Advertisement

ಧಾರ್ಮಿಕ ಚಿಂತನೆ ಯುವಜನರ ಬದುಕಿಗೆ ಆದರ್ಶವಾಗಲಿ 

11:04 AM Mar 10, 2022 | Team Udayavani |

ಬೊರಿವಲಿ: ಆಧ್ಯಾತ್ಮಿಕ ಚಿಂತನೆ ಬೆಳೆಸಿಕೊಂಡು ತಾನು ಬೆಳೆಯುವುದರೊಂದಿಗೆ ಸಮಾಜವನ್ನು ಬೆಳೆಸುವ ಮಹತ್ಕಾರ್ಯದ ಕೆಲಸ ಇಂದು ಗಾಯತ್ರಿ ಪರಿವಾರ ದಹಿಸರ್‌ ಇದರಿಂದ ನಡೆಯುತ್ತಿದೆ. ಮುಂಬಯಿ ಪರಿಸರವನ್ನು ಧಾರ್ಮಿಕವಾಗಿ ಬೆಳೆಸುವ ಜತೆಗೆ ತಮ್ಮ ಹುಟ್ಟೂರು ಬಳ್ಳುಂಜೆ ಗ್ರಾಮವನ್ನು ದೈವಭಕ್ತಿ, ಪ್ರಜ್ಞಾಪೀಠ ಶಕ್ತಿಯ ಮೂಲಕ ಆದರ್ಶ ಗ್ರಾಮವನ್ನಾಗಿ ನಿರ್ಮಿಸಲು ಶ್ರಮಿಸುತ್ತಿರುವ ಕುಮಾರಿ ಮಂಜುನಾಥ ಅವರ ಸಂಕಲ್ಪ ಪರಮ ಶ್ರೇಷ್ಠವಾದದ್ದು. ಅವರ ಈ ಸಂಕಲ್ಪದಿಂದ ಜಗತ್ತಿನ ಮಾನವ ಸೃಷ್ಟಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಯಿಂದ ಸಾಕ್ಷಾತ್ಕಾರಗೊಳ್ಳಲಿ. ಅವರ ಹಾಗೂ ಅವರ ಪರಿವಾರದ ಈ ಚಿಂತನೆ ಇಂದಿನ ಯುವಜನರ ಬದುಕಿಗೆ ಆದರ್ಶವಾಗಲಿ ಎಂದು ಡಾ| ವಿರಾರ್‌ ಶಂಕರ್‌ ಶೆಟ್ಟಿ ತಿಳಿಸಿದರು.

Advertisement

ಮಹಿಷಮರ್ದಿನಿ ದೇವಸ್ಥಾನ ಜೈರಾಜ್‌ನಗರ ಬೊರಿವಲಿಯಲ್ಲಿ ಗಾಯತ್ರಿ ಪರಿವಾರ ದಹಿಸರ್‌ ಪ್ರಾಯೋಜಕತ್ವದಲ್ಲಿ ಮಾ. 6ರಂದು ಜರಗಿದ ಯುಗಋಷಿ ಶ್ರೀರಾಮ ಶರ್ಮ ವಿರಚಿತ ಋಷಿವಾಣಿ ಭಾಗ-2 ಗ್ರಂಥದ ವಿತರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ಕರ್ಮಭೂಮಿಯಲ್ಲಿ ಎಲ್ಲರೂ ಅತೀವ ಬಡತನದಿಂದ ಮುಂಬಯಿ ಬದುಕನ್ನು ಪ್ರಾರಂಭಿಸಿದರು. ಹುಟ್ಟಿದ ಪ್ರತಿಯೊಬ್ಬ ಮನುಷ್ಯನಿಗೆ ಯೋಗ್ಯತೆ ಇರುತ್ತದೆ. ಅದನ್ನು ಯೋಗವಾಗಿ ಪರಿವರ್ತಿಸುವ ಛಲ ನಮ್ಮಲ್ಲಿರಬೇಕು. ಇಂದು ಈ ಆಧ್ಯಾತ್ಮಿಕ ಕೃತಿ ವಿತರಿಸುವ ಅವಕಾಶ ನನಗೆ ದೊರೆತಿರುವುದು ಅವಿಸ್ಮರಣೀಯ. ಧಾರ್ಮಿಕ ಚಿಂತಕ ಪ್ರದೀಪ್‌ ಶೆಟ್ಟಿಯವರ ಧಾರ್ಮಿಕ ಚಿಂತನೆ ಸಾಮಾಜಿಕ, ಧಾರ್ಮಿಕ ಸೇವೆ ನಮ್ಮೆಲ್ಲರ ಬದುಕಿಗೆ ಆದರ್ಶವಾಗಿದೆ ಎಂದು ತಿಳಿಸಿ ಶುಭ ಹಾರೈಸಿದರು.

