Advertisement

Lok Sabha Polls: ದಾವಣಗೆರೆ-ಚನ್ನಗಿರಿ ಹೆದ್ದಾರಿ ಮೇಲ್ದರ್ಜೆಗೆ: ಗಾಯತ್ರಿ ಸಿದ್ದೇಶ್ವರ್‌

10:45 AM Apr 13, 2024 | Team Udayavani |

ದಾವಣಗೆರೆ: ಚಿತ್ರದುರ್ಗ-ಚನ್ನಗಿರಿ-ಶಿವಮೊಗ್ಗ ದ್ವಿಪಥ ಹೆದ್ದಾರಿಯನ್ನು 334 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ದಾವಣಗೆರೆ-ಚನ್ನಗಿರಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲಾಗುವುದು ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್‌ ತಿಳಿಸಿದರು.

Advertisement

ಶುಕ್ರವಾರ ಚನ್ನಗಿರಿ ತಾಲೂಕಿನ ಕರೇಕಟ್ಟೆ, ಕೆರೆಬಿಳಚಿ, ಸೋಮಲಾಪುರ, ಕೊಂಡದಹಳ್ಳಿ, ಕಾಕನೂರು, ನುಗ್ಗಿಹಳ್ಳಿ, ಚಿಕ್ಕ ಗಂಗೂರು, ಕೊರಟಿಕೆರೆ, ಹೆಬ್ಬಳಗೆರೆ, ಹೊದಿಗೆರೆ, ವಡ್ನಾಳ್‌, ಕಂಚಿಗನಾಳ್‌, ಮಲಹಾಳ್‌, ಗೊಪ್ಪೇನಹಳ್ಳಿ, ಪಾಂಡೋ ಮಟ್ಟಿ, ಮರವಂಜಿ, ನೆಲ್ಲಿಹಂಕಲು, ದುರ್ವಿಗೆರೆ, ತಾವರೆಕೆರೆ ಗ್ರಾಮಗಳಲ್ಲಿ
ಬಿರುಸಿನ ಪ್ರಚಾರ ನಡೆಸಿದರು.

ದಾವಣಗೆರೆ-ಚನ್ನಗಿರಿ ರಾಜ್ಯ ಹೆದ್ದಾರಿಯನ್ನು ರಾಷ್ಟ್ರೀಯ ಹೆದ್ದಾರಿಯನ್ನಾಗಿ ಮೇಲ್ದರ್ಜೆಗೇರಿಸಲು ಕೇಂದ್ರ ಸರ್ಕಾರದಿಂದ ತಾತ್ವಿಕ ಅನುಮೋದನೆ ನಂತರ ಯೋಜನಾ ವರದಿ ಸಿದ್ಧಪಡಿಸಲಾಗುತ್ತಿದೆ. ಚನ್ನಗಿರಿ ತಾಲೂಕಿನಲ್ಲಿ ಸಮಗ್ರ ನೀರಾವರಿ ಯೋಜನೆ ಸೇರಿದಂತೆ ಸರ್ವಾಂಗೀಣ ಅಭಿವೃದ್ಧಿಗೆ ನಾನು
ಕಟಿಬದ್ಧಳಾಗಿದ್ದೇನೆ ಎಂದು ತಿಳಿಸಿದರು.

