Advertisement

ವರ್ಷದ ಹಿಂದಷ್ಟೇ ಜರ್ಮನ್‌ ಪೌರತ್ವ

02:35 AM Mar 31, 2019 | Team Udayavani |

ಕುಂದಾಪುರ/ಸಿದ್ದಾಪುರ: ಜರ್ಮನಿಯ ಮ್ಯೂನಿಚ್‌ನಲ್ಲಿ ಇರಿತಕ್ಕೊಳಗಾಗಿ ಮೃತಪಟ್ಟ ಪ್ರಶಾಂತ್‌ (49) ಸಾಗರ ಮೂಲದವರಾಗಿದ್ದು, ಬಸ್ರೂರು, ಕುಂದಾಪುರಗಳಲ್ಲಿ ನೆಲೆಸಿದ್ದರು. ತೀವ್ರವಾಗಿ ಗಾಯ ಗೊಂಡಿರುವ ಅವರ ಪತ್ನಿ ಸ್ಮಿತಾ (42) ಸಿದ್ದಾಪುರದ ಆಯುರ್ವೇದ ವೈದ್ಯ ಡಾ| ಚಂದ್ರಮೌಳಿ ಹಾಗೂ ವಿದ್ಯಾದಾಯಿನಿ ದಂಪತಿಯ ಪುತ್ರಿ.

Advertisement

ಬಾಲಕಿ ಸಾಕ್ಷಿ (15) ಮತ್ತು ಬಾಲಕ ಶ್ಲೋಕ್‌ (10) ಪ್ರಶಾಂತ್‌- ಸ್ಮಿತಾ ದಂಪತಿಯ ಮಕ್ಕಳು.

ಪ್ರಶಾಂತ್‌ ಎಂಜಿನಿಯರಿಂಗ್‌ ಪದವೀಧರರಾಗಿದ್ದು, ಹಲವು ವರ್ಷಗಳಿಂದ ಜರ್ಮನಿಯಲ್ಲಿ ಉದ್ಯೋಗಿಯಾಗಿದ್ದಾರೆ. 22 ವರ್ಷಗಳ ಹಿಂದೆ ಸ್ಮಿತಾ ಅವರ ಜತೆ ವಿವಾಹವಾಗಿತ್ತು. ಕಳೆದ ವರ್ಷವಷ್ಟೇ ಜರ್ಮನಿಯ ಪೌರತ್ವ ಸಿಕ್ಕಿತ್ತು.

ಪ್ರಶಾಂತ್‌ ಮೂಲ ಬಸ್ರೂರು
ಪ್ರಶಾಂತ್‌ ಅವರ ತಂದೆ ದಿ| ಬಿ.ಎನ್‌. ವೆಂಕಟರಮಣ (ಪಾಪಣ್ಣ) ಮತ್ತು ತಾಯಿ ವಿನಯಾ (ಬೇಬಿ) ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರದವರು. ವ್ಯವಹಾರ ಮತ್ತು ಕೃಷಿ ಕಾರ್ಯಗಳಿಗಾಗಿ ಅವರು ಕುಟುಂಬ ಸಹಿತರಾಗಿ ಸಾಗರ ದಲ್ಲಿ ನೆಲೆಸಿದ್ದರು. ವೆಂಕಟರಮಣ ಅವರ ಪೂರ್ವಿಕರ ಮೂಲ ಬಸ್ರೂರು.

10 ವರ್ಷಗಳಿಂದ ಕುಂದಾಪುರದ ಕುಂದೇಶ್ವರದಲ್ಲಿ ಮನೆ ಕಟ್ಟಿಸಿದ್ದು, ಅಲ್ಲಿ ಪ್ರಶಾಂತ್‌ ತಾಯಿ ವಿನಯಾ ವಾಸಿಸು ತ್ತಿದ್ದಾರೆ. ತಂದೆ – ತಾಯಿಗೆ ಪ್ರಶಾಂತ್‌ ಸಹಿತ ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿ. ಪ್ರಶಾಂತ್‌ ಸಾಗರದಲ್ಲಿ ಡಿಪ್ಲೊಮಾ ಮುಗಿಸಿ, ನಿಟ್ಟೆಯಲ್ಲಿ ಎಂಜಿನಿಯರಿಂಗ್‌ ವ್ಯಾಸಂಗ ಮಾಡಿ, ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಉದ್ಯೋಗದಲ್ಲಿದ್ದರು.