ಅಧ್ಯಯನ ಗ್ರಂಥವಾಗಿದೆ   :

ಅತಿಥಿಯಾಗಿದ್ದ ಮೊಗವೀರ ಮಾಸಿಕದ ಸಂಪಾದಕ ಅಶೋಕ್‌ ಸುವರ್ಣ ಅವರು ಋಷಿವಾಣಿ ಭಾಗ-2 ಗ್ರಂಥದ ಬಗ್ಗೆ ಮಾತನಾಡಿ, ಸತ್ಸಂಗ ಸ್ವ ಅಧ್ಯಯನ ತ್ರಿವೇಣಿ ಸಂಗಮದ ಚಿಂತನೆಯ ಋಷಿವಾಣಿ ಅಧ್ಯಯನ ಗ್ರಂಥವಾಗಿದೆ. ನಿರರ್ಗಳ ಶಬ್ದ ಭಾಷಾ ಪರಿಪಕ್ವತೆ, ಶಬ್ದ ಭಂಡಾರ ಈ ಗ್ರಂಥದಲ್ಲಿ ಅಡಗಿದೆ. ಇದನ್ನು ಗ್ರಂಥ ರೂಪದಲ್ಲಿ ಹೊರತಂದ ಗಾಯತ್ರಿ ಪರಿವಾರದ ಸಾಧನೆ ಅಭಿನಂದನೀಯ. ಗಾಯತ್ರಿ, ಸೂರ್ಯ ದೇವರ ಶಕ್ತಿ, ಸನಾತನ ಧರ್ಮದ ವಿಚಾರ, ಪರಿಪಕ್ವತೆಯ ಅಧ್ಯಯನವಾಗಿ ಈ ಗ್ರಂಥ ಹೊರಬಂದಿದೆ. ಅದ್ವಿತೀಯ ಸಂತರು ಹುಟ್ಟಿದ ನಮ್ಮ ದೇಶದಲ್ಲಿ ಧರ್ಮ, ಸಂಸ್ಕೃತಿ, ಅಧ್ಯಾತ್ಮ ಇಂದಿಗೂ ಅಚಲವಾಗಿ ಉಳಿದಿದೆ. ಆಧುನಿಕ ಬದುಕಿಗೆ ಅಧ್ಯಾತ್ಮದ ಆವಶ್ಯಕತೆಯನ್ನು ಗಾಯತ್ರಿ ಪರಿವಾರ ತಿಳಿಸಿದೆ. ಅವರ ಚಿಂತನೆ, ಅಧ್ಯಾತ್ಮವನ್ನು ನಮ್ಮ ಜೀವನದಲ್ಲಿ ಅಳವಡಿಸಲು ಇಂತಹ ಅವಕಾಶಗಳು ಪ್ರೇರಣೆಯಾಗಲಿದೆ ಎಂದು ಅಭಿನಂದಿಸಿದರು.

ಆಶಾ ಕೆ. ಸಮಾನಿ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭಗೊಂಡಿತು. ಸಮಾ ರಂಭದ ಅಧ್ಯಕ್ಷ ಡಾ| ವಿರಾರ್‌ ಶಂಕರ ಶೆಟ್ಟಿ  ಮತ್ತು ಗಾಯತ್ರಿ ಪರಿವಾರದ ಸಂಚಾಲಕಿ ಕುಮಾರಿ ಮಂಜುನಾಥ ದ್ವೀಪ ಪ್ರಜ್ವಲಿಸಿದರು. ಈ ಸಂದರ್ಭ ಗಾಯತ್ರಿ ಪರಿವಾರದ ಸದಸ್ಯರಿಂದ ಅತಿಥಿಗಳನ್ನು ಶಾಲು ಹೊದೆಸಿ, ಪುಷ್ಪಗುತ್ಛ ನೀಡಿ ಗೌರವಿಸಲಾಯಿತು.

