ಮಂಗಳೂರು: ತಂತ್ರಜ್ಞಾನವನ್ನು ಗರಿಷ್ಠ ಪ್ರಮಾಣದಲ್ಲಿ ಬಳಸಿಕೊಂಡು ಅಪರಾಧ ಪತ್ತೆ, ನಿಯಂತ್ರಣ ಮತ್ತು ತ್ವರಿತ ತನಿಖೆಗೆ ಮುಂದಾಗಿರುವ ಪೊಲೀಸ್ ಇಲಾಖೆ ರಾಜ್ಯಾದ್ಯಂತ ಲಕ್ಷಾಂತರ ಸಿಸಿ ಕೆಮರಾಗಳನ್ನು ಜಿಯೋ ಟ್ಯಾಗಿಂಗ್ ಮಾಡಿಕೊಳ್ಳುತ್ತಿದೆ.
ಸಾರ್ವಜನಿಕ ಸುರಕ್ಷೆ ಕಾಯಿದೆ ಯಡಿ ದಿನಕ್ಕೆ 500ಕ್ಕಿಂತ ಹೆಚ್ಚು ಬಾರಿ ಜನರ ಓಡಾಟವಿರುವ ಅಥವಾ ಒಂದೇ ಬಾರಿಗೆ 100 ಮಂದಿಯ ಓಡಾಟವಿರುವ ಕಟ್ಟಡ/ಮಳಿಗೆಗಳಲ್ಲಿ ಸಿಸಿ ಕೆಮರಾ ಕಡ್ಡಾಯಗೊಳಿಸಲಾಗಿದ್ದು ಈ ರೀತಿ ಅಳವಡಿಕೆಯಾಗಿರುವ, ಸಾರ್ವಜನಿಕ ಸ್ಥಳದ ಪಕ್ಕ ಇರುವ ಕೆಮರಾಗಳನ್ನು ಜಿಯೋ ಟ್ಯಾಗಿಂಗ್‌ಗೆ ಒಳಪಡಿಸಲಾಗುತ್ತಿದೆ.
ಏನಿದು ಜಿಯೋ ಟ್ಯಾಗಿಂಗ್?
ಜಿಯೋ ಟ್ಯಾಗಿಂಗ್ ಎಂಬುದು ಪೊಲೀಸ್ ಇಲಾಖೆಯ ಆ್ಯಪ್‌ವೊಂದರಡಿ ಕಾರ್ಯಾಚರಿಸುತ್ತದೆ. ಇದು ಜಿಐಎಸ್ (ಜಿಯೋಗ್ರಾಫಿಕ್ ಇನ್‌ಫಾರ್ಮೇಷನ್ ಸಿಸ್ಟಂ) ಆಗಿದ್ದು ಸಿಸಿ ಕೆಮರಾಗಳು ನಿರ್ದಿಷ್ಟವಾಗಿ ಯಾವ ಕಟ್ಟಡದ, ಯಾವ ಭಾಗದಲ್ಲಿವೆ, ಯಾವ ಕಡೆ ಮುಖ ಮಾಡಿವೆ, ಅವುಗಳ ಸ್ಟೋರೇಜ್ ಸಾಮರ್ಥ್ಯ ಎಷ್ಟು ಎಂಬಿತ್ಯಾದಿ ಸ್ಪಷ್ಟ ಮಾಹಿತಿಗಳು ಆ್ಯಪ್‌ನಲ್ಲಿ ಸಂಗ್ರಹಿಸಿ ಇಡಲಾಗುತ್ತದೆ. ಯಾವುದೇ ಸ್ಥಳದಲ್ಲಿ ಏನಾದರೂ ಅಹಿತರ ಘಟನೆ ನಡೆದರೆ ಅಲ್ಲಿರುವ ಕೆಮರಾಗಳ ಮಾಹಿತಿ ಕ್ಷಣಾರ್ಧದಲ್ಲಿ ಪೊಲೀಸರಿಗೆ ಲಭ್ಯವಾಗುತ್ತದೆ. ಅಲ್ಲದೆ ಸಿಸಿ ಕೆಮರಾಗಳ ಲೊಕೇಶನ್, ಸ್ಥಿತಿಗತಿಯ ಬಗ್ಗೆ ಪ್ರತಿ ತಿಂಗಳು ಪೊಲೀಸರು ತಪಾಸಣೆ ಕೂಡ ನಡೆಸುತ್ತಾರೆ.
ಮಂಗಳೂರಿನಲ್ಲಿ ಗರಿಷ್ಠ ಮ್ಯಾಪಿಂಗ್
ಬೆಂಗಳೂರು ಹೊರತುಪಡಿಸಿದರೆ ಮಂಗಳೂರಿನಲ್ಲಿ ಗರಿಷ್ಠ ಸಂಖ್ಯೆಯಲ್ಲಿ ಸಿಸಿ ಕೆಮರಾಗಳನ್ನು ಜಿಯೋ ಟ್ಯಾಗಿಂಗ್‌ಗೆ ಒಳಪಡಿಸಲಾಗಿದೆ. ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ 30,000ಕ್ಕೂ ಅಧಿಕ ಹಾಗೂ ದ.ಕ. ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ 2,000, ಬೆಂಗಳೂರಿನಲ್ಲಿ ವಿವಿಧ ಉಪವಿಭಾಗಗಳು ಸೇರಿದಂತೆ 1.25 ಲಕ್ಷಕ್ಕೂ ಅಧಿಕ, ಬೆಳಗಾವಿಯಲ್ಲಿ ಸುಮರು 25,000, ಕಲುºರ್ಗಿಯಲ್ಲಿ ಸುಮಾರು 12,000, ಮೈಸೂರಿನಲ್ಲಿ ಸುಮಾರು 10,000, ಹಾಸನದಲ್ಲಿ 2,400ಕ್ಕೂ ಅಧಿಕ ಸಿಸಿ ಕೆಮರಾಗಳು ಜಿಯೋ ಟ್ಯಾಗಿಂಗ್‌ನಲ್ಲಿವೆ.
