Advertisement

ಸ್ವಾತಂತ್ರ್ಯ ಹುತಾತ್ಮನಿಗೆ ಅನ್ನ ನೀಡಿದಾಕೆ ಶತಾಯುಷಿ

12:11 AM Aug 13, 2022 | Team Udayavani |

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕುವ ಮುನ್ನ ಕರ್ನಾಟಕದ ಹಾವೇರಿ ಜಿಲ್ಲೆ ಮುಂಬಯಿ ಪ್ರಾಂತಕ್ಕೂ, ಶಿವಮೊಗ್ಗ ಜಿಲ್ಲೆ ಮೈಸೂರು ಪ್ರಾಂತಕ್ಕೂ ಸೇರಿದ್ದವು. ಹಾವೇರಿ ಜಿಲ್ಲೆಯ ಮೋಟೆಬೆನ್ನೂರು ಗ್ರಾಮದಲ್ಲಿ ಜನಿಸಿದ ಮೈಲಾರ ಮಹದೇವಪ್ಪ ಮಾರ್ತಾಂಡರು (1911-1943) ಸ್ವಾತಂತ್ರ್ಯ ಹೋರಾಟವನ್ನು ನಡೆಸಿ ಅದರಲ್ಲೇ ಅಸುನೀಗಿದರು. ಗಾಂಧೀಜಿಯವರ 75ನೆಯ ವರ್ಷಕ್ಕೆ 1942ರಲ್ಲಿ 75 ಬಗೆಯ ಸಾಹಸಗಳನ್ನು ಮಾಡಲು ಅನುವಾದರು. ಸರಕಾರಕ್ಕೆ ಸಲ್ಲಬೇಕಾದ ತೆರಿಗೆ ಸಂಗ್ರಹವನ್ನು ದೋಚಿ ಸ್ವಾತಂತ್ರ್ಯ ಸಂಗ್ರಾಮ ಮತ್ತು ಬಡಬಗ್ಗರಿಗೆ ಬಳಸುವುದು ಅವರ ಮುಖ್ಯ ಗುರಿಯಾಗಿತ್ತು. ಆಗ ಬ್ರಿಟಿಷ್‌ ಸರಕಾರ ಇವರ ಸುಳಿವು ನೀಡಿದವರಿಗೆ 300 ರೂ. ಬಹುಮಾನ ಘೋಷಿಸಿ “ಕಂಡಲ್ಲಿ ಗುಂಡಿಕ್ಕಲು’ ಆದೇಶ ಹೊರಡಿಸಿತು.

Advertisement

ಆಗ ಭಾರತದಲ್ಲಿ ಕೆಲವು ಪ್ರಾಂತಗಳು ನೇರವಾಗಿ ಬ್ರಿಟಿಷ್‌ ಆಧಿಪತ್ಯದಲ್ಲಿದ್ದರೆ ಕೆಲವು ದೇಸೀ ರಾಜರ ಆಧಿಪತ್ಯದಲ್ಲಿದ್ದವು. ಹಾವೇರಿ ಜಿಲ್ಲೆ ಮುಂಬಯಿ ಪ್ರಾಂತ್ಯದ ಅಧೀನದಲ್ಲಿದ್ದು, ಬ್ರಿಟಿಷರ ನೇರ ಆಡಳಿತದಲ್ಲಿತ್ತು. ಶಿವಮೊಗ್ಗ ಮೈಸೂರು ಪ್ರಾಂತದ (ರಾಜರ) ಅಧೀನದಲ್ಲಿಯೂ ಇತ್ತು. ಹೀಗಾಗಿ “ಕಂಡಲ್ಲಿ ಗುಂಡಿಕ್ಕುವ’ ಸಂಕಷ್ಟದ ಸಂದರ್ಭ ಮೈಲಾರ ಮಹದೇವರು ಮುಂಬಯಿ ಪ್ರಾಂತದಿಂದ ಮೈಸೂರು ಪ್ರಾಂತದ ಶಿವಮೊಗ್ಗ ಜಿಲ್ಲೆಯಲ್ಲಿ ಆಶ್ರಯ ಪಡೆಯುತ್ತಿದ್ದರು.

