Advertisement

ಲಿಂಗತ್ವ ಅಲ್ಪ ಸಂಖ್ಯಾಕರ ಸಮೀಕ್ಷೆ: ಇಲಾಖೆಗೆ ಮಾಹಿತಿ ನೀಡಲು ಹಿಂದೇಟು

10:23 PM Oct 10, 2019 | Team Udayavani |

ಉಡುಪಿ: ಜಿಲ್ಲೆಯ ಲಿಂಗತ್ವ ಅಲ್ಪಸಂಖ್ಯಾಕರಿಗೆ ಸರಕಾರದ ಗರಿಷ್ಠ ಸೇವೆ ಹಾಗೂ ಸೌಲಭ್ಯವನ್ನು ತಲುಪಿಸುವ ಉದ್ದೇಶದಿಂದ ಶೀಘ್ರದಲ್ಲಿ ಸಮೀಕ್ಷೆ ನಡೆಸಿ ಗುರುತು ಚೀಟಿ ನೀಡಲು ಜಿಲ್ಲಾಡಳಿತ ಮುಂದಾಗಿದೆ.

Advertisement

ಗುರುತು ಬಹಿರಂಗಪಡಿಸಲು ಹಿಂದೇಟು
ಹಿಂದೆ ಉಡುಪಿ ಜಿಲ್ಲಾಧಿಕಾರಿಯಾಗಿದ್ದ ಹೆಪ್ಸಿಬಾ ರಾಣಿ ಕೊರ್ಲಪಾಟಿ ಅವರು ತೃತೀಯ ಲಿಂಗಿಗಳ ಸಮೀಕ್ಷೆಯನ್ನು ಮಹಿಳಾ ಮತ್ತು ಮಕ್ಕಳ ಇಲಾಖೆಯ ಮೂಲಕ ಸಮೀಕ್ಷೆ ನಡೆಸಲು ಮುಂದಾಗಿದ್ದರು. ಆದರೆ ಹೆಚ್ಚಿನವರು ತಮ್ಮ ಗುರುತನ್ನು ಇಲಾಖೆಯೊಂದಿಗೆ ಬಹಿರಂಗ ಪಡಿಸಲು ಹಿಂದೇಟು ಹಾಕಿದ್ದಾರೆ.

ಇದರಿಂದಾಗಿ ಈ ಬಾರಿ ಲಿಂಗತ್ವ ಅಲ್ಪಸಂಖ್ಯಾಕರರ ಸಮೀಕ್ಷೆ ಜವಾಬ್ದಾರಿಯನ್ನು ಲಿಂಗತ್ವ ಅಲ್ಪಸಂಖ್ಯಾಕರ ಅಭಿವೃದ್ಧಿಗೆ ಶ್ರಮಿಸುತ್ತಿರುವ ಎನ್‌ಜಿಒಗೆ ನೀಡಲು ಜಿಲ್ಲಾಡಳಿತ ನಿರ್ಧರಿಸಿದೆ.

282 ಲಿಂಗತ್ವ ಅಲ್ಪ ಸಂಖ್ಯಾಕರು
ಜಿಲ್ಲೆಯಲ್ಲಿ 282 ಮಂದಿ ಲಿಂಗತ್ವ ಅಲ್ಪಸಂಖ್ಯಾಕರು ಇದ್ದಾರೆ. ಸ್ವ ಉದ್ಯೋಗ ಯೋಜನೆಯಡಿ ಇಲ್ಲಿಯವರೆಗೆ 47 ಜನರು ತಲಾ 50,000 ರೂ. ನಂತೆ ಒಟ್ಟು 23 ಲ.ರೂ. ಮೊತ್ತವನ್ನು ಸಾಲ ಪಡೆದುಕೊಂಡಿದ್ದಾರೆ.

ವಿವಿಧ ಯೋಜನೆಗಳು
ಮಹಿಳಾ ಅಭಿವೃದ್ಧಿ ನಿಗಮದಿಂದ ಸ್ವ ಉದ್ಯೋಗಕ್ಕೆ 50,000 ಸಾಲ ಪಡೆಯಬಹುದಾಗಿದೆ. ಅದರಲ್ಲಿ ಶೇ 50ರಷ್ಟು ಮೊತ್ತಕ್ಕೆ ಸಬ್ಸಿಡಿ ದೊರಕುತ್ತದೆ. ಧನಶ್ರೀ ಯೋಜನೆ, ಮೈತ್ರಿ ಯೋಜನೆ, ಲಿಂಗತ್ವ ಅಲ್ಪ ಸಂಖ್ಯಾಕರ ಪುನರ್‌ ವಸತಿ ಯೋಜನೆಗಳಿವೆ.

