Advertisement

ತೋಟಗಾರಿಕೆ ವಿವಿಗೆ ಘಟಪ್ರಭಾ ನೀರು

12:14 PM Jun 19, 2020 | Suhan S |

ಬಾಗಲಕೋಟೆ: ತೋಟಗಾರಿಕೆ ವಿವಿಗೆ ಹಲವು ವರ್ಷಗಳಿಂದ ಕಾಡುತ್ತಿದ್ದ ನೀರಿನ ಸಮಸ್ಯೆ ನಿವಾರಣೆಗೆ ಸರ್ಕಾರ ಅಗತ್ಯ ಅನುದಾನ ನೀಡಿದ್ದು, ಆನದಿನ್ನಿ ಬಳಿಯ ಘಟಪ್ರಭಾ ನದಿಯಿಂದ ವಿವಿಗೆ ಏತ ನೀರಾವರಿ ಕಲ್ಪಿಸಲು ಸಣ್ಣ ನೀರಾವರಿ ಇಲಾಖೆಯಿಂದ ಟೆಂಡರ್‌ ಕರೆಯಲಾಗಿದೆ ಎಂದು ವಿವಿಯ ಕುಲಪತಿ ಡಾ| ಕೆ.ಎಂ. ಇಂದಿರೇಶ ತಿಳಿಸಿದರು.

Advertisement

ವಿವಿಯ ಕುಲಪತಿಯಾಗಿ ನೇಮಕಗೊಂಡ ಬಳಿಕ ಮೊದಲ ಬಾರಿಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ತಮ್ಮ ಮೂರು ವರ್ಷಗಳ ಮುಂದಿನ ಅವಧಿಯಲ್ಲಿ ಕೈಗೊಳ್ಳಲಿರುವ ವಿವಿಧ ಯೋಜನೆಗಳ ಕುರಿತು ವಿವರಿಸಿದರು.

ನೀರಿನ ಕೊರತೆ ನಿವಾರಣೆ: ಘಟಪ್ರಭಾ ನದಿ ಮೂಲಕ ವಿಶ್ವವಿದ್ಯಾಲಯಕ್ಕೆ ನೀರು ತರಲು 9.9 ಕೋಟಿ ರೂ. ವೆಚ್ಚದ ಆನದಿನ್ನಿ ಏತ ನೀರಾವರಿ ಯೋಜನೆಗೆ ಈಗಾಗಲೇ 3.3 ಕೋಟಿ ರೂ. ಅನುದಾನ ಬಂದಿದೆ. 6-7 ತಿಂಗಳಲ್ಲಿ ಯೋಜನೆ ಕಾಮಗಾರಿ ಮುಗಿಯಲಿದ್ದು, ಆನದಿನ್ನಿಯಿಂದ ಪೈಪ್‌ ಲೈನ್‌ ಮೂಲಕ ನೀರು ತರಲಾಗುತ್ತಿದೆ. ಪ್ರತಿದಿನ 5 ಲಕ್ಷ ಲೀಟರ್‌ ನೀರು ವಿವಿಗೆ ಒದಗಿಸಲಿದ್ದು, ಇದು ತೋಟಗಾರಿಕೆ ತಾಕು, ಸಂಶೋಧನೆಗೆ ಬಳಕೆ ಮಾಡಲು ಅವಕಾಶವಿದೆ. ಅಲ್ಲದೇ ವಿವಿಗೆ ಪ್ರತಿದಿನ ಕುಡಿಯುವ ನೀರು, ಬಳಕೆಗಾಗಿ ನಿತ್ಯ 1 ಲಕ್ಷ ಲೀಟರ್‌ ನೀರು ಒದಗಿಸಲು ಬಿಟಿಡಿಎದಿಂದ ಪೂರೈಸಲು ಕ್ರಮ ಕೈಗೊಳ್ಳಲಾಗಿದೆ. ನೀರಿನ ಸಮಸ್ಯೆ ನಿವಾರಣೆಗೆ ಡಿಸಿಎಂ ಕಾರಜೋಳ ಹಾಗೂ ಬಾಗಲಕೋಟೆ ಶಾಸಕ ಡಾ| ಚರಂತಿಮಠ ವಿಶೇಷ ಆಸಕ್ತಿ ವಹಿಸಿದ್ದರು ಎಂದು ಹೇಳಿದರು.

