Advertisement

ಲಿಂಗ ಸಮಾನತೆ ಭಾರತದ ಹಿಮ್ಮುಖ ಚಲನೆ

12:35 AM Dec 21, 2019 | mahesh |

ಪೌಷ್ಟಿಕ ಆಹಾರ, ಸುರಕ್ಷೆ, ಸಮಾನ ಅವಕಾಶ ,ಶಿಕ್ಷಣ ಈ ಮುಂತಾದ ಕ್ಷೇತ್ರದಲ್ಲಾಗುತ್ತಿರುವ ತಾರತಮ್ಯದಿಂದಾಗಿ ಮಹಿಳೆ ಹಿಂದುಳಿಯುತ್ತಿದ್ದಾಳೆ

Advertisement

ಲಿಂಗ ಸಮಾನತೆಯ ವಿಚಾರದಲ್ಲಿ ದೇಶದಲ್ಲಿ ವರ್ಷಗಳಿಂದ ಎಷ್ಟೇ ಚರ್ಚೆಗಳಾದರೂ, ಎಷ್ಟೇ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರೂ ಪರಿಸ್ಥಿತಿಯಂತೂ ಸುಧಾರಿಸುವ ಲಕ್ಷಣ ಕಾಣಿಸುತ್ತಿಲ್ಲ. ಸ್ತ್ರೀ-ಪುರುಷ ಸಮಾನತೆಯ ವಿಚಾರದಲ್ಲಿ (ಆರೋಗ್ಯ, ಆರ್ಥಿಕ ಸಮಾನತೆ ಮತ್ತು ಶಿಕ್ಷಣ ಇತ್ಯಾದಿ) ನಮ್ಮ ಜಾಗತಿಕ ರ್‍ಯಾಂಕ್‌ ಮೇಲೇರುವುದು ಒತ್ತಟ್ಟಿಗಿರಲಿ, ಅದು ಕುಸಿಯುತ್ತಾ ಸಾಗಿರುವುದು ನಿಜಕ್ಕೂ ಕಳವಳಕಾರಿ ಸಂಗತಿ. ವಿಶ್ವ ಆರ್ಥಿಕ ವೇದಿಕೆ (ಡಬ್ಲೂಇಎಫ್) ಜಾರಿ ಮಾಡಿರುವ ವಾರ್ಷಿಕ “ಜಂಡರ್‌ ಗ್ಯಾಪ್‌ ರಿಪೋರ್ಟ್‌’ನಲ್ಲಿ ಭಾರತ 112ನೇ ಸ್ಥಾನದಲ್ಲಿ ಇದೆ.

ಕಳೆದ ವರ್ಷದ ಸೂಚಿಯಲ್ಲಿ ಭಾರತ 108ನೇ ಸ್ಥಾನದಲ್ಲಿ ಇತ್ತು. ಮಂಗಳವಾರ ಬಿಡುಗಡೆಯಾಗಿರುವ ಈ
ವರದಿಯು ಪ್ರಪಂಚದಾದ್ಯಂತ ಲಿಂಗಭೇದ ಕಡಿಮೆಯೇನೋ ಆಗುತ್ತಿದೆ, ಆದರೆ ಮಹಿಳೆಯರು ಮತ್ತು
ಪುರುಷರ ನಡುವಿನ ಸ್ವಾಸ್ಥ್ಯ, ಶಿಕ್ಷಣ, ರಾಜನೀತಿ ಸೇರಿದಂತೆ ಅನೇಕ ಕ್ಷೇತ್ರಗಳಲ್ಲಿ ಅಸಮಾನತೆ ಇನ್ನೂ ಇದೆ ಎನ್ನುತ್ತದೆ.