Advertisement

ಪ್ರಶಾಂತ್‌ ಅವರ ತಾಯಿ ವಿನಯಾ (ಬೇಬಿ) ಹಿಂದೊಮ್ಮೆ ಮಗನ ಜತೆಗೆ ಜರ್ಮನಿಗೆ ತೆರಳಿದ್ದರೂ ಅಲ್ಲಿನ ವಾತಾವರಣ, ಆಹಾರ ಹೊಂದಿಕೆ ಆಗದ ಕಾರಣ ಮತ್ತೆ ಊರಿಗೆ ಬಂದು ಕುಂದಾಪುರದಲ್ಲಿ ಒಬ್ಬರೇ ನೆಲೆಸಿದ್ದರು. ಕೆಲವು ದಿನ ಉಡುಪಿಯಲ್ಲಿರುವ ಪುತ್ರಿಯ ಮನೆಗೆ ತೆರಳಿದರೆ, ಕೆಲವು ದಿನ ಕುಂದಾಪುರದಲ್ಲಿರುತ್ತಾರೆ.

ಸ್ಮಿತಾ ಸಿದ್ದಾಪುರದವರು
ಸ್ಮಿತಾ ಅವರು ಸಿದ್ದಾಪುರದ ಆಯು ರ್ವೇದ ವೈದ್ಯ ಡಾ| ಚಂದ್ರಮೌಳಿ ಮತ್ತು ವಿದ್ಯಾದಾಯಿನಿ ದಂಪತಿಯ ಪುತ್ರಿ. ಸ್ಮಿತಾ ಅವರು ಕುಂದಾಪುರದ ಭಂಡಾರ್‌ಕಾರ್ ಕಾಲೇಜಿನಲ್ಲಿ ಪದವಿ ಮುಗಿಸಿ, ಮಂಗಳೂರು ವಿ.ವಿ.ಯಿಂದ ಎಂ.ಎ. ಸ್ನಾತಕೋತ್ತರ ಪದವೀಧರೆಯಾಗಿದ್ದು, ಪತಿಯ ಕಂಪೆನಿಯಲ್ಲಿಯೇ ಉದ್ಯೋಗಿಯಾಗಿದ್ದಾರೆ.

ಸಂಬಂಧಿಕರಿಂದ ಸಾಂತ್ವನ
ವಿಚಾರ ತಿಳಿಯುತ್ತಿದ್ದಂತೆ ಸ್ಮಿತಾ ಅವರ ಸಿದ್ದಾಪುರದ ಮನೆಗೆ ಅನೇಕ ಮಂದಿ ಸಂಬಂಧಿಕರು ಬಂದು, ತಂದೆ- ತಾಯಿಗೆ ಸಾಂತ್ವನ ಹೇಳುತ್ತಿದ್ದುದು ಕಂಡುಬಂತು.

ಮುಂದಿನ ತಿಂಗಳು ಬರುವವರಿದ್ದರು
ಮಾವ ಡಾ| ಚಂದ್ರಮೌಳಿ ಮತ್ತು ಅತ್ತೆ ವಿದ್ಯಾದಾಯಿನಿ ಅವರನ್ನು ಜರ್ಮನಿಗೆ ಕರೆದುಕೊಂಡು ಹೋಗಲು ಎಪ್ರಿಲ್‌ 9ರಂದು ಪ್ರಶಾಂತ್‌ ಊರಿಗೆ ಬರುವವರಿದ್ದರು. ಅಷ್ಟರೊಳಗೆ ವಿಧಿಯಾಟಕ್ಕೆ ಸಿಲುಕಿ ಸಾವನ್ನಪ್ಪಿದ್ದು ಮಾತ್ರ ದುರದೃಷ್ಟಕರ.

ಹೆಗ್ಡೆ ಸ್ಪಂದನೆ
ಪ್ರಶಾಂತ್‌ ಅವರ ತಾಯಿ ವಿನಯಾ ಅವರ ಪಾಸ್‌ಪೋರ್ಟ್‌ ಅವಧಿ ಮುಗಿದಿದ್ದು, ಜರ್ಮನ್‌ ಕಾನೂನಿಗೆ ಅನುಗುಣವಾಗಿ ಅವರು ವಿದೇಶಕ್ಕೆ ತೆರಳುವ ಅನಿವಾರ್ಯತೆ ಇದ್ದಲ್ಲಿ, ತಾಂತ್ರಿಕ ಸಮಸ್ಯೆ ಉಂಟಾಗುತ್ತದೆ ಎನ್ನುವ ಕಾರಣಕ್ಕಾಗಿ ಕುಟುಂಬ ಸದಸ್ಯರು ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಅವರನ್ನು ಸಂಪರ್ಕಿಸಿದ್ದರು. ಕೂಡಲೇ ಸ್ಪಂದಿಸಿದ ಹೆಗ್ಡೆ ಅವರು, ತ್ವರಿತಗತಿಯಲ್ಲಿ ಪಾಸ್‌ಪೋರ್ಟ್‌ ನವೀಕರಣಕ್ಕೆ ಮಾಹಿತಿ ಕಲೆಹಾಕಿದರು. ಸೋಮವಾರ ಬೆಂಗಳೂರಿಗೆ ಬನ್ನಿ, ಸ್ವತಃ ನಿಮ್ಮೊಂದಿಗೆ ಬರುತ್ತೇನೆ ಎಂದಿದ್ದಾರೆ. ಎಸ್‌ಪಿ ನಿಶಾ ಜೇಮ್ಸ್‌ ಕೂಡ ಪ್ರಶಾಂತ್‌ ಮತ್ತು ಸ್ಮಿತಾ ಅವರ ಸಂಬಂಧಿಕರ ಜತೆ ಮಾತುಕತೆ ನಡೆಸಿದ್ದಾರೆ.

