ಬೆಂಗಳೂರು: ಗ್ಯಾಸ್ ಸೋರಿಕೆಯಾಗಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಒಂಬತ್ತು ವರ್ಷದ ಬಾಲಕ ಮೃತಪಟ್ಟು, ತಾಯಿ ಗಂಭೀರವಾಗಿ ಗಾಯಗೊಂಡ ಘಟನೆ ಬೊಮ್ಮನಹಳ್ಳಿಯ ನಾಡಮ್ಮ ಲೇಔಟ್‌ನಲ್ಲಿ ಶುಕ್ರವಾರ ನಡೆದಿದೆ.
ಶುಕ್ರವಾರ ಬೆಳಗ್ಗೆ 8:30ರ ಸುಮಾರಿಗೆ ಸಂಭವಿಸಿದ್ದ ಸಿಲಿಂಡರ್ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶ್ರವಣ್ (9) ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಅಸುನೀಗಿದ್ದು, ಆತನ ತಾಯಿ ಪುಷ್ಪಾವತಿ (32) ಶೇ.70ರಷ್ಟು ಸುಟ್ಟ ಗಾಯಗಳಿಂದ ಬಳಲುತ್ತಿದ್ದಾರೆ. ಪುಷ್ಪಾವತಿ ಅವರ ಸ್ಥಿತಿ ಕೂಡ ಚಿಂತಾಜನಕವಾಗಿದೆ. ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ನಾಡಮ್ಮ ಲೇಔಟ್‌ನ ಬಾಡಿಗೆ ಮನೆಯಲ್ಲಿ ಕುಟುಂಬದ ಜತೆ ನೆಲೆಸಿರುವ ಅಣ್ಣನ ಮನೆಗೆ ಹಬ್ಬಕ್ಕೆಂದು ಎರಡು ದಿನಗಳ ಹಿಂದೆ ಪುಷ್ಪಾವತಿ ಮಗನ ಜತೆ ಆಗಮಿಸಿದ್ದರು. ಶುಕ್ರವಾರ ಬೆಳಗ್ಗೆ ಪುಷ್ಪಾವತಿ ಮಗನಿಗೆ ಸ್ನಾನ ಮಾಡಿಸುತ್ತಿದ್ದರು. ಈ ವೇಳೆ ಗ್ಯಾಸ್ ಸೋರಿಕೆಯಿಂದ ಸಿಲಿಂಡರ್ ಸ್ಟೋಟಿಸಿದೆ, ಕೂಡಲೇ ಮನೆಯ ಹಾಲ್‌ನಲ್ಲಿದ್ದ ಪುಷ್ಪಾವತಿ ಅವರ ಅಣ್ಣ ಹಾಗೂ ಇತರರು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ.
ಸ್ನಾನದ ಕೋಣೆಯಲ್ಲಿ ಸಿಲುಕಿಕೊಂಡಿದ್ದ ಪುಷ್ಪಾವತಿ ಹಾಗೂ ಅವರ ಮಗ ಹೊರಬರಲಾರದೆ ಬೆಂಕಿಯ ಕೆನ್ನಾಲಗೆಗೆ ತುತ್ತಾಗಿದ್ದಾರೆ. ಅವರ ಅಣ್ಣ, ಸ್ಥಳೀಯರ ಸಹಾಯದಿಂದ ಬೆಂಕಿ ನಂದಿಸಿ, ಶೇ.40ರಷ್ಟು ಸುಟ್ಟ ಗಾಯಗಳಿಂಧ ಬಳಲುತ್ತಿದ್ದ ಪುಷ್ಪಾವತಿ ಮತ್ತು ಶೇ.70ರಷ್ಟು ಸುಟ್ಟು ಹೋಗಿದ್ದ ಆಕೆಯ ಮಗನನ್ನು ಆಸ್ಪತ್ರೆಗೆ ದಾಖಲಿದ್ದಾರೆ.
ಗ್ಯಾಸ್ ಸಿಲಿಂಡರ್‌ನಿಂದ ಸ್ಟೌವ್‌ಗೆ ಸಂಪರ್ಕಿಸುವ ವೈಯರ್‌ನಲ್ಲಿ ಗ್ಯಾಸ್ ಸೋರಿಕೆಯಾಗಿ ಸ್ಫೋಟಗೊಂಡಿರುವ ಸಾಧ್ಯತೆಗಳಿವೆ. ಸ್ನಾನದ ಕೋಣೆಯಲ್ಲಿ ಫೈಬರ್ ಬಾಗಿಲಿದ್ದ ಹಿನ್ನೆಲೆಯಲ್ಲಿ ಬೆಂಕಿ ಹತ್ತಿಕೊಂಡು, ತಾಯಿ-ಮಗನ ಮೈಗೆ ಬೆಂಕಿ ತಾಗಿದೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಬೊಮ್ಮನಹಳ್ಳಿ ಠಾಣೆ ಪೊಲೀಸರು ತಿಳಿಸಿದರು.