ಬೆಂಗಳೂರು: ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್(55 ವರ್ಷ) ಹಂತಕರನ್ನು 24 ಗಂಟೆಯೊಳಗೆ ಬಂಧಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎಂದು ಮಾಧ್ಯಮದ ವರದಿ ತಿಳಿಸಿದೆ.
ನೀವ್ ಏನ್ ಮಾಡ್ತಿರೋ ನನಗೆ ಗೊತ್ತಿಲ್ಲ. ಇದರ ಹಿಂದೆ ಯಾರಿದ್ದಾರೆ ಎಂಬುದನ್ನು 24ಗಂಟೆಯೊಳಗೆ ಪತ್ತೆ ಹಚ್ಚಿ ಎಂದು ಸಿಎಂ ಡಿಜಿಪಿ ರೂಪ್ ಕುಮಾರ್ ದತ್ತಾಗೆ ಖಡಕ್ ಆದೇಶ ನೀಡಿದ್ದಾರೆ ಎಂದು ವರದಿ ಹೇಳಿದೆ.
ಮಂಗಳವಾರ ರಾತ್ರಿ ಗೌರಿ ಲಂಕೇಶ್ ರಾಜರಾಜೇಶ್ವರಿ ನಗರದಲ್ಲಿರುವ ಮನೆಗೆ ಆಗಮಿಸಿ ಕಾರಿನಿಂದ ಇಳಿದು ಹೋಗುತ್ತಿರವ ವೇಳೆಯಲ್ಲೇ ಬೈಕ್ ನಲ್ಲಿ ಆಗಮಿಸಿದ್ದ ದುಷ್ಕರ್ಮಿ ಗುಂಡಿಟ್ಟು ಹತ್ಯೆಗೈದಿರುವ ಘಟನೆ ನಡೆದಿತ್ತು.
ಗೌರಿ ಲಂಕೇಶ್ ಹಂತಕರನ್ನು ಪತ್ತೆ ಹಚ್ಚುವ ನಿಟ್ಟಿನಲ್ಲಿ ಮೂರು ತನಿಖಾ ತಂಡವನ್ನು ರಚಿಸಿರುವುದಾಗಿ ಸಿಎಂ ತಿಳಿಸಿದ್ದಾರೆ. ಘಟನೆ ಬಗ್ಗೆ ಸಿದ್ದರಾಮಯ್ಯನವರು ಕ್ಷಣ, ಕ್ಷಣದ ಮಾಹಿತಿ ಪಡೆಯುತ್ತಿರುವುದಾಗಿ ವರದಿ ವಿವರಿಸಿದೆ.
ಸಿಬಿಐ ತನಿಖೆಗೊಪ್ಪಿಸಿ: ಇಂದ್ರಜಿತ್ ಲಂಕೇಶ್
ಗೌರಿ ಲಂಕೇಶ್ ಹತ್ಯೆಯ ತನಿಖೆಯನ್ನು ರಾಜ್ಯ ಸರ್ಕಾರ ನಡೆಸುವುದು ಬೇಡ, ಗೃಹ ಇಲಾಖೆ ಮೇಲೆ ನನಗೆ ನಂಬಿಕೆ ಇಲ್ಲ. ಅದನ್ನು ಸಿಬಿಐ ತನಿಖೆಗೆ ಒಪ್ಪಿಸಿ ಎಂದು ಸಹೋದರ ಇಂದ್ರಜಿತ್ ಲಂಕೇಶ್ ಒತ್ತಾಯಿಸಿದ್ದಾರೆ.