ಸ್ನೇಹಿತರ ಆರೈಕೆಯಲ್ಲಿ ಮಕ್ಕಳು
ಪ್ರಶಾಂತ್‌ – ಸ್ಮಿತಾ ಮಕ್ಕಳು ಸದ್ಯ ಪ್ರಶಾಂತ್‌ ಅವರ ಸ್ನೇಹಿತರೊಂದಿಗೆ ಇದ್ದಾರೆ. ಪ್ರಶಾಂತ್‌ ಅವರ ತಾಯಿ ವಿನಯಾ ಉಡುಪಿಯಿಂದ ಬೆಂಗಳೂರಿಗೆ ಹೊರಟಿದ್ದಾರೆ. ನಾವು ಇಲ್ಲಿಂದ ಜರ್ಮನಿಗೆ ತೆರಳಲು ಸಿದ್ಧತೆ ನಡೆಸಿದ್ದೇವೆ ಎಂದು ಪ್ರಶಾಂತ್‌ ಸಹೋದರ ಪ್ರಭಾತ್‌ ಅವರ ಪತ್ನಿ ಸುಷ್ಮಾ ಅವರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ.

ತತ್‌ಕ್ಷಣ ಸ್ಪಂದಿಸಿದ ಕೇಂದ್ರ ಸರಕಾರ
ಭಾರತೀಯ ಪ್ರಜೆಗಳ ಮೇಲೆ ನಡೆದ ದಾಳಿ ವಿಚಾರ ತಿಳಿದು ತತ್‌ಕ್ಷಣ
ಸ್ಪಂದಿಸಿದ ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಸರಣಿ ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ. ಅವರ ಕುಟುಂಬಿಕರು ವಿದೇಶಕ್ಕೆ ತೆರಳಲು ಇಲಾಖೆಯಿಂದ ವ್ಯವಸ್ಥೆಗಳನ್ನು ಮಾಡಿದ್ದಾರೆ. ತ್ವರಿತವಾಗಿ ಸ್ಪಂದಿಸಿದ ಅಲ್ಲಿನ ಭಾರತೀಯ ರಾಯಭಾರಿ ಕಚೇರಿ ಅಧಿಕಾರಿಗಳನ್ನು ಸುಷ್ಮಾ ಅವರು ಟ್ವೀಟ್‌ ಮೂಲಕ ಅಭಿನಂದಿಸಿದ್ದಾರೆ.

ಕುಟುಂಬಿಕರು ನಾಳೆ ಜರ್ಮನಿಗೆ?
ನಡೆದ ದುರ್ಘ‌ಟನೆಯ ಮಾಹಿತಿ ಲಭಿಸಿದ ಕ್ಷಣದಿಂದ ನಾವೆಲ್ಲರೂ ತೀವ್ರ ದುಃಖದಲ್ಲಿದ್ದೇವೆ. ರವಿವಾರ ಜರ್ಮನಿಗೆ ತೆರಳುತ್ತಿದ್ದೇವೆ. ಅಗತ್ಯ ಸಿದ್ಧತೆಗಳನ್ನು ಕೇಂದ್ರ ಸರಕಾರ ಮಾಡಿಕೊಟ್ಟಿದೆ. ನಮ್ಮ ರಾಯಭಾರಿ ಇಲಾಖೆಯೂ ನಿರಂತರ ಸಂಪರ್ಕದಲ್ಲಿದೆ. ಎಲ್ಲ ವಿಚಾರಗಳನ್ನು ಅಲ್ಲಿಗೆ ಹೋಗಿ ಬಂದ ಬಳಿಕವಷ್ಟೇ ಹೇಳುತ್ತೇವೆ ಎನ್ನುತ್ತ ಕಣ್ಣೀರಾದರು ಸ್ಮಿತಾ ಅವರ ತಂದೆ ಡಾ| ಚಂದ್ರಮೌಳಿ ಮತ್ತು ಸಹೋದರ ಸುಜಯ್‌.

Advertisement

Udayavani is now on Telegram. Click here to join our channel and stay updated with the latest news.

Next