Advertisement

ತಕ್ಷಣ ಉಚಿತ ಬಸ್‌ಪಾಸ್‌ ಕೊಡಿ

03:20 PM Jun 10, 2018 | |

ದಾವಣಗೆರೆ: ಎಲ್ಲ ವಿದ್ಯಾರ್ಥಿಗಳಿಗೂ ಉಚಿತ ಬಸ್‌ ಪಾಸ್‌ ಸೌಲಭ್ಯ ಒದಗಿಸಲು ಒತ್ತಾಯಿಸಿ ಶನಿವಾರ ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಸ್ಟೂಡೆಂಟ್ಸ್‌ ಆರ್ಗನೈಸೇಷನ್‌(ಎಐಡಿಎಸ್‌ಒ), ಆಲ್‌ ಇಂಡಿಯಾ ಡೆಮಾಕ್ರಟಿಕ್‌ ಯೂತ್‌ ಆರ್ಗನೈಸೇಷನ್‌(ಎಐಡಿವೈಒ) ನೇತೃತ್ವದಲ್ಲಿ ವಿದ್ಯಾರ್ಥಿಗಳು ಜಯದೇವ ವೃತ್ತದಲ್ಲಿ ಪ್ರತಿಭಟಿಸಿದ್ದಾರೆ. ರಾಜ್ಯದ್ಯಾಂತ ಶಾಲಾ-ಕಾಲೇಜುಗಳು, ಶೈಕ್ಷಣಿಕ ಚಟುವಟಿಕೆ ಪ್ರಾರಂಭವಾಗಿದ್ದರೂ ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಬಸ್‌ ಪಾಸ್‌ ಸೌಲಭ್ಯ ಒದಗಿಸಲು ಮೀನಾಮೇಷ ಎಣಿಸುತ್ತಿದೆ.

Advertisement

ಲಕ್ಷಾಂತರ ವಿದ್ಯಾರ್ಥಿಗಳು ಉಚಿತ ಬಸ್‌ಪಾಸ್‌ ನಿರೀಕ್ಷೆಯಲ್ಲಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಚರ್ಚಿಸಿ, ಬಸ್‌ ಪಾಸ್‌ ಸೌಲಭ್ಯ ಒದಗಿಸುವ ಭರವಸೆ ನೀಡಿದ್ದರು. ಆದರೆ, ಸಾರಿಗೆ ಇಲಾಖೆಯಿಂದ ಈವರೆಗೆ ಆದೇಶ ಹೊರ ಬರದೇ ಇರುವುದು ವಿದ್ಯಾರ್ಥಿ ಸಮುದಾಯದಲ್ಲಿ ಆತಂಕ ಮತ್ತು ಗೊಂದಲ ಮೂಡಿಸಿದೆ ಎಂದು ಪ್ರತಿಭಟನಾಕಾರರು ಅಳಲು ತೋಡಿಕೊಂಡರು. 

ಮೈತ್ರಿ ಸರ್ಕಾರದ ಭಾಗವಾಗಿರುವ ಕಾಂಗ್ರೆಸ್‌ ಹಿಂದಿನ ಆಡಳಿತಾವಧಿ ಬಜೆಟ್‌ನಲ್ಲಿ 19.60 ಲಕ್ಷ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‌ ಪಾಸ್‌ ಸೌಲಭ್ಯಕ್ಕೆ 836.98 ಕೋಟಿ ಅನುದಾನ ಘೋಷಿಸಿತ್ತು. ಆ ಮೊತ್ತ ಸಾಕಾಗುವುದಿಲ್ಲ ಎಂದು ಸಾರಿಗೆ ಇಲಾಖೆ ಹೆಚ್ಚುವರಿಯಾಗಿ 629.32 ಕೋಟಿ ಅನುದಾನಕ್ಕೆ ಕೋರಿದೆ. ಸಾರಿಗೆ ಸಂಸ್ಥೆ ಹಣ, ವ್ಯಾಪಾರ ಮತ್ತು ಗರಿಷ್ಠ ಲಾಭದ ಮಾನದಂಡ ಆಧರಿಸಿ ಹೆಚ್ಚುವರಿ ಅನುದಾನ ಕೋರಿದೆ. ಸಾರಿಗೆ ಸಂಸ್ಥೆಯು ಅನುದಾನ ಕೊರತೆ ಇದೆ ಎಂಬುದಾಗಿ ಹೇಳಿಕೆ ನೀಡಿರುವುದು ನಿಜಾಂಶದಿಂದ ಕೂಡಿಲ್ಲ. ಈಗಾಗಲೇ ನಿಗದಿಪಡಿಸಿರುವ 836.98 ಕೋಟಿಯ ಜೊತೆಗೆ ಸ್ವಲ್ಪ ಹೆಚ್ಚುವರಿ ಅನುದಾನ ನೀಡಿದಲ್ಲಿ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‌ ಪಾಸ್‌ ಸೌಲಭ್ಯ ಒದಗಿಸಬಹುದಾಗಿದೆ. ಆದರೆ, ಸಾರಿಗೆ ಸಂಸ್ಥೆ ಸರ್ಕಾರದ ಆದೇಶವನ್ನೇ ಧಿಕ್ಕರಿಸಿ, ವಿದ್ಯಾರ್ಥಿ ವಿರೋಧಿ ನೀತಿ ಅನುಸರಿಸುತ್ತಿದೆ. ಕೂಡಲೇ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‌ ಪಾಸ್‌ ಸೌಲಭ್ಯ ಒದಗಿಸಬೇಕು.  ಇಲ್ಲದಿದ್ದಲ್ಲಿ ರಾಜ್ಯದ್ಯಾಂತ ತೀವ್ರ ಸ್ವರೂಪದ ಹೋರಾಟ ನಡೆಲಾಗುವುದು ಎಂದು ಎಚ್ಚರಿಸಿದರು.

ಈಗ ಸದ್ಯಕ್ಕೆ ಎಲ್ಲ ವಿದ್ಯಾರ್ಥಿಗಳಿಗೆ ಉಚಿತವಾಗಿ ಬಸ್‌ ಪಾಸ್‌ ಸೌಲಭ್ಯ ಒದಗಿಸುವತನಕ ಹಿಂದಿನ ವರ್ಷದ ಬಸ್‌ಪಾಸ್‌ ಉಪಯೋಗಿಸಲು ಅವಕಾಶ, ಸೆಮಿಸ್ಟರ್‌ ವಿದ್ಯಾರ್ಥಿಗಳಿಗೆ ವರ್ಷದ ಬಸ್‌ ಪಾಸ್‌ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು. ಸಂಘಟನೆಯ ನಾಗಜ್ಯೋತಿ, ಸ್ಮಿತಾ, ತಿಪ್ಪೇಸ್ವಾಮಿ, ಶಶಿಕುಮಾರ್‌, ಗುರು, ಹರಿಪ್ರಸಾದ್‌, ಲಿಂಗರಾಜ್‌, ಸಹನಾ, ಸಂತೋಷ್‌ ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next