Related Articles
1 ಕೋ.ರೂ. ವೆಚ್ಚದಲ್ಲಿ
98 ಸಿಸಿ ಕೆಮರಾ
ಗುಲ್ಬರ್ಗ, ಹುಬ್ಬಳ್ಳಿ-ಧಾರವಾಡ, ಮೈಸೂರು, ಬೆಳಗಾವಿ ಮತ್ತು ಮಂಗಳೂರು ನಗರಗಳಲ್ಲಿ ಸೇಫ್ ಸಿಟಿ ಯೋಜನೆಯಡಿ ಪೊಲೀಸ್ ಇಲಾಖೆಯಿಂದಲೇ ಹೊಸದಾಗಿ ಸಿಸಿ ಕೆಮರಾ ಅಳವಡಿಸಲು 1 ಕೋ.ರೂ. ಮಂಜೂರಾಗಿದ್ದು ಮಂಗಳೂರಿನಲ್ಲಿ 98 (47 ಕಡೆಗಳಲ್ಲಿ) ಸರ್ವೆಲೆನ್ಸ್ ಕೆಮರಾಗಳ ಅಳವಡಿಕೆಯಾಗಲಿದೆ. ಈ ಕೆಮರಾಗಳ ಮೂಲಕ ಪೊಲೀಸರಿಂದ ಲೈವ್ ಮಾನಿಟರಿಂಗ್ ನಡೆಯಲಿದೆ.
ಕ್ಷಿಪ್ರ ಕಾರ್ಯಾಚರಣೆಗೆ ಸಹಕಾರಿ
ನಗರದಲ್ಲಿ ಗರಿಷ್ಠ ಪ್ರಮಾಣದಲ್ಲಿ ಸಿಸಿ ಕೆಮರಾಗಳ ಜಿಯೋ ಟ್ಯಾಗಿಂಗ್ ಮಾಡಲಾಗಿದೆ. ಇದರಿಂದ ಕ್ಷಿಪ್ರ ಕಾರ್ಯಾಚರಣೆಗೆ ತುಂಬಾ ಪ್ರಯೋಜನ ವಾಗುತ್ತಿದೆ. ಇದಲ್ಲದೆ ನಗರದಲ್ಲಿ ಪೊಲೀಸ್ ಇಲಾಖೆಯಿಂದಲೇ 128 ಸಿಸಿ ಕೆಮರಾ ಅಳವಡಿಸಲು ಪ್ರಸ್ತಾವನೆ ಸಲ್ಲಿಸಲಾಗಿದ್ದು ಸರಕಾರದಿಂದ 1 ಕೋ.ರೂ. ಅನುದಾನ ದೊರೆತಿದೆ. ಅದಕ್ಕೆ ತಕ್ಕಂತೆ ಸದ್ಯ 98 ಕೆಮರಾಗಳನ್ನು ಜನವರಿಯೊಳಗೆ ಅಳವಡಿಸಲಾಗುವುದು. 3 ವರ್ಷಗಳ ಕಾಲ ನಿರ್ವಹಣೆಯ ಷರತ್ತನ್ನು ಕೂಡ ಗುತ್ತಿಗೆದಾರರಿಗೆ ವಿಧಿಸಲಾಗಿದೆ.
– ಅಂಶು ಕುಮಾರ್,
ಡಿಸಿಪಿ, ಮಂಗಳೂರು
ಎಲ್ಲ ಜಿಲ್ಲೆಗಳಲ್ಲೂ ಟ್ಯಾಗಿಂಗ್
ರಾಜ್ಯಾದ್ಯಂತ ಸಿಸಿ ಕೆಮರಾಗಳ ಜಿಯೋ ಟ್ಯಾಗಿಂಗ್‌ಗೆ ಸೂಚನೆ ನೀಡಿದ್ದು ಅದರಂತೆ ಎಲ್ಲ ಜಿಲ್ಲಾ ಪೊಲೀಸ್, ಕಮಿಷನರೆಟ್ ವ್ಯಾಪ್ತಿಗಳಲ್ಲಿ ಪ್ರಕ್ರಿಯೆ ವೇಗವಾಗಿ ನಡೆಯುತ್ತಿದೆ.
– ಪ್ರವೀಣ್ ಸೂದ್, ರಾಜ್ಯ ಪೊಲೀಸ್ ಮಹಾನಿರ್ದೇಶಕರು
– ಸಂತೋಷ್ ಬೊಳ್ಳೆಟ್ಟು