ನಿನ್ನೆದುರು ಮಂಡಿಯೂರಿ ಶರಣಾಗಿ ಕುಳಿತಿರುವೆ. ಒಲವ ಈ ಯುದ್ಧದಲಿ ನಾ ನಿನ್ನೆದುರು ಬಲಹೀನ… ಭಾವನೆಗಳ ಬತ್ತಳಿಕೆಯಲಿ ನಿನ್ನ ಒಲವ ಗೆಲ್ಲುವ ಯಾವ ಅಸ್ತ್ರವೂ ಇಲ್ಲ. ಸಂಪೂರ್ಣ ಶರಣಾಗತನಾಗಿರುವೆ…
ಒಲುಮೆಯ ನವಿಲೆ, ಭೂಮಿಯ ಅಗಣಿತ ಜೀವಿಗಳ ನಡುವೆ, ಮಾನವ ದೇಹವ ತಾಳಿ, ಕೋಟ್ಯಂತರ ಹುಡುಗಿಯರ ನಡುವೆ ನಿನ್ನ ಪರಮ ಆತ್ಮದ ಮೋಡಿಗೆ ವಶನಾದವನು ನಾನು. ನಿನ್ನ ಗುಂಗುರು ಕೂದಲಿನ ಮುಂಗುರುಳ ಉರುಳಲ್ಲಿ ನನ್ನ ಈ ಬಡಪಾಯಿ ಹೃದಯ ಸಿಲುಕಿ ಪರಿತಪಿಸುತಿದೆ. ನಿನ್ನ ಕೆನ್ನೆಯ ಚೆಂದದ ಒಲವ ಕುಳಿಯಲಿ ಬಿದ್ದ ಈ ಈಜು ಬಾರದ ಹುಡುಗನ ಕಡೆಗೆ ಈಗಲಾದರೂ ಕೈಚಾಚಿ ಕಾಪಾಡು.
ನಿನ್ನನ್ನು ಕಂಡ ದಿನದಿಂದ, ನನ್ನೆದೆಯಲಿ ಉದಯಿಸುವ ಪ್ರತಿ ಭಾವನೆಗಳು ನಿನ್ನಲ್ಲಿ ಲೀನ. ಮಾತೇ ಬಾರದ ಹೃದಯದಲ್ಲೀಗ, ನಿನ್ನೊಲವ ಹಂಬಲದಿ ಸಾವಿರ ರಾಗ, ಈ ಪುಟ್ಟ ಹೃದಯದ ನಾಲ್ಕು ಕೋಣೆಗಳಲ್ಲಿ ಕೇವಲ ನಿನ್ನ ಹೆಸರಿನ ಓಂಕಾರ. ಹೃದಯದಲಿ ಪ್ರೀತಿಯ ಭಾವನೆಗಳು ಹಸಿರಾಗಿ ಮನದ ತುಂಬೆಲ್ಲಾ ಪ್ರೀತಿಯ ವಸಂತ ಕಾಲ.
ನನ್ನಯ ಪ್ರೇಮದೂರಿಗೆ ಬೆಳದಿಂಗಳ ರಾತ್ರಿಯಲಿ ಮೆರವಣಿಗೆ ಹೊರಟು ಬಿಡು ಹುಡುಗಿ. ನಕ್ಷತ್ರಗಳ ಬಾಡಿಗೆ ಪಡೆದು ರಾತ್ರಿಯಲಿ ನಿನ್ನ ಕಾವಲಿಗಿಡುವೆ. ಚಂದ್ರಮನ ಹೊಳಪ ಕದ್ದು ತಂದು ನೀ ಬರುವ ದಾರಿಯಲಿ ದೀಪವಾಗಿಸುವೆ. ಜಗವು ಕಂಡ ಪವಿತ್ರ ಪ್ರೇಮ ಕಥೆಗಳಲ್ಲಿ ನಮದೊಂದು ಪ್ರೇಮ ಹಣತೆ ಹಚ್ಚೋಣ. ಒಲವಿನ ದೀಪಕೆ ನೀ ಬೆಳಕಾಗು, ನಾ ಹಣತೆಯಾಗಿ ನಿನ್ನ ಹಿಡಿದಿಡುವೆ.
ಸ್ವಾತಿ ಮಳೆ ಹನಿಗಾಗಿ ಕಾದು ಕುಳಿತಿರುವ ಚಿಪ್ಪಿನಂತೆ, ನಿನ್ನೊಲವ ಮಳೆಯ ಹನಿಗಾಗಿ ಕಾದು ಕುಳಿತಿರುವೆನು, ಸುರಿದುಬಿಡು ನೀ ಸೋನೆಯಾಗಿ. ನಿನ್ನನ್ನು ಮುತ್ತಂತೆ ಬಚ್ಚಿಡುವೆ ನನ್ನೆದೆಯ ಚಿಪ್ಪಲಿ.. ಈ ಬಡಪಾಯಿ ಹುಡುಗನ ಇನ್ನೆಷ್ಟು ಕಾಯಿಸುವೆ ? ಒಮ್ಮೆ ನಿನ್ನ ಹೃದಯದ ಕಣ್ಣು ತೆರೆದು ನನ್ನ ಪ್ರೀತಿಯ ನೋಡು. ನಿನ್ನೆದುರು ಮಂಡಿಯೂರಿ ಶರಣಾಗಿ ಕುಳಿತಿರುವೆ.
ಒಲವ ಈ ಯುದ್ಧದಲಿ ನಾ ನಿನ್ನೆದುರು ಬಲಹೀನ.. ಭಾವನೆಗಳ ಬತ್ತಳಿಕೆಯಲಿ ನಿನ್ನ ಒಲವ ಗೆಲ್ಲುವ ಯಾವ ಅಸ್ತ್ರವೂ ಇಲ್ಲ. ಸಂಪೂರ್ಣ ಶರಣಾಗತನಾಗಿರುವೆ. ಒಮ್ಮೆ ಕೈಚಾಚು ನನ್ನೆಡೆಗೆ. ಮೌನದಲ್ಲಾದರೂ ಉತ್ತರಿಸಿ ಬಿಡು. ನಿನ್ನ ಒಂದು ಕಣ್‌ಸನ್ನೆಗೆ ಕಾಯುತ್ತಿದೆ ಈ ಜೀವ. ನೀ ನನ್ನ ಪತ್ರವ ಓದಿದರೂ, ಓದದಿದ್ದರೂ ಕೇವಲ ನಿನಗಾಗಿಯೇ ಬರೆಯುವೆನು… ನೀ ನನ್ನ ಪ್ರೀತಿಸಿದರೂ, ಪ್ರೀತಿಸದಿದ್ದರೂ ಕೇವಲ ನಿನ ಒಲವಿಗಾಗಿಯೇ ಬದುಕುವೆನು.
* ಗಣೇಶ ಆರ್.ಜಿ, ಶಿವಮೊಗ್ಗ.