ಹೊಸ ಸಂಶೋಧನೆಗೆ ಒತ್ತು: ಕೋವಿಡ್‌ ಹಿನ್ನೆಲೆಯಲ್ಲಿ ತೋಟಗಾರಿಕೆ ಸಂಶೋಧನೆಯಲ್ಲಿ ಆದಂತಹ ಆವಿಷ್ಕಾರ ಹಾಗೂ ತಂತ್ರಜ್ಞಾನಗಳನ್ನು ರೈತಾಪಿ ವರ್ಗಕ್ಕೆ ನೀಡಲು ಯೋಜನೆ ರೂಪಿಸಲಾಗಿದೆ. ಕೋವಿಡ್‌-19 ತುರ್ತು ಪರಿಸ್ಥಿತಿ ಲಾಕ್‌ ಡೌನ್‌ಹಿನ್ನೆಲೆಯಲ್ಲಿ ರೈತರಿಗೋಸ್ಕರ ವಿನೂತನ ತಂತ್ರಜ್ಞಾನಗಳನ್ನು ಪರಿಣಾಮಕಾರಿಯಾಗಿ ವರ್ಗಾವಣೆ ಮಾಡಲು ಹಾರ್ಟ್‌ವಾರ್‌ ರೂಂ ಸ್ಥಾಪಿಸಿ ಆನ್‌ಲೈನ್‌ ರೈತರಿಗೆ ಸಲಹೆ ನೀಡಲಾಗಿದೆ. ಕಿಸಾನ್‌ ಕಾಲ್‌, ವಾಟ್ಸ್‌ ಆ್ಯಪ್‌ ಮೂಲಕ ಆಯಾ ಬೆಳೆಗಳ ಮಾಹಿತಿ, ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗಿದೆ ಎಂದರು.

ರೈತರ ಸಹಭಾಗಿತ್ವದಲ್ಲಿ ಬೀಜ, ಗ್ರಾಮ ಯೋಜನೆಯ ಮೂಲಕ ಉತ್ತಮ ಗುಣಮಟ್ಟದ ಬೀಜ ಉತ್ಪಾದನೆ ಮತ್ತು ಮಾರಾಟ ವ್ಯವಸ್ಥೆ, ಪರಿಹಾರ ರೈತ ಸ್ನೇಹಿ ಆನ್‌ಲೈನ್‌ ಕಾರ್ಯಕ್ರಮ, ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸಲು ಉಚಿತ ಉದ್ಯಾನ ಸಹಾಯವಾಣಿ, ಮಾರುಕಟ್ಟೆ ಮಾಹಿತಿ ವರ್ಗಾವಣೆ ಮೂಲಕ 158 ರೈತರ ಉತ್ಪನ್ನಗಳಿಗೆ ಹಾಪ್‌ಕಾಮ್‌ ಮೂಲಕ ಮಾರುಕಟ್ಟೆ ಒದಗಿಸಲಾಗಿದೆ. ರೈತರ ಮನೋಸ್ಥೆçರ್ಯ ಅಭಿವೃದ್ಧಿಗೆ ಪರಿಣಿತರ ಉಪಸ್ಥಿತಿಯಲ್ಲಿ ಕಾರ್ಯಾಗಾರ ಆಯೋಜನೆ, ತಂತ್ರಾಂಶ ಆಧಾರಿತ ಸಲಹಾ ಸೇವೆಗಳ ಉದ್ಯಾನಮಿತ್ರ ಅಳವಡಿಸಲಾಗಿದೆ ಎಂದರು.

Advertisement

ಜಮೀನು ಹಸ್ತಾಂತರಕ್ಕೆ ಪ್ರಸ್ತಾವನೆ: ತರಕಾರಿ ಸಂಶೋಧನೆ ಹಾಗೂ ವಿಸ್ತರಣಾ ಕೇಂದ್ರ ಸ್ಥಾಪಿಸಲು ಕೂಡಲಸಂಗಮದಲ್ಲಿ 286 ಎಕರೆ ಜಮೀನು ಹಾಗೂ ಔಷ ಧೀಯ-ಸುಗಂಧ ಸಸ್ಯಗಳ ಸಂಶೋಧನೆಗಾಗಿ ಮುಧೋಳ ತಾಲೂಕಿನ ಮುಗಳಖೋಡ ಗ್ರಾಮದಲ್ಲಿ

ಲಭ್ಯವಿರುವ 142 ಎಕರೆ ಜಮೀನನ್ನು ವಿಶ್ವವಿದ್ಯಾಲಯಕ್ಕೆ ಹಸ್ತಾಂತರಿಸಲು ಡಿಸಿಎಂ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಪ್ರಸ್ತಾವನೆಯನ್ನೂ ಸರ್ಕಾರಕ್ಕೆ ಕಳುಹಿಸಲಾಗಿದೆ ಎಂದರು.

