ಬಾಗಲಕೋಟೆ: ಜಿಲ್ಲೆಯಲ್ಲಿ ಜೂನ್ 16 ಮತ್ತು 17ರಂದು ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಯುತ್ತಿದ್ದು, ಪರೀಕ್ಷೆಗೆ ವಿದ್ಯಾರ್ಥಿಗಳು ಯಾವುದೇ ಧರ್ಮ ಪ್ರತಿನಿಧಿಸುವ ಬಟ್ಟೆ ಧರಿಸಿ ಬರುವಂತಿಲ್ಲವೆಂದು ಅಪರ ಜಿಲ್ಲಾಧಿಕಾರಿ ಮಹಾದೇವ ಮುರಗಿ ಹೇಳಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಧರ್ಮವನ್ನು ಪ್ರತಿನಿಧಿಸುವಂತಹ ಕೇಸರಿ ಶಾಲ್, ಹಿಜಾಬ್ ಹಾಗೂ ಶರ್ಟ್‌ಗಳನ್ನು ಮೊಣಕೈ ಕೆಳಗೆ ಧರಿಸುವಂತಿಲ್ಲ. ಅಲ್ಲದೇ ಯಾವುದೇ ರೀತಿಯ ಆಭರಣ ಧರಿಸಿಕೊಂಡು ಬರದಂತೆ ಕ್ರಮ ವಹಿಸಲು ಪರೀಕ್ಷಾ ಕೇಂದ್ರಗಳ ಉಪಮುಖ್ಯ ಅಧೀಕ್ಷಕರಿಗೆ ಸೂಚಿಸಿದರಲ್ಲದೇ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಸರ್ಜಿಕಲ್ ಮಾಸ್ಕ್ ಬಳಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಪ್ರತಿ ಕೊಠಡಿಯಲ್ಲಿ ಗೋಡೆ ಗಡಿಯಾರದ ವ್ಯವಸ್ಥೆ ಮಾಡಲಾಗುತ್ತಿದ್ದು, ಅಭ್ಯರ್ಥಿಗಳು ಪರೀಕ್ಷಾ ಕೊಠಡಿಯೊಳಗೆ ಯಾವುದೇ ರೀತಿಯ ಕೈಗಡಿಯಾರ ಕಟ್ಟಿಕೊಂಡು ಅಥವಾ ತೆಗೆದುಕೊಂಡು ಬರದಂತೆ ಸೂಕ್ತ ಕ್ರಮ ಜರುಗಿಸಬೇಕು. ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳು ಪ್ರವೇಶ ಪತ್ರದೊಂದಿಗೆ ಕಾಲೇಜಿನ ಗುರುತಿನ ಚೀಟಿ, ಆಧಾರ್ ಕಾರ್ಡ್, ಪಾನ್ ಕಾರ್ಡ್ ಇವುಗಳಲ್ಲಿ ಯಾವುದಾದರು ಒಂದನ್ನು ತರಬೇಕು. ಪರೀಕ್ಷಾರ್ಥಿಗಳು ಹಾಗೂ ಪರೀಕ್ಷಾ ಸಿಬ್ಬಂದಿ ಮೊಬೈಲ್, ಪೇಜರ್, ಬ್ಲೂಟೂತ್ ಸೇರಿದಂತೆ ಇನ್ನಾವುದೇ ಎಲೆಕ್ಟ್ರಾನಿಕ್ಸ್ ಉಪಕರಣ ತರದಂತೆ ನೋಡಿಕೊಳ್ಳಲು ತಿಳಿಸಿದರು.
ಜಿಲ್ಲೆಯ ಬಾಗಲಕೋಟೆ ನಗರದಲ್ಲಿ 7, ಜಮಖಂಡಿ ನಗರದಲ್ಲಿ 4 ಸೇರಿ ಒಟ್ಟು 11 ಪರೀಕ್ಷಾ ಕೇಂದ್ರಗಳಿದ್ದು, 6264 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಬಾಗಲಕೋಟೆ ನಗರದಲ್ಲಿ 3960 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರೆ, ಜಮಖಂಡಿ ನಗರದಲ್ಲಿ 2304 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಪರೀಕ್ಷೆಗೆ ಪೊಲೀಸ್ ಬಂದೋಬಸ್ತ್ ಹಾಗೂ ಎಸ್ಕಾರ್ಟ್ ವ್ಯವಸ್ಥೆ ಮಾಡಲಾಗುತ್ತಿದೆ. ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತಲಿನ 200 ಮೀಟರ್ ಪ್ರವೇಶ ನಿಷೇಧಿಸಿ ಆದೇಶ ಹೊರಡಿಸಲಾಗುತ್ತಿದೆ ಎಂದರು.
