Advertisement
ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಬೆಳಿಗ್ಗೆ ತಮ್ಮ ಗೃಹ ಕಚೇರಿ ಕೃಷ್ಣದಲ್ಲಿ ಎಸ್‌ಐಟಿ ಅಧಿಕಾರಿಗಳು ಹಾಗೂ ಗೃಹ ಸಚಿವರ ಜೊತೆ ಸುದೀರ್ಘ ಸಮಾಲೋಚನೆ ನಡೆಸಿದರು. ಮೂರು ದಿನಗಳಿಂದ ನಡೆಯುತ್ತಿರುವ ಹತ್ಯೆಯ ತನಿಖೆಯ ಪ್ರಗತಿಯ ಬಗ್ಗೆ ಅಧಿಕಾರಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ವಿವರಣೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
Related Articles
Advertisement
ಸಚಿವ ಕುಲಕರ್ಣಿಗೆ ಝಡ್ ಭದ್ರತೆ: ಗಣಿ ಮತ್ತು ಭೂ ವಿಜ್ಞಾನ ಸಚಿವ ವಿನಯ ಕುಲಕರ್ಣಿಗೆ ಸುಫಾರಿ ಹಂತಕರಿಂದ ಕೊಲೆ ಬೆದರಿಕೆ ಇದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ಅವರಿಗೆ ಝಡ್ ಮಾದರಿಯ ಭದ್ರತೆ ಕೇಳಿಕೊಂಡಿದ್ದರು. ಇಲಾಖೆಯಿಂದ ಅವರಿಗೆ ಭದ್ರತೆ ಒದಗಿಸಲಾಗಿದೆ. ಅಲ್ಲದೇ ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಪ್ರಧಾನ ಕಾರ್ಯದರ್ಶಿಯಾಗಿರುವ ಎಸ್.ಎಂ. ಜಾಮದಾರ್ ಅವರಿಗೂ ಭದ್ರತೆ ಒದಗಿಸಲಾಗುವುದು ಎಂದರು.ಸರ್ಕಾರ ಈಗಾಗಲೇ ಬೆದರಿಕೆ ಇರುವ ವಿಚಾರವಾದಿಗಳಿಗೆ ಭದ್ರತೆ ನೀಡಲು ತೀರ್ಮಾನಿಸಿದೆ. ಯಾರಿಗೆ ಬೆದರಿಕೆ ಇದೆಯೋ ಅವರೆಲ್ಲರಿಗೂ ಭದ್ರತೆ ಒದಗಿಸಲಾಗುವುದು ಎಂದು ಹೇಳಿದರು.
ಜೀವರಾಜ್ ವಿಚಾರಣೆಗೆ ಸೂಚನೆಗೌರಿ ಲಂಕೇಶ್ ಹತ್ಯೆಯ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಾಜಿ ಸಚಿವ ಹಾಗೂ ಶೃಂಗೇರಿಯ ಬಿಜೆಪಿ ಶಾಸಕ ಜೀವರಾಜ್ ಅವರನ್ನೂ ವಿಚಾರಣೆ ನಡೆಸುವಂತೆ ಎಸ್‌ಐಟಿಗೆ ಸೂಚನೆ ನೀಡಿರುವುದಾಗಿ ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ಜೀವರಾಜ್ ಹೇಳಿಕೆಯ ಹಿಂದಿನ ಮರ್ಮ ಏನು ? ಯಾಕೆ ಆ ರೀತಿಯ ಹೇಳಿಕೆ ನೀಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಎಸ್‌ಐಟಿಗೆ ಸೂಚಿಸಿದ್ದೇವೆ ಎಂದರು. ಜೀವರಾಜ್ ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ಬಹಿರಂಗವಾಗಿ ಈ ರೀತಿಯ ಹೇಳಿಕೆ ನೀಡುವುದು ಸರಿಯಲ್ಲ. ಅವರ ಹೇಳಿಕೆಯ ಬಗ್ಗೆ ಎಸ್‌ಐಟಿ ತನಿಖೆಯ ಬಳಿಕ ಮತ್ತಷ್ಟು ಸ್ಪಷ್ಟತೆ ದೊರೆಯಲಿದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು. ಇಂದು ಹಿರಿಯ ಅಧಿಕಾರಿಗಳ ಸಭೆ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಬೆಳವಣಿಗೆಗಳ ಕುರಿತು ಚರ್ಚಿಸಲು ಗೃಹ ಸಚಿವ ರಾಮಲಿಂಗಾ ರೆಡ್ಡಿ ಇಂದು ಹಿರಿಯ ಪೊಲಿಸ್ ಅಧಿಕಾರಿಗಳ ಸಭೆ ಕರೆದಿದ್ದಾರೆ. ವಿಕಾಸ ಸೌಧದ ನಾಲ್ಕನೆ ಮಹಡಿಯ ರೂಮ್ ನಂಬರ್ 419 ರಲ್ಲಿ ಬೆಳಿಗ್ಗೆ 11 ಗಂಟೆಗೆ ಸಭೆ ಕರೆದಿದ್ದು, ಗೌರಿ ಹತ್ಯೆಯ ತನಿಖೆಯ ಬೆಳವಣಿಗೆ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ವಿಚಾರ ಕುರಿತಂತೆ ಚರ್ಚಿಸಲು ಸಭೆ ಕರೆದಿದ್ದಾರೆ. ಸಭೆಯಲ್ಲಿ ಡಿಜಿ ರೂಪ್ ಕುಮಾರ್ ದತ್ತಾ, ಎಸ್‌ಐಟಿ ಮುಖ್ಯಸ್ಥ ಬಿ.ಕೆ ಸಿಂಗ್, ಬೆಂಗಳೂರು ನಗರ ಪೊಲಿಸ್ ಆಯುಕ್ತ ಸುನಿಲ್ ಕುಮಾರ್ ಸೇರಿದಂತೆ ಎಲ್ಲ ಹಿರಿಯ ಪೊಲಿಸ್ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಸಾಮರಸ್ಯ ನಡಿಗೆ ಕೈ ಬಿಡಲು ಮನವಿ
ಬಿಜೆಪಿ ಮಂಗಳೂರು ಚಲೋ ನಡೆಸಿದ ಬೆನ್ನಲ್ಲೆ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈತ ನೇತೃತ್ವದಲ್ಲಿ ಸಾಮರಸ್ಯ ನಡಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಆ ಕಾರ್ಯಕ್ರಮವನ್ನು ಕೈ ಬಿಡುವಂತೆ ಮನವಿ ಮಾಡಲಾಗಿದೆ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ತಿಳಿಸಿದರು. ಶಾಂತಿ ಕದಡುವ ಯಾವುದೇ ಹೋರಾಟಕ್ಕೂ ಸರ್ಕಾರ ಅನುಮತಿ ಕೊಡುವುದಿಲ್ಲ. ಒಂದು ವೇಳೆ ಸಾಮರಸ್ಯ ನಡಿಗೆ ನಡೆಸುವುದಾದರೆ, ಸಮಾಜದ ಎಲ್ಲ ವರ್ಗದ ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸುವಂತೆ ಸೂಚಿಸಲಾಗಿದೆ ಎಂದು ಹೇಳಿದರು. ಬಿಜೆಪಿ ಮಂಗಳೂರು ಚಲೋ ಬೈಕ್ ರ್ಯಾಲಿ ವಿಫಲವಾಗಿದ್ದು, ಕೇವಲ 3 ಸಾವಿರ ಜನರು ಪಾಲ್ಗೊಂಡಿದ್ದರು ಎಂದು ಮಾಹಿತಿ ಲಭ್ಯವಾಗಿದೆ ಎಂದು ರಾಮಲಿಂಗಾ ರೆಡ್ಡಿ ತಿಳಿಸಿದರು.