ಮಧುಗಿರಿ: ಪಂಚರತ್ನ ರಥಯಾತ್ರೆ ದೊಡ್ಡೇರಿಯಲ್ಲಿ ಸಾಗುತ್ತಿದ್ದಾಗ ಮಾಜಿ ಸಿಎಂ ಕುಮಾರಸ್ವಾಮಿಯನ್ನು ನೋಡಲು ಬಾಲಕನೊಬ್ಬ ಪರದಾಡುತ್ತಿದ್ದ. ಇದನ್ನು ಗಮನಿಸಿದ ಕುಮಾರಸ್ವಾಮಿ ಹತ್ತಿರಕ್ಕೆ ಕರೆದು ವಿಚಾರಿಸಿದಾಗ, ಬಾಲಕ ತುಮಕೂರಿನಿಂದ ಮಧುಗಿರಿಗೆ ಕೆಲಸಕ್ಕಾಗಿ ಬಂದಿರುವುದಾಗಿ ತಿಳಿಸುತ್ತಾನೆ.
ಕುಟುಂಬದ ಬಗ್ಗೆ ವಿಚಾರಿಸಿದಾಗ, ತಾಯಿಗೆ ಅಪಘಾತವಾಗಿ ಮನೆಯಲ್ಲಿದ್ದು, ತಂಗಿಯನ್ನು ಓದಿಸಲು ತಾನು ಕೆಲಸ ಮಾಡುತ್ತಿರುವುದಾಗಿ ತಿಳಿಸುತ್ತಾನೆ. ನೀನು ಓದಲ್ವ ಎಂಬ ಎಚ್‌ಡಿಕೆ ಪ್ರಶ್ನೆಗೆ, ನಾನು ಓದಲು ಹೋದರೆ ಮನೆಯಲ್ಲಿ ತಾಯಿಯನ್ನು ನೋಡಿಕೊಳ್ಳಲು ಹಾಗೂ ತಂಗಿಯನ್ನು ಓದಿಸಲು ಸಾಧ್ಯವಿಲ್ಲ ಎಂಬ ಉತ್ತರ ಕೇಳಿ ಎಚ್‌ಡಿಕೆ ಕಣ್ಣು ಒದ್ದೆಯಾಗುತ್ತದೆ. ಬಳಿಕ “ನಿನಗೆ ಏನು ಬೇಕು’ ಎಂದು ಪ್ರಶ್ನಿಸಿದರು.
“ನನಗೆ ಏನೂ ಬೇಡ, ನಿಮ್ಮನ್ನು ಮಾತಾಡಿಸಿಕೊಂಡು ಹೋಗಲು ಬಂದಿದ್ದೇನೆ’ ಎನ್ನುತ್ತಾನೆ. ಇದರಿಂದ ಮತ್ತಷ್ಟು ಭಾವುಕರಾದ ಕುಮಾರಸ್ವಾಮಿ, ತನ್ನ ಫೋನ್ ನಂಬರ್ ಕೊಟ್ಟು, ಯಾವಾಗ ಬೇಕಾದರೂ ಬಂದು ಕಾಣಬಹುದು ಎಂದು ತಿಳಿಸಿದರು.
ಅನಂತರ ಮಧುಗಿರಿಯಲ್ಲಿ ಆತನಿಗೆ ಹೊಸ ಬಟ್ಟೆ ಕೊಡಿಸಿ ಮಾಧ್ಯಮದೊಂದಿಗೆ ಮಾತನಾಡಿದ ಕುಮಾರಸ್ವಾಮಿ, ಇಂತಹ ಜೀವಗಳ ಪ್ರೀತಿಯೇ ನನಗೆ ಶ್ರೀರಕ್ಷೆ. ಮುಂದೆ ಸರಕಾರ ಬಂದಾಗ ಈತನನ್ನು ಚೆನ್ನಾಗಿ ಓದಿಸಿ ಸರಕಾರಿ ಉದ್ಯೋಗ ಕೊಡಿಸುವುದಾಗಿ ಭರವಸೆ ನೀಡಿದರು.