Advertisement

Lok Sabha Election: ಮೋದಿಗೆ ಪರ್ಯಾಯ ನಾಯಕ ಮತ್ತೊಬ್ಬರಿಲ್ಲ… ಗಾಯಿತ್ರಿ ಸಿದ್ದೇಶ್ವರ

02:07 PM Apr 26, 2024 | Team Udayavani |

ಹೊನ್ನಾಳಿ: ರಾಜಕೀಯ, ಶೈಕ್ಷಣಿಕ, ಆಧ್ಯಾತ್ಮಿಕ, ಧಾರ್ಮಿಕವಾಗಿ ಎಲ್ಲ ದೃಷ್ಟಿಯಿಂದಲೂ ಪರಿಪೂರ್ಣತೆ ಹೊಂದಿರುವ ನರೇಂದ್ರ ಮೋದಿ ಅವರಂತಹ ಇನ್ನೊಬ್ಬ ನಾಯಕ 100 ವರ್ಷ ಕಳೆದರೂ ಈ ದೇಶಕ್ಕೆ ಸಿಗುವುದಿಲ್ಲ. ಎಲ್ಲರೂ ಮೆಚ್ಚುವಂತಹ, ಸೋಜಿಗ ಪಡುವಂತಹ ವ್ಯಕ್ತಿತ್ವ ಮೋದಿ ಅವರದ್ದಾಗಿದೆ ಎಂದು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಬಣ್ಣಿಸಿದರು.

Advertisement

ಬಿಜೆಪಿಯ ಹೊನ್ನಾಳಿ ಮಂಡಲದ ವತಿಯಿಂದ ತಾಲೂಕಿನ ಅರಕೆರೆ, ಹಿರೇಗೋಣಿಗೆರೆ ಸೇರಿದಂತೆ ಇತರ ಗ್ರಾಮಗಳಲ್ಲಿ ಗುರುವಾರ ಮತಯಾಚನೆ ಮಾಡಿ ಅವರು ಮಾತನಾಡಿದರು. ಮೋದಿ ಅಂತಹ ನಾಯಕ ಬೇರೆ ದೇಶದಲ್ಲಿ ಜನಿಸಿದ್ದರೆ ದೇಶದ ಜನರೆಲ್ಲರೂ ಅವರನ್ನು ಪೂಜಿಸುತ್ತಿದ್ದರು. ಅಂತಹ ಮೇರು ವ್ಯಕ್ತಿತ್ವದ ಮೋದಿ ಅವರನ್ನು ವಿರೋಧಿಸುವಂತಹ ಮಾನಸಿಕ ಸ್ಥಿತಿ ಕೆಲವರಲ್ಲಿದೆ. ಕಾಂಗ್ರೆಸ್‌ ನಿಂದ ದೇಶಕ್ಕೆ ಯಾವ ಲಾಭವಿದೆ ಎಂದು ಪ್ರಶ್ನಿಸಿದರು.

23 ವರ್ಷ ಕಾಲ ಗುಜರಾತ್‌ ಮುಖ್ಯಮಂತ್ರಿಯಾಗಿ, ಪ್ರಧಾನಿಯಾಗಿ ಒಂದು ದಿನವೂ ರಜೆ ತೆಗೆದುಕೊಳ್ಳದೆ 16ರಿಂದ 18 ತಾಸು ದೇಶದ ಸರ್ವರ ಒಳಿತಿಗಾಗಿ ಮೋದಿ ಶ್ರಮಿಸುತ್ತಿದ್ದಾರೆ. ಹಾಗಾಗಿ ಅವರನ್ನು ಮತ್ತೂಮ್ಮೆ ಪ್ರಧಾನಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ. ನನ್ನನ್ನು ಗೆಲ್ಲಿಸಿದರೆ ಅಲ್ಲಿ ಮೋದಿಯವರು ಪ್ರಧಾನಿ ಆಗುತ್ತಾರೆ. ಇಂತಹ ಅವಕಾಶವನ್ನು ಯಾರೂ ಬಿಡಬಾರದು ಎಂದು ಮನವಿ ಮಾಡಿದರು.

ಕಾಂಗ್ರೆಸ್‌ನವರದ್ದು ಅರ್ಬನ್‌ ನಕ್ಸಲ್‌ ಮನಸ್ಥಿತಿ. ದೇಶದ ಸಂಪತ್ತಿನ ಹೆಚ್ಚಿನ ಪಾಲು ಒಂದು ಸಮುದಾಯಕ್ಕೆ ಸಿಗಬೇಕು ಎನ್ನುವ ಮನಸ್ಥಿತಿ ಅವರದ್ದು. ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಆರ್ಥಿಕ ಸರ್ವೇ ಮಾಡುವುದಾಗಿ ಹೇಳುತ್ತಿದ್ದಾರೆ. ಕಷ್ಟಪಟ್ಟು ದುಡಿದ ಆಸ್ತಿ ಕಂಡವರ ಪಾಲಾಗಲು ಯಾವುದೇ ಕಾರಣಕ್ಕೂ ಬಿಡಬೇಡಿ. ಆರ್ಥಿಕ ಸಮೀಕ್ಷೆ ನಡೆಸುತ್ತೇವೆ ಎನ್ನುವವರನ್ನು ಮನೆಗೆ ಕಳುಹಿಸಲು ಸಿದ್ಧರಾಗಿ ಎಂದು ಕರೆ ನೀಡಿದರು.

ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ರಾಜ್ಯದ ಎಲ್ಲ 28 ಸ್ಥಾನಗಳಲ್ಲೂ ಎನ್‌ಡಿಎ ಮೈತ್ರಿಕೂಟ ಗೆಲುವು ಸಾಧಿಸುವುದು ಗ್ಯಾರಂಟಿ. ಅದರಲ್ಲಿ ದಾವಣಗೆರೆ ಕ್ಷೇತ್ರದ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ಅವರ ಗೆಲುವು ಕೂಡ ಸೇರಿದೆ. ರಾಜ್ಯ ಕಾಂಗ್ರೆಸ್‌ ಸರ್ಕಾರದ ಓಲೈಕೆ ರಾಜಕಾರಣದಿಂದ ಜನ ಬೇಸತ್ತು ಹೋಗಿದ್ದಾರೆ ಎಂದರು.

Advertisement

ಬೆಂಗಳೂರು ನಗರದ ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ ನಡೆಯಿತು. ಇದನ್ನು ರೂಪಿಸಿದ ಭಯೋತ್ಪಾದಕರು ನಮ್ಮ ಪಕ್ಕದ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿಯವರು. ಬೆಂಗಳೂರು ನಗರದಲ್ಲಿ ಸಣ್ಣ ಅಂಗಡಿ ಇಟ್ಟುಕೊಂಡ ವ್ಯಾಪಾರಿಯೊಬ್ಬ ಹನುಮಾನ್‌ ಚಾಲೀಸಾ ಹಾಕಿಕೊಂಡು ಕೇಳುತ್ತಿರುವ ಸಂದರ್ಭದಲ್ಲಿ ಪುಂಡರು ಹಿಗ್ಗಾಮುಗ್ಗಾ ಥಳಿಸಿದ ಘಟನೆ ಇನ್ನೂ ಹಸಿರಾಗಿರುವಾಗಲೇ ಹುಬ್ಬಳ್ಳಿಯಲ್ಲಿ ಲವ್‌ ಜಿಹಾದ್‌ ಪ್ರಕರಣದಲ್ಲಿ ನೇಹಾ ಹಿರೇಮಠ ಬರ್ಬರ ಹತ್ಯೆ ನಡೆಯಿತು. ಈ ಎಲ್ಲಾ ಘಟನೆಗಳು ಸರ್ಕಾರದ ಕಣ್ಣಿಗೆ ಬೀಳುತ್ತಿಲ್ಲವೇ ಎಂದು ಪ್ರಶ್ನಿಸಿದರು. ತಾಲೂಕು ಬಿಜೆಪಿ ಅಧ್ಯಕ್ಷ ಜೆ.ಕೆ. ಸುರೇಶ್‌ ಇತರರು ಇದ್ದರು.

ಕಾಂಗ್ರೆಸ್‌ನಿಂದ ಜಾತಿ ವಿಷ ಬೀಜ ಬಿತ್ತುವ ಕಾರ್ಯ
ಕಾಂಗ್ರೆಸ್‌ ಅಭಿವೃದ್ಧಿಯ ಬಗ್ಗೆ ಎಲ್ಲಿಯೂ ಮಾತನಾಡುತ್ತಿಲ್ಲ. ಬದಲಾಗಿ ಜಾತಿಗಳ ಮಧ್ಯೆ ವಿಷಬೀಜ ಬಿತ್ತುವ ಕೆಲಸ ಮಾಡುತ್ತಿದೆ. 60 ವರ್ಷಗಳ ಕಾಲ ದೇಶದ ಜನರ ಹಣ ಲೂಟಿ ಮಾಡಿದ ಕಾಂಗ್ರೆಸ್‌, ಈಗ ನಿಮ್ಮ ಮರಣದ ನಂತರ ಆಸ್ತಿಯಲ್ಲಿ ಶೇ. 55ರಷ್ಟು ಪಾಲು ಸರ್ಕಾರಕ್ಕೆ, ಶೇ. 45ರಷ್ಟು ಪಾಲು ಆಸ್ತಿಯ ಒಡೆಯರ ವಾರಸುದಾರರಿಗೆ ಎನ್ನುವ ಬಗ್ಗೆ ಚಿಂತನೆ ನಡೆಸುತ್ತಿರುವುದು ದೇಶದ ಜನರಿಗೆ ಮಾಡುತ್ತಿರುವ ಮಹಾ ಮೋಸವಾಗಿದೆ ಎಂದು ಗಾಯಿತ್ರಿ ಸಿದ್ದೇಶ್ವರ ಆಕ್ರೋಶ ವ್ಯಕ್ತಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next