Advertisement

ಗೌರಿ ಲಂಕೇಶ್‌ ಹತ್ಯೆಗೆ ಆಕ್ರೋಶ

04:50 PM Sep 15, 2017 | |

ಶಿವಮೊಗ್ಗ: ಪತ್ರಕರ್ತೆ, ಚಿಂತಕಿ, ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್‌ ಹತ್ಯೆ ಖಂಡಿಸಿ ಗೌರಿ ಲಂಕೇಶ್‌ ಹತ್ಯೆ ವಿರೋಧಿ ಒಕ್ಕೂಟ ನಗರದಲ್ಲಿ ಗುರುವಾರ ಸಂಜೆ ಹಮ್ಮಿಕೊಂಡಿದ್ದ ಪಂಜಿನ ಮೆರವಣಿಗೆಯಲ್ಲಿ ಸಾವಿರಾರರು ಜನ ಪಾಲ್ಗೊಂಡಿದ್ದರು.

Advertisement

ಮೆರವಣಿಗೆಯಲ್ಲಿ ಭಾಗವಹಿಸಿದ್ದ ಪ್ರತಿಯೊಬ್ಬರು ಗೌರಿ ಹತ್ಯೆಯನ್ನು ಖಂಡಿಸಿದರು. ನಾನು ಗೌರಿ, ನಾವೆಲ್ಲರೂ
ಗೌರಿ ಎಂಬ ಘೋಷಣೆ ಮೆರವಣಿಗೆ ಉದ್ದಕ್ಕೂ ಪ್ರತಿಧ್ವನಿಸಿತು. ಹತ್ಯೆ ಮಾಡಿದವರನ್ನು ಬಂಧಿಸಿ ಶಿಕ್ಷೆಗೆ ಗುರಿಪಡಿಸಬೇಕೆಂದು ಒಕ್ಕೊರಲಿನಿಂದ ಒತ್ತಾಯಿಸಿದರು.

ನಗರದ ಕುವೆಂಪು ರಂಗಮಂದಿದ ಆವರಣದಿಂದ ಹೊರಟ ಮೆರವಣಿಗೆಗೆ ಸ್ಥಳೀಯ ಶಾಸಕ ಕೆ.ಬಿ. ಪ್ರಸನ್ನಕುಮಾರ್‌
ಚಾಲನೆ ನೀಡಿದರು. ಮೆರಣಿಗೆಯಲ್ಲಿ ಪತ್ರಕರ್ತರು, ವಿವಿಧ ಧರ್ಮಗಳ ಧರ್ಮ ಗುರುಗಳು, ಪ್ರಗತಿಪರ ಸಂಘಟನೆಗಳ ಪ್ರಮುಖರರು, ರೈತ ಸಂಘಟನೆ ಪ್ರಮುಖರು, ವಿವಿಧ ಪಕ್ಷಗಳ ಮುಖಂಡರು, ಮಹಿಳಾ ಸಂಘಟನೆಗಳ ಪ್ರಮುಖರು, ವಿದ್ಯಾರ್ಥಿಗಳು, ಚಿಂತಕರು, ಸಾಹಿತಿಗಳು, ಹೋರಾಟಗಾರರು ಮತ್ತಿತರರು ಪಾಲ್ಗೊಂಡಿದ್ದರು.

