Advertisement

ವೈರಿಯ ಹುಡುಕಾಟದಲ್ಲಿ ‘ಗರುಡಾಕ್ಷ’: ಹೊಸಬರ ಚಿತ್ರ ಬಿಡುಗಡೆಗೆ ರೆಡಿ

03:47 PM Jan 04, 2022 | Team Udayavani |

ಬಹುತೇಕ ಹೊಸಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಗರುಡಾಕ್ಷ’ ಚಿತ್ರ ತೆರೆಗೆ ಬರೋದಕ್ಕೆ ಸಿದ್ಧವಾಗಿದೆ. ಸದ್ಯ ಚಿತ್ರದ ಪ್ರಚಾರ ಕಾರ್ಯಗಳಿಗೆ ಚಾಲನೆ ನೀಡಿರುವ ಚಿತ್ರತಂಡ, ಇತ್ತೀಚೆಗೆ ಚಿತ್ರದ ಆಡಿಯೋ, ಟ್ರೇಲರ್‌ ಬಿಡುಗಡೆ ಮಾಡಿದೆ. ನಟರಾದ ಮಿತ್ರ, ಪ್ರಶಾಂತ್‌ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಹಾಜರಿದ್ದು, “ಗರುಡಾಕ್ಷ’ನ ಆಡಿಯೋ ಮತ್ತು ಟ್ರೇಲರ್‌ ಬಿಡುಗಡೆ ಮಾಡಿದರು.

Advertisement

ಇದೇ ವೇಳೆ ಚಿತ್ರದ ಬಗ್ಗೆ ಮಾತನಾಡಿದ ನಿರ್ದೇಶಕ ಶ್ರೀಧರ್‌ ವೈಷ್ಣವ್‌, “ಇದೊಂದು ತಂದೆ ಮಗನ ಬಾಂಧವ್ಯದ ಸುತ್ತ ನಡೆಯುವಂಥ ಸಿನಿಮಾ. ತನ್ನ ತಂದೆಯೇ ಕೊಲೆ ಮಾಡಿದವರನ್ನು ಗರುಡನ ಕಣ್ಣಿನಂತೆ ಸೂಕ್ಷ್ಮವಾಗಿ ಹುಡುಕುವ ಥ್ರಿಲ್ಲಿಂಗ್‌ ಕಥೆ ಸಿನಿಮಾದಲ್ಲಿದೆ. ಸಿನಿಮಾದ ಕಥೆಗೆ ಹೋಲಿಕೆಯಾಗುತ್ತದೆ ಎಂಬ ಕಾರಣಕ್ಕೆ “ಗರುಡಾಕ್ಷ’ ಎಂದು ಟೈಟಲ್‌ ಇಡಲಾಗಿದೆ. ಸದ್ಯ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಶೀಘ್ರದಲ್ಲಿಯೇ ಸಿನಿಮಾದ ಬಿಡುಗಡೆ ಮಾಡಲಿದ್ದೇವೆ’ ಎಂದು ಮಾಹಿತಿ ನೀಡಿದರು.

“ಗರುಡಾಕ್ಷ’ ಚಿತ್ರದಲ್ಲಿ ಚೇತನ್‌ ಯದು ನಾಯಕನಾಗಿ ಕಾಣಿಸಿಕೊಂಡಿದ್ದಾರೆ. ಕಿರುತೆರೆಯ ಕೆಲವು ಧಾರಾವಾಹಿಗಳು ಮತ್ತು ಕೆಲ ಚಿತ್ರಗಳಲ್ಲಿ ಖಳನಾಯಕನಾಗಿ, ಸಹನಾಯಕನಾಗಿ ಅಭಿನಯಿಸಿದ ಅನುಭವವಿರುವ ಚೇತನ್‌ ಯದು “ಗರುಡಾಕ್ಷ’ ಚಿತ್ರದ ಮೂಲಕ ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ನಾಯಕನಾಗಿ ಕಾಣಿಸಿಕೊಂಡಿದ್ದಾರೆ.

“ಸಿನಿಮಾದಲ್ಲಿ ತಂದೆಯ ಅಚ್ಚುಮೆಚ್ಚಿನ ಮಗನಾಗಿ, ಕುಟುಂಬಕ್ಕೆ ಮೊದಲ ಆದ್ಯತೆ ಕೊಡುವ ಹುಡುಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ಲವ್‌, ಆ್ಯಕ್ಷನ್‌, ಎಮೋಶನ್ಸ್‌ ಎಲ್ಲವನ್ನೂ ಒಳಗೊಂಡಿರುವ ಪಾತ್ರ ನನ್ನದು’ ಎನ್ನುವುದು ಚೇತನ್‌ ಯದು ಮಾತು.

“ಗರುಡಾಕ್ಷ’ ಚಿತ್ರದಲ್ಲಿ ರಕ್ಷಾ ನಾಯಕಿಯಾಗಿ ಅಭಿನಯಿಸಿದ್ದಾರೆ. ಉಳಿದಂತೆ ಸತ್ಯರಾಜ್‌, ರಫೀಕ್‌, ವಸಂತ ಕುಮಾರ್‌, ಕುಮುದಾ, ಪಲ್ಲವಿ, ಉಗ್ರಂ ರೆಡ್ಡಿ, ಕಲ್ಕಿ, ಆಲಿಷಾ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

Advertisement

“ಕ್ಷೀರಪಥ ಮೂವೀಸ್‌’ ಬ್ಯಾನರ್‌ನಲ್ಲಿ ಎಸ್‌. ನರಸಿಂಹ ಮೂರ್ತಿ ನಿರ್ಮಿಸುತ್ತಿರುವ “ಗರುಡಾಕ್ಷ’ ಚಿತ್ರಕ್ಕೆ ಚಿತ್ರಕ್ಕೆ ವೀರೇಶ್‌ ಎನ್‌ಟಿಎ ಛಾಯಾಗ್ರಹಣ, ಎನ್‌. ಎಂ. ವಿಶ್ವ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಶ್ರೀವತ್ಸ ಸಂಗೀತವಿದೆ. ಡಾ. ವಿ ನಾಗೇಂದ್ರ ಪ್ರಸಾದ್‌, ಅರಸು ಅಂತಾರೆ ಸಾಹಿತ್ಯವಿದೆ. ಚಿತ್ರಕ್ಕೆ ಸುರೇಶ್‌ ನೃತ್ಯ, ವೈಲೆಂಟ್‌ ವೇಲು ಸಾಹಸ ಸಂಯೋಜನೆಯಿದೆ. ಸದ್ಯ ಭರದಿಂದ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತವಾಗಿರುವ ಚಿತ್ರತಂಡ ಫೆಬ್ರವರಿ ವೇಳೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next