ಬೆಂಗಳೂರು: ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಗೆ ಸಂಬಂಧಿಸಿ ಎಸ್‌ಐಟಿ ಅಧಿಕಾರಿಗಳು ಇನ್ನೋರ್ವನನ್ನು ವಶಕ್ಕೆ ಪಡೆದಿದ್ದು, ಬಂಧಿತ ಆರೋಪಿಗಳ ಸಂಖ್ಯೆ 8ಕ್ಕೇರಿದೆ.
ಗೌರಿ ಮೇಲೆ ಗುಂಡು ಹಾರಿಸಿದವನೆಂದು ಎಸ್‌ಐಟಿ ಹೇಳಿರುವ ಪ್ರಮುಖ ಆರೋಪಿ ಪರಶುರಾಮ ವಾಗ್‌ಮೋರೆಗೆ ಸಹಾಯ ಮಾಡಿದ ಆರೋಪದಲ್ಲಿ ಸಂಪಾಜೆ ಗ್ರಾಮದ ಮುಂಡಡ್ಕ ನಿವಾಸಿ ಮೋಹನ್ ನಾಯಕ್ ಎನ್ನುವವನನ್ನು ಬಂಧಿಸಿದ್ದಾರೆ.
ಬಂಧಿತ ಮೋಹನ್ ವಾಗ್ಮೋರೆಗೆ ಕಾರು, ಬೈಕ್ ಮತ್ತು ಮನೆ ಮಾಡಿ ಕೊಟ್ಟು ಸಹಕಾರ ನೀಡಿದ್ದ ಎಂದು ತಿಳಿದು ಬಂದಿದೆ.
ಮೋಹನ್ ನಾಯಕ್‌ನನ್ನು ಶುಕ್ರವಾರ ಬೆಳಗ್ಗೆ ಎಸಿಎಮ್‌ಎಮ್ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು 14 ದಿನಗಳ ಕಾಲ ಎಸ್‌ಐಟಿ ವಶಕ್ಕೆ ನೀಡಲಾಗಿದೆ.
ಮಡಿಕೇರಿಯಲ್ಲಿ ಶಸ್ತ್ರಾಸ್ತ್ರ ವ್ಯಾಪಾರಿಯಾಗಿರುವ ಮೋಹನ್ ನಾಯಕ್ ಸನಾತನ ಸಂಸ್ಥೆಯ ಸಕ್ರೀಯ ಕಾರ್ಯಕರ್ತ ಎಂದು ತಿಳಿದು ಬಂದಿದೆ. ನಾಯಕ್ ನಿವಾಸಕ್ಕೆ ಮನೆಗೆ ಇತ್ತೀಚಿನ ಕೆಲ ದಿನಗಳಿಂದ ಆಗಾಗ ಕಾರುಗಳಲ್ಲಿ ಹೊರಗಿನಿಂದ ಜನ ಬಂದು ಹೋಗುತ್ತಿದ್ದರು ಎನ್ನಲಾಗಿದೆ. ಮೋಹನ್ ನಾಯಕ್ ನಾಟಿ ಜೌಷಧಿ ಕೂಡ ನೀಡುತ್ತಿದ್ದು, ಜೌಷಧಿಗಾಗಿ ಜನ ಹೊರಗಿನಿಂದ ಬರುತ್ತಿರಬಹುದು ಎಂದು ಸ್ಥಳೀಯರು ಭಾವಿಸಿದ್ದರು ಎಂದು ವರದಿಯಾಗಿದೆ.