Advertisement

ಜರ್ಮನ್‌ ದೇಶದ‌ ಕತೆ: ರಾಕ್ಷಸಿಯ ಮನೆ

06:00 AM Aug 12, 2018 | |

ಒಂದು ಹಳ್ಳಿಯಲ್ಲಿ ಜೇಕಬ್‌ ಎಂಬ ಮರ ಕಡಿಯುವವನಿದ್ದ. ಅವನಿಗೆ ಜಾನಿ ಎಂಬ ಮಗ, ಜಾಲಿ ಎಂಬ ಮಗಳು ಇದ್ದರು. ಅವನು ಮಕ್ಕಳನ್ನು ಪ್ರೀತಿಯಿಂದ ಸಾಕುತ್ತಿದ್ದ. ಒಂದು ದಿನ ಇದ್ದಕ್ಕಿದ್ದಂತೆ ಅವನ ಹೆಂಡತಿ ಸತ್ತುಹೋದಳು. ಜೇಕಬ್‌ ಮೇರಿ ಎಂಬವಳನ್ನು ಮದುವೆಯಾದ. ಅವಳಿಗೆ ಗಂಡನ ಮಕ್ಕಳು ತಮ್ಮ ಜೊತೆಗಿರುವುದು ಸ್ವಲ್ಪವೂ ಇಷ್ಟವಿರಲಿಲ್ಲ. ಅವರನ್ನು ಮನೆಯಿಂದ ಓಡಿಸಲು ದಾರಿ ಕಾಯುತ್ತ ಇದ್ದಳು. ಅವಳಿಗೆ ಅನುಕೂಲ ಮಾಡಿ ಕೊಡಲು ಎಂಬಂತೆ ಊರಿಗೆ ಬರಗಾಲ ಬಂದಿತು. ಎಲ್ಲಿ ಹೋದರೂ ಹಿಡಿ ಧಾನ್ಯ ಸಿಗುತ್ತಿರಲಿಲ್ಲ. ಕುಡಿಯಲು ಸಿಹಿ ನೀರಿರಲಿಲ್ಲ. ಮೇರಿ ಗಂಡನೊಂದಿಗೆ, “”ನಿನ್ನ ಮಕ್ಕಳು ಜೊತೆಗಿದ್ದರೆ ನಾವೆಲ್ಲರೂ ಉಪವಾಸ ಸಾಯಬೇಕಾಗುತ್ತದೆ. ಅವರನ್ನು ಕಾಡಿಗೆ ಕರೆದುಕೊಂಡು ಹೋಗಿ ಬಿಟ್ಟು ಬಾ” ಎಂದು ಹೇಳಿದಳು.

Advertisement

    ಈ ಮಾತು ಕೇಳಿ ಜೇಕಬ್‌ ದುಃಖಪಟ್ಟ. “”ಏನೂ ಅರಿಯದ ಮಕ್ಕಳನ್ನು ಕಾಡಿನಲ್ಲಿ ಬಿಟ್ಟು ಬರುವುದೆ?” ಎಂದು ಕೇಳಿದ. “”ಹೌದು, ಸಂಜೆ ಕೊಡಲಿ ತೆಗೆದುಕೊಂಡು ಕಾಡಿಗೆ ಹೊರಡು. ಮಕ್ಕಳನ್ನು ಕಾಡು ನೋಡಲೆಂದು ಜೊತೆಗೆ ಕರೆದುಕೋ. ಅವರಿಗೆ ಮರಳಿ ಬರಲು ದಾರಿ ಸಿಗದ ಸ್ಥಳದಲ್ಲಿ ಒಂದು ಒಣಮರಕ್ಕೆ ಬೆಂಕಿ ಹಚ್ಚಿ ಅಲ್ಲಿ ಮಲಗಿಸು. ಕಟ್ಟಿಗೆ ಕಡಿಯಲು ಹೋಗುತ್ತಿದ್ದೇನೆ, ಮರಳಿ ಬರುವಾಗ ನಿಮ್ಮನ್ನು ಕರೆದುಕೊಂಡು ಹೋಗುತ್ತೇನೆ ಎಂದು ಹೇಳು. ಸ್ವಲ್ಪ$ ಹೊತ್ತು ಕಟ್ಟಿಗೆಯಿಂದ ಕಡಿದ ಹಾಗೆ ಶಬ್ದ ಮಾಡುತ್ತಿರು. ಮಕ್ಕಳು ನಿದ್ರೆ ಹೋದ ಬಳಿಕ ತಿರುಗಿಯೂ ನೋಡದೆ ಮನೆಗೆ ಬಂದುಬಿಡು” ಎಂದು ಹೇಳಿದಳು ಮೇರಿ.

