Advertisement

ಎಲ್ಲೆಂದರಲ್ಲಿ ಕಸದ ರಾಶಿ; ರಸ್ತೆ ಮೇಲೆ ರಾಡಿ

04:45 PM Sep 16, 2022 | Team Udayavani |

ಅಫಜಲಪುರ: ಎಲ್ಲಿ ನೋಡಿದರಲ್ಲಿ ಕಸದ ರಾಶಿ, ಮಳೆ ಬಂದಾಗ ಚರಂಡಿ ತುಂಬಾ ಕೆಸರು, ರಸ್ತೆ ಮೇಲೆಲ್ಲ ರಾಡಿ ನೀರು, ಸ್ವತ್ಛತೆ ಮರೀಚಿಕೆ. ಇದು ಪಟ್ಟಣದ ದುಸ್ಥಿತಿಯಾಗಿದ್ದು, ಪುರಸಭೆ ಆಡಳಿತದ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿ.

Advertisement

ಪಟ್ಟಣದಲ್ಲಿ ಒಟ್ಟು 23 ವಾರ್ಡ್‌ಗಳಿವೆ. 23 ಸದಸ್ಯರಿದ್ದಾರೆ. ಮುಖ್ಯಾಧಿಕಾರಿಗಳಿದ್ದಾರೆ, ಆರೋಗ್ಯ ಕ್ಷೇತ್ರಕ್ಕೆ ಸಂಬಂಧಿಸಿದ ಹಾಗೂ ಸ್ವತ್ಛತೆ, ನೈರ್ಮಲ್ಯ ಕಾಪಾಡುವ ಸಲುವಾಗಿಯೇ ಅಧಿಕಾರಿಗಳಿದ್ದಾರೆ. ಪೌರ ಕಾರ್ಮಿಕರಿದ್ದಾರೆ. ಇಷ್ಟೆಲ್ಲ ಇದ್ದರೂ ಪಟ್ಟಣದಲ್ಲಿ ಸ್ವತ್ಛತೆ ಎಂಬುದನ್ನು ಹುಡುಕುವಂತಾಗಿದೆ. ಸಾಂಕ್ರಾಮಿಕ ರೋಗದ ಭೀತಿ: ಪಟ್ಟಣದಲ್ಲಿನ ಚರಂಡಿಗಳು ಸಂಪೂರ್ಣ ಹದಗೆಟ್ಟಿವೆ. ಅನೇಕ ಕಡೆಗಳಲ್ಲಿ ಚರಂಡಿಗಳನ್ನು ಮುಚ್ಚಿ ಅದರ ಮೇಲೆ ಗೂಡಂಗಡಿಗಳನ್ನು ತೆರೆಯಲಾಗಿದೆ. ಇರುವ ಚರಂಡಿಗಳನ್ನು ವರ್ಷಕ್ಕೊಮ್ಮೆಯಾದರೂ ಪುರಸಭೆ ಸ್ವತ್ಛಗೊಳಿಸುತ್ತಿಲ್ಲ. ಚರಂಡಿಗಳು ತುಂಬಿ ದುರ್ನಾತ ಬೀರುತ್ತಿವೆ. ಮಳೆಗಾಲ ಸಮಯದಲ್ಲಿ ಚರಂಡಿಗಳನ್ನು ಸ್ವಚ್ಛಗೊಳಿಸಿದರೂ ಆಗಿಂದಾಗೆ ಕಸ ತೆಗೆದುಕೊಂಡು ಹೋಗದೇ ಇರುವುದರಿಂದ ರಸ್ತೆ ಮೇಲೆಲ್ಲ ಹರಡಿ ಸೊಳ್ಳೆಗಳು ಉತ್ಪತ್ತಿಯಾಗುತ್ತಿವೆ. ಇದರಿಂದ ಸಾಂಕ್ರಾಮಿಕ ರೋಗದ ಭೀತಿ ಹೆಚ್ಚಿದೆ.

ಸರ್ಕಾರಿ ಶಾಲೆ ದುಸ್ಥಿತಿ: ಪಟ್ಟಣದ ಎಂ.ಜಿ ನಗರ ಬಡಾವಣೆಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಗೇಟಿಗೆ ಹೊಂದಿಕೊಂಡೇ ಚರಂಡಿ ಇದೆ. ಚರಂಡಿ ತುಂಬಿ ಹಲವಾರು ತಿಂಗಳುಗಳೇ ಕಳೆದಿದೆ. ಆದರೆ ಪುರಸಭೆ ಲಕ್ಷ್ಯ ವಹಿಸುತ್ತಿಲ್ಲ. ದುರ್ನಾತದ ಮಧ್ಯೆಯೇ ವಿದ್ಯಾರ್ಥಿಗಳು ಪಾಠ ಕೇಳುತ್ತಿದ್ದಾರೆ. ಆಟವಾಡುತ್ತಿದ್ದಾರೆ. ಇದ್ಯಾವುದೂ ಸಂಬಂಧವೇ ಇಲ್ಲ ಎನ್ನುವಂತೆ ಕುಳಿತಿದೆ ಪುರಸಭೆ.

ಜನರಿಗೆ ಉತ್ತರಿಸಲಾಗುತ್ತಿಲ್ಲ: ಪುರಸಭೆ ನಿರ್ಲಕ್ಷ್ಯ ದಿಂದ ಜನರಿಗೆ ಉತ್ತರ ನೀಡಲಾಗುತ್ತಿಲ್ಲ. ಮುಖ್ಯಾಧಿಕಾರಿಗಳು ತಮ್ಮ ಮಾತಿಗೆ ಸ್ಪಂದಿಸುತ್ತಿಲ್ಲ ಎಂದು ಮಹಿಳಾ ಸದಸ್ಯೆಯೊಬ್ಬರು ಅಳಲು ತೋಡಿಕೊಂಡಿದ್ದಾರೆ. ಯಾವ ವಾರ್ಡ್‌ಗಳಲ್ಲಿ ನೈರ್ಮಲ್ಯ ಸಮಸ್ಯೆ ಕಾಡುತ್ತಿದೆ ಎಂಬುದನ್ನು ನಾನು ಖುದ್ದಾಗಿ ಭೇಟಿ ನೀಡಿ ಪರಿಶೀಲಿಸುವೆ. ಅವಶ್ಯಕತೆ ಇರುವಲ್ಲಿ ಕೂಡಲೇ ಸ್ವತ್ಛತಾ ಕಾರ್ಯ ಕೈಗೊಳ್ಳುತ್ತೇನೆ. ಸೊಳ್ಳೆಗಳ ನಿರ್ಮೂಲನೆಗಾಗಿ ಬ್ಲೀಚಿಂಗ್‌ ಪೌಡರ್‌ ಹಾಕಲಾಗುವುದು ಅಲ್ಲದೇ ಫಾಗಿಂಗ್‌ ಮಾಡಿಸಲಾಗುವುದು. -ಸುರೇಶ ಬಬಲಾದ, ಮುಖ್ಯಾಧಿಕಾರಿ, ಪುರಸಭೆ

-ಮಲ್ಲಿಕಾರ್ಜುನ ಹಿರೇಮಠ

Advertisement
Advertisement

Udayavani is now on Telegram. Click here to join our channel and stay updated with the latest news.

Next