಇದು ಅವರಲ್ಲಿ ಕುತೂಹಲವನ್ನು ಹೆಚ್ಚಿಸುತ್ತದೆ. ಓದಿನಲ್ಲಿ ಆಸಕ್ತಿ ಬೆಳೆಸಿಕೊಳ್ಳಲು ಪ್ರೇರಣೆಯಾಗುತ್ತದೆ.

  ಪ್ರತಿಯೊಂದು ಮಗುವಿನ ಮನೋವಿಕಾಸ ಬೇರೆಬೇರೆ ಇರುತ್ತದೆ. ಒಬ್ಬರಿಗೊಬ್ಬರನ್ನು ಹೋಲಿಸುವುದು ತರವಲ್ಲ. ಅವರ ಸಣ್ಣಪುಟ್ಟ ಸಾಧನೆಗಳನ್ನೂ ಪ್ರಶಂಸಿಸಲು ಮರೆಯದಿರಿ. ಅದೇ ರೀತಿ ಅವರ ವೈಫ‌ಲ್ಯದಲ್ಲಿ ಬೆಂಬಲವಾಗಿ ನಿಂತರೆ ಅವರು ನಿಧಾನವಾಗಿಯಾದರೂ ಸಾಧನೆಯ ಮೆಟ್ಟಿಲೇರಲು ಸಾಧ್ಯವಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next