Advertisement

ಉದ್ಯಮಕ್ಕೆ ಕೊಟ್ಟಿತು.. ಕಾರ್ಮಿಕರನ್ನು ಮರೆಯಿತು!

05:21 AM May 21, 2020 | mahesh |

ಜನಜೀವನ ಇದೀಗ ಸಹಜ ಸ್ಥಿತಿಯತ್ತ ಮರಳುತ್ತಿದೆ. ಆದರೆ ಲಾಕ್‌ಡೌನ್‌ ಪರಿಣಾಮವಾಗಿ ನಿಂತಿರುವ ಆರ್ಥಿಕತೆ ಚೇತರಿಸಿಕೊಳ್ಳಲು ಇನ್ನೂ ಹಲವಾರು ತಿಂಗಳುಗಳೇ ಬೇಕು. ಕೇಂದ್ರ ಬಿಡುಗಡೆ ಮಾಡಿರುವ ಪ್ಯಾಕೇಜ್‌ನಿಂದ ಕಾರ್ಮಿಕರಿಗೆ ಪ್ರಯೋಜನವೇನು ಎಂಬುದನ್ನು ನೋಡಬೇಕಾಗಿದೆ. ಅದರಲ್ಲೂ ದೇಶದಲ್ಲಿ ಕೃಷಿ ಬಿಟ್ಟರೆ, ಅತಿ ಹೆಚ್ಚು ಕಾರ್ಮಿಕರಿರುವ ಎಕ್ಸ್‌ಪೋರ್ಟ್‌ ಗಾರ್ಮೆಂಟ್ಸ್‌ ಉದ್ಯಮದ ಕಾರ್ಮಿಕರಿಗೆ ದಕ್ಕಿದ್ದು ಅಷ್ಟಕ್ಕಷ್ಟೇ. ಈ ಉದ್ಯಮದ ಚೇತರಿಕೆಗಾಗಿ, ಕೇಂದ್ರ ಸರ್ಕಾರ ತನ್ನ ಗಮನ ಕೇಂದ್ರೀಕರಿಸಿದೆ. ಆದರೆ, ಆಧಾರಸ್ತಂಭಗಳಾಗಿರುವ ಕಾರ್ಮಿಕರನ್ನು ಮರೆತಿದೆ. ಉದ್ಯಮದ ಚೇತರಿಕೆ ಭವಿಷ್ಯದಲ್ಲೂ ಕಾರ್ಮಿಕರ ಏಳಿಗೆಗೆ ನೆರವಾದಂತೆ ಕಂಡರೂ, ತಕ್ಷಣಕ್ಕೆ ಸಂಕಷ್ಟದಲ್ಲಿರುವ ಶ್ರಮಿಕರ ನೆರವಿಗೆ ಧಾವಿಸುವ ಕೆಲಸ ಆಗಿಲ್ಲ.

Advertisement

ಏನು ಮಾಡಬಹುದಿತ್ತು?: ಈಗ ನೀಡಿರುವ 20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ ತುರ್ತು ನಿಧಿ ಎಂದು ಕಾರ್ಮಿಕರ ಎರಡು ತಿಂಗಳ ವೇತನದ ಭಾಗವಾಗಿ ಪ್ಯಾಕೇಜ್‌ನಲ್ಲಿ ನಿರ್ದಿಷ್ಟ ಮೊತ್ತವನ್ನು ತೆಗೆದಿರಿಸಬಹುದಿತ್ತು. ಕಾರ್ಮಿಕರ ವೇತನದ ಶೇ. 50 ಭಾಗವನ್ನು ಸರ್ಕಾರವೇ ಪೂರೈಸಿ, ಉದ್ಯಮಿಗಳಿಗೆ ನೆರವಾಗಬಹುದಿತ್ತು, ಜೊತೆಗೆ ಕಾರ್ಮಿಕರಿಗೂ ನೆರವಾಗಬಹುದಿತ್ತು. ಈಗಾಗಲೇ ಬಾಂಗ್ಲಾದೇಶ ಹಾಗೂ ಕಾಂಬೋಡಿಯಾ ದೇಶಗಳ ಸರ್ಕಾರಗಳು ಗಾರ್ಮೆಂಟ್ಸ್‌ ಉದ್ಯಮಕ್ಕೆ ಈ ರೀತಿಯ ನೆರವು ನೀಡಿವೆ. ಆದರೆ ಇಲ್ಲಿ ಮಾತ್ರ ಕಾರ್ಮಿಕರು ವೇತನಕ್ಕಾಗಿ ಹೋರಾಡುವಂತಾಗಿದೆ. 2016 ರ ಏಪ್ರಿಲ್‌ ತಿಂಗಳಲ್ಲಿ ತಮ್ಮ ಪಿ.ಎಫ್ ಹಣ ತಮಗೆ ದೊರಕದಂತೆ ಅಡ್ಡಿ ಮಾಡಲು ಹೊರಟಿದ್ದ ಕೇಂದ್ರದ ವಿರುದ್ಧ ಗಾರ್ಮೆಂಟ್ಸ್‌ ಕಾರ್ಮಿಕರು ಬೀದಿಗಿಳಿದ ಇತಿಹಾಸ ನಮ್ಮ ಕಣ್ಣ
ಮುಂದೆಯೇ ಇದೆ. ಈ ಹಿನ್ನೆಲೆಯಲ್ಲಿ, ಈ ಮಹಿಳಾ ಕಾರ್ಮಿಕರಿಗೆ ಸಂಕಷ್ಟದ ವೇಳೆ ನೆರವಾಗಲೇ ಬೇಕಿದೆ.

