Advertisement

15 ಅಧಿಕಾರಿಗಳಿಗೆ ಗೇಟ್ ಪಾಸ್ ಶಿಕ್ಷೆ

10:52 AM Jun 20, 2019 | mahesh |

ನವದೆಹಲಿ: ಇತ್ತೀಚೆಗಷ್ಟೇ ಆದಾಯ ತೆರಿಗೆ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ನೀಡಿ ಮನೆಗೆ ಕಳುಹಿಸಿದಂತೆಯೇ ಈಗ 15 ಕಂದಾಯ ಮತ್ತು ಅಬಕಾರಿ ಅಧಿಕಾರಿಗಳ ವಿರುದ್ಧವೂ ಇದೇ ಕ್ರಮವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ಭ್ರಷ್ಟಾಚಾರ ಪ್ರಕರಣಗಳನ್ನು ಹೊಂದಿರುವ ಅಧಿಕಾರಿಗಳಿಗೆ ಮಾತ್ರವೇ ಕಡ್ಡಾಯ ನಿವೃತ್ತಿ ನೀಡಲಾಗಿದೆ.

Advertisement

ಪ್ರಧಾನ ಕಮಿಷನರ್‌ರಿಂದ ಸಹಾಯಕ ಕಮಿಷನರ್‌ ಹುದ್ದೆಗಳವರೆಗಿನ ಅಧಿಕಾರಿಗಳ ವಿರುದ್ಧ ಈ ಕ್ರಮ ತೆಗೆದುಕೊಳ್ಳಲಾಗಿದೆ. ಕೆಲವು ಅಧಿಕಾರಿಗಳು ಈಗಾಗಲೇ ಅಮಾನತು ಶಿಕ್ಷೆಯನ್ನೂ ಅನುಭವಿಸುತ್ತಿದ್ದಾರೆ. ಕೆಲವು ಅಧಿಕಾರಿಗಳ ವಿರುದ್ಧ ಸಿಬಿಐ ದೂರು ದಾಖಲಿಸಿದ್ದರೆ, ಇನ್ನೂ ಕೆಲವು ಅಧಿಕಾರಿಗಳು ಲಂಚ ಹಾಗೂ ಅಕ್ರಮ ಆಸ್ತಿ ಪ್ರಕರಣದಲ್ಲಿ ಸಿಲುಕಿಹಾಕಿಕೊಂಡಿದ್ದಾರೆ.

ಜಂಟಿ ಆಯುಕ್ತ ನಳೀನ್‌ ಕುಮಾರ್‌, ಕಮಿಷನರ್‌ ಅತುಲ್ ದೀಕ್ಷಿತ್‌, ವಿನಯ್‌ ಬ್ರಿಜ್‌ ಸಿಂಗ್‌ ಈಗಾಗಲೇ ಅಮಾನತಿನಲ್ಲಿದ್ದಾರೆ. ಮೂವರ ವಿರುದ್ಧವೂ ಸಿಬಿಐ ತನಿಖೆ ನಡೆಯುತ್ತಿದೆ. ಕೋಲ್ಕತಾದ ಕಮಿಷನರ್‌ ಸಂಸಾರ್‌ ಚಂದ್‌, ಚೆನ್ನೈ ಮೂಲದ ಕಮಿಷನರ್‌ ಜಿ ಶ್ರೀಹರ್ಷ ವಿರುದ್ಧ 2.4 ಕೋಟಿ ರೂ. ಅಕ್ರಮ ಆಸ್ತಿ ಸಂಪಾದನೆ ದೂರು ದಾಖಲಾಗಿತ್ತು. ಡೆಪ್ಯುಟಿ ಕಮಿಷನರ್‌ ಅಮರೇಶ್‌ ಜೈನ್‌ ಮನೆ ಮೇಲೆ ದಾಳಿನಡೆಸಿದಾಗ 1.55 ಕೋಟಿ ಅಕ್ರಮ ಆಸ್ತಿ ಹಾಗೂ 95.24 ಲಕ್ಷ ರೂ.ನಗದು ಪತ್ತೆಯಾಗಿತ್ತು.

ಕಾನೂನಿನ ಬೆಂಬಲ: ಮೂಲಭೂತ ನಿಯಮಗಳ 56(ಜೆ) ನಿಬಂಧದ ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಕಡ್ಡಾಯ ನಿವೃತ್ತಿ ವಿಧಿಸುವ ಅಧಿಕಾರವಿದೆ. ಆದರೆ ಇವರಿಗೆ ಮೂರು ತಿಂಗಳ ಸಂಬಳವನ್ನು ನೀಡಬೇಕಾಗುತ್ತದೆ. ಅಂದರೆ ಮೂರು ತಿಂಗಳ ನೋಟಿಸ್‌ ನೀಡಿ ಯಾವುದೇ ಅಧಿಕಾರಿಯನ್ನು ಕೇಂದ್ರ ಸರ್ಕಾರ ನಿವೃತ್ತಿಗೊಳಿಸಬಹುದು. ಈ ನಿಯಮವನ್ನು ಹಿಂದಿನ ಸರ್ಕಾರಗಳು ಬಳಸಿದ್ದು ಅಪರೂಪ.

