ದೋಟಿಹಾಳ: ಶ್ರೇಷ್ಠ, ನಿಷ್ಟಾಪೂರ್ವಕ ಭಕ್ತಿಯಿಂದ ಜಾತ್ರೆ ಆಚರಣೆ ಮಾಡಿದಾಗ ನಮಗೆ ಯಾವುದೇ ಕಾನೂನು ತೊಡಕು ಬರುವುದಿಲ್ಲ ಎಂದು ಕೊಪ್ಪಳದ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಅಭಿಪ್ರಾಯಪಟ್ಟರು.
ಗ್ರಾಮದ ಅವಧೂತ ಶುಖಮುನಿ ಸ್ವಾಮಿ ಮಠದಲ್ಲಿ ಬುಧವಾರ ರಾತ್ರಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ಕೊಪ್ಪಳದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ನಡೆದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು. ಜಾತ್ರೆಗಳು ಉತ್ಸವಗಳಾಬೇಕು ಅಂದಾಗ ಮಾತ್ರ ಗ್ರಾಮದ ವೈವಿಧ್ಯತೆ ಅನಾವರಣಗೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ಗ್ರಾಮಸ್ಥರು ಅವಧೂತರ ಜಾತ್ರೆಯನ್ನು ಅಚ್ಚುಕಟ್ಟಾಗಿ ಮಾಡಬೇಕು.
ಜಾತ್ರೆಗೆ ಹೆಸರುವಾಸಿ ಆಗಿ ಶ್ರದ್ಧಾ, ಭಕ್ತಿಯ ಜಾತ್ರೆ ಆಗಬೇಕೇ ಹೊರತು ಮಜಾದ ಯಾತ್ರೆ ಆಗಬಾರದು. ಜಾತ್ರೆಯೆಂದರೆ ಊರಿನ ಪ್ರಮುಖರು, ಮುಖಂಡರು, ಪೊಲೀಸರು ಹಾಗೂ ಅ ಧಿಕಾರಿಗಳು ಬರಬೇಕು ಅಂದಾಗ ಮಾತ್ರ ಜಾತ್ರೆ ಅರ್ಥಪೂರ್ಣವಾಗಲು ಸಾಧ್ಯವಾಗುತ್ತದೆ. ಈ ವರ್ಷ ಶ್ರದ್ಧಾ, ಭಕ್ತಿಯ ಜಾತ್ರೆ ಆಗಬೇಕೇ ಹೊರತು ಮಜಾದ ಯಾತ್ರೆ ಆಗಬಾರದು.
ನಾಡಿಗೆ ಮಳೆ, ಬೆಳೆ ಸಮೃದ್ಧಿ ಆಗಬೇಕೆಂಬ ಸಂಕಲ್ಪದಿಂದ ಜಾತ್ರೆ ಮಾಡಿದಾಗ ಮಾತ್ರ ನೀವು ಮಾಡುವ ಶುಖಮುನಿ ಸ್ವಾಮಿಗಳ ಜಾತ್ರೆಗೆ ಅರ್ಥ ಬರುತ್ತದೆ. ಗುಡಿಯಲ್ಲಿರುವ ದೇವರು ಕಲ್ಲಾದರೆ ಭಕ್ತರ ಮನಸ್ಸು ನಿಜವಾದ ದೇವರು ಎಂಬ ಮನೋಭಾವ ಇಟ್ಟುಕೊಂಡು ರಥೋತ್ಸವ ಮಾಡಿ, ಜಾತ್ರೆ ವೇಳೆ ಧಾರ್ಮಿಕ, ಸಾಮಾಜಿಕ ಕಾರ್ಯಗಳು ಜೊತೆಗೆ ವಿಚಾರವಂತ ವ್ಯಕ್ತಿಗಳ ಮೂಲಕ ಭಕ್ತರಿಗೆ ವಿಚಾರ ಧಾರೆ ಎರೆಯಲು ಅನೇಕ ಕಾರ್ಯಕ್ರಮಗಳನ್ನು ಹಾಕಿಕೊಳ್ಳಿ, ಯುವಕರು ದೇಶ ಕಟ್ಟುವ ಕೆಲಸ ಮಾಡಲು ಮುಂದಾಗಿ. ತಾತನ ಜಾತ್ರೆಯಲ್ಲಿ ಅವಘಡಗಳು ನಡೆದರೆ ಜನರೂ ಜಾತ್ರೆಗೆ ಬರುವುದಿಲ್ಲ. ದೇವರು (ಶುಕಮುನಿ ತಾತ)ಸಹ ನಿಮ್ಮೂರಲ್ಲಿ ಇರುವುದಿಲ್ಲ. ಈ ವರ್ಷದ ಜಾತ್ರೆಯನ್ನು ಅರ್ಥಪೂರ್ಣವಾಗಿ ಆಚರಣೆ ಮಾಡಿದರೆ. ಮುಂದಿನ ವರ್ಷದ ಜಾತ್ರೆಯಲ್ಲಿ ಪಾಲ್ಗೊಳ್ಳುವುದಾಗಿ ಶ್ರೀಗಳು ತಿಳಿಸಿದರು.