Advertisement

ಕುಮಾರಿ ಮಂಜುನಾಥ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಮನೆಮನೆಗೆ ಆಧ್ಯಾತ್ಮಿಕ ಚಿಂತನೆಯನ್ನು ಪರಿಣಾಮಕಾರಿಯಾಗಿ ಯಶಸ್ವಿಗೊಳಿಸಲು ಸಹಕಾರ ನೀಡಿದ ಡಾ| ವಿರಾರ್‌ ಶಂಕರ್‌ ಶೆಟ್ಟಿ ಅವರ ಶ್ರೀಮತಿಯವರ ಕೊಡುಗೆ ಸ್ಮರಿಸಿದರು. ಕಳೆದ ಎರಡು ವರ್ಷಗಳಲ್ಲಿ ಆದ ಸಂಕಷ್ಟ ಸಾವು-ನೋವುಗಳು ಮಾಯವಾಗಲು ಸತ್ಸಂಗ, ಮನೋವಿಜ್ಞಾನದ ಸಾಧನೆ ಅತೀ ಮುಖ್ಯ. ಕೃಷಿ ಹಾಗೂ ಋಷಿಯಿಂದ ಭಾರತೀಯ ಜನತೆ ಆತ್ಯೋನ್ನತಿಗಾಗಿ ಆಧುನಿಕ ಬದುಕಿಗೆ ಪ್ರಾಚೀನ ಜೀವನ ಸಿದ್ಧಾಂತವನ್ನು ಅಳವಡಿಸಿಕೊಳ್ಳಬೇಕು. ಭಗವದ್ಗೀತೆಯ ಋಷಿ ಚಿಂತನೆ ಪ್ರತಿಯೊಂದು ಮನೆಯಲ್ಲಿ ನಿರ್ಮಾಣವಾಗಬೇಕು. ಆಗ ನಮ್ಮಲ್ಲರ ಜೀವನ ಆಧ್ಯಾತ್ಮಿಕವಾಗಿ ಬೆಳೆಯಲು ಸಾಧ್ಯ ಎಂದು ತಿಳಿಸಿ, ಬಳ್ಕುಂಜೆಯಲ್ಲಿ  ಬಿಡುಗಡೆಗೊಂಡ ಈ ಪರಮಶ್ರೇಷ್ಠ ಶ್ರೀರಾಮ ಆಚಾರ್ಯರ ಋಷಿವಾಣಿ ಭಾಗ-2 ಅನ್ನು ಮುಂಬಯಿಯಲ್ಲಿ ಬಿಡುಗಡೆಗೊಳಿಸಲು ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.

ಗಾಯತ್ರಿ ಪರಿವಾರದ ಸದಸ್ಯ ಅಶೋಕ್‌ ವಿ. ಶೆಟ್ಟಿ ಅವರು ಋಷಿ ಚಿಂತನೆಯ ಸಾನ್ನಿಧ್ಯ ಋಷಿವಾಣಿ ಪುಸ್ತಕವನ್ನು ಪರಿಚಯಿಸಿ, ಗಾಯತ್ರಿ ಪ್ರಜ್ಞಾಪೀಠ ಬಳುRಂಜಿ ಮತ್ತು ಗಾಯತ್ರಿ ಪರಿವಾರ ದಹಿಸರ್‌ ವತಿಯಿಂದ ವಿತರಣೆಗೊಳ್ಳಲಿರುವ ಪುಸ್ತಕ ಧಾರ್ಮಿಕ ಅಧ್ಯಯನ ಗ್ರಂಥವಾಗಿದ್ದು, ಇದು ಆಧ್ಯಾತ್ಮಿಕವಾಗಿ ಎಲ್ಲರನ್ನು ಸೇರಬೇಕು. ಋಷಿವಾಣಿಯ ವಿಚಾರ ಕ್ರಾಂತಿ ದೈಹಿಕ, ಮಾನಸಿಕವಾಗಿ ಕ್ರಾಂತಿಯಾಗಬೇಕು. ಪ್ರತಿ ಯೊಬ್ಬರ ಆತ್ಮ ಅದನ್ನು ಶಕ್ತಿಯಾಗಿ ಪರಿವರ್ತಿಸಿ ಮಾನಸಿಕ ಯೋಗ ಚಿಂತನೆಯಾಗಿ ಬೆಳೆಯಲಿ. ಗಾಯತ್ರಿ ದೇವಿಯ ಆಶೀರ್ವಾದ ನಿಮ್ಮೆಲ್ಲರ ಮೇಲೆ ಇರಲಿ ಎಂದು ಹಾರೈಸಿದರು.