ಸಂಸದ ಜಿ.ಎಂ.ಸಿದ್ದೇಶ್ವರ್‌ ಅವರು 20 ವರ್ಷಗಳಲ್ಲಿ ಚನ್ನಗಿರಿ ತಾಲೂಕಿನ ಅಭಿವೃದ್ಧಿಗೆ ಸಾಕಷ್ಟ ಶ್ರಮಿಸಿದ್ದಾರೆ. ತಾಲೂಕಿನ ಜನರ ಸೇವೆ ಮಾಡಲು ಈ ಬಾರಿ ನನಗೆ ಅವಕಾಶ ಸಿಕ್ಕಿದೆ. ತಾಲೂಕಿನ ಸಮಗ್ರ ನೀರಾವರಿ ಯೋಜನೆ ಯಶಸ್ವಿ ಅನುಷ್ಟಾನ ಹಾಗೂ ಪ್ರವಾಸೋದ್ಯಮ ಅಭಿವೃದ್ಧಿಗೆ ಶ್ರಮಿಸುವುದಾಗಿ ತಿಳಿಸಿದರು.
ಜಿ.ಎಂ. ಸಿದ್ದೇಶ್ವರ್‌ ಅವರು ಜಿಲ್ಲೆಯ 2ನೇ ಆದರ್ಶ ಗ್ರಾಮವಾಗಿ ಚನ್ನಗಿರಿ ತಾಲೂಕಿನ ಮಲ್ಲಾಪುರ ಗ್ರಾಮ ಆಯ್ಕೆ ಮಾಡಿಕೊಂಡು ಸುಮಾರು 2.11 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಮಾಡಿಸಿದ್ದಾರೆ. 1.50 ಕೋಟಿ ವೆಚ್ಚದಲ್ಲಿ ರೈತರಿಗೆ ಅನುಕೂಲವಾಗುವಂತೆ ವಿದ್ಯುತ್‌ ಸಂಪರ್ಕ ಕೊಡಿಸಿದ್ದಾರೆ.

ಇತಿಹಾಸ ಪ್ರಸಿದ್ಧ ಸಂತೆಬೆನ್ನೂರಿನಲ್ಲಿ ಮೌಲಾನಾ ಆಜಾದ್‌ ಮಾದರಿ ಶಾಲೆ ನಿರ್ಮಾಣಕ್ಕೆ 2.35 ಕೋಟಿ ಅನುದಾನ, ದೇವರಹಳ್ಳಿಯಲ್ಲಿ 9.50 ಕೋಟಿ ವೆಚ್ಚದಲ್ಲಿ ಕೋಲ್ಡ್‌ ಸ್ಟೋರೇಜ್‌, ಚನ್ನಗಿರಿ ಪಟ್ಟಣದಲ್ಲಿ ಘನತ್ಯಾಜ್ಯ ನಿರ್ವಹಣೆಗೆ 4.12 ಕೋಟಿ, 15ನೇ ಹಣಕಾಸು ಯೋಜನೆಯಲ್ಲಿ ಪುರಸಭೆಗೆ 93 ಲಕ್ಷ ರೂ. ಅನುದಾನ ನೀಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ ಎಂದು ತಿಳಿಸಿದರು. ನರೇಂದ್ರ ಮೋದಿ ಪ್ರಧಾನಿ ಆದ ಮೇಲೆ ದೇಶ ಸರ್ವಾಂಗೀಣ ಅಭಿವೃದ್ಧಿ ಆಗಿದೆ. ದೇಶದ ರಕ್ಷಣೆ, ಸನಾತನ ಧರ್ಮದ ಉಳಿವು, ಏಳಿಗೆಗಾಗಿ ಅವರು ಅಹೋರಾತ್ರಿ ಶ್ರಮಿಸುತ್ತಿದ್ದಾರೆ. ಅಂತಹ ಧೀಮಂತ ನಾಯಕ ಸಿಕ್ಕಿರುವುದು ಯಾವ ಜನ್ಮದ ಪುಣ್ಯವೋ ಗೊತ್ತಿಲ್ಲ. ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾದರೆ ನಮ್ಮ ಭವಿಷ್ಯದ ಮಕ್ಕಳು, ಹೆಣ್ಣ ಮಕ್ಕಳು ನಿರ್ಭೀತಿಯಿಂದ ಬಾಳಬಹುದು. ಮೋದಿ ಪ್ರಧಾನಿ ಆಗಬೇಕಾದರೆ ಮತದಾರರು ನನಗೆ ಹೆಚ್ಚಿನ ಮತ ನೀಡಿ ಗೆಲ್ಲಿಸಿ ಎಂದು ಮನವಿ ಮಾಡಿದರು.