ಗ್ರಾಮಸ್ಥರ ಮನಸ್ಸಿಗೆ ನೋವಾಗಬಾದೆಂದು ಪೊಲೀಸರು ಜಾತ್ರೆಗೆ ಅವಕಾಶ ಮಾಡಿಕೊಡುತ್ತಾರೆ. ನೀವೂ ಪೊಲೀಸರಿಗೆ ನೋವಾಗದಂತೆ ವರ್ತಿಸಿ, ಜಾತ್ರೆಯನ್ನು ಶಾಂತಿ ಸೌಹಾರ್ದಯುತವಾಗಿ ನಡೆಸಬೇಕು ಎಂದು ಸಲಹೆ ನೀಡಿದರು. ಡಿವೈಎಸ್‌ಪಿ ರುದ್ರೇಶ ಉಜ್ಜಿನಕೊಪ್ಪ ಮಾತನಾಡಿ, ಜಾತ್ರೆ, ಉತ್ಸವಗಳಲ್ಲಿ ಭಕ್ತಿ ಭಾವದಿಂದ ನಡೆದುಕೊಳ್ಳಬೇಕು. ಕುಡಿದ ಅಮಲಿನಲ್ಲಿ ಪಲ್ಲಕ್ಕಿ ಹೊತ್ತು ಜಗಳ ಮಾಡುವುದಾದರೆ ಜಾತ್ರೆ ರದ್ದುಗೊಳಿಸಲಾಗುವುದು. ಪ್ರತಿ ವರ್ಷ ಪಲ್ಲಕ್ಕಿ ಉತ್ಸವ ವೇಳೆ ಒಂದಿಲ್ಲೊಂದು ಅವಘಡಗಳು ನಡೆಯುತ್ತಲೇ ಇವೆ. ಕಳೆದ ಸಲ ನಡೆದ ಗಲಾಟೆಗೆ ಸಂಬಂಧಿ ಸಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಬಾರಿಯ ಜಾತ್ರೆ ರದ್ದುಗೊಳಿಸುವ ತೀರ್ಮಾನಕ್ಕೆ ಬರಲಾಗಿತ್ತು. ಗ್ರಾಮದ ಪ್ರಮುಖರು ಗವಿಶ್ರೀಗಳನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದಕ್ಕೆ ಶ್ರೀಗಳ ನೇತೃತ್ವದಲ್ಲೇ ಶಾಂತಿ ಸಭೆ ನಡೆಸಲಾಗುತ್ತಿದೆ. ಜಾತ್ರೆಯನ್ನು ಯಾವ ರೀತಿ ಮಾಡಬೇಕು ಎಂದು ಕುಷ್ಟಗಿ ತಹಶೀಲ್ದಾರ್ ನಿಮ್ಮ ಗ್ರಾಮದಲ್ಲಿ ಮತ್ತೂಂದು ಸಭೆ ಕರೆದು ತಿರ್ಮಾನಿಸುತ್ತಾರೆ ಎಂದು ಹೇಳಿದರು.
ಶಾಸಕ ಅಮರೇಗೌಡ ಪಾಟೀಳ ಬಯ್ನಾಪುರ, ಮಾಜಿ ಶಾಸಕ ಹಸನಸಾಬ್ ದೋಟಿಹಾಳ, ತಹಶೀಲ್ದಾರ್ ಎಂ. ಸಿದ್ದೇಶ, ಜಿಪಂ ಸದಸ್ಯರಾದ ಕೆ. ಮಹೇಶ, ವಿಜಯ ನಾಯಕ ಮಾತನಾಡಿದರು. ಈ ಸಂದರ್ಭದಲ್ಲಿ ತಾಪಂ ಸದಸ್ಯರಾದ ಯಂಕಪ್ಪ ಚವ್ಹಾಣ, ಸಿಪಿಐ ನಿಂಗಪ್ಪ ರುದ್ರಗೊಳ, ಕಂದಾಯ ನಿರೀಕ್ಷಕ ಶರಣಯ್ಯ ನಿಡಗುಂದಿ, ಗ್ರಾಮ ಲೆಕ್ಕಾ ಧಿಕಾರಿ ಎಸ್. ಸಂಗಮೇಶ, ದೋಟಿಹಾಳ-ಕೇಸೂರ ಗ್ರಾಪಂ ಸದಸ್ಯರು, ಅವಳಿ ಗ್ರಾಮಗಳ ಮುಖಂಡರು, ಯುವಕರು, ಕಂದಾಯ ಇಲಾಖೆ ಸಿಬ್ಬಂದಿಗಳು, ಅವಳಿ ಗ್ರಾಮಗಳ ಜನರು ಇದ್ದರು.