Advertisement

ಜರ್ಮನಿಗೆ 3ನೇ ಹಾಕಿ ವಿಶ್ವಕಪ್‌; ಪ್ರಶಸ್ತಿ ಉಳಿಸಿಕೊಳ್ಳದ ಬೆಲ್ಜಿಯಂ

10:31 PM Jan 29, 2023 | Team Udayavani |

ಭುವನೇಶ್ವರ: ಜರ್ಮನಿ 3ನೇ ಬಾರಿಗೆ ಹಾಕಿ ವಿಶ್ವಕಪ್‌ ಚಾಂಪಿಯನ್‌ ಪಟ್ಟವನ್ನು ಅಲಂಕರಿಸಿದೆ. ಭಾನು ವಾರ “ಕಳಿಂಗ ಸ್ಟೇಡಿಯಂ’ನಲ್ಲಿ ನಡೆದ ತೀವ್ರ ಪೈಪೋಟಿಯ ಪಂದ್ಯದಲ್ಲಿ ಅದು ಹಾಲಿ ಚಾಂಪಿಯನ್‌ ಬೆಲ್ಜಿಯಂ ವಿರುದ್ಧ ಶೂಟೌಟ್‌ನಲ್ಲಿ ಮೇಲುಗೈ ಸಾಧಿಸಿತು.

Advertisement

ನಿಗದಿತ ಅವಧಿಯಲ್ಲಿ ಪಂದ್ಯ 3-3 ಸಮಬಲದಲ್ಲಿ ನೆಲೆಸಿತ್ತು. ಶೂಟೌಟ್‌ನಲ್ಲಿ ಜರ್ಮನಿ 5-4 ಅಂತರದಿಂದ ಗೆದ್ದು ಬಂದಿತು. ಇದು 2006ರ ಬಳಿಕ ಜರ್ಮನಿಗೆ ಒಲಿದ ಮೊದಲ ಹಾಕಿ ವಿಶ್ವಕಪ್‌. 2002ರಲ್ಲೂ ಚಾಂಪಿಯನ್‌ ಆಗಿದ್ದ ಜರ್ಮನ್‌ ಪಡೆ ಕಪ್‌ ಉಳಿಸಿಕೊಂಡ 3 ತಂಡಗಳಲ್ಲಿ ಒಂದಾಗಿತ್ತು.

ಬೆಲ್ಜಿಯಂ ಆರಂಭದಲ್ಲಿ ಮುನ್ನುಗ್ಗಿ 11 ನಿಮಿಷಗಳಲ್ಲಿ 2 ಗೋಲು ಸಿಡಿಸಿತು. ಜರ್ಮನಿ 29ನೇ, 41ನೇ ಹಾಗೂ 48ನೇ ನಿಮಿಷದಲ್ಲಿ ಗೋಲು ಬಾರಿಸಿ ಮುನ್ನಡೆ ಸಾಧಿಸಿತು. ಪಂದ್ಯದ ಮುಕ್ತಾಯಕ್ಕೆ ಇನ್ನೇನು ಒಂದು ನಿಮಿಷ ಉಳಿದಿರುವಾಗ ಬೆಲ್ಜಿಯಂನ ಟಾಮ್‌ ಬೂನ್‌ ಗೋಲೊಂದನ್ನು ಸಿಡಿಸಿ ಪಂದ್ಯವನ್ನು ಸಮಬಲಕ್ಕೆ ತಂದರು. ಶೂಟೌಟ್‌ನಲ್ಲಿ ಜರ್ಮನಿಗೆ ಅದೃಷ್ಟ ಕೈ ಹಿಡಿಯಿತು. ಈ ಕೂಟದಲ್ಲಿ ಜರ್ಮನಿ 0-2 ಹಿನ್ನಡೆ ಬಳಿಕ ಸಾಧಿಸಿದ 3ನೇ ಗೆಲುವು ಇದಾಗಿದೆ.

ನೆದರ್ಲೆಂಡ್ಸ್‌ಗೆ ಕಂಚು

ವಿಶ್ವಕಪ್‌ ಹಾಕಿ ಪಂದ್ಯಾವಳಿಯ ಕಂಚಿನ ಪದಕ ನೆದರ್ಲೆಂಡ್ಸ್‌ಗೆ ಒಲಿಯಿತು. ಫೈನಲ್‌ಗ‌ೂ ಮೊದಲು ನಡೆದ ತೃತೀಯ ಸ್ಥಾನದ ಸ್ಪರ್ಧೆಯಲ್ಲಿ ಡಚ್‌ ಪಡೆ 3-1 ಗೋಲುಗಳಿಂದ ವಿಶ್ವದ ನಂ.1 ತಂಡವಾದ ಆಸ್ಟ್ರೇಲಿಯವನ್ನು ಹಿಮ್ಮೆಟ್ಟಿಸಿ ಸತತ 4ನೇ ಸಲ ಪೋಡಿಯಂ ಏರಿತು.

Advertisement

ನೆದರ್ಲೆಂಡ್ಸ್‌ ನಾಯಕ ಥಿಯರಿ ಬ್ರಿಂಕ್‌ಮ್ಯಾನ್‌ 2 ಗೋಲು ಸಿಡಿಸಿ ಗೆಲುವಿನ ಹೀರೋ ಎನಿಸಿದರು (35ನೇ ಹಾಗೂ 40ನೇ ನಿಮಿಷ). ಇದಕ್ಕೂ ಮುನ್ನ ಪೆನಾಲ್ಟಿ ಕಾರ್ನರ್‌ ಎಕ್ಸ್‌ಪರ್ಟ್‌ ಜಿಪ್‌ ಜಾನ್ಸೆನ್‌ ಖಾತೆ ತೆರೆದಿದ್ದರು.

ಆಸ್ಟ್ರೇಲಿಯ 13ನೇ ನಿಮಿಷದಲ್ಲೇ ಗೋಲು ಬಾರಿಸಿ ಮುನ್ನಡೆ ಸಾಧಿಸಿತ್ತು. ಆದರೆ ಕಾಂಗರೂ ತಾಕತ್ತು ಮೊದಲ ಕ್ವಾರ್ಟರ್‌ಗಷ್ಟೇ ಮೀಸಲಾಯಿತು.

ಎರಡೂ ತಂಡಗಳು 3 ಸಲ ವಿಶ್ವಕಪ್‌ ಗೆದ್ದಿವೆ. ನೆದರ್ಲೆಂಡ್ಸ್‌ 2010ರಲ್ಲಿ ಕಂಚು, 2014 ಮತ್ತು 2018ರಲ್ಲಿ ಬೆಳ್ಳಿ ಜಯಿಸಿತ್ತು. ಆಸ್ಟ್ರೇಲಿಯ 1998ರ ಬಳಿಕ ಬರಿಗೈಯಲ್ಲಿ ಮನೆಗೆ ಮರಳಿತು.

Advertisement

Udayavani is now on Telegram. Click here to join our channel and stay updated with the latest news.

Next