ಇದು ಮಹದೇವರ ಭೂಗತ ಹೋರಾಟ ನಡೆಯುತ್ತಿದ್ದ ಸಮಯ. ಆ ಸಮಯ ಮಹದೇವರಿಗೆ ನೆರವಾದವರು ಸ್ವಾತಂತ್ರ್ಯ ಹೋರಾಟಗಾರ ಶಿವಮೊಗ್ಗ ಜಿಲ್ಲೆ ಸೊರಬ ತಾಲೂಕಿನ ಎಣ್ಣೆಕೊಪ್ಪದ ಮಲ್ಲಿಕಾರ್ಜುನ ಗೌಡರು. ಇವರ ಹೆಂಡತಿಯ ತಂಗಿ ಕಮಲಮ್ಮ ದೇಸಾಯಿ, ಸಡ್ಡಗ ವಿರೂಪಾಕ್ಷಪ್ಪ ದೇಸಾಯಿ ಆನವಟ್ಟಿ ಗ್ರಾಮದಲ್ಲಿ ಮಲ್ಲಿಕಾರ್ಜುನ ಗೌಡರ ನೆರವಿನಿಂದ ಇದ್ದರು. ಮಹದೇವ ಮಾರ್ತಾಂಡ ಅವರು ಮಲ್ಲಿಕಾರ್ಜುನ ಗೌಡರ ನೆರವಿನಿಂದ ಅವರ ಆನೆ, ಕುದುರೆಗಳಲ್ಲಿ ಸಂಚರಿಸಿ ಆನವಟ್ಟಿಗೆ ಬಂದು ವಾಸಿಸುತ್ತಿದ್ದರು. ಪೊಲೀಸರಿಗೆ ಗುರುತು ಹತ್ತಬಾರದೆಂದು ವಿರೂಪಾಕ್ಷಪ್ಪನವರ ಮನೆಯಲ್ಲಿ ತೋಟದ ಕೆಲಸಗಳನ್ನು ಮಾಡುತ್ತಿದ್ದರು. ಮಹದೇವರಿಗೆ ಊಟ ಹಾಕಿದವರು ಕಮಲಮ್ಮ. ಕಮಲಮ್ಮನವರಿಗೆ ಈಗ 100 ವರ್ಷ.

ಕಂಡಲ್ಲಿ ಗುಂಡಿಕ್ಕುವ ಮೊದಲೇ ಖಾದಿ ಪ್ರಚಾರಕ್ಕಾಗಿ ಮೈಲಾರ ಮಹದೇವಪ್ಪನವರು ಖಾದಿ ಸಿದ್ಧಲಿಂಗಪ್ಪನವರೊಂದಿಗೆ ಎಣ್ಣೆಕೊಪ್ಪ, ಆನವಟ್ಟಿಗೆ ಬರುತ್ತಿದ್ದರು. ಆಗಲೂ ಮಹದೇವಪ್ಪನವರಿಗೆ ಆತಿಥ್ಯ ಮಲ್ಲಿಕಾರ್ಜುನ ಗೌಡರು, ವಿರೂಪಾಕ್ಷಪ್ಪ ದೇಸಾಯಿಯವರ ಮನೆಗಳಲ್ಲಿಯೇ ಸಿಗುತ್ತಿತ್ತು. ಮಹದೇವಪ್ಪನವರ ಆತ್ಮೀಯತೆ ಹೇಗಿತ್ತೆಂದರೆ ವಿರೂಪಾಕ್ಷಪ್ಪನವರ ಮನೆಯ ಸದಸ್ಯರಂತೆಯೇ ಇದ್ದರು. ಕಮಲಮ್ಮನವರು ಕೆಂಡದ ಮೇಲೆ ರೊಟ್ಟಿ ಬೇಯಿಸುತ್ತಿದ್ದಾಗ ಅಡುಗೆ ಮನೆಯಲ್ಲಿಯೇ ವಿರೂಪಾಕ್ಷಪ್ಪ ಮತ್ತು ಮಹದೇವಪ್ಪ ಅಕ್ಕಪಕ್ಕ ಕುಳಿತುಕೊಂಡು ತಿನ್ನುತ್ತಿದ್ದರು. ಅಡುಗೆ ಮನೆಗೆ ಪ್ರವೇಶಾವಕಾಶ ಮನೆಯ ಸದಸ್ಯರಿಗೆ ಮಾತ್ರ ಇದ್ದಂತಹ ಕಾಲವದು. “ನಮ್ಮನೆಯವರೂ ಮಹದೇವಪ್ಪನವರೂ ಅಕ್ಕಪಕ್ಕ ಕುಳಿತುಕೊಳ್ಳುತ್ತಿದ್ದರು. ಎರಡು ಕೈಗಳಲ್ಲಿ ಎರಡು ದೊಡ್ಡ ಕೊಡಗಳಲ್ಲಿ ನೀರು ತರುತ್ತಿದ್ದರು’ ಎಂಬುದನ್ನು ಈಗಲೂ ಬಾವಿ ಯನ್ನು ತೋರಿಸಿ ಕಮಲಮ್ಮ ನೆನಪಿಸಿಕೊಳ್ಳುತ್ತಾರೆ.

