Advertisement

ಗರಂ ಗರಂ ಸಾರುಗಳು

07:29 PM Nov 21, 2019 | mahesh |

ಚಳಿಗಾಲಕ್ಕೆ ನಾಲಗೆಗೆ ಹಿತವಾಗುವ, ಜೀರ್ಣಕ್ರಿಯೆಗೆ ಸಹಕಾರಿಯಾಗುವ ಹೆಚ್ಚು ಖರ್ಚಿಲ್ಲದೆ ಕಡಿಮೆ ಸಮಯದಲ್ಲಿ ತಯಾರಿಸಬಹುದಾದ ಆರೋಗ್ಯಕರ ಸಾರುಗಳ ರೆಸಿಪಿ ಇಲ್ಲಿದೆ.

Advertisement

ದೊಡ್ಡಪತ್ರೆ ಸಾರು
ಬೇಕಾಗುವ ಸಾಮಗ್ರಿ: ತೊಳೆದು ಸಣ್ಣಗೆ ಹೆಚ್ಚಿದ 4-6 ದೊಡ್ಡ ಪತ್ರೆ ಎಲೆಗಳು, 1 ಈರುಳ್ಳಿ, 1 ಚಮಚ ಹುಳಿರಸ, 1 ಚಮಚ ಬೆಲ್ಲದ ಪುಡಿ, 1 ಚಮಚ ಉದ್ದಿನಬೇಳೆ, 1/4 ಚಮಚ ಜೀರಿಗೆ, 3-4 ಕಾಳುಮೆಣಸು, 2-3 ಕೆಂಪುಮೆಣಸು, 1/4 ಚಮಚ ಸಾಸಿವೆ, 1/4 ಚಮಚ ಜೀರಿಗೆ, 7-8 ಕರಿಬೇವಿನೆಲೆ, 1 ಚಮಚ ತುಪ್ಪ.

ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ಈರುಳ್ಳಿ ಚೂರು, ದೊಡ್ಡಪತ್ರೆ ಎಲೆಯ ಚೂರು ಹಾಕಿ ಚೆನ್ನಾಗಿ ಹುರಿಯಿರಿ. ಉದ್ದಿನಬೇಳೆ, ಜೀರಿಗೆ, ಕಾಳುಮೆಣಸು, ಕೆಂಪುಮೆಣಸು ಇವಿಷ್ಟನ್ನು ಹುರಿದು ಪುಡಿ ಮಾಡಿ. ನಂತರ ಮೇಲಿನ ಈರುಳ್ಳಿ ಚೂರು, ದೊಡ್ಡಪತ್ರೆಯ ಮಿಶ್ರಣಕ್ಕೆ ಹಾಕಿ. ಉಪ್ಪು, ಹುಳಿ, ಬೆಲ್ಲ , ಸ್ವಲ್ಪ ನೀರು ಹಾಕಿ ಕುದಿಸಿ. ನಂತರ ಸಾಸಿವೆ, ಜೀರಿಗೆ, ಕರಿಬೇವಿನೆಲೆಯ ಒಗ್ಗರಣೆ ಕೊಡಿ. ಈಗ ಘಮಘಮಿಸುವ ಸಾರು ಸವಿಯಲು ಸಿದ್ಧ.