ಪೂರ್ಣ ಲಿಂಗ ಸಮಾನತೆ ಸಾಧಿಸಿರುವ ಏಕಮಾತ್ರ ದೇಶವೆಂದರೆ ಐಸ್‌ಲ್ಯಾಂಡ್‌ ಎನ್ನುತ್ತದೆ ಈ ವರದಿ(ಆ ದ್ವೀಪ ರಾಷ್ಟ್ರದ ಜನಸಂಖ್ಯೆ 3,33 ಲಕ್ಷ ಮಾತ್ರ). ಭಾರತದ ಪಾಲಿಗೆ ತುಸು ಸಮಾಧಾನಕರ ಬೆಳವಣಿಗೆ ಎಂದರೆ, ನಮ್ಮಲ್ಲಿ ರಾಜಕೀಯ ವಾತಾವರಣದಲ್ಲಿ ಸ್ಥಿತಿ ಸುಧಾರಿಸಿರುವುದು. ಈ ವಿಚಾರದಲ್ಲಿ ಭಾರತದ ರ್‍ಯಾಂಕಿಂಗ್‌ 18 ಎನ್ನುವುದು ಗಮನಾರ್ಹ. ಆದರೆ ಮಹಿಳೆಯರ ಆರೋಗ್ಯ ಮತ್ತು
ಜೀವನಮಟ್ಟ (ಸರ್ವೈವಲ್‌) ವಿಷಯದಲ್ಲಿ ಭಾರತ 150ನೇ ಸ್ಥಾನಕ್ಕೆ ಕುಸಿದಿದೆ. ನಮ್ಮ ದೇಶದ ಕಂಪನಿಗಳ ಬೋರ್ಡುಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಕೇವಲ 13.8 ಪ್ರತಿಶತವಿದೆ. ಮಹಿಳೆಯರಿಗೆ ಎಲ್ಲಾ ಸ್ತರಗಳಲ್ಲೂ ಸಹಭಾಗಿತ್ವ ಹೆಚ್ಚು ಮಾಡುವುದಕ್ಕಾಗಿ ಕಳೆದ ಕೆಲವು ವರ್ಷಗಳಲ್ಲಿ ಅನೇಕ
ಕಾನೂನುಗಳನ್ನು ರಚಿಸುತ್ತಾ ಬರಲಾಗಿದೆಯಾದರೂ, ಅವುಗಳ ಪೂರ್ಣಾನುಷ್ಠಾನವಾಗುತ್ತಿಲ್ಲ. ಇದಕ್ಕೆ ಒಂದು ರೀತಿಯಲ್ಲಿ ಈಗಲೂ ಪುರುಷ ಪ್ರಾಬಲ್ಯದ ಮನಸ್ಥಿತಿ ಜೀವಂತವಿರುವುದೂ ಕಾರಣ ಎನ್ನಬಹುದು.

ಸ್ವಾಸ್ಥ್ಯದ ವಿಚಾರಕ್ಕೆ ಬರುವುದಾದರೆ, ಅನಾರೋಗ್ಯ ಮತ್ತು ಗರ್ಭಾವಸ್ಥೆಯಂಥ ಸ್ಥಿತಿಯಲ್ಲೂ ದೇಶದ ಬಹುಪಾಲು ಮಹಿಳೆಯರಿಗೆ ಪೌಷ್ಟಿಕ ಆಹಾರ ಸಿಗುತ್ತಿಲ್ಲ. ಇದು ಮಗು ಮತ್ತು ತಾಯಿಯ ಆರೋಗ್ಯದ ಮೇಲೂ ದೀರ್ಘ‌ಕಾಲಿಕ ದುಷ್ಪರಿಣಾಮ ಬೀರುತ್ತಿದೆ.