ವಿರೂಪಾಕ್ಷಪ್ಪ ದೇಸಾಯಿಯವರು ಮಲ್ಲಿಕಾರ್ಜುನ ಗೌಡರಿಗಿಂತ ಮೊದಲೇ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡವರು. ಇವರು ಜೈಲಿನಲ್ಲಿರುವಾಗ ಕಮಲಮ್ಮ ತುಂಬು ಗರ್ಭಿಣಿ. ಇದು ಮಹದೇವಪ್ಪನವರಿಗೆ ಗೊತ್ತಾಗಿ ತನ್ನ ಪತ್ನಿ ಸಿದ್ದಮ್ಮನನ್ನು ಆನವಟ್ಟಿಗೆ ಕಳುಹಿಸಿ ಶುಶ್ರೂಷೆ ನೋಡಿಕೊಂಡರು. ಗಂಡ ಜೈಲಿನಲ್ಲಿರುವಾಗ ಹುಟ್ಟಿದ ಮಗುವಾದ ಕಾರಣ “ಜಯಣ್ಣ’ (ದಾಖಲೆಯಲ್ಲಿ ರುದ್ರಗೌಡ) ಎಂದು ಕರೆದರು. ಸಿದ್ದಮ್ಮನವರು ಆನವಟ್ಟಿಯಿಂದ ಹಾವೇರಿಗೆ ತೆರಳಿದ ಒಂದೆರಡು ದಿನಗಳಲ್ಲಿ ಮೈಲಾರ ಮಹದೇವಪ್ಪನವರನ್ನು ಬ್ರಿಟಿಷ್‌ ಪೊಲೀಸರು ಕೊಂದರು. ಆತ್ಮೀಯರಾಗಿದ್ದ ಮಹದೇವಪ್ಪನವರ ಅಂತಿಮ ಸಂಸ್ಕಾರದಲ್ಲಿ ಆನವಟ್ಟಿ, ಎಣ್ಣೆಕೊಪ್ಪದಿಂದ ಹೋಗಿ ಪಾಲ್ಗೊಂಡಿದ್ದರು.

Advertisement

ಕಾರು ಹತ್ತದ ಮಾಜಿ ಶಾಸಕಿ
ಮೈಲಾರ ಮಹದೇವಪ್ಪನವರ ಪತ್ನಿ ಸಿದ್ದಮ್ಮನವರು (1916-1997) ಪತಿಯ ಜತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಹೆಜ್ಜೆ ಹಾಕಿದವರು.

ಮಹದೇವಪ್ಪನವರಿಗೆ 16 ವರ್ಷ, ಸಿದ್ದಮ್ಮನವರಿಗೆ 11 ವರ್ಷವಾಗುವಾಗ ಮದುವೆಯಾಗಿತ್ತು. ಯುವಕರನ್ನು ಸಂಸಾರದಲ್ಲಿ ಕಟ್ಟಿಹಾಕುವ ವಿಧಾನವಿದು. “ನಿನಗೆ ಹೋರಾಟದ ಕಷ್ಟ ಕೊಡುವುದು ನನಗೆ ಇಷ್ಟವಿಲ್ಲ’ ಎಂದಾಗ “ನಾನೂ ದೇಶಕ್ಕಾಗಿ ಜೀವನ ಮುಡಿಪಾಗಿಡುತ್ತೇನೆ’ ಎಂದವರು ಸಿದ್ದಮ್ಮ. ಇಷ್ಟು ಮಾತ್ರವಲ್ಲದೆ ಜೀವನಪರ್ಯಂತ ಬ್ರಹ್ಮಚರ್ಯ ಪಾಲಿಸುವುದಾಗಿ ಇಬ್ಬರೂ ನಿರ್ಧರಿಸಿದ್ದರು. ಗಾಂಧೀಜಿಯವರ ದಂಡೀ ಯಾತ್ರೆ ಅವಧಿಯಲ್ಲಿ ದಂಪತಿ ಸಾಬರ್ಮತಿ ಆಶ್ರಮದಲ್ಲಿ ಸೇವಕರಾಗಿದ್ದರು. ಪತಿ ಜೈಲುವಾಸ ಅನುಭವಿಸುವಾಗ ಪತ್ನಿ ಆಶ್ರಮದಲ್ಲಿದ್ದರು. ಬರೋಡಾ ಜೈಲಿನಲ್ಲಿ ಕಸ್ತೂರ್ಬಾ ಇದ್ದಾಗ ಜತೆಗಿದ್ದ ಸಿದ್ದಮ್ಮ ಅವರ ಮನ ಗೆದ್ದಿದ್ದರು. ಹೀಗಾಗಿ ಸಿದ್ದಮ್ಮ ಗಾಂಧೀ ದಂಪತಿಗೆ “ಸಿದ್ದಮತಿ’ ಆಗಿದ್ದರು. ದಂಡಿಯಾತ್ರೆ ಜೈಲುವಾಸ ಮುಗಿಸಿ ಊರಿಗೆ ವಾಪಸಾಗಿ ಕೊರಡೂರ ಗ್ರಾಮದಲ್ಲಿ ಸಾಬರ್ಮತಿಯಂತಹ ಸೇವಾ ಆಶ್ರಮವನ್ನು ತೆರೆದಾಗ ದಂಪತಿ ಇಬ್ಬರೂ ಸೇವೆ ಸಲ್ಲಿಸಿದರು.