    ಹೆಂಡತಿಯ ಮಾತನ್ನು ಮೀರುವ ಧೈರ್ಯವಿಲ್ಲದೆ ಜೇಕಬ್‌ ಮಕ್ಕಳನ್ನು ಕರೆದುಕೊಂಡು ಕಾಡಿಗೆ ಹೊರಟ. ಮೇರಿ ಕಾಡಿನಲ್ಲಿ ತಿನ್ನಲೆಂದು ಮಕ್ಕಳ ಕೈಗೆ ಒಂದು ಬ್ರೆಡ್‌ ಕೊಟ್ಟಳು. ಮುಂದೆ ಹೋಗುವಾಗ ಮಕ್ಕಳಿಗೆ ಹಸಿದ ಬಾತುಕೋಳಿಯೊಂದು ಕಾಣಿಸಿತು. ಒಂದು ತುಂಡು ಬ್ರೆಡ್‌ ಅದರ ಮುಂದೆ ಹಾಕಿದರು. ಜೇಕಬ್‌ ಗೊಂಡಾರಣ್ಯದ ನಡುವೆ ತಲುಪುವಾಗ ಕಡು ಕತ್ತಲಾಗಿತ್ತು. ಹೆಂಡತಿ ಹೇಳಿದಂತೆ ಒಣಮರಕ್ಕೆ ಬೆಂಕಿ ಹಚ್ಚಿ ಅದರ ಬಳಿ ಮಕ್ಕಳನ್ನು ಮಲಗಿಸಿದ. “”ಸೌದೆ ಕಡಿದು ಬರುತ್ತೇನೆ. ಆಮೇಲೆ ಜೊತೆಯಾಗಿ ಮನೆಗೆ ಹೋಗೋಣ” ಎಂದು ಹೇಳಿದ. ದೂರದಲ್ಲಿ ಕೊಡಲಿಯಿಂದ ಕಡಿಯುವಂತೆ ಸದ್ದು ಮಾಡುತ್ತ ನಿಂತ. ಮಕ್ಕಳು ನಿದ್ರೆ ಹೋದರು. ಜೇಕಬ್‌ ಸದ್ದಿಲ್ಲದೆ ಮನೆಗೆ ಬಂದುಬಿಟ್ಟ.

    ನಡು ರಾತ್ರೆಯಲ್ಲಿ ಮಕ್ಕಳಿಗೆ ಎಚ್ಚರವಾಯಿತು. ಮರ ಕಡಿಯುವ ಸದ್ದು ಕೇಳಿಸುತ್ತಿರಲಿಲ್ಲ. ತಂದೆ ತಮ್ಮ ನೆನಪಿಲ್ಲದೆ ಮನೆಗೆ ಹೋಗಿರಬೇಕೆಂದು ಅವರು ಭಾವಿಸಿದರು. ಆಕಾಶದಲ್ಲಿ ಚಂದ್ರ ಬೆಳಗುತ್ತ ಇದ್ದ. ಅವನೊಂದಿಗೆ ತಮಗೆ ಮನೆಗೆ ಹೋಗಲು ದಾರಿ ತೋರಿಸುವಂತೆ ಕೇಳಿಕೊಂಡರು. ಆಗ ಅವರು ಬ್ರೆಡ್‌ ಹಾಕಿದ್ದ ಬಾತುಕೋಳಿ ಎಲ್ಲಿಂದಲೋ ಓಡುತ್ತ ಅವರ ಬಳಿಗೆ ಬಂದಿತು. ತನ್ನ ಬೆನ್ನಿನ ಮೇಲೇರಲು ಸೂಚಿಸಿತು. ಅದರ ಬೆನ್ನಿನ ಮೇಲೆ ಕುಳಿತು ಬೆಳಗಾಗುವಾಗ ಮಕ್ಕಳು ಮನೆಗೆ ತಲುಪಿದರು.