Advertisement

ದಾಖಲೆ ಒದಗಿಸುವ ಸಮಸ್ಯೆ
ಜಿಲ್ಲೆಯಲ್ಲಿರುವ ಹೆಚ್ಚಿನ ಲಿಂಗತ್ವ ಅಲ್ಪ ಸಂಖ್ಯಾಕರಲ್ಲಿ ತಮ್ಮ ದಾಖಲೆ ಸಂಗ್ರಹಕ್ಕೆ ಮಹತ್ವ ನೀಡುತ್ತಿಲ್ಲ, ಕೆಲವರ ಬಳಿ ದಾಖಲಾತಿಗಳಿದ್ದರೂ ಹಳೆಯ ಹೆಸರು, ವಿಳಾಸವಿದೆ. ಅದರ ಬದಲಾವಣೆಗಾಗಿ ಕಚೇರಿಗೆ ಅಲೆಯುವಾಗ ಮುಜುಗರ ಎದುರಿಸಬೇಕಾಗುತ್ತದೆ ಎನ್ನುವ ಕಾರಣಕ್ಕೆ ದಾಖಲೆಗಳನ್ನು ಮಾಡಿಸುವ ಗೋಜಿಗೆ ಹೋಗುತ್ತಿಲ್ಲ. ಇದರಿಂದಾಗಿ ಸರಕಾರದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ.

ಹೊರ ಜಿಲ್ಲೆಯವರಿಂದ ಭಿಕ್ಷಾಟನೆ!
ಇತರೆ ಜಿಲ್ಲೆಯಿಂದ ವಲಸೆ ಬಂದ ತೃತೀಯ ಲಿಂಗಿಗಳು ಬಸ್‌ ನಿಲ್ದಾಣ, ಪ್ರವಾಸಿ ತಾಣ ಸೇರಿದಂತೆ ವಿವಿಧ ಜಾಗದಲ್ಲಿ ಭಿಕ್ಷಾಟನೆ ಹಾಗೂ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಟೋಲ್‌ ಗೇಟ್‌, ಶ್ರೀ ಕೃಷ್ಣ ಮಠದ ಸಮೀಪ ಜನರಿಗೆ ತೊಂದರೆ ನೀಡುತ್ತಿದ್ದಾರೆ.

ಅರಿವು ಕಾರ್ಯಕ್ರಮ
ಜಿಲ್ಲಾಡಳಿತ ಸಮಾಜದಲ್ಲಿ ಮತ್ತು ಪೋಷಕರಲ್ಲಿ ಲಿಂಗತ್ವ ಅಲ್ಪಸಂಖ್ಯಾಕರ ಕುರಿತು ಅರಿವು ಮೂಡಿಸುವ ನಿಟ್ಟಿನಲ್ಲಿ ಎಲ್ಲ ಶಾಲಾ ಕಾಲೇಜುಗಳಲ್ಲಿ , ಇಲಾಖೆಯ ಅಧಿಕಾರಿಗಳಿಗೆ ಅರಿವು ಕಾರ್ಯಕ್ರಮ ಹಮ್ಮಿಕೊಂಡಿದೆ. ಪ.ಪೂ. ಕಾಲೇಜುಗಳಲ್ಲಿ ಲಿಂಗತ್ವ ಅಲ್ಪಸಂಖ್ಯಾಕರ ಬಗ್ಗೆ ಅರಿವು ಮೂಡಿಸಲು ಅಗತ್ಯವಿರುವ ಕ್ರಮ ಕೈಗೊಳ್ಳುವಂತೆ ಡಿಡಿಪಿಐ ಹಾಗೂ ಡಿಡಿಪಿಯು ಅವರಿಗೆ ಜಿಲ್ಲಾಡಳಿತ ಆದೇಶ ನೀಡಿದೆ.

ಅಗತ್ಯವಿರುವ ಪ್ರೋತ್ಸಾಹ
ಇಲಾಖೆಯಿಂದ ಲಿಂಗತ್ವ ಅಲ್ಪಸಂಖ್ಯಾಕರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಅಗತ್ಯವಿರುವ ಪ್ರೋತ್ಸಾಹ ನೀಡಲಾಗುತ್ತಿದೆ. ಸಮೀಕ್ಷೆಯ ಮುಗಿದ ಬಳಿಕ ತತ್‌ಕ್ಷಣ ಅವರಿಗೆ ಗುರುತಿನ ಚೀಟಿ ನೀಡಲಾಗುತ್ತದೆ. ಆ ಮೂಲಕ ಸರಕಾರದ ವಿವಿಧ ಯೋಜನೆ ಹಾಗೂ ಸೌಲಭ್ಯಗಳನ್ನು ಪಡೆಯಬಹುದಾಗಿದೆ.
– ಗ್ರೇಸಿ ಗೊನ್ಸಾಲ್ವಿಸ್‌Õ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಉಡುಪಿ

– ತೃಪ್ತಿ ಕುಮ್ರಗೋಡು

Advertisement

Udayavani is now on Telegram. Click here to join our channel and stay updated with the latest news.

Next