ಒಮ್ಮೆ ಮಹದೇವ ಅನಾರೋಗ್ಯಕ್ಕೆ ಒಳಗಾಗಿ ಸಿದ್ದಮ್ಮ ಪತಿ ಸೇವೆ ಮಾಡಿದರು. ಆಗ ದಂಪತಿಯ ಬ್ರಹ್ಮಚರ್ಯಕ್ಕೆ ಭಂಗ ಬಂತು. ಅದರ ಪರಿಣಾಮವಾಗಿ ಹುಟ್ಟಿದ ಹೆಣ್ಣು ಮಗುವಿಗೆ ಕಸ್ತೂರ್ಬಾ ನೆನಪಿಗಾಗಿ ಕಸ್ತೂರಮ್ಮ ಎಂದು ಹೆಸರು ಇಟ್ಟರು. ಮಹದೇವಪ್ಪ ಕಾಲವಾಗುವಾಗ ಕಸ್ತೂರಮ್ಮನಿಗೆ 1 ವರ್ಷ 4 ತಿಂಗಳು. ಸ್ವಾತಂತ್ರ್ಯ ಸಿಕ್ಕಿದ ಬಳಿಕ ಸಿದ್ದಮ್ಮ ಕಾಂಗ್ರೆಸ್‌ ಪಕ್ಷದಿಂದ ಸ್ಪರ್ಧಿಸಿ ಹಾವೇರಿ (1957-62), ಬ್ಯಾಡಗಿಯಿಂದ (1962-67) ಶಾಸಕರಾಗಿ ಆಯ್ಕೆಯಾದರು. ಇವರು ಜೀವಮಾನದಲ್ಲಿ ಕಾರನ್ನು ಹತ್ತಲೇ ಇಲ್ಲವೆಂದರೆ ನಂಬಲೇಬೇಕು. ಇವರ ಪ್ರಯಾಣ ನಡೆಯುತ್ತಿದ್ದುದು ರೈಲು ಮತ್ತು ಬಸ್‌ಗಳಲ್ಲಿ. “ನಮ್ಮ ತಂದೆ ಸಾಕಷ್ಟು ಅನುಕೂಲವಂತರಾದರೂ ಸಿದ್ದಮ್ಮನವರು ಗಾಂಧಿವಾದಿಯಾದ ಕಾರಣ ಸರಳವಾಗಿ ಬದುಕು ನಡೆಸಿದರು’ ಎನ್ನುತ್ತಾರೆ ಸಿದ್ದಮ್ಮನವರ ಮೊಮ್ಮಗ (ಕಸ್ತೂರಮ್ಮನ ಮಗ) ಬೆಂಗಳೂರಿನಲ್ಲಿ ಸಿವಿಲ್‌ ಎಂಜಿನಿಯರ್‌ ಆಗಿರುವ ಎಚ್‌.ಎಸ್‌. ಮಹದೇವಪ್ಪ. ಕಸ್ತೂರಮ್ಮ ಮೋಟೆಬೆನ್ನೂರಿನಲ್ಲಿ ಪ್ರಾಥಮಿಕ, ಪ್ರೌಢ ಶಿಕ್ಷಣ ಪಡೆದು ಬೆಂಗಳೂರಿನಲ್ಲಿ ಬಿಎಸ್ಸಿ ಓದಿ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದರು. ಕಸ್ತೂರಮ್ಮನಿಗೆ ಈಗ 81 ವರ್ಷ.

-ಮಟಪಾಡಿ ಕುಮಾರಸ್ವಾಮಿ

Advertisement

Udayavani is now on Telegram. Click here to join our channel and stay updated with the latest news.

Next