Advertisement

Lok Sabha Election: ಕಾಂಗ್ರೆಸ್‌ ಅಭ್ಯರ್ಥಿಗೆ ಸೋಲಿನ ಭೀತಿ: ಗಾಯತ್ರಿ ಸಿದ್ದೇಶ್ವರ

10:14 AM May 02, 2024 | Team Udayavani |

ದಾವಣಗೆರೆ: ಕಾಂಗ್ರೆಸ್‌ ಅಭ್ಯರ್ಥಿಗೆ ಸೋಲಿನ ಭೀತಿ ಎದುರಾಗಿದೆ. ಹಾಗಾಗಿಯೇ ಡಾಕ್ಟರ್‌ ಬೇಕೋ, ಪಿಯುಸಿ ಓದಿದವರು ಬೇಕೋ ಅಂತ ನನ್ನ ವಿರುದ್ಧ ಪ್ರಚಾರ ಮಾಡುತ್ತಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ ದೂರಿದರು.

Advertisement

ಬುಧವಾರ ಹರಿಹರ ಪಟ್ಟಣದಲ್ಲಿ ಬೃಹತ್‌ ರೋಡ್‌ ಶೋ ನಡೆಸಿ ಮಾತನಾಡಿದ ಅವರು, ಶಾಸಕ ಶಾಮನೂರು ಶಿವಶಂಕರಪ್ಪನವರು ನನಗೆ ಮಾತನಾಡುವುದಕ್ಕೆ ಬರುವುದಿಲ್ಲ, ಅಡುಗೆ ಮಾಡುವುದಕ್ಕೆ ಲಾಯಕ್‌ ಎಂದಿದ್ದರು. ಸೋಲುತ್ತೇನೆ ಎಂಬ ಹತಾಶೆಯಿಂದ ಹೀಗೆ ಪ್ರಚಾರ ಮಾಡುತ್ತಿರುಂತಹವರನ್ನು ಕ್ಷೇತ್ರದ ಜನ ರಾಜಕೀಯದಿಂದ ದೂರವಿಡಬೇಕು ಎಂದರು.

ಕಾಂಗ್ರೆಸ್‌ನವರದ್ದು ಬ್ರಿಟಿಷ್‌ ಸಂಸ್ಕೃತಿ. ಉಳ್ಳವರು, ನಿರ್ಗತಿಕರು, ವಿದ್ಯಾವಂತರು, ಅವಿದ್ಯಾವಂತರು, ಹಿಂದು, ಮುಸ್ಲಿಂ ಎಂದು ಜಾತಿ, ಧರ್ಮಗಳ ಮಧ್ಯೆ ವಿಷ
ಬೀಜ ಬಿತ್ತಿ ರಾಜಕೀಯ ಮಾಡುತ್ತಿದ್ದಾರೆ. ಮತದಾರರು ಮೇ 7ರಂದು ತಕ್ಕ ಉತ್ತರ ನೀಡಲಿದ್ದಾರೆ ಎಂದು ತಿಳಿಸಿದರು. ಬಿಜೆಪಿ “ಸಬ್‌ ಕಾ ಸಾಥ್‌, ಸಬ್‌ ಕಾ
ವಿಕಾಸ್‌’ ಎಂದು ಎಲ್ಲರನ್ನೂ ಜೊತೆಯಾಗಿ ತೆಗೆದುಕೊಂಡು ಹೋಗುವ ಪಕ್ಷ. ಮುಸ್ಲಿಂ ವಿವಾಹಿತ ಮಹಿಳೆಯರಿಗೆ ತ್ರಿವಳಿ ತಲಾಖ್‌ ತೆಗೆದು ಗೌರವ ಉಳಿಸುವ ಕೆಲಸ ಮಾಡಿದೆ.

ಮಹಿಳಾ ಸಬಲೀಕರಣಕ್ಕೆ ಮೋದಿ ಸರ್ಕಾರ ಅನೇಕ ಯೋಜನೆ ಜಾರಿಗೊಳಿಸಿದೆ. ಮಹಿಳೆಯರು ರಾಜಕೀಯ ಕ್ಷೇತ್ರಕ್ಕೆ ಬರಬೇಕು ಎಂದು ಶೇ. 33 ರಷ್ಟು ಮೀಸಲಾತಿ ನೀಡಿದ್ದಾರೆ. ನಾನು ಗೆದ್ದು ದೆಹಲಿಗೆ ಹೋಗಿ ಅಡುಗೆ ಮಾಡುವುದಕ್ಕೆ ಅಷ್ಟೇ ಅಲ್ಲ, ಅಧಿಕಾರಕ್ಕೂ ಸೈ ಅಭಿವೃದ್ಧಿಗೂ ಸೈ ಎಂಬುದನ್ನು
ಸಾಬೀತುಪಡಿಸುತ್ತೇನೆ. ಅದಕ್ಕೆ ಮತದಾರರು ಬೆಂಬಲವಾಗಿ ನಿಲ್ಲಬೇಕು ಎಂದು ಮನವಿ ಮಾಡಿದರು.  ಕಾಂಗ್ರೆಸ್‌ ಅಭ್ಯರ್ಥಿಗೆ ತಮ್ಮ ಅಭಿವೃದ್ಧಿ ಕೆಲಸಗಳನ್ನು ಹೇಳಿಕೊಳ್ಳಲು ಆಗದೆ ನನ್ನ ವಿದ್ಯಾಭ್ಯಾಸದ ಬಗ್ಗೆ ಮಾತನಾಡಿ ಕೀಳು ರಾಜಕೀಯ ಮಾಡುತ್ತಿದ್ದಾರೆ. ಮೇ 7 ರಂದು ನಡೆಯಲಿರುವ ಮತದಾನ ವೇಳೆ
ನೀವೆಲ್ಲರೂ ನನ್ನ ಕ್ರಮ ಸಂಖ್ಯೆ 1, ಕಮಲದ ಗುರುತಿಗೆ ಹೆಚ್ಚಿನ ಸಂಖ್ಯೆಯಲ್ಲಿ ಮತಗಳನ್ನು ಹಾಕಿಸುವ ಮೂಲಕ ತಕ್ಕ ಪಾಠ ಕಲಿಸಬೇಕು ಎಂದರು.