    ಮರಳಿ ಬಂದ ಮಕ್ಕಳನ್ನು ಕಂಡು ಜೇಕಬ್‌ ಸಂಭ್ರಮದಿಂದ ಅಪ್ಪಿಕೊಂಡ. ಆದರೆ ಮೇರಿಗೆ ಬಂದ ಕೋಪ ಅಷ್ಟಿಷ್ಟಲ್ಲ. ಗಂಡನನ್ನು ಒಳಗೆ ಕರೆದು, “”ಮಕ್ಕಳನ್ನು ಹತ್ತಿರದಲ್ಲೇ ಬಿಟ್ಟು ಬಂದಿರುವಂತಿದೆ. ಈ ದಿನ ಮತ್ತೆ ಕಾಡಿನಲ್ಲಿ ಬಿಟ್ಟು ಬಂದುಬಿಡು. ತಪ್ಪಿದರೆ ನಾನು ನಿನ್ನನ್ನು ಬಿಟ್ಟು ಹೊರಟುಹೋಗುತ್ತೇನೆ” ಎಂದಳು. ಅಂದು ಸಂಜೆ ಮಕ್ಕಳು ತಂದೆಯೊಂದಿಗೆ ಮತ್ತೆ ಕಾಡಿಗೆ ಹೊರಟಾಗ ಮೇರಿ ಅವರಿಗೆ ತಿನ್ನಲು ಏನನ್ನೂ ಕೊಡಲಿಲ್ಲ. ಜೇಕಬ್‌ ಮಕ್ಕಳೊಂದಿಗೆ ಇನ್ನೊಂದು ಕಾಡಿಗೆ ಹೋದ. ಒಣಮರವೊಂದಕ್ಕೆ ಬೆಂಕಿ ಹಚ್ಚಿ ಮಲಗಲು ಹೇಳಿದ. “”ಬೆಳಗಾದ ಮೇಲೆ ಇಲ್ಲಿಂದ ಹೋಗೋಣ. ನಾನು ನಿಮಗೊಂದು ಕತೆ ಹೇಳುತ್ತೇನೆ. ಕತೆ ಕೇಳುತ್ತ ನಿದ್ರೆ ಮಾಡಿ” ಎಂದು ಹೇಳಿ ಮಕ್ಕಳ ಬಳಿ ತಾನೂ ಮಲಗಿಕೊಂಡ. ಮಕ್ಕಳು ನಿದ್ರೆಹೋದರು. ಜೇಕಬ್‌ ಮಕ್ಕಳನ್ನು ಕಾಡಿನಲ್ಲಿ ಬಿಟ್ಟು ಮನೆ ಸೇರಿಕೊಂಡ.

Advertisement

    ಮಧ್ಯರಾತ್ರೆ ಮಕ್ಕಳಿಗೆ ಎಚ್ಚರವಾದಾಗ ತಂದೆ ಪಕ್ಕದಲ್ಲಿರಲಿಲ್ಲ. ಕೂಗಿದರೆ ಉತ್ತರ ಬರಲಿಲ್ಲ. ಆಕಾಶಕ್ಕೆ ನೋಡಿದರೆ ಮೋಡಗಳೊಳಗೆ ಹುದುಗಿದ್ದ ಚಂದ್ರನು ಕಾಣಿಸಲಿಲ್ಲ. ಇನ್ನು ತಾವೇ ದಾರಿ ಹುಡುಕುತ್ತ ಮನೆಗೆ ಹೋಗುವುದೆಂದು ನಿರ್ಧರಿಸಿದರು. ಕತ್ತಲಿನಲ್ಲಿ ಪರದಾಡಿಕೊಂಡು ಮುಂದೆ ನಡೆಯತೊಡಗಿದರು. ಆಗ ಒಂದು ಬೆಳಕು ಗೋಚರಿಸಿತು. ಅದೇನೆಂದು ನೋಡಲು ಬೆಳಕಿನ ಸನಿಹ ಹೋದಾಗ ಅಲ್ಲೊಂದು ವಿಚಿತ್ರವಾದ ಮನೆ ಕಾಣಿಸಿತು. ಮನೆಯ ಛಾವಣಿಗೆ ಸಿಹಿಯಾದ ಹೋಳಿಗೆಗಳನ್ನು ಮುಚ್ಚಿದ್ದರು. ಬಾಗಿಲು ಸಕ್ಕರೆ ಗಟ್ಟಿಗಳಿಂದ ಸಿದ್ಧವಾಗಿತ್ತು. ಜಿಲೇಬಿಗಳಿಂದ ತಯಾರಿಸಿದ ಕಿಟಕಿಗಳಿದ್ದವು. ಹೀಗೆ ಮನೆಯ ಎಲ್ಲ ಪರಿಕರಗಳನ್ನೂ ಘಮಘಮಿಸುವ ತಿಂಡಿಗಳಿಂದಲೇ ತಯಾರಿಸಿರುವುದು ಗೋಚರಿಸಿತು. ಹಸಿದಿದ್ದ ಮಕ್ಕಳು ತಿಂಡಿಗಳನ್ನು ಕಿತ್ತು ತಿಂದು ಹೊಟ್ಟೆ ತುಂಬಿಸಿಕೊಂಡರು.