ವಿಶ್ವವಿದ್ಯಾಲಯಕ್ಕೆ ಬೇಕಾಗುವ ಭೂಮಿಯನ್ನು ತಾತ್ಕಾಲಿಕವಾಗಿ ಬಿಟಿಡಿಎ ವ್ಯಾಪ್ತಿಯ ನವನಗರದ ಸೆಕ್ಟರ್‌ ನಂ.70, 1, 13, 41ರ ಒಟ್ಟು ಸುಮಾರು 80 ಎಕರೆ ಭೂಮಿಯನ್ನು 99 ವರ್ಷಗಳ ವರೆಗೆ ಲೀಸ್‌ ಪಡೆಯುವುದು ಹಾಗೂ ವಿಶ್ವವಿದ್ಯಾಲಯದ ಹಿಂಭಾಗದ 88 ಎಕರೆ, ಮುಧೋಳ ತಾಲೂಕಿನ ಮುಗಳಖೋಡದ 142 ಎಕರೆ ಹಾಗೂ ಕೂಡಲಸಂಗಮದ ಬಳಿಯ 286 ಎಕರೆ ಭೂಮಿ ವಿವಿಗೆ ನೀಡಲು ಡಿಸಿಎಂ ಗೋವಿಂದ ಕಾರಜೋಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಈ ಕುರಿತು ಸರ್ಕಾರಕ್ಕೆ ವಿಸ್ತೃತ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ವಿದ್ಯಾರ್ಥಿಗಳಿಗೆ ಆನ್‌ಲೈನ್‌ ತರಗತಿ: ಲಾಕ್‌ ಡೌನ್‌ ಹಿನ್ನೆಲೆಯಲ್ಲಿ ವಸತಿ ನಿಯಗಳಲ್ಲಿರುವ ವಿದ್ಯಾರ್ಥಿಗಳನ್ನು ಅವರವರ ಊರುಗಳಿಗೆ ಕಳುಹಿಸಲಾಗಿದೆ. ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿವಿಧ ತರಗತಿಗಳ ಪಠ್ಯ ಆನ್‌ಲೈನ್‌ ಮೂಲಕ ಪೂರ್ಣಗೊಳಿಸಲಾಗಿದೆ. ಕೊನೆಯ ವರ್ಷದ ವಿದ್ಯಾರ್ಥಿಗಳಿಗೆ ಎಲ್ಲ ಪರೀಕ್ಷೆಗಳು ಮುಗಿದಿದ್ದು, ಇನ್ನುಳಿದ ಮೌಖೀತ ಪರೀಕ್ಷೆಗಳನ್ನು ಆನ್‌ಲೈನ್‌ ಮೂಲಕ ಮಾಡಲಾಗುವುದು. 3ನೇ, 2ನೇ ಹಾಗೂ ಮೊದಲನೇ ವರ್ಷದ ವಿದ್ಯಾರ್ಥಿಗಳಿಗೆ ಪಠ್ಯಕ್ರಮ ಬೋಧನೆ ಆನ್‌ಲೈನ್‌ ಮೂಲಕ ಮಾಡಲಾಗಿದ್ದು, ಆಂತರಿಕ ಪರೀಕ್ಷೆ ನಡೆಸಲಾಗಿದೆ. ಗ್ರಾಮೀಣ ವಿದ್ಯಾರ್ಥಿಗಳಿಗೆ ವಾಟ್ಸ್‌ ಆ್ಯಪ್‌-ಇಮೇಲ್‌ ಮೂಲಕ ನೋಟ್ಸ್‌ ರವಾನಿಸಲಾಗಿದೆ ಎಂದರು. ತೋಟಗಾರಿಕೆ ಕುಲಸಚಿವ ಡಾ| ಬಿ.ಟಿ. ಅಳ್ಳೊಳ್ಳಿ, ವಿಸ್ತರಣಾ ನಿರ್ದೇಶಕ ಡಾ| ವೈ.ಕೆ. ಕೋಟಿಕಲ್‌ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next