Advertisement

ಬಿಜೆಪಿ ಯುವ ಮುಖಂಡ ಮಾಡಾಳ್‌ ಮಲ್ಲಿಕಾರ್ಜುನ್‌ ಮಾತನಾಡಿ, ದೇಶದ ಚುಕ್ಕಾಣಿ ಯಾರು ಹಿಡಿಯಬೇಕು ಅನ್ನುವ ಚುನಾವಣೆ. ದೇಶದ ಒಳಿತಿಗಾಗಿ, ಅಭಿವೃದ್ಧಿಗಾಗಿ ತಾವೆಲ್ಲ ನರೇಂದ್ರ ಮೋದಿ ಅವರನ್ನು ಮತ್ತೂಮ್ಮೆ ಪ್ರಧಾನಿ ಮಾಡಬೇಕು ಎಂದು ಮನವಿ ಮಾಡಿದರು.

ಬಿಜೆಪಿ ಮುಖಂಡ, ತುಂಕೊಸ್ ಮಾಜಿ ಅಧ್ಯಕ್ಷ ಎಚ್‌.ಎಸ್‌. ಶಿವಕುಮಾರ್‌ ಮಾತನಾಡಿ, ಈ ಬಾರಿ ವಿಕಸಿತ ಭಾರತ್‌, ಮತ್ತೂಮ್ಮೆ ಮೋದಿ ಎಂದು ಚುನಾವಣೆಗೆ ಹೋಗುತ್ತಿದ್ದೇವೆ. ಎಲ್ಲರೂ ಮೋದಿ ಅವರಿಂದ ಪ್ರಭಾವಿತರಾಗಿದ್ದಾರೆ. ಮೋದಿ ಅವರ ನೀಡಿದ ಎಲ್ಲ ಯೋಜನೆಗಳನ್ನು ಸಾರ್ವಜನಿಕರು ಪಡೆದುಕೊಂಡಿದ್ದಾರೆ. ಎಲ್ಲ ವರ್ಗದವರು ಮೋದಿ ಅವರನ್ನು ಮೆಚ್ಚಿಕೊಂಡಿದ್ಧಾರೆ. ನಾವು ಕೂಡ ಪ್ರತಿ ಗ್ರಾಮದಲ್ಲಿರುವ ಎಲ್ಲ ವರ್ಗ, ಸಮುದಾಯದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗಾಯಿತ್ರಿ ಸಿದ್ದೇಶ್ವರ ಅವರಿಗೆ ಮತ ಹಾಕಿಸಬೇಕು ಎಂದು ಮನವಿ ಮಾಡಿದರು.

ಎತ್ತಿನ ಬಂಡಿಗೆ ಕೀಲು ಎಷ್ಟು ಮುಖ್ಯವೋ ಹಾಗೆಯೇ ಗ್ರಾಮದಲ್ಲಿರುವ ಸಣ್ಣ ಸಣ್ಣ ಸಮುದಾಯವೂ ನಮಗೆ ಮುಖ್ಯ. ನಮ್ಮ ಕಾರ್ಯಕರ್ತರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಮತ ಹಾಕಿಸಬೇಕು. ಮತದಾನದವರೆಗೂ ಪ್ರತಿದಿನ ಗ್ರಾಮದಲ್ಲಿ ಮೋದಿ ಅವರ ಸಾಧನೆ, ಕೇಂದ್ರ ಸರ್ಕಾರದ ಯೋಜನೆ, ಸಂಸದ ಜಿ.ಎಂ. ಸಿದ್ದೇಶ್ವರ ಅವರ ಅಭಿವೃದ್ಧಿ ಕೆಲಸಗಳ ಬಗ್ಗೆ ಪ್ರತಿ ಮನೆ ಮನೆಗೂ ತಲುಪಿಸಬೇಕು ಎಂದು ತಿಳಿಸಿದರು. ಮಂಡಲದ ಅಧ್ಯಕ್ಷರು, ಮಂಡಲದ ಸದಸ್ಯರು, ಗ್ರಾಪಂ ಸದಸ್ಯರು, ಬೂತ್‌ ಮಟ್ಟದ ಅಧ್ಯಕ್ಷರು, ಗ್ರಾಮದ ಬಿಜೆಪಿ ಮುಖಂಡರು ಸೇರಿದಂತೆ ಚನ್ನಗಿರಿ ವಿಧಾನ ಸಭಾ ಕ್ಷೇತ್ರದ ಮುಖಂಡರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next