    ಆಗ ಮನೆಯೊಳಗಿಂದ ಕುರೂಪಿಯಾದ ದೈತ್ಯ ಮುದುಕಿಯೊಬ್ಬಳು ಹೊರಗೆ ಬಂದಳು. ಮಕ್ಕಳನ್ನು ಕಂಡು ಬಾಯಿಯಲ್ಲಿ ನೀರೂರಿಸಿಕೊಂಡೇ ಮಾತನಾಡಿದಳು. “”ಮಕ್ಕಳೇ, ಒಳಗೆ ಬನ್ನಿ. ಬೇಕಾದುದನ್ನೆಲ್ಲ ಹೊಟ್ಟೆ ತುಂಬ ತಿನ್ನಿ” ಎಂದು ಉಪಚರಿಸುತ್ತ ಮುದ್ದೆ ಬೆಣ್ಣೆ ಕೊಟ್ಟಳು. ಸಿಹಿ ಭಕ್ಷ್ಯಗಳನ್ನು ತಿನ್ನಲು ಕೊಟ್ಟು ಮನ ತಣಿಸಿದಳು. ಆಮೇಲೆ ಒಂದು ದೊಡ್ಡ ಬೆಂಕಿಯ ರಾಶಿ ಉರಿಯುವ ಜಾಗಕ್ಕೆ ಕರೆದುಕೊಂಡು ಹೋಗಿ ಅಲ್ಲಿ ನಿಲ್ಲಿಸಿ, ತಾನು ಸ್ನಾನ ಮಾಡಿ ಬರುವುದಾಗಿ ಹೊರಟುಹೋದಳು.

    ಬೆಂಕಿಯ ಬಳಿ ನಿಂತಿದ್ದ ಮಕ್ಕಳಿಗೆ ಯಾರೋ ಕೀರಲು ದನಿಯಿಂದ, “”ತಿನ್ನಿ ಮಕ್ಕಳೇ ತಿನ್ನಿ, ಇದು ನಿಮ್ಮ ಕೊನೆಯ ಊಟ” ಎಂದು ಹೇಳಿದ ಹಾಗಾಯಿತು. ಅಚ್ಚರಿಯಿಂದ ಅವರು ತಿರುಗಿ ನೋಡಿದರೆ ಪಂಜರದೊಳಗಿದ್ದ ಒಂದು ಗಿಣಿ ಹಾಗೆ ಹೇಳಿರುವುದು ತಿಳಿಯಿತು. ಅವರು, “”ಇದು ನಮ್ಮ ಕೊನೆಯ ಊಟ ಹೇಗಾಗುತ್ತದೆ?” ಎಂದು ಕೇಳಿದರು. ಗಿಣಿಯು, “”ಸ್ನಾನ ಮಾಡಿ ಬರುತ್ತಾಳಲ್ಲ, ಆ ಮುದುಕಿ ಕೆಟ್ಟ ರಾಕ್ಷಸಿ. ಮನುಷ್ಯರನ್ನು ಆಕರ್ಷಿಸಲೆಂದು ತಿಂಡಿಗಳಿಂದ ಮನೆ ಕಟ್ಟಿಕೊಂಡಿದ್ದಾಳೆ. ಅವಳ ಈಗ ಬಂದು ನಿಮ್ಮನ್ನು ಬೆಂಕಿಗೆ ಹಾರುವಂತೆ ಹೇಳುತ್ತಾಳೆ. ನಿಮ್ಮನ್ನು ಕೈಯಿಂದ ಅವಳು ಮುಟ್ಟಿದರೆ ಸತ್ತುಹೋಗುವ ಕಾರಣ ಮುಟ್ಟುವುದಿಲ್ಲ. ಬೆಂಕಿಯಲ್ಲಿ ಬೆಂದ ನೀವು ಅವಳಿಗೆ ಆಹಾರವಾಗುವ ನೂರನೆಯ ಮನುಷ್ಯರಾಗುತ್ತೀರಿ. ಇದರಿಂದಾಗಿ ಅವಳು ಈ ದೇಶದ ರಾಣಿಯಾಗಿ ಆಳುತ್ತಾಳೆ” ಎಂದು ಹೇಳಿತು.

