Advertisement

25ನೇ ವಯಸ್ಸಿಗೆ ಗಾಯತ್ರಿ ಸಿವಿಲ್‌ ನ್ಯಾಯಾಧೀಶೆ

03:09 PM Jan 17, 2023 | Team Udayavani |

ಬಂಗಾರಪೇಟೆ: ಸಿವಿಲ್‌ ನ್ಯಾಯಾಧೀಶೆಯಾಗಿ ತಾಲೂಕಿನ ಯಳಬುರ್ಗಿ ಗ್ರಾಮದ ನಾರಾಯಣಸ್ವಾಮಿ ಹಾಗೂ ವೆಂಕಟರತ್ನಮ್ಮ ಅವರ ಪುತ್ರಿ ಎನ್‌.ಗಾಯತ್ರಿ ಅವರು ಆಯ್ಕೆಯಾಗಿ ಇಡೀ ತಾಲೂಕಿಗೆ ಕೀರ್ತಿ ತಂದಿದ್ದಾರೆ.

Advertisement

2021ರಲ್ಲಿ ಕಾನೂನು ಪದವಿ ಪಡೆದು ಕೊಂಡಿರುವ ಎನ್‌.ಗಾಯತ್ರಿ ಅವರು ತಾವು ಕಂಡ ಕನಸನ್ನು ನನಸು ಮಾಡಿಕೊಳ್ಳುವ ನಿಟ್ಟಿನಲ್ಲಿ ಸತತ ಮತ್ತು ಸರಿಯಾದ ಪ್ರಯತ್ನದ ಮೂಲಕ 25ನೇ ವಯಸ್ಸಿಗೆ ಸಿವಿಲ್‌ ನ್ಯಾಯಾಲಯದ ನ್ಯಾಯಾಧೀಶೆ ಯಾಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಹೈಕೋರ್ಟ್‌ ಸಿವಿಲ್‌ ನ್ಯಾಯಾಧೀಶರ ಹುದ್ದೆಗಳಿಗೆ ನೇರ ನೇಮಕಾತಿಗಾಗಿ ಆನ್‌ಲೈನ್‌ ಮೂಲಕ ಅರ್ಜಿ ಗಳನ್ನು ಆಹ್ವಾನಿಸಿತ್ತು. ಇದೀಗ ಫ‌ಲಿತಾಂಶ ಪ್ರಕಟ ಗೊಂಡಿದ್ದು ಗಾಯತ್ರಿ ಅವರೂ ಆಯ್ಕೆಯಾಗಿದ್ದಾರೆ.

ಬಡತನದ ಹಿನ್ನೆಲೆಯಿಂದ ಬಂದ ಎನ್‌.ಗಾಯತ್ರಿ ಅವರು ತಾಲೂಕಿನ ಕಾರಹಳ್ಳಿಯ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಮಾಧ್ಯಮಿಕ, ಪಿಯು ಶಿಕ್ಷಣ ಪಡೆದುಕೊಂಡಿದ್ದಾರೆ. ಕೋಲಾರದ ಮಹಿಳಾ ಕಾಲೇಜಿನಲ್ಲಿ ಬಿಕಾಂ ಪದವಿ ಮುಗಿಸಿ, ಕೆಜಿಎಫ್ನ ಕೆಂಗಲ್‌ ಹನುಮಂತಯ್ಯ ಕಾನೂನು ಕಾಲೇಜಿನಲ್ಲಿ ಪದವಿ ಪೂರೈಸಿ ಕರ್ನಾಟಕಕ್ಕೆ 4ನೇ ರ್‍ಯಾಂಕ್‌ ಬರುವ ಮೂಲಕ ಗಮನ ಸೆಳೆದಿದ್ದಾರೆ.

ಪಟ್ಟಣದ ವಕೀಲ ಶಿವಸುಬ್ರಮಣ್ಯ ಬಳಿ ಜೂನಿಯರ್‌ ಆಗಿ ವಕೀಲಿ ವೃತ್ತಿ ಮಾಡುತ್ತಿದ್ದರು. ನೂತನ ಸಿವಿಲ್‌ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವ ಎನ್‌. ಗಾಯತ್ರಿ ಅವರು, ಎರಡನೇ ಪ್ರಯತ್ನದಲ್ಲಿ ಸಿವಿಲ್‌ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ. ಎನ್‌.ಗಾಯತ್ರಿ ಅವರು ಮೂಲತಃ ಯಳಬುರ್ಗಿ ಯವರಾಗಿದ್ದು, ಕಾರಹಳ್ಳಿ ಗ್ರಾಮದಲ್ಲಿ ಬಾಡಿಗೆ ಮನೆ ಯಲ್ಲಿ ವಾಸವಾಗಿದ್ದಾರೆ.

ನಾರಾಯಣಸ್ವಾಮಿ ಹಾಗೂ ವೆಂಕಟರತ್ನಮ್ಮರ ಏಕಮಾತ್ರ ಪುತ್ರಿ. ತಂದೆ ನಾರಾಯಣಸ್ವಾಮಿ ಕೂಲಿ ಮಾಡಿ ಜೀವನ ನಡೆ ಸುತ್ತಿದ್ದು, ಬಡತನದಲ್ಲಿಯೇ ಸಾಧಿಸಬೇಕೆಂಬ ಛಲ ದಲ್ಲಿ ಯಶಸ್ವಿಯಾಗಿದ್ದಾರೆ. ತಂದೆ, ತಾಯಿ, ಸಹ ಪಾಠಿಗಳು, ಗ್ರಾಮಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ನನ್ನ ಮನೆಯಲ್ಲಿ ಉನ್ನತ ಶಿಕ್ಷಣ ಪಡೆದ ಮೊದಲ ಮಹಿಳೆ ನಾನು. ಅದರಲ್ಲೂ ಸಿವಿಲ್‌ ನ್ಯಾಯಾಧೀಶೆಯಾಗಿ ಆಯ್ಕೆಯಾಗಿರುವುದರಲ್ಲಿ ಮೊದಲಿಗಳು.

Advertisement

ತೀರಾ ಬಡತನದಲ್ಲಿಯೂ ಕೂಲಿ ಮಾಡಿ ಜೀವನ ನಡೆಸಿ ನನ್ನನ್ನು ಓದಿಸಿದ ತಂದೆ-ತಾಯಿಗೂ ಋಣಿಯಾಗಿರುತ್ತೇನೆ. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನನ್ನ ಮಿತಿಯಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವೆ. ನನ್ನೆಲ್ಲ ಸಾಧನೆಗೆ ಡಾ.ಬಿ.ಆರ್‌.ಅಂಬೇಡ್ಕರ್‌ ಅವರು ಸ್ಫೂರ್ತಿಯಾಗಿದ್ದು, ಅವರ ದಾರಿಯಲ್ಲಿ ಸಾಗುವೆ. – ಎನ್‌.ಗಾಯಿತ್ರಿ, ನೂತನ ಸಿವಿಲ್‌ ನ್ಯಾಯಾಧೀಶೆ

Advertisement

Udayavani is now on Telegram. Click here to join our channel and stay updated with the latest news.

Next