ರಂಗಮಂದಿರದಿಂದ ಹೊರಟ ಪಂಜಿನ ಮೆರವಣಿಗೆ, ಬಸವೇಶ್ವರ ವೃತ್ತ, ವೀರಭದ್ರ ಚಿತ್ರಮಂದಿರ ರಸ್ತೆ, ಬಿಎಚ್‌ ರಸ್ತೆ. ಮುಖ್ಯ ಬಸ್‌ ನಿಲ್ದಾಣ, ಎಎ ವೃತ್ತ ಮೂಲಕ ನೆಹರೂ ರಸ್ತೆ ಮಾರ್ಗವಾಗಿ ಗೋಪಿ ವೃತ್ತ ತಲುಪಿತು. ಗೋಪಿವೃತ್ತದಲ್ಲಿ ಆಯೋಜಿಸಲಾಗಿದ್ದ ಬಹಿರಂಗ ಸಭೆಯಲ್ಲಿ ಚಿಂತಕ ಬಂಜಗೆರೆ ಜಯಪ್ರಕಾಶ್‌ ಮಾತನಾಡಿ, ವಿಚಾರವಾದ, ಮನುಷ್ಯತ್ವ, ಬಹುತ್ವ ವಿರೋಧಿಗಳು ಗೌರಿಯನ್ನು ಹತ್ಯೆ ಮಾಡಿದ್ದಾರೆ. ಆಕೆ ಯಾರನ್ನು ಹತ್ಯೆ ಮಾಡಲು ಸಂಚು ರೂಪಿಸಿರಲಿಲ್ಲ. ಆಕೆಗೆ ಅನಿಸಿದ್ದನ್ನು ನೇರವಾಗಿ ಹಾಗೂ ನಿಷ್ಠುರವಾಗಿ ಹೇಳುತ್ತಿದ್ದಳು. ಇದೇ ಗೌರಿಯ ಹತ್ಯೆಗೆ ಕಾರಣವಾಗಿದೆ. ಇದು ಅತ್ಯಂತ ಹೇಯ ಕೃತ್ಯ. ಘಟನೆಯನ್ನು ಪ್ರತಿಯೊಬ್ಬರು ಖಂಡಿಸಬೇಕೆಂದರು.

ಚರಕ ಪ್ರಸನ್ನ ಮಾತನಾಡಿ, ಗೌರಿ ಲಂಕೇಶ್‌ಳನ್ನು ಕಳೆದ 40 ವರ್ಷಗಳಿಂದ ಬಲ್ಲೆ. ಆಕೆ ಹತ್ಯೆಯಾಗಿದ್ದಾಳೆ ಎಂದರೆ ಒಪ್ಪಲೂ ಸಾಧ್ಯವಾಗುತ್ತಿಲ್ಲ. ಹೇಯ ಕೃತ್ಯ ನಮ್ಮ ನಡುವೆ ನಡೆದುಹೋದದ್ದು ಅತ್ಯಂತ ಖಂಡನಾರ್ಹ ಎಂದರು.

Advertisement

ಪ್ರಸ್‌ಟ್ರಸ್ಟ್‌ ಅಧ್ಯಕ್ಷ ಎನ್‌. ಮಂಜುನಾಥ್‌ ಮಾತನಾಡಿ, ಭಿನ್ನಾಭಿಪ್ರಾಯ ಏನೇ ಇರಲಿ ಅದನ್ನು ನೇರವಾಗಿ ಎದುರಿಸಬೇಕು. ಹತ್ಯೆ ಯಾವುದಕ್ಕೂ ಉತ್ತರವಲ್ಲ. ನಾವು ಈ ಅನ್ಯಾಯದ ಹತ್ಯೆಗೆ ನ್ಯಾಯ ಪಡೆಯಬೇಕಿದೆ ಎಂದು ಹೇಳಿದರು.

ಫಾ. ಫೆಲಿಕ್ಸ್‌ ನರೋನ್ಹ , ಫಾ. ಗಿಲ್ಬರ್ಟ್‌ ಲೋಬೊ, ಫಾ. ಆಲ್ವಿನ್‌ ಸೆರಾವೊ, ಫಾ. ವಿರೇಶ್‌ ಮೊರಾಸ್‌, ಮೌಲಾನ ಮುಜಕ್ಕಿರ್‌ ಖಾಸ್ಮಿ, ಮೌಲಾನ ಹಾಮಿದ್‌ ಉಮ್ರಿ, ರೈತ ಮುಖಂಡರಾದ ಕಡಿದಾಳು ಶಾಮಣ್ಣ, ಕೆ.ಟಿ. ಗಂಗಾದರ, ಹಿರಿಯ ಸಮಾಜವಾದಿ ಪಿ. ಪುಟ್ಟಯ್ಯ, ದಲಿತ ಮುಖಂಡ ಎಂ. ಗುರುಮೂರ್ತಿ, ಹೋರಾಟಗಾರರಾದ ದೇವೇಂದ್ರಪ್ಪ, ಕೆ.ಪಿ. ಶ್ರೀಪಾಲ್‌, ಕಸಾಪ ಮಾಜಿ ಅಧ್ಯಕ್ಷ ಡಿ. ಮಂಜುನಾಥ್‌ ಮತ್ತಿತರರು ಇದ್ದರು.
 

Advertisement

Udayavani is now on Telegram. Click here to join our channel and stay updated with the latest news.

Next