ಅಷ್ಟೇ ಅಲ್ಲ, ಕೇಂದ್ರೀಯ ನಾಗರಿಕ ಸೇವೆಗಳ (ಪಿಂಚಣಿ) ನಿಯಮ 1972ರ ಪ್ರಕಾರ ಕಾಲಕಾಲಕ್ಕೆ ಅಧಿಕಾರಿಗಳ ಕಾರ್ಯಕ್ಷಮತೆಯನ್ನು ಪರಿಶೀಲನೆ ಮಾಡಬಹುದಾಗಿದೆ. ಈ ವೇಳೆ ಅಧಿಕಾರಿಗಳನ್ನು ಮುಂದುವರಿಸಬೇಕೋ ಅಥವಾ ಬೇಡವೋ ಎಂಬುದನ್ನು ನಿರ್ಧರಿಸಬಹುದು. ಅಧಿಕಾರಿಗಳು 30 ವರ್ಷ ಸೇವೆ ಪೂರೈಸಿದ್ದರೆ ಅಥವಾ 50 ರಿಂದ 55 ವರ್ಷದ ಅವಧಿಯಲ್ಲಿದ್ದರೆ ಈ ಕಡ್ಡಾಯ ನಿವೃತ್ತಿಯನ್ನು ವಿಧಿಸಬಹುದು.

Advertisement

ಇದೇ ಕಾನೂನು ಸೌಲಭ್ಯ ಬಳಸಿಕೊಂಡು ಕಳೆದ ವಾರವಷ್ಟೇ 12 ಆದಾಯ ತೆರಿಗೆ ಅಧಿಕಾರಿಗಳಿಗೆ ಕಡ್ಡಾಯ ನಿವೃತ್ತಿ ವಿಧಿಸಲಾಗಿತ್ತು. ಅಷ್ಟೇ ಅಲ್ಲ, ನಾಲ್ವರು ಜಂಟಿ ಕಮಿಷನರ್‌ ಹುದ್ದೆಯ ಅಧಿಕಾರಿಗಳನ್ನು ಡೆಪ್ಯುಟಿ ಕಮಿಷನರ್‌ ಹುದ್ದೆಗೆ ಹಿಂಬಡ್ತಿ ನೀಡಲಾಗಿತ್ತು.

ನೇರ ತೆರಿಗೆ ಮತ್ತು ಕಂದಾಯ ಮಂಡಳಿಯಲ್ಲಿ ಪ್ರಧಾನ ಎಡಿಜಿ (ಆಡಿಟ್) ಆಗಿದ್ದ ಅನೂಪ್‌ ಶ್ರೀವಾಸ್ತವರನ್ನು ಕೂಡ ಕಡ್ಡಾಯ ನಿವೃತ್ತಿ ನೀಡಿ ಮನೆಗೆ ಕಳುಹಿಸಲಾಗಿದೆ. ಮೂಲಗಳ ಪ್ರಕಾರ, 1996ರಲ್ಲೇ ಅನೂಪ್‌ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು. ಹೌಸಿಂಗ್‌ ಸೊಸೈಟಿಯೊಂದಕ್ಕೆ ಮಂಜೂರಾತಿ ನೀಡಲು ಅನೂಪ್‌ ಹಣ ಪಡೆದಿದ್ದರು ಎಂದು ಆರೋಪಿಸಲಾಗಿತ್ತು. 2012ರಲ್ಲೂ ಕೂಡ ಇವರ ವಿರುದ್ಧ ಮತ್ತೂಂದು ದೂರು ದಾಖಲಾಗಿತ್ತು. ತೆರಿಗೆ ತಪ್ಪಿಸಿದ ಪ್ರಕರಣದಲ್ಲಿ ಆಮದು ವ್ಯಾಪಾರಿಯಿಂದ ಲಂಚ ಪಡೆದ ಆರೋಪವನ್ನು ಇವರ ಮೇಲೆ ಹೊರಿಸಲಾಗಿತ್ತು. ಅಷ್ಟೇ ಅಲ್ಲ, ಕೆಲವರನ್ನು ಮಾತ್ರ ಬಂಧಿಸಿ, ದೌರ್ಜನ್ಯ ಎಸಗುತ್ತಾರೆ ಎಂಬ ಆರೋಪವೂ ಇವರ ಮೇಲಿದೆ.

ಅನೂಪ್‌ ಮನೆಗೆ

Udayavani is now on Telegram. Click here to join our channel and stay updated with the latest news.

Next