ಕರಿಮೆಣಸು ಸಾರು
ಬೇಕಾಗುವ ಸಾಮಗ್ರಿ: 2 ಚಮಚ ತುಪ್ಪ , 1 ಚಮಚ ಎಣ್ಣೆ, 1 ಟೇಬಲ್‌ ಚಮಚ ಕರಿಮೆಣಸು, 1 ಚಮಚ ಜೀರಿಗೆ, 4-5 ಮೆಂತೆಕಾಳು, 1/2 ಚಮಚ ಸಾಸಿವೆ, 1/2 ಕಪ್‌ ತೊಗರಿಬೇಳೆ, 1-2 ಟೊಮೆಟೊ, 1-2 ಬೆಳ್ಳುಳ್ಳಿ ಎಸಳು, 1 ಈರುಳ್ಳಿ , 2 ಕೆಂಪುಮೆಣಸು, 1 ಎಸಳು ಕರಿಬೇವು, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಬಾಣಲೆ ಒಲೆಯ ಮೇಲಿಟ್ಟು ತುಪ್ಪ ಹಾಕಿ. ಬಿಸಿಯಾದಾಗ ಜೀರಿಗೆ, ಕರಿಮೆಣಸು, ಮೆಂತೆಕಾಳು ಹಾಕಿ ಹುರಿಯಿರಿ. ತಣ್ಣಗಾದ ಮೇಲೆ ಪುಡಿ ಮಾಡಿ. ಟೊಮೆಟೊ ತೊಗರಿಬೇಳೆ ಸ್ವಲ್ಪ ನೀರು ಸೇರಿಸಿ ಕುಕ್ಕರಿನಲ್ಲಿಟ್ಟು ಬೇಯಿಸಿ. ನಂತರ ಬಾಣಲೆ ಒಲೆಯ ಮೇಲಿಟ್ಟು ತುಪ್ಪ , ಎಣ್ಣೆ ಹಾಕಿ. ಬಿಸಿಯಾದಾಗ ಸಾಸಿವೆ ಹಾಕಿ. ಸಾಸಿವೆ ಸಿಡಿದಾಗ ಬೆಳ್ಳುಳ್ಳಿ ಎಸಳು, ನೀರುಳ್ಳಿ ಹಾಕಿ ಹುರಿದು, ಬೇಯಿಸಿದ ತೊಗರಿಬೇಳೆ, ಟೊಮೆಟೊ, ನೀರು, ಮಾಡಿಟ್ಟ ಪುಡಿ ಹಾಕಿ ಕುದಿಸಿ. ಉಪ್ಪು ಹಾಕಿ. 5-10 ನಿಮಿಷ ಕುದಿಸಿ. ನಂತರ ಒಲೆಯಿಂದ ಕೆಳಗಿಳಿಸಿ. ಈಗ ಕರಿಮೆಣಸು ಸಾರು ಅನ್ನದೊಂದಿಗೆ ಸವಿಯಲು ಹಿತವಾಗಿರುತ್ತದೆ.

Advertisement

ತೊಗರಿಬೇಳೆ ಗರಂ ಸಾರು
ಬೇಕಾಗುವ ಸಾಮಗ್ರಿ: 1/2 ಕಪ್‌ ತೊಗರಿಬೇಳೆ, 2-3 ಟೊಮೆಟೊ ಹಣ್ಣು , 2 ಚಮಚ ಕೊತ್ತಂಬರಿ ಬೀಜ, 1/4 ಚಮಚ ಸಾಸಿವೆ, 1/4 ಚಮಚ ಜೀರಿಗೆ, 1/4 ಚಮಚ ಕಾಳುಮೆಣಸು, 2-3 ಒಣಮೆಣಸು, 2 ಎಸಳು ಕರಿಬೇವು, 2 ಚಮಚ ಎಣ್ಣೆ, ಚಿಟಿಕೆ ಇಂಗು, 1/2 ಚಮಚ ಬೆಲ್ಲ, 1/4 ಕಪ್‌ ತೆಂಗಿನತುರಿ, 1/4 ಚಮಚ ಕೆಂಪುಮೆಣಸಿನ ಪುಡಿ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ತೊಗರಿಬೇಳೆ ತೊಳೆದು, ಸ್ವಲ್ಪ ನೀರು ಸೇರಿಸಿ ಕುಕ್ಕರಿಗೆ ಹಾಕಿ ಬೇಯಿಸಿ. ಟೊಮೆಟೊ ಸಣ್ಣಗೆ ತುಂಡು ಮಾಡಿ. ಉಪ್ಪು , ಬೆಲ್ಲ, ಮೆಣಸಿನ ಪುಡಿ, ಸ್ವಲ್ಪ ನೀರು ಹಾಕಿ ಬೇಯಿಸಿ. ಕೊತ್ತಂಬರಿ ಬೀಜ, ಸಾಸಿವೆ, ಮೆಂತೆ, ಜೀರಿಗೆ, ಕಾಳುಮೆಣಸು, ಒಣಮೆಣಸು ಸ್ವಲ್ಪ ಎಣ್ಣೆ ಹಾಕಿ ಹುರಿದು ತೆಂಗಿನತುರಿ, ಸ್ವಲ್ಪ ನೀರು ಸೇರಿಸಿ ರುಬ್ಬಿ. ಬೆಂದ ಟೊಮೆಟೊಕ್ಕೆ ಬೆಂದ ಬೇಳೆ, ರುಬ್ಬಿದ ಮಿಶ್ರಣ, ಬೇಕಾದಷ್ಟು ನೀರು ಸೇರಿಸಿ ತೆಳ್ಳಗೆ ಮಾಡಿ ಕುದಿಸಿ. ಕರಿಬೇವು, ಕೊತ್ತಂಬರಿಸೊಪ್ಪು ಹಾಕಿ ಸಾಸಿವೆ, ಇಂಗಿನ ಒಗ್ಗರಣೆ ಕೊಡಿ.