Advertisement

ಇದೇ ಪರಿಸ್ಥಿತಿ ಶಿಕ್ಷಣದಲ್ಲೂ ಇದೆ. ಸರ್ವರಿಗೂ ಉಚಿತ ಶಿಕ್ಷಣದ ಬೃಹತ್‌ ಅವಕಾಶ ದೇಶಾದ್ಯಂತ ಇದ್ದರೂ, ಈಗಲೂ ದೇಶದ ವಿವಿಧ ಭಾಗಗಳಲ್ಲಿ ಗಂಡುಮಕ್ಕಳ ಶಿಕ್ಷಣಕ್ಕೇ ಆದ್ಯತೆ ನೀಡಲಾಗುತ್ತಿದೆ. ಇಲ್ಲಿ ಸರಕಾರಕ್ಕಿಂತಲೂ ಸಮಾಜದ ಮನಸ್ಥಿತಿ ಈ ಸಮಸ್ಯೆಗೆ ಕಾರಣವಾಗುತ್ತಿದೆ. ಇಂದು ಮಹಿಳೆಯರು ಎಲ್ಲಾ ಕ್ಷೇತ್ರಕ್ಕೂ ಕಾಲಿಟ್ಟಿದ್ದಾರಾದರೂ, ಅವರ ಬೆಳವಣಿಗೆಗೆ ಪೂರಕವಾಗುವಂಥ ವಾತಾವರಣದ ಅಭಾವವಿದೆ. ರಾಜನೀತಿಯಲ್ಲಿ ಅವರ ಪಾಲುದಾರಿಕೆ ತುಸು ಸುಧಾರಿಸಿದೆಯಾದರೂ, ವರ್ಷಗಳಿಂದ ಧೂಳು ತಿನ್ನುತ್ತಾ ಬಿದ್ದಿರುವ ಮಹಿಳಾ ಮೀಸಲಾತಿ ಬಿಲ್‌ಗೆ ಇನ್ನೂ ಅಂಕಿತ ಬೀಳುತ್ತಿಲ್ಲ. ಮಹಿಳಾ ಸಮಾನತೆ ಎನ್ನುವ ವಿಚಾರ ಬಂದಾಗಲೆಲ್ಲ ಯಾವುದೇ ಒಂದು ಕ್ಷೇತ್ರದ ಬಗ್ಗೆ ವಿಚಾರ ಮಾಡುವ ಪರಿಪಾಠ ನಿಲ್ಲಬೇಕಿದೆ. ಮಹಿಳೆಯರಿಗೆ ಭದ್ರಗೆ ಒದಗಿಸುವುದೂ ಸಮಾನತೆಯ ವಿಚಾರದಲ್ಲಿ ಮಹತ್ತರ ಪಾತ್ರ ವಹಿಸಬಲ್ಲದು. ದೇಶದಲ್ಲಿ ಹೆಣ್ಣುಮಕ್ಕಳ ರಕ್ಷಣೆಗಾಗಿ ಹಲವು ಕಾನೂನು ರೂಪಿಸುತ್ತಾ ಸಾಗಿದ್ದರೂ, ಅವರ ಮೇಲಿನ ಲೈಂಗಿಕಾಪರಾಧಗಳ ಪ್ರಮಾಣವೇನೂ ಕಡಿಮೆಯಾಗುತ್ತಿಲ್ಲ.

ಅಸುರಕ್ಷಿತ ವಾತಾವರಣವು ನಿಸ್ಸಂಶಯವಾಗಿಯೂ ಅವರ ಬೆಳವಣಿಗೆಗೆ ಬಹುದೊಡ್ಡ ಅಡ್ಡಿಯೇ ಹೌದು.
ಒಟ್ಟಲ್ಲಿ ಮಹಿಳೆಯರಿಗೆ ಎಲ್ಲಾ ಸ್ತರದಲ್ಲೂ ಅವಕಾಶ ನೀಡುವ ಜವಾಬ್ದಾರಿಯಲ್ಲಿ ಅವರ ಸುರಕ್ಷತೆಯ ವಿಚಾರಕ್ಕೂ ಆದ್ಯತೆ ನೀಡಬೇಕಿದೆ. ಲಿಂಗ ಸಮಾನತೆಯ ಸಮ ಸಮಾಜವನ್ನು ಸೃಷ್ಟಿಸುವ ವಿಚಾರದಲ್ಲಿ ಸರಕಾರಗಳ ಮೇಲೆ ಎಷ್ಟು ಜವಾಬ್ದಾರಿ ಇದೆಯೋ, ಅಷ್ಟೇ ಜವಾಬ್ದಾರಿ ಸಮಾಜದ ಮೇಲೆಯೂ ಇದೆ ಎನ್ನುವುದನ್ನು ಎಲ್ಲರೂ ಮನಗಾಣಬೇಕಿದೆ.

Advertisement

Udayavani is now on Telegram. Click here to join our channel and stay updated with the latest news.

Next