ಭಾರತದಲ್ಲಿ ಮುಖ್ಯವಾಗಿ ದೆಹಲಿಯ ಎನ್‌.ಸಿ.ಆರ್‌. ವಲಯ, ಕರ್ನಾಟಕ ಹಾಗೂ ತಮಿಳುನಾಡಿನ ಚೆನ್ನೈ ಮತ್ತು ತಿರುಪೂರ್‌ಗಳಲ್ಲಿ ಗಾರ್ಮೆಂಟ್ಸ್‌ ಉದ್ಯಮ
ನೆಲೆಯಾಗಿದ್ದು, ಸುಮಾರು 35ರಿಂದ 40 ಲಕ್ಷ ಕಾರ್ಮಿಕರು ದುಡಿಯುತ್ತಿದ್ದಾರೆ. ಇಡೀ ಪ್ರಪಂಚಕ್ಕೆ ಸಿದ್ಧ ಉಡುಪುಗಳನ್ನು ರಫ್ತು ಮಾಡುವಲ್ಲಿ ಭಾರತ 2ನೇ ಸ್ಥಾನದಲ್ಲಿದೆ. ಭಾರತದ ಒಟ್ಟು ರಪ್ತಿನ ಪ್ರಮಾಣ ದಲ್ಲಿ ಶೇ. 15ರಷ್ಟು ಸಾಧಿಸುತ್ತಿದೆ. ಬೆಂಗಳೂರನ್ನೂ ಒಳಗೊಂಡಂತೆ ಇನ್ನಿತರ ಸುಮಾರು 10 ಜಿಲ್ಲೆಗಳಲ್ಲಿ ಸುಮಾರು 4ರಿಂದ 5 ಲಕ್ಷ ಕಾರ್ಮಿಕರು ದುಡಿಯುತ್ತಿದ್ದಾರೆ. ಕರ್ನಾಟಕದ ವಿದೇಶೀ ವಿನಿಮಯ ಗಳಿಕೆಯಲ್ಲಿ ಐಟಿ ವಲಯದ ನಂತರ ಸಿದ್ಧ ಉಡುಪು
ಉದ್ಯಮ ಎರಡನೇ ಸ್ಥಾನದಲ್ಲಿ ನಿಲ್ಲುತ್ತದೆ. ದೇಶದ ಒಟ್ಟು ಗಾರ್ಮೆಂಟ್ಸ್‌ ಉತ್ಪಾದನೆಯಲ್ಲಿ 20%ನಷ್ಟು ರಾಜ್ಯದ ಕೊಡುಗೆ ಇದೆ. ಈ ಉದ್ಯಮದಲ್ಲಿ ದುಡಿಯುತ್ತಿರುವ ಕಾರ್ಮಿಕ ರಲ್ಲಿ 85% ಮಹಿಳೆಯರು. ದೇಶವೇ ಲಾಕ್‌ಡೌನ್‌ ಆದಾಗ ಈ ಗಾರ್ಮೆಂಟ್ಸ್‌ ಕಾರ್ಖಾನೆಗಳೂ ಮುಚ್ಚಿದವು, ಕಾರ್ಮಿಕರು ಮನೆಯಲ್ಲೇ ಉಳಿದರು.

ಕಾರ್ಮಿಕರಿಗೆ ಲಾಕ್‌ಡೌನ್‌ ಅವಧಿಯ ವೇತನವನ್ನು ನಿರಾಕರಿಸುವಂತಿಲ್ಲ ಎಂದು ಕೇಂದ್ರ ಸರ್ಕಾರ ಆದೇಶಿಸಿದ್ದರೂ, ಮಾಲೀಕರು ಪಾಲಿಸಲಿಲ್ಲ. ಈಗ ಆ ಆದೇಶವನ್ನು ಸುಪ್ರೀಂ ಕೋರ್ಟ್‌ ತಡೆಹಿಡಿದಿದೆ. ಹೀಗಾಗಿ ಗಾರ್ಮೆಂಟ್ಸ್‌ ಕಾರ್ಮಿಕರ ಏಪ್ರಿಲ್‌ ತಿಂಗಳ ವೇತನವು ಕನ್ನಡಿಗಂಟಾಗಿದೆ.

● ಪ್ರತಿಭಾ ಆರ್‌. ಅಧ್ಯಕ್ಷರು, ಗಾರ್ಮೆಂಟ್‌, ಅಂಡ್‌ ಟೆಕ್ಸ್‌ಟೈಲ್‌ ವರ್ಕರ್ಸ್‌ ಯೂನಿಯನ್‌ (ಜಿಟಿಡಬ್ಲುಯು)

Advertisement

Udayavani is now on Telegram. Click here to join our channel and stay updated with the latest news.

Next