ಪರಿವಾರದ ಸದಸ್ಯರಾದ ಜಯಲಕ್ಷ್ಮೀ ಹರೀಶ್‌ ಶೆಟ್ಟಿ, ಆಶಾ ಎಸ್‌. ಭಂಡಾರಿ, ಕಲಾ ವಿ. ದಾವೆ, ಶ್ರೀಮತಿ ಶೆಟ್ಟಿ, ಲೀಲಾ ಎಸ್‌. ಕುಂದರ್‌, ಜಯಶ್ರೀ ಆರ್‌. ಕೋಟ್ಯಾನ್‌, ವಿನೋದಾ ಶೆಟ್ಟಿ, ಆಶಾ ಸಮಾನಿ ಅವರು ನಿತ್ಯ ನೂತನ ಆಧ್ಯಾತ್ಮಿಕ ಬದುಕಿನ ಬಗ್ಗೆ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಡಾ| ವಿರಾರ್‌ ಶಂಕರ್‌ ಶೆಟ್ಟಿ  ಮತ್ತು ರತಿ ಶಂಕರ್‌ ಶೆಟ್ಟಿ ದಂಪತಿಯನ್ನು ಗಾಯತ್ರಿ ಪರಿವಾರದ ವತಿಯಿಂದ ಸಮ್ಮಾನಪತ್ರ ನೀಡಿ, ಶಾಲು ಹೊದೆಸಿ, ಸ್ಮರಣಿಕೆ ನೀಡಿ ಸಮ್ಮಾನಿಸಲಾಯಿತು. ಪೇಟೆಮನೆ ಪ್ರಕಾಶ್‌ ಶೆಟ್ಟಿ  ನಿರೂಪಿಸಿದರು. ಡಾ| ಅವಿನವ ಜೈಸ್ವಾಲ್‌ ವಂದಿಸಿದರು. ಬೊರಿವಲಿ ತುಳು ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ ಹಾಗೂ ಇನ್ನಿತರ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಕುಮಾರಿ ಮಂಜುನಾಥ ಹಾಗೂ ಪರಿವಾರ ಸದಸ್ಯರು ಮಹಿಷಮರ್ದಿನಿ ದೇವಿಗೆ ಪೂಜೆ ಸಲ್ಲಿಸಿದರು. ದೇವಸ್ಥಾನ ಆಡಳಿತ ಮಂಡಳಿಯ ವೆಂಕಟರಮಣ ಬಿ. ತಂತ್ರಿ ಪ್ರಸಾದ ವಿತರಿಸಿದರು.

ಕಳೆದ ಎರಡು ವರ್ಷಗಳ ಸಾಂಕ್ರಾಮಿಕ ಸಂಕಷ್ಟದ ಸಮಯದಲ್ಲಿ ದೇವಸ್ಥಾನದ ವತಿಯಿಂದ ಸಮಸ್ತ ಶತಕೋಟಿ ಮಾನವ ಕಲ್ಯಾಣಾರ್ಥಕವಾಗಿ ಶತ ಚಂಡಿಕಾಯಾಗ ನೆರವೇರಿಸಲಾಗಿದೆ. ಇದೀಗ ನಾವು ಸಂಕಷ್ಟದಿಂದ ಮುಕ್ತರಾಗಿ ಹೊರಬರುವ ಲಕ್ಷಣಗಳು ಕಾಣುತ್ತಿದ್ದು, ಮಹಾನಗರದಲ್ಲಿ ಎಲ್ಲರೂ ತಮ್ಮ ವ್ಯವಹಾರದಲ್ಲಿ ತೊಡಗಿಸಿಕೊಳ್ಳುವ ಮೂಲಕ ಮುಂಬರುವ ದಿನಗಳಲ್ಲಿ ಸಾಮಾಜಿಕ, ಧಾರ್ಮಿಕ ಕಾರ್ಯಗಳು ಎಂದಿನಂತೆ ಜರಗಲು ಜಗನ್ಮಾಥೆ ಮಹಿಷಮರ್ದಿನಿ ಎಲ್ಲರನ್ನು ಹರಸಲಿ. ಇಂದು ಬಿಡುಗಡೆಗೊಂಡ ಗ್ರಂಥ ವಿಶ್ವಮಾನ್ಯವಾಗಿ ಎಲ್ಲ ಆಧ್ಯಾತ್ಮಿಕ ಚಿಂತಕರ ಕೈ ಸೇರಲಿ. ಪ್ರದೀಪ್‌ ಶೆಟ್ಟಿ, ಆಡಳಿತ ಮೊಕ್ತೇಸರರು, ಶ್ರೀ ಮಹಿಷಮರ್ದಿನಿ ದೇವಸ್ಥಾನ ಬೊರಿವಲಿ

ಚಿತ್ರ-ವರದಿ: ರಮೇಶ್‌ ಉದ್ಯಾವರ

Advertisement

Udayavani is now on Telegram. Click here to join our channel and stay updated with the latest news.

Next