ಶಾಸಕ ಬಿ.ಪಿ. ಹರೀಶ್‌, ಜೆಡಿಎಸ್‌ನ ಮಾಜಿ ಶಾಸಕ ಎಚ್‌.ಎಸ್‌. ಶಿವಶಂಕರ್‌, ಮಂಡಲ ಅಧ್ಯಕ್ಷ ನಿಂಗರಾಜ್‌, ಜೆಡಿಎಸ್‌ ಜಿಲ್ಲಾಧ್ಯಕ್ಷ ಚಿದಾನಂದಪ್ಪ, ಸಾಕ್ಷಿ,
ಸುನೀತಾ, ಗೀತಮ್ಮ, ಸೇರಿದಂತೆ ಬಿಜೆಪಿ, ಜೆಡಿಎಸ್‌ ಮುಖಂಡರು ಇದ್ದರು.

Advertisement

ಸಂಸದರ ಕಾರ್ಯ ವ್ಯಾಪ್ತಿಯ ಜ್ಞಾನವೇ ಇಲ್ಲ:
ಕಾಂಗ್ರೆಸ್‌ ಅಭ್ಯರ್ಥಿ ಪ್ರಣಾಳಿಕೆಯಲ್ಲಿ ಸುಳ್ಳಿನ ಸರಮಾಲೆಯನ್ನೇ ಪೋಣಿಸಿದ್ದಾರೆ. ಪ್ರತಿ ಗ್ರಾಮ ಪಂಚಾಯಿತಿಗೆ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸುವುದಾಗಿ
ಹೇಳಿದ್ದಾರೆ. ರಾಷ್ಟ್ರೀಯ ಆರೋಗ್ಯ ಮಿಷನ್‌ ಯೋಜನೆ ಅನ್ವಯ 30 ಸಾವಿರ ಜನ ಸಂಖ್ಯೆಗೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಅವಕಾಶವಿದೆ.
ಪಿಯುಸಿ ಓದಿರುವ ನನಗೆ ಇದರ ಬಗ್ಗೆ ಗೊತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿಗೆ ಇದರ ಅರಿವು ಇಲ್ಲದಿರುವುದು ದುರದೃಷ್ಟಕರ ಎಂದು ಗಾಯಿತ್ರಿ ಸಿದ್ದೇಶ್ವರ ಹೇಳಿದರು.
ಕಾಂಗ್ರೆಸ್‌ ಪ್ರಣಾಳಿಕೆಯಲ್ಲಿ ಹೇಳಿರುವ ಎಲ್ಲ ಕೆಲಸಗಳು ರಾಜ್ಯ ಸರ್ಕಾರದಿಂದ ಆಗಬೇಕಿರುವ ಕೆಲಸಗಳು. ಅವರ ಪತಿಯೇ ಸಚಿವರು. ಅವರ ಪತಿಗೆ ಹೇಳಿ
ಪ್ರಣಾಳಿಕೆಯಲ್ಲಿರುವ ಎಲ್ಲ ಕೆಲಸಗಳನ್ನು ಮಾಡಿಸಲಿ. ಪತಿ ಮಾಡಬೇಕಿರುವ ಕೆಲಸಕ್ಕೆ ಪತ್ನಿ ಏಕೆ ಸಂಸದರಾಗಬೇಕು ಎಂದು ಪ್ರಶ್ನಿಸಿದರು. ಒಬ್ಬ ಸಂಸದರ
ಕಾರ್ಯ ವ್ಯಾಪ್ತಿ, ಕೆಲಸಗಳ ಬಗ್ಗೆ ಕನಿಷ್ಠ ಜ್ಞಾನವೂ ಇಲ್ಲದವರು ಯಾವ ಪದವಿ ಪಡೆದರೆ ಏನು ಪ್ರಯೋಜನ, ಅಂತಹವರಿಗೆ ಅಧಿ ಕಾರ ಕೊಟ್ಟರೆ ಅಂಧರ ಕೈಗೆ
ವಜ್ರಾಯುಧ ಕೊಟ್ಟಂತೆ ಎಂದು ವಾಗ್ಧಾಳಿ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next