ಇಲಾಖೆಯಿಂದ ಈಗಾಗಲೇ ನೇಮಕಗೊಂಡ ಅಧಿಕಾರಿಗಳು ಕಟ್ಟುನಿಟ್ಟಾಗಿ ಪರೀಕ್ಷಾ ನಿಯಮ ಪಾಲಿಸಿ ಪರೀಕ್ಷೆ ಸುಸೂತ್ರವಾಗಿ ನಡೆಯಲು ಕ್ರಮ ಕೈಗೊಳ್ಳಬೇಕು. ಬಾಗಲಕೋಟೆ ಮತ್ತು ಜಮಖಂಡಿ ನಗರದ ಪರೀಕ್ಷಾ ಕೇಂದ್ರಗಳಿಗೆ ತಲಾ ಎರಡು ಪ್ರತ್ಯೇಕವಾದ ಪ್ರಶ್ನೆ ಪತ್ರಿಕೆ ಸ್ವೀಕೃತಿ ಹಾಗೂ ವಿತರಣೆಗೆ ಅಧಿಕಾರಿಗಳ ತಂಡಗಳನ್ನು ರಚಿಸಲಾಗಿದೆ. ಪರೀಕ್ಷಾ ಕೇಂದ್ರಗಳಿಗೆ ನೇಮಕಗೊಂಡ ಉಪಮುಖ್ಯ ಅಧೀಕ್ಷಕರು, ವೀಕ್ಷಕರು, ಪ್ರಶ್ನೆ ಪತ್ರಿಕೆ ಪಾಲಕರು ಹಾಗೂ ತ್ರಿ ಸದಸ್ಯ ಸಮಿತಿ ಅಧಿಕಾರಿಗಳ ತಂಡದವರು ಜವಾಬ್ದಾರಿಯುತವಾಗಿ ಕೆಲಸ ನಿರ್ವಹಿಸಲು ಸೂಚಿಸಿದರು.
ಸಭೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಎಚ್.ಎಸ್. ಚಬನೂರು, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಮಹೇಶ ಪೋತದಾರ, ಅಲ್ಪಸಂಖ್ಯಾತರ ಇಲಾಖೆಯ ಉಪನಿರ್ದೇಶಕ ಶಿವಾನಂದ ಪಟ್ಟಣಶೆಟ್ಟಿ, ಜಿಲ್ಲಾ ಅಂಕಿಸಂಖ್ಯಾಧಿಕಾರಿ ಗಂಗಾಧರ ದಿವಟರ, ನಗರಸಭೆ ಪೌರಾಯುಕ್ತ ವಾಸಣ್ಣ ಆರ್ ಮುಂತಾದವರು ಉಪಸ್ಥಿತರಿದ್ದರು.
ಪರೀಕ್ಷಾ ವೇಳಾಪಟ್ಟಿ: ಜೂನ್ 16ರಂದು ಬೆಳಿಗ್ಗೆ 10.30ರಿಂದ 11.50ರವರೆಗೆ ಜೀವಶಾಸ್ತ್ರ, ಮಧ್ಯಾಹ್ನ 2.30 ರಿಂದ 3.50 ವರೆಗೆ ಗಣಿತ ವಿಷಯ ಪರೀಕ್ಷೆಗಳು ನಡೆದರೆ, 17ರಂದು ಬೆಳಿಗ್ಗೆ 10.30ರಿಂದ 11.50ರರೆಗೆ ಭೌತಶಾಸ್ತ್ರ, ಮಧ್ಯಾಹ್ನ 2.30ರಿಂದ 3.50ರವರೆಗೆ ರಸಾಯನಶಾಸ್ತ್ರ ವಿಷಯ ಪರೀಕ್ಷೆ ನಡೆಯಲಿವೆ.