    ಮುಂದೇನು ಮಾಡುವುದೆಂದು ಮಕ್ಕಳು ಯೋಚಿಸುತ್ತ ನಿಂತಾಗ ರಾಕ್ಷಸಿ ಸ್ನಾನ ಮುಗಿಸಿ ಬಂದಳು. ಮಕ್ಕಳೊಂದಿಗೆ, “”ಬನ್ನಿ, ಈ ಬೆಂಕಿಗೆ ಹಾರಿ. ಇದರಿಂದ ನಿಮಗೆ ಆಕಾಶಮಾರ್ಗದಲ್ಲಿ ಹಾರುವ ಶಕ್ತಿ ಬರುತ್ತದೆ” ಎಂದು ಸವಿಮಾತಿನಿಂದ ಕರೆದಳು. ಮಕ್ಕಳು, “”ನಮಗೆ ಹಾರುವ ಶಕ್ತಿ ಬರುತ್ತದೆಯೆ? ತುಂಬ ಸಂತೋಷ. ಆದರೆ ಹಾರುವ ವಿಧಾನ ಹೇಗೆಂದು ಗೊತ್ತಿಲ್ಲ. ಎಲ್ಲಿ ನಿಲ್ಲಬೇಕು, ಏನು ಮಾಡಬೇಕೆಂದು ಹೇಳಿದೆಯಾದರೆ ನಾವು ಹಾಗೆಯೇ ಮಾಡುತ್ತೇವೆ” ಎಂದು ಹೇಳಿದರು. ರಾಕ್ಷಸಿ ಬೆಂಕಿಯ ಎದುರು ನಿಂತು, ಅವರಿಗೆ ವಿವರಿಸುತ್ತಿರುವಾಗಲೇ ಮಕ್ಕಳಿಬ್ಬರೂ ಅವಳನ್ನು ಬಲವಾಗಿ ತಳ್ಳಿಬಿಟ್ಟರು. ಬೆಂಕಿಯ ರಾಶಿಗೆ ಬಿದ್ದ ರಾಕ್ಷಸಿ ಧಗಧಗನೆ ಉರಿದು ಬೂದಿಯಾದಳು. ಮರಕ್ಷಣವೇ ಅವಳ ದೇಹದ ಭಾಗಗಳು ಮುತ್ತು, ರತ್ನ, ವಜ್ರ, ವೈಢೂರ್ಯಗಳಿರುವ ಬಂಗಾರದ ಒಡವೆಗಳಾಗಿ ಬದಲಾಯಿಸಿದವು. ಅಷ್ಟೇ ಅಲ್ಲ, ಪಂಜರದೊಳಗಿದ್ದ ಗಿಣಿ ಮಾಯವಾಗಿ ಅಲ್ಲೊಬ್ಬ ರಾಜಕುಮಾರ ನಿಂತಿದ್ದ. ಅವನು ಮಕ್ಕಳಿಗೆ ಕೃತಜ್ಞತೆ ಹೇಳಿದ. “”ರಾಕ್ಷಸಿ ನನ್ನನ್ನು ಗಿಣಿಯನ್ನಾಗಿ ಮಾಡಿ ರಾಜ್ಯವನ್ನು ಆಳುವ ಹಂಚಿಕೆ ಹೂಡಿದ್ದಳು. ನಿಮ್ಮಿಂದಾಗಿ ನನಗೆ ಮೊದಲಿನ ಜನ್ಮ ಬಂದಿತು” ಎಂದು ಅವರನ್ನು ಅಭಿನಂದಿಸಿದ.

    ಮಕ್ಕಳು ಅಲ್ಲಿರುವ ಒಡವೆಗಳನ್ನು ಗಂಟು ಕಟ್ಟಿಕೊಂಡರು. ಆಗ ಬಾತುಕೋಳಿ ಅವರ ಬಳಿಗೆ ಬಂದಿತು. ಅದರ ಬೆನ್ನಿನ ಮೇಲೆ ಕುಳಿತು ಮನೆಗೆ ಬಂದರು. ನಡೆದ ಕತೆ ಕೇಳಿ ಮೇರಿ ತಾನು ಅಲ್ಲಿ ಉಳಿದಿರುವ ಒಡವೆಗಳನ್ನು ತರುತ್ತೇನೆಂದು ಹೇಳಿ ಕಾಡಿನ ಹಾದಿ ಹಿಡಿದಳು. ಆದರೆ ಏನಾದಳ್ಳೋ ಗೊತ್ತಿಲ್ಲ, ಮರಳಿ ಬರಲೇ ಇಲ್ಲ. ಮಕ್ಕಳು ತಂದೆಯೊಂದಿಗೆ ಸುಖವಾಗಿದ್ದರು.

ಪ. ರಾಮಕೃಷ್ಣ ಶಾಸ್ತ್ರಿ

Advertisement

Udayavani is now on Telegram. Click here to join our channel and stay updated with the latest news.

Next