ಮೆಂತೆಸೊಪ್ಪಿನ ಸಾರು
ಬೇಕಾಗುವ ಸಾಮಗ್ರಿ: 1/2 ಕಪ್‌ ತೊಗರಿಬೇಳೆ, 1 ಕಂತೆ ಮೆಂತೆ ಸೊಪ್ಪು, 2 ಚಮಚ ಸಾರಿನ ಪುಡಿ, 1/2 ಚಮಚ ಬೆಲ್ಲ, 1/2 ಚಮಚ ಹುಳಿರಸ, 1 ಚಮಚ ಸಾಸಿವೆ, 1 ಒಣಮೆಣಸು, ಸ್ವಲ್ಪ ಕರಿಬೇವಿನೆಲೆ, 1 ಚಮಚ ಎಣ್ಣೆ , ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ತೊಗರಿಬೇಳೆಗೆ ಸ್ವಲ್ಪ ನೀರು ಹಾಕಿ ಕುಕ್ಕರಿನಲ್ಲಿಟ್ಟು ಬೇಯಿಸಿ. ಮೆಂತೆಸೊಪ್ಪು ತೊಳೆದು ಸಣ್ಣಗೆ ಹೆಚ್ಚಿಡಿ. ನಂತರ ಬೆಂದ ತೊಗರಿಬೇಳೆ, ಸಾರಿನಪುಡಿ, ಉಪ್ಪು , ಹುಳಿ, ಬೆಲ್ಲ, ಸಣ್ಣಗೆ ತುಂಡು ಮಾಡಿದ ಮೆಂತೆಸೊಪ್ಪು , ಬೇಕಾದಷ್ಟು ನೀರು ಸೇರಿಸಿ ತೆಳ್ಳಗೆ ಮಾಡಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕರಿಬೇವಿನೆಲೆಯ ಒಗ್ಗರಣೆ ಕೊಡಿ.

ಪುನರ್ಪುಳಿ ಸಿಪ್ಪೆ ಸಾರು
ಬೇಕಾಗುವ ಸಾಮಗ್ರಿ: 1 ಕಪ್‌ ಒಣಗಿದ ಪುನರ್ಪುಳಿ ಸಿಪ್ಪೆ , 1/2 ಅಚ್ಚು ಬೆಲ್ಲ, 1/2 ಚಮಚ ಕೆಂಪುಮೆಣಸಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, 1 ಚಮಚ ಸಾಸಿವೆ, 1 ಕೆಂಪುಮೆಣಸು, 1 ಚಮಚ ಎಣ್ಣೆ.

ತಯಾರಿಸುವ ವಿಧಾನ: ಪುನರ್ಪುಳಿ ಸಿಪ್ಪೆಯನ್ನು ಚೆನ್ನಾಗಿ ತೊಳೆದು ಒಂದು ಪಾತ್ರೆಗೆ 2 ಕಪ್‌ ನೀರು ಹಾಕಿ ಸಿಪ್ಪೆಯನ್ನು ಕಿವುಚಿ, ರಸ ತೆಗೆಯಿರಿ. ನಂತರ ಸಿಪ್ಪೆ ಎಸೆದು, ಉಳಿದ ನೀರಿಗೆ ಉಪ್ಪು, ಬೆಲ್ಲ, ಮೆಣಸಿನ ಪುಡಿ ಹಾಕಿ ಕುದಿಸಿ. ನಂತರ ಎಣ್ಣೆಯಲ್ಲಿ ಸಾಸಿವೆ, ಕೆಂಪುಮೆಣಸಿನ ತುಂಡು ಹಾಕಿ ಒಗ್ಗರಣೆ ಕೊಡಿ.

ಸರಸ್ವತಿ ಎಸ್‌. ಭಟ್‌

Advertisement

Udayavani is now on Telegram. Click here to join our channel and stay updated with the latest news.

Next